ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರವಣಿಗೆಗೆ ಓದುಗನ ಕಟ್ಟಿ ಹಾಕುವ ಶಕ್ತಿ ಇರಲಿ

ಸಾಹಿತಿ ಚಂದ್ರಶೇಖರ ಪಾಟೀಲ ಅಭಿಪ್ರಾಯ
Last Updated 19 ಜುಲೈ 2015, 19:50 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎಚ್‌.ಬಿ. ವಾಲೀಕಾರ ಅವರು ಬರೆದಿರುವ ‘ನಾನು, ನೀನು ಮತ್ತು ದೇವರು’ ಸ್ವವಿಶ್ಲೇಷಣಾತ್ಮಕ ವೈಚಾರಿಕ ಕೃತಿಯ ಬಿಡುಗಡೆ ಸಮಾರಂಭ ಭಾನುವಾರ ನಗರದಲ್ಲಿ ಜರುಗಿತು.

ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ‘ಕಥೆ, ಕವಿತೆ, ಕಾದಂಬರಿ ಅಥವಾ ಪತ್ರಿಕೆಯ ವರದಿ ಯಾವುದೇ ಆಗಿರಲಿ ಅದು ಓದುಗನನ್ನು ಕಟ್ಟಿ ಹಾಕುವ ಗುಣ ಹೊಂದಿರಬೇಕು’ ಎಂದು ತಿಳಿಸಿದರು. ‘ಕಲಾವಿದರು ಅವರ ವಿಚಾರಗಳಿಗೆ ಮೂರ್ತ ರೂಪ ಕೊಡಲು ಅನೇಕ ವಸ್ತುಗಳಿವೆ. ಆದರೆ ಒಬ್ಬ ಬರಹಗಾರನಿಗೆ ಆತನ ಬರವಣಿಗೆಯೇ ಪ್ರಮುಖ ಸಾಧನವಾಗಿರುತ್ತದೆ’ ಎಂದರು.

‘ನಿಜಸ್ವರೂಪದಲ್ಲಿ ಬರಹ ಕೂಡ ಅನ್ವೇಷಣೆಯ ಒಂದು ಸಾಧನ. ಅದು ಮೊನಚಾಗಿದ್ದರೆ ಎಂತಹವರನ್ನೂ ಓದಿಸಿಕೊಂಡು ಹೋಗುತ್ತದೆ’ ಎಂದು ಹೇಳಿದರು. ‘ವಾಲೀಕಾರ ಅವರು ಅವರ ಅಮೂರ್ತವಾದ ವಿಚಾರಗಳಿಗೆ ತಮ್ಮ ಕೃತಿಯಲ್ಲಿ ಅಕ್ಷರ ರೂಪ ಕೊಟ್ಟಿದ್ದಾರೆ.

ಈ ಕೃತಿಯನ್ನು ಒಮ್ಮೆ ಓದಲು ಆರಂಭಿಸಿದರೆ ಕೊನೆಯವರೆಗೆ ಓದಿಸಿಕೊಂಡು ಹೋಗುವ ಗುಣ ಇದೆ’ ಎಂದು ಕೊಂಡಾಡಿದರು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಚಂದ್ರಶೇಖರ ಕಂಬಾರ, ‘ಈ ಕೃತಿ ಓದಿದ ಮೇಲೆ ಒಂದು ಪತ್ತೇದಾರಿ ಕಾದಂಬರಿ ಓದಿದ ಅನುಭವ ಆಗುತ್ತದೆ. ಒಂದು ಜನಪ್ರಿಯ ಕಾದಂಬರಿಯ ಎಲ್ಲ ಲಕ್ಷಣಗಳನ್ನು ಇದು ಒಳಗೊಂಡಿದೆ’ ಎಂದರು.

‘ಈ ಪುಸ್ತಕ ಕನ್ನಡದಲ್ಲಿ ಬಂದಿರುವುದು ಒಳ್ಳೆಯ ಸಂಗತಿ. ಈ ತರಹದ ಎರಡೇ ಪುಸ್ತಕಗಳು ಕನ್ನಡದಲ್ಲಿ ಬಂದಿವೆ’ ಎಂದೂ ಹೇಳಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌ ಮಾತನಾಡಿ, ‘ಇದು ಅಲೋಕಾರ್ಥದ ಚಿಂತನೆಗಳನ್ನು ಒಳಗೊಂಡಿರುವ ಕೃತಿಯಾಗಿದೆ’ ಎಂದರು. ಎಚ್‌.ಬಿ. ವಾಲೀಕಾರ ಮಾತನಾಡಿ, ‘ಗಾಳಿಯಲ್ಲಿ ತೇಲಾಡುತ್ತಿದ್ದ ನನ್ನ ವಿಚಾರಗಳಿಗೆ ಪುಸ್ತಕದಲ್ಲಿ ಅಕ್ಷರ ರೂಪ ಕೊಟ್ಟಿದ್ದೇನೆ’ ಎಂದರು. ಸಪ್ನಾ ಬುಕ್‌ ಹೌಸ್‌ನಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT