ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿಗೈಯಲ್ಲೇ ಬೆನ್ನು ಮುರಿಯುತ್ತೇವೆ

ಟಿಎಂಸಿಗೆ ಪ.ಬಂಗಾಳ ಬಿಜೆಪಿ ಅಧ್ಯಕ್ಷರಿಂದ ಬೆದರಿಕೆ
Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ತಮ್ಮ ಪಕ್ಷದ ಕಾರ್ಯಕರ್ತರು ಆರ್‌ಎಸ್‌ಎಸ್‌ನಿಂದ ತರಬೇತಿ ಪಡೆದಿದ್ದು ಬರಿ ಕೈಗಳಿಂದಲೇ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರ ಬೆನ್ನು ಮುರಿಯುವಷ್ಟು ಸಾಮರ್ಥ್ಯ ಹೊಂದಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ವಿವಾದ ಸೃಷ್ಟಿಸಿದ್ದಾರೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌, ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಈ ಹೇಳಿಕೆಯನ್ನು ಖಂಡಿಸಿವೆ. ಟಿಎಂಸಿ ಕಾರ್ಯಕರ್ತರು ಹಿಂಸೆ ನಡೆಸುವುದನ್ನು ನಿಲ್ಲಿಸಬೇಕು. ವರ್ತನೆ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಪಶ್ಚಿಮ ಬಂಗಾಳದಿಂದ ಹೊರಗೆ ಹೋದಾಗ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಘೋಷ್‌ ಹೇಳಿದ್ದಾರೆ.

‘ಏನು ಬೇಕಾದರೂ ಮಾಡಬಹುದು  ಎಂದು ಅವರು ಭಾವಿಸಿದ್ದಾರೆ. ಯಾವುದೇ ಕಾರಣ ಇಲ್ಲದೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಆದರೆ ಅವರು ಒಂದು
ವಿಷಯ ನೆನಪಿನಲ್ಲಿ ಇರಿಸಿಕೊಳ್ಳಬೇಕು. ಪಶ್ಚಿಮ ಬಂಗಾಳದಿಂದ ಹೊರಗೆ ಹೋದರೆ ಎಲ್ಲೆಡೆಯೂ  ಬಿಜೆಪಿಯೇ ಇದೆ’ ಎಂದು ಖರಗ್‌ಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಅವರು ಹೇಳಿದ್ದಾರೆ.

‘ಅವರಲ್ಲಿ (ಟಿಎಂಸಿ) 211 ಶಾಸಕರಿದ್ದರೆ ಭಾರತದಾದ್ಯಂತ ಬಿಜೆಪಿಯ ಸಾವಿರಕ್ಕೂ ಹೆಚ್ಚು ಶಾಸಕರು ಮತ್ತು ಸಂಸದರಿದ್ದಾರೆ. ಟಿಎಂಸಿಯವರು ಬಂಗಾಳದಿಂದ ಹೊರಗೆ ಕಾಲಿರಿಸಿದರೆ ಅವರಿಗೆ ಬುದ್ಧಿ ಕಲಿಸಲಾಗುವುದು. ಟಿಎಂಸಿ ಕಾರ್ಯಕರ್ತರು ಮನೆಯಿಂದ ಹೊರಗೆ ಹೋಗುವಾಗ ಅವರ ಹೆಸರಿಗೆ ಮನೆಯವರು ಕೆಂಪು ಬಣ್ಣದಲ್ಲಿ ಗುರುತು ಹಾಕಬೇಕು’ ಎಂದು ಘೋಷ್‌ ಹೇಳಿದ್ದಾರೆ.

‘ನಮ್ಮನ್ನು ಕೆರಳಿಸಬೇಡಿ. ನಾವು ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ. ನಾನು ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಕೆರಳಿಸಿದರೆ ಚೆನ್ನಾಗಿರುವುದಿಲ್ಲ. ನಿಮಗೆ ಯಾವ ಖುಷಿಯೂ ಇರುವುದಿಲ್ಲ ಎಂದು ನಾನು ಎಚ್ಚರಿಕೆ ನೀಡುತ್ತಿದ್ದೇನೆ. ನಾವು ಮೊದಲು ನೀರು ಪೂರೈಕೆ ನಿಲ್ಲಿಸುತ್ತೇವೆ, ನಂತರ ವಿದ್ಯುತ್‌ ಸಂಪರ್ಕ ಕಡಿತಗೊಳಿಸುತ್ತೇವೆ.

ನಂತರ ಬಾಗಿಲು ಹಾಕಿ ನಿಮ್ಮನ್ನು ತದಕುತ್ತೇವೆ. ನಮ್ಮ ಹುಡುಗರಿಗೆ ಆರ್‌ಎಸ್‌ಎಸ್‌ ತರಬೇತಿ ನೀಡಿದೆ. ಅವರು ಈಗ ಸಜ್ಜಾಗಿದ್ದಾರೆ. ನಿಮ್ಮ ಭುಜ ಮುರಿದು ಹಾಕುತ್ತೇವೆ’ ಎಂದು ಟಿಎಂಸಿ ಕಾರ್ಯಕರ್ತರಿಗೆ ಘೋಷ್‌ ಬೆದರಿಕೆ ಹಾಕಿದ್ದಾರೆ.

ಟಿಎಂಸಿ ಕಾರ್ಯಕರ್ತರು ಹಿಂಸೆ ನಡೆಸುವುದನ್ನು ನಿಲ್ಲಿಸದಿದ್ದರೆ ಅವರ ಮಕ್ಕಳು ಅನಾಥರಾಗುತ್ತಾರೆ ಎಂದು ಘೋಷ್‌ ಹೇಳಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT