ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ಮಾತಲ್ಲ, ಮಾಹಿತಿ ಇರಲಿ

ಕ್ಷೇಮ–ಕುಶಲ
Last Updated 22 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಸಣ್ಣ ಸೀನಿಗೂ ಈಗ ಭಯ ಪಡುವ ಮನೋಭಾವ ಜನರಲ್ಲಿ ಉಂಟಾಗಿದೆ. ಒಂದು ಚಿಕ್ಕ ಭೇದಿಯನ್ನೂ ನಿರ್ಲಕ್ಷಿಸಬೇಡಿ. ವ್ಯಾಕ್ಸಿನ್ ಕೊಡಿ ಎಂಬ ಭಯಾನಕ ಜಾಹೀರಾತುಗಳ ನಡುವೆ ಹರಿಯುವ ದಂತಕಥೆಗಳು ಬೇರೆ.

ಸಣ್ಣ ಜ್ವರ ಬಂತಷ್ಟೇ. ಅದು ಡೆಂಗ್ಯು ಆಗಿ ಆತ ಸಾವನ್ನಪ್ಪಿದ ಎಂದು. ಹಲ್ಲು ನೋವೆಂದು ಆಸ್ಪತ್ರೆಗೆ ಹೋದವನಿಗೆ ನಿಜಕ್ಕೂ ಹೃದಯಾಘಾತವಾಗಿತ್ತು, ಮರಳಿ ಬರಲೇ ಇಲ್ಲ. ಹೀಗೆ ಹತ್ತು ಹಲವಾರು. ಅದರೊಂದಿಗೆ ಅಂತರ್ಜಾಲದಲ್ಲಿ ಪ್ರವಹಿಸುವ ಮಾಹಿತಿಗಳ ಮಹಾಪೂರ. ಪ್ರತಿಯೊಂದು ರೋಗವೂ ಕ್ಯಾನ್ಸರ್ ಆಗಿರಬಹುದೇ ಎಂಬ ಭಯ.

ವೈದ್ಯರಿಗಿಂತ ಮೊದಲೇ ಅನಗತ್ಯವಾದ ಸ್ಕ್ಯಾನ್, ಎಂ.ಆರ್.ಐ ಎಲ್ಲ ರೀತಿಯ ದುಬಾರಿ ಪರೀಕ್ಷೆಗಳನ್ನು ಮಾಡಿಸಿಬಿಡಿ ಎಂಬುದು ರೋಗಿಗಳ ಬಲವಾದ ಕೋರಿಕೆ.

ಅಲ್ಲದೇ ಎಲ್ಲೆಂದರಲ್ಲಿ ಮಾಧ್ಯಮದಲ್ಲಿ ಬಿತ್ತರವಾಗುವ ಪುಕ್ಕಟೆ ಸಲಹೆಗಳು. ಹೆಚ್ಚಿನವು ಇದರಲ್ಲಿ ಒಂದೇ ಅಸಂಬದ್ಧ ಇಲ್ಲವೇ ಜಾಹೀರಾತಿನ ಕರೆಗಳು. ಅಡುಗೆ ತಯಾರಕರಿಂದ, ಜ್ಯೋತಿಷಿಗಳಿಂದಲೂ ವೈದ್ಯಕೀಯ ಸಲಹೆಗಳ ಹಂಚಿಕೆ! ‘ಕ್ಯಾರಟ್‌ನಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ ನಾನಿದನ್ನು ಬಳಸುತ್ತೇನೆ’ ಎಂದು ಅಡುಗೆ ತಯಾರಕಿಯೊಬ್ಬಳು ಹೇಳಿದರು. ಆದರೆ, ಬೇಯಿಸಿದೊಡನೆ ವಿಟಮಿನ್ ಎ ಉಳಿಯುವುದಿಲ್ಲ!
‘ಲಿವರ್ ಇನ್ವರ್ಟ್’ ಆಗುವ ರೋಗ ಇವರಿಗೆ ಹೆಚ್ಚಾಗಿ ತೊಂದರೆ ಕೊಡುತ್ತದೆ ಎಂದು ಜ್ಯೋತಿಷಿ ಹೇಳುತ್ತಿರುತ್ತಾರೆ.  ಆದರೆ ಅಂಥ ರೋಗವೇ ಇಲ್ಲ! ಲಿವರ್ ಅಥವಾ ಯಕೃತ್ ಎಂದು ಇನ್ವರ್ಟ್ ಅಥವಾ ತಿರುವು ಕಾಣದು!  

ಜ್ಯೋತಿಷಿ ಅಥವಾ ಪಾಕಶಾಸ್ತ್ರಜ್ಞರ ವಿರೋಧಿಸಿ ಈ ಮಾತು ಹೇಳುತ್ತಿಲ್ಲ. ಆದರೆ ಸಮರ್ಪಕ ಮಾಹಿತಿಯಿಲ್ಲದ ಅಸಂಬದ್ಧ ಸಲಹೆಗಳನ್ನು ಯಾರು ಹೇಳಿದರೂ ವಿರೋಧಿಸಲೇಬೇಕು.

ತಲೆಹೊಟ್ಟಿನ ಜಾಹೀರಾತುಗಳಲ್ಲಿ ತೋರಿಸುವ ಪ್ಯಾಚ್ ಟೆಸ್ಟ್ ನೀವು ಮಾಡುವುದಿಲ್ಲವೇ? ಎಂದೊಮ್ಮೆ ರೋಗಿಯ ಪ್ರಶ್ನೆಯಾಗಿತ್ತು! ‘ಪ್ಯಾಚ್ ಟೆಸ್ಟ್’ ವೈದ್ಯಕೀಯ ಜಗತ್ತಿನಲ್ಲಿ ಬೇರೊಂದಕ್ಕೆ ಎಂದರೂ ಆತ ನನ್ನ ಮಾತನ್ನು ನಂಬಲೇ ಇಲ್ಲ!

ಇನ್ನೊಂದೆಡೆ ಕೋಟು ಬೂಟು ಧರಿಸಿ ಜನಸಾಮಾನ್ಯನಿಗೆ ಅರ್ಥವಾಗದ, ಭಯಪಡಿಸುವ ವೈದ್ಯಕೀಯ ಹೆಸರುಗಳನ್ನು ಹೇಳಿ ರೋಗದ ಪರಿಚಯ ಮಾಡಿಸುವ ಕೆಲವು ವೈದ್ಯ ಮಹಾನುಭಾವರು. ಇವರು, ವೈದ್ಯರಿರುವುದು ‘ಟು ಕೇರ್’ (ಕಾಳಜಿಗೆ) ಅನ್ನುವುದನ್ನು ಮರೆತು ‘ಟು ಸ್ಕೇರ್’ (ಹೆದರಿಸಲು) ಎಂಬಂತೆ ನಡಕೊಳ್ಳುವಂಥವರು.

ಒಟ್ಟಿನಲ್ಲಿ ಜನರು ಭಯದ ವಾತಾವರಣದಲ್ಲೇ ಸದಾ ಜೀವಿಸುತ್ತಿರುತ್ತಾರೆ. ಇದರಿಂದ ಪಾರಾಗಲು ಸಾಮಾನ್ಯ ರೋಗಗಳ ಬಗ್ಗೆ ಸೂಕ್ತ ಮಾಹಿತಿ ಅಗತ್ಯ.  ಸಾಮಾನ್ಯವಾಗಿ ಕಾಣುವ ತೊಂದರೆಗಳಲ್ಲಿ ಯಾವ ಸಮಯದಲ್ಲಿ ಎಚ್ಚರ ವಹಿಸಬೇಕು ಹಾಗೂ ಕಡೆಗಣಿಸಬಾರದು ಎಂಬುದನ್ನು ತಿಳಿದಿರುವುದು ಅತ್ಯಗತ್ಯ. 
ಇದು ವೈದ್ಯರೂ ಅರಿತಿರಬೇಕಾದ ಸಂಗತಿ. ಯಾವಾಗ ಹೆಚ್ಚಿನ ತಜ್ಞರ ಅಗತ್ಯವಿದೆ ಎಂದು ತಿಳಿಯುವುದು ಬಹು ಮುಖ್ಯ. ಈ ರೀತಿಯ ಚಿಹ್ನೆಗಳನ್ನು ‘ರೆಡ್ ಫ್ಲಾಗ್’ (ಕೆಂಪು ಬಾವುಟ) ಚಿಹ್ನೆಗಳು ಎನ್ನುತ್ತಾರೆ. ಕೆಂಪು ಬಾವುಟವೆನ್ನುವುದು ‘ಜಾಗರೂಕತೆ’ಯ ದ್ಯೋತಕ. ಸಾಮಾನ್ಯ ಕೆಲವು ರೋಗಗಳ ಕೆಂಪು ಬಾವುಟ ಚಿಹ್ನೆಗಳು ಹೀಗಿವೆ. ಕೆಳ ಹೇಳಿದ ರೋಗಗಳೊಂದಿಗೆ ವಿವರಿಸಿರುವ ಲಕ್ಷಣಗಳಿವೆಯೇ ಎಂಬುದರ ಬಗ್ಗೆ ಗಮನ ವಹಿಸಿ.

ತಲೆನೋವು 
ಸಾಮಾನ್ಯವಾಗಿ ಕಂಡುಬರುವ ಹಾಗೂ ಸಾಮಾನ್ಯವಾಗಿ ನಿರ್ಲಕ್ಷಿಸುವ ರೋಗವಿದು. ‘ನೋವು ಶಾಮಕ’ ಗುಳಿಗೆಗಳನ್ನು ಹೇರಳವಾಗಿ ತಿನ್ನಿಸುವ ರೋಗವಿದು. ಇದರೊಂದಿಗೆ ಈ ಕೆಳಗಿನ ಲಕ್ಷಣಗಳಿವೆಯೇ ಎಂಬುದರ ಬಗ್ಗೆ ಕಾಳಜಿ ವಹಿಸಿ.

*ಮೊದಲ ಬಾರಿಗೆ ಕಾಣಿಸಿಕೊಳ್ಳುವುದು ಅಥವಾ ಹಿಂದಿಗಿಂತ ವಿಭಿನ್ನವಾಗಿ ನೋವು ಕಾಣಿಸಿಕೊಳ್ಳುವುದು.
*ಜೊತೆಗೆ ವಾಂತಿ ಹೆಚ್ಚಿರುವುದು
*ನಿಧಾನವಾಗಿ ದೃಷ್ಟಿಯಲ್ಲಿ ಹಾಗೂ ನರದೌರ್ಬಲ್ಯ ಕಂಡುಬರುವುದು
*ಪಾರ್ಶ್ವವಾಯು, ಜೋಮು ಹಿಡಿಯುವುದು
*ದೇಹದ ಸಮತೋಲನ ಕಳೆದುಕೊಳ್ಳುವುದು
*ಮಂಪರು ಹಿಡಿಯುವುದು, ಜ್ಞಾಪಕಶಕ್ತಿ ಕಳೆದುಕೊಳ್ಳುವುದು, ತಲೆಯೊಳಗೆ ಗೊಂದಲ ಉಂಟಾಗುವುದು.
*ಒಮ್ಮೆಗೆ 50 ವರ್ಷದ ನಂತರ ಶುರುವಾದ ತಲೆನೋವು
*ಕೆಮ್ಮು, ಸಂಭೋಗ ಅಥವಾ ಹೆಚ್ಚು ದಣಿವಾದಾಗ ಬರುವ ನೋವು
*ಇತರ ರೋಗಗಳೊಂದಿಗಿರುವುದು
*ಕುತ್ತಿಗೆಯಲ್ಲಿ ಬಿಗಿತ ಬರುವುದು, ಇಂದ್ರಿಯ ನಿಶ್ಶಕ್ತಿ.

ಬೆನ್ನುನೋವು
*16ರೊಳಗೆ ಮತ್ತು 50ವರ್ಷದ ನಂತರ ಒಮ್ಮೆಗೆ ಕಾಣಿಸಿಕೊಳ್ಳುವ ನೋವು
*ತೂಕ ಕಡಿಮೆಯಾಗುವುದು
*ಬಹಳ ದಿವಸದಿಂದ ‘ಸ್ಟಿರಾಯಿಡ್’ ಬಳಕೆಯಿದ್ದಲ್ಲಿ
*ಸದ್ಯದಲ್ಲೇ ಸೋಂಕು ಅಥವಾ ಗಂಭೀರ ರೋಗದಿಂದ ಬಳಲಿದ್ದಲ್ಲಿ
*ನಿತಂಬದಲ್ಲಿ ಜೋಮು ಹಿಡಿಯುತ್ತಿದ್ದಲ್ಲಿ
*ಗುದದ್ವಾರದ ಬಿಗಿತ ಕಮ್ಮಿಯಾದಲ್ಲಿ
*ಕಾಲು ಮತ್ತು ಮಂಡಿಯಲ್ಲಿ ದೌರ್ಬಲ್ಯ
*ಒಟ್ಟಾರೆ ನರದೌರ್ಬಲ್ಯ
*ಮೂತ್ರ ವಿಸರ್ಜನೆಯಲ್ಲಿ ಅಡಚಣೆಯಾಗುವುದು
*ಹಿಂದೆ ಅರ್ಬುದದಿಂದ ಬಳಲಿರುವುದು

ಹೊಟ್ಟೆನೋವು
*ಗರ್ಭಧಾರಣೆಯ ಸಂಭವ
*ದೇಹದ ಆರ್ದ್ರತೆ ಕಡಿಮೆಯಾದ ಲಕ್ಷಣ
*ನೋವಿರುವ ಸ್ಥಳವನ್ನು ಮುಟ್ಟಗೊಡದಿರುವುದು
*ತೂಕ ಕಡಿಮೆಯಾಗುವುದು
*ದೇಹದ ಇತರೆ ರೋಗಗಳು.
*ಅತಿಯಾಗಿ ಬೆವರುವುದು.
*ಉದರಭಾಗದಲ್ಲಿ ಊತ
*ರಕ್ತಹೀನತೆ
*ಉರಿಮೂತ್ರ
*ರಕ್ತ ಪರೀಕ್ಷೆಯಲ್ಲಿ ಹೆಚ್ಚಿದ ಇ.ಎಸ್.ಆರ್
ಹೆಚ್ಚಾಗಿ ಹೆಂಗಸರಲ್ಲಿ ಹೃದಯಾಘಾತ ಎದೆಯುರಿಯಂತೆ ಕಂಡುಬರುತ್ತದೆ.

ತುರಿಕೆ (ಪಿತ್ತದ ಗಂಧೆಗಳು)
*ರೋಗಕ್ಷಮತ್ವ ಕಡಿಮೆಯಾಗಿರುವುದು
*ಗಂಟು ನೋವು
*ಜ್ವರ
*ರಕ್ತಭಾರದ ಇಳಿಯುವಿಕೆ
*ಲಸೀಕ ಗ್ರಂಥಿ (ಲಿಂಫ್ ನೋಡ್ಸ್)ಗಳ ಊತ
*ತ್ವಚೆಯಡಿಯಿಂದ ಚಿಕ್ಕ ಚುಕ್ಕಿಗಾತ್ರದ ರಕ್ತಸ್ರಾವ ಕಾಣುವುದು
*ಬಾಯಿಹುಣ್ಣು, ಉರಿಮೂತ್ರ
*ದೇಹದ ಯಾವುದಾದರೊಂದು ಭಾಗದಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳುವುದು.

ಎದೆ ನೋವು
ಎದೆಯ ಎಡ ಭಾಗದಲ್ಲಿ ಎಲ್ಲೇ ನೋವು ಬಂದರೂ ಹೃದಯಕ್ಕೆ ಸಂಬಂಧಿಸಿದೆ ಎಂದು ನಿರ್ಧರಿಸಬೇಡಿ. ಎದೆನೋವು ಹೃದಯದ ತೊಂದರೆ, ಶ್ವಾಸಕೋಶಗಳ ತೊಂದರೆ, ಜೀರ್ಣಾಂಗದ ತೊಂದರೆ ಅಥವಾ ಮಾಂಸಪೇಶಿಗಳ ತೊಂದರೆಗಳಲ್ಲಿ ಕಾಣಿಸಬಹುದು.

ಎದೆನೋವು ಹೆಚ್ಚಾಗಿ ಭಾರವಿಟ್ಟಂತೆ, ಒತ್ತಿದಂತೆ, ತುಂಬಿದಂತೆ ಭಾಸವಾಗುತ್ತದೆ. ಹೆಂಗಸರಲ್ಲಿ ಹೆಚ್ಚಾಗಿ ಎದೆಯುರಿಯಂತೆ ಭಾಸವಾಗುತ್ತದೆ.
ಎಚ್ಚರಿಸುವ ಚಿಹ್ನೆಗಳು ಹೀಗಿವೆ:
*ಕೆಲಸ ಮಾಡಿದಾಗ ಬರುವ ನೋವು
*ಉಸಿರಾಡಲು ತೊಂದರೆ
*ಕೆಮ್ಮಿನಲ್ಲಿ ರಕ್ತದಂಶ ಕಂಡುಬರುವುದು
*ತೂಕ ಕಡಿಮೆಯಾಗುವುದು
*55 ವರ್ಷದ ನಂತರ ಅಜೀರ್ಣದ ತೊಂದರೆ ಮತ್ತು ಕಾಲೂತ
ಕೆಲವು ಸಾಮಾನ್ಯವೆಂಬ ಲಕ್ಷಣಗಳು ಗಂಭೀರ ರೋಗಗಳ ಚಿಹ್ನೆಯಾಗಿರಬಹುದು. ಅವುಗಳಲ್ಲಿ ಕೆಲವು ಹೀಗಿವೆ:
*ಕಾಲಿನ ಕೆಳಭಾಗ, ಪಾದ ಕಪ್ಪಾಗುವುದು, ಜೋಮು ಹಿಡಿಯುವುದು.
*ಸತತ ಕೆಮ್ಮು ಕೆಲವೊಮ್ಮೆ ಹೃದಯಾಘಾತದ ಲಕ್ಷಣವಾಗಿರುತ್ತದೆ.
*ತಲೆಸುತ್ತು, ಸುಸ್ತಾಗುವುದು, ಹಸಿವು ಕಮ್ಮಿಯಾಗುವುದು

ನನ್ನ ಸಲಹೆಯೆಂದರೆ ಅನಾವಶ್ಯಕವಾಗಿ ರೋಗದ ಬಗ್ಗೆ ಅಥವಾ ರೋಗ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಅತೀವವಾಗಿ ಚಿಂತಿಸಬೇಡಿ. ಮಾಹಿತಿಗಳ ಮಹಾಪೂರದಲ್ಲಿ ಸಿಲುಕಿ ಒದ್ದಾಡದಿರಿ. ಅದೇ ರೀತಿ ದೇಹ ತೋರಿಸುವ ಚಿಹ್ನೆಗಳನ್ನು ಕಡೆಗಣಿಸದಿರಿ.

ಗಾಬರಿಗೊಳ್ಳದೆ ಸಮಾಧಾನದಿಂದ ಆರೋಗ್ಯದತ್ತ ಗಮನ ಹಾಗೂ ಆಹಾರ ವಿಹಾರ ವಿಚಾರಗಳಲ್ಲಿ ಶೃದ್ಧೆವಹಿಸಿದಲ್ಲಿ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.  ತೊಂದರೆಗಳೊಂದಿಗೆ ತುಮುಲವನ್ನೂ ಅನುಭವಿಸಿ ಅದರಿಂದ ಮತ್ತಷ್ಟು ಆರೋಗ್ಯವನ್ನು ಹದಗೆಡಿಸಿಕೊಳ್ಳಬಾರದು. ಸಮಾಧಾನಿಗಳಾಗಿ ಸೂಕ್ತ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕೋ ನಿಮಗೆ ಬಿಟ್ಟದ್ದು. ಇರುವ ನೋವಿನೊಂದಿಗೆ ಇಲ್ಲ ಸಲ್ಲದ ಆತಂಕವೂ ಬೇಕೆ? ನಿರ್ಧಾರ ನಿಮ್ಮದು.  ಮಾಹಿತಿಗೆ: ೯೮೪೫೭ ೬೭೬೭೪

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT