ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ತೋರಿಕೆಯಾಗಬಾರದು

Last Updated 5 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಯೋಜನೇತರ ವೆಚ್ಚವನ್ನು ಶೇ 10ರಷ್ಟು ಕಡಿಮೆ ಮಾಡಲು ಹಲವಾರು ಮಿತವ್ಯಯ ಕ್ರಮಗಳನ್ನು ಕೇಂದ್ರದ ಎನ್‌ಡಿಎ ಸರ್ಕಾರ ಪ್ರಕಟಿ­ಸಿದೆ. ಸರ್ಕಾರಿ ಬಾಬುಗಳ ವಿದೇಶ ಪ್ರಯಾಣ, ಪ್ರಥಮ ದರ್ಜೆ ವಿಮಾನ ಪ್ರಯಾಣ ಸೌಲಭ್ಯಕ್ಕೆ ಕತ್ತರಿ, ಪಂಚತಾರಾ ಹೋಟೆಲ್‌­ಗಳಲ್ಲಿ ಸಭೆ ಹಾಗೂ ಹೊಸ ಕಾರುಗಳ ಖರೀದಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಹೊಸ ನೇಮಕಾತಿಗಳಿಗೂ ತಡೆ ಒಡ್ಡಲಾಗಿದೆ. ಪ್ರವಾಸಗಳ ಬದಲು ವಿಡಿಯೊ ಸಂವಾದ­ಗಳಿಗೆ ಪ್ರಾಶಸ್ತ್ಯ ನೀಡಬೇಕೆಂದು ಸೂಚಿಸಲಾಗಿದೆ. ಈ  ಕ್ರಮಗಳ ಮೂಲಕ, ವಿತ್ತೀಯ ಕೊರತೆಯನ್ನು  ಶೇ 4.1ಕ್ಕೆ ತಗ್ಗಿಸುವ ಗುರಿ ಸರ್ಕಾರದ್ದು. ಆರ್ಥಿಕ ಶಿಸ್ತು ಉತ್ತೇಜನಕ್ಕೂ ಇದು ಸಹಕಾರಿ ಎಂಬುದು ಸರ್ಕಾರದ ಪ್ರತಿಪಾದನೆ.

ವೆಚ್ಚ ಕಡಿತದಿಂದ ₨ 35 ರಿಂದ ₨ 40 ಸಾವಿರ ಕೋಟಿ­­ಗಳಷ್ಟು (ಜಿಡಿಪಿಯ ಶೇ 0.3ರಷ್ಟು) ಉಳಿ­ತಾಯ ಸಾಧ್ಯವಾಗ­ಲಿದೆ. ಸಂಪನ್ಮೂಲ ಕ್ರೋಡೀಕರ­ಣಕ್ಕೆ ಸರ್ಕಾರ ಬದ್ಧವಾ­ಗಿ­ರುವುದನ್ನು ಇದು ಸೂಚಿ­ಸು­ತ್ತದೆ. ಈ ಕ್ರಮಗಳು, ಅನಗತ್ಯ ವೆಚ್ಚಗಳಿಗೆ ಕಡಿ­ವಾಣ ಹಾಕುವ ಮತ್ತು ಲಭ್ಯ ಇರುವ ಸಂಪನ್ಮೂಲಗಳ ಗರಿಷ್ಠ ಬಳಕೆಗೆ ಒತ್ತು ನೀಡುವ ಆರ್ಥಿಕ ಸಚಿ­ವಾಲಯದ ಆಶಯಕ್ಕೆ ಒತ್ತಾಸೆ­ಯಾಗಿ ನಿಲ್ಲಬೇಕು. ಆದರೆ, ಅರ್ಥ ವ್ಯವ­ಸ್ಥೆಯ ಪುನ­ಶ್ಚೇತನ ಅದರಲ್ಲೂ ತಯಾರಿಕಾ ರಂಗ­ದಲ್ಲಿನ ಚೇತರಿಕೆಗೆ ಇದು ಅಡ್ಡಿಯಾಗ­ಬಾರದು. ಅರ್ಹ ಫಲಾನುಭವಿ­ಗಳಿಗೆ ಮಾತ್ರ ಸಬ್ಸಿಡಿ ಸೌಲಭ್ಯ ಒದಗಿಸುವ, ಸೋರಿಕೆ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಮಿತವ್ಯಯ ಕ್ರಮಗಳು ಉದ್ದೇಶಿತ ಫಲ ನೀಡುತ್ತವೆ.

‘ಯುಪಿಎ–2’ ಸರ್ಕಾರವೂ ವಿತ್ತೀಯ ಬಿಕ್ಕಟ್ಟು ವಿಷಮಿಸಿದ್ದಾಗ 2012­ರಲ್ಲಿ ಮಿತವ್ಯಯ ಕ್ರಮಗಳನ್ನು ಪ್ರಕಟಿಸಿತ್ತು. ಒಂದರ್ಥದಲ್ಲಿ ಇಂತಹ ಕ್ರಮ­ಗಳಿಗೆ ಬರೀ ಸಾಂಕೇತಿಕ ಮೌಲ್ಯ ಇರುತ್ತದೆ­ಯಷ್ಟೆ. ಅನೇಕ ನಿರ್ಧಾರಗಳು ಸಮರ್ಪ­ಕವಾಗಿ ಜಾರಿಗೆ ಬರುವುದೇ ಇಲ್ಲ ಅಥವಾ ಜಾರಿಗೆ ಬರುವ ಕಾರ್ಯ­ಕ್ರಮ­ಗಳು ದೀರ್ಘಕಾಲ ಬಾಳುವುದೂ ಇಲ್ಲ. ವೆಚ್ಚ ಕಡಿತಕ್ಕೆ ಪ್ರತಿ­ಯಾಗಿ ರಂಗೋಲಿ ಕೆಳಗೆ ಹೇಗೆ ನುಸುಳುವುದು ಎಂಬು­ದನ್ನು ಅಧಿಕಾರಿಗಳು ಮತ್ತು ರಾಜಕಾರ­ಣಿಗಳು ಚೆನ್ನಾಗಿ ಕರಗತ ಮಾಡಿಕೊಂಡಿ­ರುತ್ತಾರೆ. ಅನಿರೀಕ್ಷಿತ ಸಂದರ್ಭಗಳಲ್ಲಿ ವೆಚ್ಚ ಸರಿದೂಗಿಸಲು ನಿಯಮಾವಳಿ­ಗಳಲ್ಲಿ ಅವಕಾಶ ಇರು­ವುದನ್ನೂ ಆಡಳಿತಯಂತ್ರ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿ­ಕೊಳ್ಳುತ್ತಲೇ ಇರುತ್ತದೆ. ಹೀಗಾಗಿ ಇಂತಹ ಸದು­ದ್ದೇಶದ ಕ್ರಮಗಳು ಅನೇಕ ಬಾರಿ ತೋರಿಕೆ­ಯದಾಗಿ ಬಿಡುತ್ತವೆ. ಅಧಿಕಾರಿ­ಗಳಷ್ಟೇ ಅಲ್ಲದೆ ರಾಜಕಾರಣಿ­ಗಳ ಅನಗತ್ಯ ವಿದೇಶ ಪ್ರವಾಸಗಳೂ ಬೊಕ್ಕ­ಸಕ್ಕೆ ಹೊರೆಯಾಗಿರುತ್ತವೆ.

ಸಾರ್ವ­ಜನಿಕ ಹಣದ ದುರುಪಯೋಗ ತಪ್ಪಬೇಕು. ಈ ಮಿತವ್ಯಯದ ಕ್ರಮಗಳು ಸರ್ಕಾರದ ಕಾರ್ಯ­ನಿರ್ವ­ಹಣೆಯ ದಕ್ಷತೆಗೆ ಅಡ್ಡ­ಗಾಲು ಹಾಕದಂತೆಯೂ ಎಚ್ಚರವ­ಹಿಸುವ ಅಗತ್ಯ ಇದೆ. ಅನುತ್ಪಾದಕ ವೆಚ್ಚವನ್ನು ತಗ್ಗಿಸಲು ಸರ್ಕಾರ ಮೊದಲು ಆದ್ಯತೆ ನೀಡ­ಬೇಕು. ಅಗತ್ಯವಿಲ್ಲದ ಹುದ್ದೆಗಳನ್ನು ಕಡಿತಗೊಳಿಸುವುದೂ ಇದರಲ್ಲಿ ಸೇರಿದೆ. ಸದ್ಯದ ಪರಿಸ್ಥಿತಿ­ಯಲ್ಲಿ ವೆಚ್ಚ ಕಡಿತ ಮಾಡುವುದರ ಜತೆಗೆ ಲಭ್ಯ ಸಂಪ­ನ್ಮೂಲಗಳನ್ನು ಸದ್ಬಳಕೆ ಮಾಡಿ­ಕೊಳ್ಳುವ ಜಾಣತನ­ ಪ್ರದರ್ಶಿ­ಸಿದರೆ ಮಿತ­ವ್ಯಯ ಕ್ರಮಗಳ ಉದ್ದೇಶ ಸಾರ್ಥಕ­ವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT