ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಲಿದೆ ಅತ್ಯಾಧುನಿಕ ಸರಕು ಸಾಗಾಟ ಕೇಂದ್ರ

ವಿಮಾನ ನಿಲ್ದಾಣದಲ್ಲಿ ರಫ್ತು ಚಟುವಟಿಕೆಗೆ ಜಾಗತಿಕ ಗುಣಮಟ್ಟದ ಸೌಲಭ್ಯ
Last Updated 2 ಮಾರ್ಚ್ 2015, 19:31 IST
ಅಕ್ಷರ ಗಾತ್ರ

ಬೆಂಗಳೂರು: ದೇವನಹಳ್ಳಿಯ ಗುಲಾಬಿ ಹೂವು ಮಾತ್ರವಲ್ಲ; ಮೈಸೂರು ಮಲ್ಲಿಗೆ, ಹಾಸನದ ಸೌತೇಕಾಯಿ, ಮಲ್ಪೆಯ ಮೀನು, ಧಾರವಾಡದ ಫೇಡೆಯನ್ನೂ ಕೆಡದಂತೆ ಶೇಖರಿಸಿಟ್ಟು ರಫ್ತು ಮಾಡಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿ ಈಗ ಹೊಸ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿದೆ.

ಬಹುಬೇಗನೆ ಹಾಳಾಗುವ ಸರಕುಗಳ ಆಮದು ಹಾಗೂ ರಫ್ತು ಚಟುವಟಿಕೆಗಳ ನಿರ್ವಹಣೆಗಾಗಿ ಏರ್‌ ಇಂಡಿಯಾ ಸ್ಯಾಟ್ಸ್‌ ಏರ್‌ಪೋರ್ಟ್‌ ಸರ್ವಿ­ಸಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ವಿಮಾನ ನಿಲ್ದಾಣದ ಆವರಣದಲ್ಲೇ ಅತ್ಯಾಧುನಿಕ ಕೇಂದ್ರ­ವನ್ನು ನಿರ್ಮಾಣ ಮಾಡಲಿದೆ. ಸೋಮವಾರ ನಡೆದ ಸಮಾರಂಭದಲ್ಲಿ ಕೇಂದ್ರದ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 12 ತಿಂಗಳಲ್ಲಿ ಈ ಕೇಂದ್ರ ಸೇವೆಗೆ ಸನ್ನದ್ಧಗೊಳ್ಳಲಿದೆ.

ಔಷಧಿ ಉತ್ಪನ್ನ, ಹಣ್ಣು, ತರಕಾರಿ, ಹೂವು ಸೇರಿದಂತೆ ಬಹುಬೇಗ ಹಾಳಾಗುವ ಸರಕುಗಳನ್ನು ಈ ಕೇಂದ್ರ ನಿರ್ವಹಣೆ ಮಾಡಲಿದೆ. ಸೌರಶಕ್ತಿ­ಯಿಂದಲೇ 135 ಕೆ.ವಿ ವಿದ್ಯುತ್‌ ಉತ್ಪಾದನೆಗೂ ಯೋಜನೆ ರೂಪಿಸಲಾಗಿದ್ದು, ಸೌರ ವಿದ್ಯುತ್‌ ಸೌಲಭ್ಯದ ಸರಕು ಸಾಗಣೆ ಟರ್ಮಿನಲ್‌ ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹಿರಿಮೆಗೂ ಕೆಐಎ ಪಾತ್ರವಾಗಲಿದೆ.

ಔಷಧಿ ನಿಯಂತ್ರಕರ ಪ್ರಯೋಗಾಲಯ, ಶೈತ್ಯಾ­ಗಾರ, ಮರು ವಿತರಣೆ ವಿಭಾಗ, ಟ್ರಕ್‌ ಡಾಕ್‌ (ಸರಕು ಇಳಿಸುವ/ತುಂಬುವ ತಾಣ), ಸರಕಿನ ಅಗತ್ಯಕ್ಕೆ ತಕ್ಕಂತಹ ತಾಪಮಾನದ ಕೋಣೆ ( –25 ಡಿಗ್ರಿ ಸೆಲ್ಸಿಯಸ್‌ +25 ಡಿಗ್ರಿ ಸೆಲ್ಸಿಯಸ್‌ವರೆಗೆ ಬೇಕಾದ ವಾತಾವರಣ ಕಲ್ಪಿಸಬಹುದು) ಮೊದ­ಲಾದ ಸೌಲಭ್ಯಗಳನ್ನು ಈ ಕೇಂದ್ರ ಹೊಂದಲಿದ್ದು, ಪ್ರತಿವರ್ಷ 40 ಸಾವಿರ ಟನ್‌ ಸರಕು ನಿರ್ವಹಣೆ ಮಾಡಲಿದೆ.

ರಫ್ತು ಮಾಡುವ ಮುನ್ನ ಸರಕಿನ ಮೌಲ್ಯವರ್ಧ­ನೆಗೆ ಬೇಕಾದ ಸೌಲಭ್ಯವನ್ನೂ ಕೇಂದ್ರ ಒದಗಿಸ­ಲಿದೆ. ಏರ್‌ ಇಂಡಿಯಾ ಸ್ಯಾಟ್ಸ್‌ ಸಂಸ್ಥೆ 2010­ರಿಂದಲೇ ಬೆಂಗಳೂರಿನಲ್ಲಿ ಸರಕು ಸಾಗಾಟದ ಸೇವೆ ನೀಡುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಶೇ 37.9ರಷ್ಟು ವಹಿವಾಟು ವೃದ್ಧಿಯಾಗಿದೆ.

ಮುಂದಿನ ವರ್ಷಗಳಲ್ಲಿ ಬೆಂಗಳೂರಿನಿಂದ ಔಷಧಿ ಹಾಗೂ ಜೈವಿಕ ತಂತ್ರಜ್ಞಾನದ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತುಗೊಳ್ಳುವ ನಿರೀಕ್ಷೆಯಿದ್ದು, ಅಂತಹ ಸರಕುಗಳ ನಿರ್ವಹಣೆಗೆ ಸಂಬಂಧಿಸಿದಂತೆ ಏರ್‌ ಇಂಡಿಯಾ ಸ್ಯಾಟ್ಸ್‌ ಸಂಸ್ಥೆ ತರಬೇತಿ ಕೋರ್ಸ್‌ ನಡೆಸಲು ಸಹ ನಿರ್ಧರಿಸಿದೆ. ಏರ್‌ ಇಂಡಿಯಾ ಹಾಗೂ ಸಿಂಗಪುರ ಮೂಲದ ವಿಮಾನ ಸರಕು ಸಾಗಾಟ ಸಂಸ್ಥೆ ಸ್ಯಾಟ್ಸ್‌ ತಲಾ ಶೇ 50ರಷ್ಟು ಬಂಡವಾಳ ಹೂಡಿ ಆರಂಭಿಸಿರುವ ಜಂಟಿ ಸಂಸ್ಥೆ ಇದಾಗಿದೆ.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ, ‘ಬೆಂಗಳೂರು ಪ್ರತಿವರ್ಷ ₨ 3 ಲಕ್ಷ ಕೋಟಿ ಮೌಲ್ಯದ ಸರಕು ರಫ್ತು ಮಾಡುತ್ತಿದೆ. ಕಸದ ನಗರ, ಕೊಳೆಗೇರಿ ನಗರ ಎಂದೆಲ್ಲ ಜರಿಯುವವರೂ ಈ ಸತ್ಯವನ್ನು ಒಪ್ಪಿಕೊಳ್ಳಲೇ­ಬೇಕು. ಮುಂದಿನ ದಿನಗಳಲ್ಲಿ ರಫ್ತು ವಹಿವಾಟು ಇನ್ನೂ ಹೆಚ್ಚಲಿದೆ’ ಎಂದು ಹೇಳಿದರು.

‘ನಮ್ಮ ದೇವನಹಳ್ಳಿಯಲ್ಲಿ ಬೆಳೆದ ಗುಲಾಬಿ ಪ್ರತಿವರ್ಷ ಪ್ರೇಮಿಗಳ ದಿನ ಯೂರೋಪ್‌ನಲ್ಲಿ ಪ್ರೇಮ ನಿವೇದನೆಗೆ ಬಳಕೆ ಆಗುತ್ತದೆ. ಜಗತ್ತಿನ ಯಾವುದೇ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗಿರುವುದು ಅಗತ್ಯವಿರುವ ಇನ್ನೊಂದು ಭಾಗಕ್ಕೆ ಹೋಗಬೇಕು. ರಾಜ್ಯದ ಅಂತಹ ಹೆಚ್ಚುವರಿ ಉತ್ಪನ್ನವನ್ನು ರಫ್ತು ಮಾಡಲು ಅಗತ್ಯವಾದ ಎಲ್ಲ ಸೌಕರ್ಯವನ್ನು ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದರು.

ಸುಂಕ ಇಲಾಖೆ ಆಯುಕ್ತ ಸಂದೀಪ್‌ ಪ್ರಕಾಶ್‌ ಮಾತನಾಡಿ, ‘ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಿನದ 24 ಗಂಟೆಯೂ ಸರಕು ತಪಾಸಣೆ ಮತ್ತು ಸಾಗಾಟದ ಅನುಮತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಒಟ್ಟು ಸಾಗಾಟದ ಶೇ 50ರಷ್ಟು ಸರಕು ಮಧ್ಯಾಹ್ನ 3ರಿಂದ ರಾತ್ರಿ 7ರ ಅವಧಿಯಲ್ಲಿ ಬರುತ್ತದೆ.

ಕೊನೆಯ ಗಳಿಗೆಯಲ್ಲಿನ ಈ ನೂಕು ನುಗ್ಗಲು ತಪ್ಪಿಸಲು ದಟ್ಟಣೆ ಅವಧಿಯಲ್ಲಿ ಸರಕು ತಂದವರಿಗೆ ಹೆಚ್ಚಿನ ದರ ವಿಧಿಸಬೇಕು. ಇದರಿಂದ ದಟ್ಟಣೆ ಇರದ ಬೆಳಗಿನ ಅವಧಿಯಲ್ಲೂ ಸರಕು ತಪಾಸಣೆ ನಡೆಸಿ ಅನುಮತಿ ನೀಡಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

ಏರ್‌ ಇಂಡಿಯಾ ಸ್ಯಾಟ್ಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಕ್‌ ಚಾಂಗ್‌ ವಿಲ್ಲಿ ಕೊ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT