ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ನಾಡಿನಲ್ಲೊಬ್ಬ ಅರಣ್ಯ ಕೃಷಿಕ

ಅಕ್ಷರ ಗಾತ್ರ

ಭಾರತೀಯ ಕೃಷಿ ಎಂದಾಕ್ಷಣ ಎಲ್ಲರ ಮನದಲ್ಲಿಯೂ ಮೊದಲಿಗೆ ಮೂಡಿಬರುವ ಚಿಂತನೆ ಅದೊಂದು ಸಮಸ್ಯೆಗಳ ಸಾಗರ ಎನ್ನುವಂಥದ್ದು. ಇಂದು ವ್ಯವಸ್ಥೆಗಳೊಂದಿಗೆ ಸದಾ ಹೋರಾಡುವ ಕೃಷಿಕ ನಿರೀಕ್ಷಿತ ಹಾಗೂ ಅನಿರೀಕ್ಷಿತ ಸಮಸ್ಯೆಗಳನ್ನು ತನ್ನ ವೃತ್ತಿಯುದ್ದಕ್ಕೂ ಎದುರಿಸಬೇಕಾಗಿ ಬಂದಿರುವುದು ಅನಿವಾರ್ಯ. ಕೃಷಿಯಲ್ಲಿ ಸಮಸ್ಯೆಗಳು ಹೇಗೆ ಹೇರಳವಾಗಿಯೋ, ಅದಕ್ಕೆ ಪರಿಹಾರ ಕೂಡಾ ಅಪರಿಮಿತವಾಗಿವೆ ಎನ್ನುವುದಕ್ಕೆ ಉದಾಹರಣೆ ಸಿದ್ದಪ್ಪ ಬಾಲಗೊಂಡ.

ಸಮಸ್ಯೆಗಳನ್ನು ಸ್ವೀಕರಿಸಿ, ಆಲೋಚಿಸಿ, ಯೋಜಿಸಿ ಮುನ್ನಡೆದಾಗ ಕೃಷಿಕನ ದಾರಿಗೆ ಅಡ್ಡವಾಗಿ ಬರುವ ಸಮಸ್ಯೆಗಳೆಲ್ಲವೂ ತಾನಾಗಿಯೇ ಬದಿಗೆ ಸರಿಯುತ್ತವೆ. ಬಂದ ಸಮಸ್ಯೆಗಳೆಲ್ಲವನ್ನೂ ಹಿಮ್ಮೆಟ್ಟಿ ಯಶಸ್ವಿ ಕೃಷಿಕನೆಂದೆನಿಸಿಕೊಂಡ ಕೀರ್ತಿ ಸಲ್ಲಬೇಕಾದುದು ಸಮಗ್ರ ಸಾವಯುವ ಕೃಷಿಯಲ್ಲಿ ಈ ವಿಶೇಷ ಸಾಧನೆಗೈದ  ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಕೊಲ್ಲಾರ ಎಂಬ ಗ್ರಾಮದ ಸಿದ್ದಪ್ಪ ದುಂಡಪ್ಪ ಬಾಲಗೊಂಡ ಅವರಿಗೆ.

ದೊಡ್ಡ ಹಿಡುವಳಿದಾರರೇ ಆಗಿದ್ದ ಸಿದ್ದಪ್ಪ ಅವರಿಗೆ ಅಂದಿನ ಕಾಲದಲ್ಲಿ ಸುಮಾರು 34 ಎಕರೆಯಷ್ಟು ಜಮೀನಿತ್ತು. ಈರುಳ್ಳಿ, ಹುರುಳಿ, ಅವರೆ, ತೊಗರಿ, ಪಪ್ಪಾಯ ಬೆಳೆಸಿಕೊಂಡೇ ಬದುಕು ಕಟ್ಟಿಕೊಂಡ ಇವರು ಕಾಲ ಬದಲಾದಂತೆ ಅನೇಕ ಕೃಷಿ ಸಮಸ್ಯೆಗಳಿಗೆ ಒಗ್ಗಿಕೊಳ್ಳಲು ಸಾಧ್ಯವಾಗಲಿಲ್ಲ.

ಆಗ ಸಿದ್ದಪ್ಪ ಅವರಿಗೆ ಆಸರೆಯಾಗಿದ್ದು ತೋಟಗಾರಿಕೆ ಬೆಳೆಗಳು. ಶ್ರೀಗಂಧ, ಹೆಬ್ಬೇವು ಮತ್ತು ಅಕೇಶಿಯಾ ಕೃಷಿಯ ಒಳ ಹೊರವನ್ನು ಚೆನ್ನಾಗಿಯೇ ಅರಿತಿದ್ದ ಸಿದ್ದಪ್ಪ ಅವರು ಹೊಸ ಹೊಸ ಆಲೋಚನೆಗಳನ್ನು ತಮ್ಮ ಜಮೀನಿನಲ್ಲಿ ಅನುಷ್ಠಾನಗೊಳಿಸಿದವರು. ಕೃಷಿಯ  ನೂರಾರು ಸಮಸ್ಯೆಗಳನ್ನು, ಹತ್ತಾರು ತಲೆ ನೋವುಗಳನ್ನು ಹೇಗಾದರೂ ಸರಿ ಬಗೆ ಹರಿಸಿಕೊಳ್ಳಲೇಬೇಕು ಎಂದು ನಿಶ್ಚಯಿಸಿದಾಗ ಅವರ ನೆರವಿಗೆ ಬಂದದ್ದು ಅರಣ್ಯ ಕೃಷಿ.

ರೋಗ, ಕೀಟ, ನೀರು, ಕಾರ್ಮಿಕರು ಹಾಗೂ  ಮಾರುಕಟ್ಟೆಯಂತಹ ಮಹತ್ವದ ಸಮಸ್ಯೆಗಳನ್ನು ಅರಣ್ಯ ಕೃಷಿಯಿಂದ ದೂರಮಾಡಬಹುದು ಎಂಬುದನ್ನು ಅರಿತ ಸಿದ್ದಪ್ಪ ಅವರು ಬರದ ನಾಡಿನಲ್ಲಿ ಅರಣ್ಯವನ್ನು ಸೃಷ್ಟಿಸುವಂತಹ ಸಾಹಸಕ್ಕೆ ಕೈ ಹಾಕಿದರು. ಅರಣ್ಯ  ಕೃಷಿ ಸಾಧಕ  ಬಾಧಕಗಳ ಬಗ್ಗೆಯೂ ಅರಿವಿರಬೇಕು ಎಂಬುದನ್ನು ಮನಗಂಡ ಅವರು ಸಾಕಷ್ಟು ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾನಿಲಯಗಳು, ಅರಣ್ಯ ಕೃಷಿಕರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದರು. ಸಾವಿರಾರು ರೂಪಾಯಿಗಳನ್ನು ಖರ್ಚು  ಮಾಡಿ ಕೃಷಿ ಪ್ರವಾಸಗಳನ್ನು ಕೈಗೊಂಡು ಅರಣ್ಯ ಸೃಷ್ಟಿಗೆ ಮುಂದಾದರು.

ಅರಣ್ಯ ಕೃಷಿ ಗಿಡಗಳ ಸಂಖ್ಯೆ
ಶ್ರೀಗಂಧ ಗಿಡ 2,500, ಹೆಬ್ಬೇವು 4,000 ಮತ್ತು ಅಕೇಶಿಯಾ 2,5000 ಇವರು ಪ್ರಸ್ತುತ ಸುಮಾರು10 ಎಕರೆ ಕೃಷಿ ಭೂಮಿಯಲ್ಲಿ ಅರಣ್ಯ ಕೃಷಿ ಮಾಡುತ್ತಿದ್ದಾರೆ. ಹೆಬ್ಬೇವನ್ನು ಪ್ರಧಾನ ಬೆಳೆಯನ್ನಾಗಿ ಮಾಡಿಕೊಂಡಿದ್ದು, ಅಂತರ ಬೆಳೆಯಾಗಿ ಶ್ರೀಗಂಧ ಹಾಕಿಕೊಂಡಿದ್ದಾರೆ. ಇದಷ್ಟೇ ಅಲ್ಲದೆ ಅಕೇಶಿಯಾ ಅಂತರ ಬೆಳೆಯಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಹೆಬ್ಬೇವು ಏಳು ವರ್ಷದ ಬೆಳೆಯಾಗಿದ್ದು, ಶ್ರೀಗಂಧ 18ರಿಂದ20 ವರ್ಷದ ಬೆಳೆಯಾಗಿದ್ದು ಮತ್ತು ಅಕೇಶಿಯಾ ಕೂಡ 15ವರ್ಷದ ಬೆಳೆಯಾಗಿದ್ದು ಇವರ ವಿಭಿನ್ನ ಬೆಳೆಯ ಪ್ರಯತ್ನವನ್ನು ನೋಡಿ ಧಾರವಾಡ, ಬೆಳಗಾವಿ, ಬಾಗಲಕೊಟೆ ಮತ್ತು ವಿಜಯಪುರದ ಅನೇಕ ಕೃಷಿಕರು ತಮ್ಮ ತಾಲ್ಲೂಕುಗಳಲ್ಲೂ ಅಳವಡಿಸಿಕೊಂಡಿದ್ದಾರೆ.

ಹೆಬ್ಬೇವು: ಹೆಬ್ಬೇವು ಏಳರಿಂದ ಹತ್ತು ವರ್ಷಗಳ  ಒಳಗೆ ಕಟಾವಿಗೆ ಬರುತ್ತದೆ. ಗಂಟಿಲ್ಲದೆ ನೇರವಾಗಿ ಬೆಳೆಯುವಂಥ ಹಾಗೂ ಮೃದು ಗುಣವನ್ನು ಹೊಂದಿದ್ದು ಪ್ಲೈವುಡ್ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ ಹಾಗೂ ಇದಕ್ಕಾಗಿ ಅಗಾಧ ಬೇಡಿಕೆಯೂ ಇದೆ. ಏಳು ವರ್ಷಗಳ ಕಾಲ ಬೆಳೆಸಿದ ಹೆಬ್ಬೇವು ಸುಮಾರು 10 ಸಾವಿರ ರೂಪಾಯಿ ಬೆಲೆಬಾಳುತ್ತದೆ. ಒಂದು ಎಕರೆಗೆ 400 ಮರಗಳನ್ನು ಬೆಳೆಸಬಹುದು. ಇದರಿಂದ ಹತ್ತು ವರ್ಷಗಳಲ್ಲಿ 20 ಲಕ್ಷದಷ್ಟು ಹಣ ಸಂಪಾದನೆ ಮಾಡಬಹುದಾಗಿದೆ. ಜೊತೆಗೆ ಹೆಬ್ಬೇವಿನ ಎಲೆ ಉತ್ಕೃಷ್ಟ ಮೇವಾಗಿದ್ದು ಹಸು, ಕುರಿ, ಆಡುಗಳ ಸಾಗಾಣಿಕೆಯನ್ನು ಸಹ ಉಪ ಕಸುಬಾಗಿ ಕೈಗೊಳ್ಳಬಹುದು. ಇದರ ಎಲೆಗಳನ್ನು ಜಾನುವಾರುಗಳು ಇಷ್ಟಪಟ್ಟು ತಿನ್ನುವುದಿದೆ. ಹೆಬ್ಬೇವು ಕಟಾವಿಗೆ ಬರುವವರೆಗೂ ವಿವಿಧ ಅಂತರ ಬೆಳೆಗಳನ್ನು ಸಹ ಬೆಳೆದುಕೊಳ್ಳಬಹುದು.

ಶ್ರೀಗಂಧ: ‘ಶ್ರೀಗಂಧ ಪರಾವಲಂಬಿ ಸಸ್ಯ. ಇದು ಸ್ವತಂತ್ರವಾಗಿ ಬೆಳೆಯಲಾರದು. ಹಾಗಾಗಿ ಶ್ರೀಗಂಧವನ್ನು ಹೆಬ್ಬೇವಿನೊಂದಿಗೆ ಅಂತರ ಬೆಳೆಯಾಗಿ ಬೆಳೆಯುವುದು ಸೂಕ್ತ. ಶ್ರೀಗಂಧಕ್ಕೆ ಮರಗಳ್ಳರೇ ಪರಮವೈರಿಗಳು. ಈ ನಿಟ್ಟಿನಲ್ಲಿ ಶ್ರೀಗಂಧದ ಬೆಳೆಗಾರರು ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕು’ ಎನ್ನುತ್ತಾರೆ ಸಿದ್ದಪ್ಪ. ಶ್ರೀಗಂಧದ ಬೆಳೆ ಹಾಗೂ ಮಾರುಕಟ್ಟೆಯ ಮೇಲೆ ಇದ್ದಂಥ ನಿಯಂತ್ರಣವನ್ನು ಸರ್ಕಾರ 2002ನೇ ಇಸವಿಯಲ್ಲಿ ಸಡಿಲಿಸಿ ಸಾಗುವಳಿ ಮಾಡಲು ಹಾಗೂ ಮಾರಾಟ ಮಾಡಲು ಅನುಕೂಲ ಕಲ್ಪಿಸಿದೆ. ಆದರೆ ಶ್ರೀಗಂಧದ ರಕ್ಷಣೆಗೂ ಸರ್ಕಾರ ತಂತ್ರಜ್ಞಾನ ಹಾಗೂ ಸಹಾಯಧನ ನೀಡಬೇಕು ಎಂಬುದು ಸಿದ್ದಪ್ಪ ಅವರ ಒತ್ತಾಯ.

‘ಶ್ರೀಗಂಧದಲ್ಲಿ 7 ವರ್ಷಗಳ ನಂತರ ಚೇಗು ರೂಪುಗೊಳ್ಳಲು ಆರಂಭವಾಗುತ್ತದೆ. ಸಾಮಾನ್ಯವಾಗಿ 15 ವರ್ಷಕ್ಕೆ ಕಟಾವಿಗೆ ಬರುತ್ತದೆ. ಅಲ್ಲಿವರೆಗೂ ಕಣ್ಣಲ್ಲಿ ಕಣ್ಣಿಟ್ಟು ಶ್ರೀಗಂಧ ರಕ್ಷಣೆ ಮಾಡಬೇಕು. ಬೇಲಿ  ನಿರ್ಮಾಣ ಅನಿವಾರ್ಯ. ಸಿಸಿ ಕ್ಯಾಮೆರಾ, ಬಂದೂಕು ಪರವಾನಗಿ, ಡಾಗ್ ಸಾಡ್ ಹಾಗೂ ತರಬೇತಿ ಪಡೆದ ಕಾವಲು ಪಡೆಯನ್ನು ರಕ್ಷಣೆಗೆ ಬಳಸಬೇಕು. ಇದು ಸಾಮಾನ್ಯ ಕೃಷಿಕನಿಗೆ ದುಬಾರಿಯಾದದ್ದು ಸರ್ಕಾರ ಗಿಡಗಳ ಪಾಲನೆಗೆ ಹೇಗೆ ಕೃಷಿಕರಿಗೆ ನೆರವಾಗುತ್ತದೋ ಅಂತೆಯೇ ರಕ್ಷಣೆಗೂ ನೆರವಾದರೆ ಶ್ರೀಗಂಧದ ಸಾಗುವಳಿ ಹೆಚ್ಚಲು ಸಹಾಯಕ’ ಎನ್ನುತ್ತಾರೆ ಸಿದ್ದಪ್ಪರವರು.

ಅಕೇಶಿಯಾ: ಈ ಅಕೇಶಿಯಾ ಮರ ಬೇಡಿಕೆ ಹೆಚ್ಚಾಗಿದೆ. ಇದು 15 ವರ್ಷದ ಬೆಳೆಯಾಗಿದ್ದು ಎಕರೆಗೆ 400 ಮರಗಳನ್ನು ಬೆಳೆಯಲಾಗಿದೆ. ಇದರ ಲಾಭ ಕೂಡ ಎಕರೆಗೆ 20 ರಿಂದ 25 ಲಕ್ಷದಷ್ಟು ದಕ್ಕಲಾಗಿದೆ. ಈ ವೇಳೆ ಅರೆ ಮಲೆನಾಡು ವ್ಯಾಪ್ತಿಯ ಅರಣ್ಯದ ನೀಲಗಿರಿ ಮತ್ತು ಅಕೇಶಿಯಾ ಬೆಳೆಯದಂತೆ ನಿಷೇಧಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆಗೂ ಸೂಚನೆ ನೀಡಲಾಗಿದೆ. ಅಕೇಶಿಯಾ ಅಂತಹ ಮರಗಳು ಹೆಚ್ಚು ನೀರು ಮತ್ತು ಮಣ್ಣಿನ ರಸಸಾರ ಹೀರಿಕೊಂಡು ವೇಗವಾಗಿ ಬೆಳೆಯುತ್ತವೆ. ಜತೆಗೆ ಒಂದೇ ಜಾತಿಯ ನೆಡುತೋಪು ಬೆಳೆಸುವುದರಿಂದ ಭೂಮಿ ಹಾಳಾಗುತ್ತದೆ ಎಂಬ ಸರ್ಕಾರ ನಿಷೇಧ ಹೇರಿತ್ತು. ಅರೆ ಮಲೆನಾಡಿನ ಕೃಷಿ ಭೂಮಿಯಲ್ಲಿ ನೀಲಗಿರಿ, ಅಕೇಶಿಯಾ ಹೈಬ್ರಿಡ್ ಹಾಗೂ ಗಾಳಿ(ನಾರ್ವೆ) ಜಾತಿಯ ಮರಗಳನ್ನು ಬೆಳೆಸಲು ಮುಂದಾಗಿದೆ.

‘ಕಾರ್ಖಾನೆ ಕಾನೂನು ಚೌಕಟ್ಟಿನಲ್ಲೇ ನೀಲಗಿರಿ, ಅಕೇಶಿಯಾ ಬೆಳೆಯುತ್ತಿದೆ. ಇದು ಪರಿಸರಕ್ಕೆ ಮಾರಕ ಎಂಬುವುದು ತಪ್ಪು ಗ್ರಹಿಕೆ; ರಾಜ್ಯದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಅಕೇಶಿಯಾ ಬೆಳೆಯಲಾಗುತ್ತಿದೆ. ಅಕೇಶಿಯಾ ಅಪಾಯಕಾರಿ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. 1986–89ರ ಅವಧಿಯಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ ಇಂಗ್ಲೆಂಡ್‌ನ ಸಂಸ್ಥೆ ಅಧ್ಯಯನ ನಡೆಸಿ ಅಕೇಶಿಯಾ ಅಪಾಯಕಾರಿ ಅಲ್ಲ ’ ಎಂದು ವರದಿ ನೀಡಿದೆ ಎನ್ನುತ್ತಾರೆ ಮುಧೋಳ ಕೃಷಿ ಶಿಕ್ಷಣ ವಿಸ್ತರಣಾ ಕೇಂದ್ರದ  ಮುಂದಾಳು ಡಾ. ಆರ್. ಬಿ. ಬೆಳ್ಳಿ.

‘ಕೇವಲ 10ನೇ ತರಗತಿಯವರೆಗೆ ಕಲಿತು ಮುಂದೆ ಉನ್ನತ ಶಿಕ್ಷಣದಿಂದ ವಂಚಿತರಾಗಿರುವ ಬಗ್ಗೆ ನನ್ನನ್ನು ಪ್ರಶ್ನಿಸುತ್ತಾರೆ. ಆದರೆ ಆ ಕೊರಗು ನನಗಿಲ್ಲ. ಉತ್ತಮ ಕೃಷಿಕನಾಗಿದ್ದೇನೆ ಎಂದು  ಹೇಳಲು ಖುಷಿಯೆನಿಸುತ್ತದೆ. ಇದರಿಂದಲೇ ನನ್ನ ಕುಟುಂಬ ಯಶಸ್ವಿಯಾಗಿ ಬೆಳೆಯುತ್ತಿದೆ’ ಎನ್ನುತ್ತಾರೆ ಸಿದ್ದಪ್ಪ.

ಹಲವಾರು ಪ್ರಶಸ್ತಿಗಳು: ಯಶಸ್ವಿ ಕೃಷಿಕರಾದ ಸಿದ್ದಪ್ಪ ಅವರಿಗೆ ರಾಜ್ಯ ಸರ್ಕಾರದ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ, ತೋಟಗಾರಿಕೆ ಕೃಷಿ ವಿಶ್ವವಿದ್ಯಾಲಯ ಬಾಗಲಕೋಟ ವತಿಯಿಂದ ಶ್ರೇಷ್ಠ ಕೃಷಿಕ ತೋಟಗಾರಿಕೆ ಪ್ರಶಸ್ತಿ ಮತ್ತು  ಎಂ.ಎಚ್‌. ಮರೀಗೌಡ ಪ್ರಶಸ್ತಿ ಇನ್ನೂ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ಸಿದ್ದಪ್ಪನವರ ಸಂಪರ್ಕ ಸಂಖ್ಯೆ: 9448789651.
ಡಾ. ಆರ್. ಬಿ. ಬೆಳ್ಳಿ ಅವರ ಸಂಪರ್ಕಕ್ಕೆ: 9448418389

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT