ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಜಲಾಶಯಗಳು

ಮಳೆ ಕೈಕೊಟ್ಟರೆ ಕುಡಿಯುವ ನೀರಿನ ಪರಿಸ್ಥಿತಿ ಗಂಭೀರ: ಸಚಿವ ಪಾಟೀಲ
Last Updated 25 ಜೂನ್ 2016, 19:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಿರುವ ನೀರು ಇನ್ನು ಎರಡು ವಾರಕ್ಕೆ ಮಾತ್ರ ಸಾಕಾಗಲಿದ್ದು, ಮಳೆ ಬರದಿದ್ದರೆ ಕುಡಿಯುವ ನೀರಿನ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಆತಂಕ ವ್ಯಕ್ತಪಡಿಸಿದ್ದಾರೆ.

ಕಾವೇರಿ ಹಾಗೂ ಕೃಷ್ಣಾ ಕೊಳ್ಳದ ಎಲ್ಲಾ ಜಲಾಶಯಗಳಲ್ಲೂ ನೀರು ತಳ ಮಟ್ಟ ಮುಟ್ಟಿದೆ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
‘ಕೃಷ್ಣಾ ಜಲಾನಯನ ಪ್ರದೇಶಗಳಾದ ಮಾಬಲೇಶ್ವರ, ಸಾಂಗ್ಲಿ, ಸತಾರಗಳಲ್ಲಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ನೀರಿನ ಹರಿವು ಆರಂಭವಾಗಿದೆ’ ಎಂದರು. 

‘ಜೂನ್‌ ತಿಂಗಳವರೆಗೆ ಕುಡಿಯುವ ನೀರಿನ ಬೇಡಿಕೆ ಪ್ರಮಾಣ ಗಮನದಲ್ಲಿಟ್ಟುಕೊಂಡು ಎಲ್ಲಾ ಜಲಾಶಯಗಳಲ್ಲೂ ನೀರಿನ ಸಂಗ್ರಹ ಮಾಡಲಾಗಿತ್ತು. ಬೇಸಿಗೆಯಲ್ಲಿ ಕುಡಿಯುವ ನೀರಿನ ಬೇಡಿಕೆ ಪೂರೈಸುವ ಸಲುವಾಗಿ ಯಾವುದೇ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇ ಬೆಳೆಗೆ ನೀರು ಪೂರೈಸಿರಲಿಲ್ಲ. ಜೂನ್‌ ಮುಗಿಯುತ್ತಾ ಬಂದರೂ ನಿರೀಕ್ಷಿತ ಮಳೆ ಬಂದಿಲ್ಲ. ಹವಾಮಾನ ಇಲಾಖೆ ವಾಡಿಕೆಗಿಂತ ಹೆಚ್ಚಿನ ಮಳೆ ಬೀಳುವ ಮುನ್ಸೂಚನೆ ನೀಡಿದ್ದು, ಅಕಸ್ಮಾತ್‌ ಮಳೆ ಬರದೇ ಇದ್ದರೆ ಸಮಸ್ಯೆ ಗಂಭೀರವಾಗಲಿದೆ’ ಎಂದು ಸಚಿವ ಎಂ.ಬಿ. ಪಾಟೀಲ ಅವರು ಕಳವಳ ವ್ಯಕ್ತಪಡಿಸಿದರು.
*
ತಮಿಳುನಾಡಿಗೆ 1.9 ಟಿಎಂಸಿ ಅಡಿ ನೀರು
ಜೂನ್‌ ತಿಂಗಳಿನಲ್ಲಿ 1.9 ಟಿಎಂಸಿ ಅಡಿಗೂ ಹೆಚ್ಚು ನೀರು ತಮಿಳುನಾಡಿಗೆ ಹರಿದುಹೋಗಿದೆ. ‘ತಮಿಳುನಾಡಿಗೆ ನೀರು ಬಿಟ್ಟಿಲ್ಲ. ಅಣೆಕಟ್ಟಿನ ಕೆಳಭಾಗದಲ್ಲಿ ಸುರಿದ ಮಳೆಯಿಂದಾಗಿ ಸ್ವಾಭಾವಿಕವಾಗಿ ಸ್ವಲ್ಪ ಪ್ರಮಾಣದ ನೀರು ಹರಿದುಹೋಗಿರಬಹುದು’ ಎಂದು  ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ  ‘ಪ್ರಜಾವಾಣಿ’ಗೆ ತಿಳಿಸಿದರು.
*
ಮಳೆ ಬರದಿದ್ದರೆ ಜಲಾಶಯಗಳಲ್ಲಿ ಸಂಗ್ರಹವಿರುವ ಬಳಕೆಗೆ ಯೋಗ್ಯವಲ್ಲದ (ಡೆಡ್‌ ಸ್ಟೋರೇಜ್‌) ನೀರನ್ನೂ ಪೂರೈಕೆ ಮಾಡುವುದು ಅನಿವಾರ್ಯ.
-ಎಂ.ಬಿ. ಪಾಟೀಲ,
ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT