ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರುತ್ತಾರೆ ನವಾಜ್‌

Last Updated 24 ಮೇ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ):  ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸ­ಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳು­ವುದಾಗಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ ಶನಿವಾರ ಪ್ರಕಟಿಸಿದ್ದಾರೆ.

ಸೋಮವಾರ (ಮೇ 26) ದೆಹಲಿಗೆ ಪ್ರಯಾಣಿವು­ದಾಗಿ  ಷರೀಫ್‌ ತಿಳಿಸಿದ್ದಾರೆ. ಇದರೊಂದಿಗೆ ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಪಾಕ್ ಪ್ರಧಾನಿ ಬರುವರೋ, ಇಲ್ಲವೋ ಎಂಬ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. 

ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಇತರ ಸಾರ್ಕ್‌ ದೇಶ­ಗಳ ಮುಖ್ಯಸ್ಥರಂತೆ ಪಾಕ್‌ಗೂ ಆಹ್ವಾನ ನೀಡಲಾಗಿತ್ತು. ಆದರೆ ಆಹ್ವಾನ ಒಪ್ಪಿ­ಕೊಳ್ಳದಂತೆ ಷರೀಫ್‌ ಅವರ ಮೇಲೆ ಪಾಕ್‌ನ ತೀವ್ರವಾದಿ ಬಣಗಳು ಮತ್ತು ಸೇನೆ ಒತ್ತಡ ತಂದಿದ್ದವು ಎಂದು ವರದಿಯಾಗಿತ್ತು.

ಇದಕ್ಕೆ ಇಂಬು ನೀಡುವಂತೆ ಭಾರತದ ಈ ಆಹ್ವಾನದ ಬಗ್ಗೆ ನಿರ್ಧಾರ ಕೈಗೊಳ್ಳಲು ಷರೀಫ್‌ ಅವರು ಮೂರು ದಿನಗಳನ್ನು ತೆಗೆದುಕೊಂಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿ­ಕೊಟ್ಟಿತ್ತು.

ಮನವರಿಕೆ: ಈ ಮಧ್ಯೆ, ಷರೀಫ್ ಅವರ ಸಹೋದರ ಹಾಗೂ ಪಾಕ್‌ನ ಪಂಜಾಬ್ ಪ್ರಾಂತ್ಯದ ಮುಖ್ಯ­ಮಂತ್ರಿ ಶಹಬಾಜ್ ಷರೀಫ್‌ ಅವರು ಪಾಕ್‌ ಸೇನಾ ಮುಖ್ಯಸ್ಥ ಜನರಲ್ ರಾಹೀಲ್ ಷರೀಫ್ ಅವರೊಂದಿಗೆ ಸಭೆ ನಡೆಸಿ, ಪ್ರಧಾನಿಯ ಅವರ ಭಾರತದ ಭೇಟಿಯ ಮಹತ್ವದ ಕುರಿತು ಮನವರಿಕೆ ಮಾಡಿ­ಕೊಟ್ಟರು ಎಂದು ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ತಿಳಿಸಿದೆ.

ಆದರೆ, ಪ್ರಧಾನಿ ಷರೀಫ್ ಅವರು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಮಣಿಯದೇ ಭಾರತಕ್ಕೆ ಭೇಟಿ ನೀಡುವ ಕುರಿತು ಸ್ವತಂತ್ರ ನಿರ್ಧಾರ ಕೈಗೊಂಡಿ­ದ್ದಾರೆ ಎಂದು ಶಹಬಾಜ್‌ ಸ್ಪಷ್ಟನೆ ನೀಡಿದ್ದಾರೆ.

ನವಾಜ್‌ ಜೊತೆಗೆ ನಿಯೋಗ: ಷರೀಫ್‌ ಜತೆ ಪಾಕ್‌ ರಾಷ್ಟ್ರೀಯ ಭದ್ರತಾ ಮತ್ತು ವಿದೇಶಾಂಗ ವ್ಯವಹಾರಗಳ ಸಲಹೆ­ಗಾರ ಸರ್ತಾಜ್ ಅಜೀಜ್, ವಿಶೇಷ ಸಹಾಯಕ ತಾರೀಖ್ ಫತೇಮಿ ಮತ್ತು ವಿದೇಶಾಂಗ ಕಾರ್ಯದರ್ಶಿ ಏಜಾಜ್‌  ಚೌಧರಿ ಅವರೂ ಬರಲಿದ್ದಾರೆ.

ಮೇ 27ರಂದು ಉಭಯ ದೇಶಗಳ ಪ್ರಧಾನಿಗಳು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೇ ದಿನ ಮಧ್ಯಾಹ್ನ ಷರೀಫ್ ಪಾಕಿಸ್ತಾನಕ್ಕೆ ಹಿಂತಿರುಗಲಿ­ದ್ದಾರೆ ಎಂದು ವಿದೇಶಾಂಗ ಕಚೇರಿಯ ಪ್ರಕಟಣೆ ತಿಳಿಸಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರುವಂತೆ  ನರೇಂದ್ರ ಮೋದಿ ನೀಡಿದ ಆಹ್ವಾನ ಮನ್ನಿಸಿ ಸಾರ್ಕ್‌ನ ಏಳು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಬಾಂಗ್ಲಾದೇಶದ ಸಂಸತ್ತಿನ ಸ್ಪೀಕರ್‌ ಆಗಮಿಸುತ್ತಿದ್ದಾರೆ.

ಮಿಶ್ರ ಪ್ರತಿಕ್ರಿಯೆ (ನವದೆಹಲಿ/ ಶ್ರೀನಗರ ವರದಿ): ಪ್ರಮಾಣವಚನ ಸ್ವೀಕಾರ ಸಮಾ­ರಂಭ­ದಲ್ಲಿ ಭಾಗವಹಿ­ಸುವ ಪಾಕ್‌ ಪ್ರಧಾನಿ ಷರೀಫ್‌  ನಿರ್ಧಾರಕ್ಕೆ ಕಾಂಗ್ರೆಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಷರೀಫ್‌ ಅವರಿಗೆ ಆಹ್ವಾನ ನೀಡಿರುವುದು ಮೋದಿ ಅವರಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯ­ದರ್ಶಿ ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ.

ಆದರೆ ‘ಉಭಯ ದೇಶಗಳ ಮಧ್ಯೆ ಇರುವ ಈಗಿನ ಪರಿಸ್ಥಿತಿ ನೋಡಿದರೆ ಈ ಮಾತುಕತೆ ಫಲಪ್ರದವಾಗುವುದು ಅನುಮಾನ’ ಎಂದು  ನಿರ್ಗಮಿತ ಸಚಿವ ಶಶಿ ತರೂರ್‌ ಅಭಿಪ್ರಾಯಪಟ್ಟಿದ್ದಾರೆ.

‘ಪಾಕ್‌ ಪ್ರಧಾನಿ ಅವರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿ ಛಾಯಾಚಿತ್ರ ತೆಗೆಸಿಕೊಳ್ಳುವುದೇನೋ ಸರಿ. ಆದರೆ, ಮೋದಿ ಅವರು ರಾಷ್ಟ್ರೀಯ ಹಿತಾಸಕ್ತಿ ವಿಷಯದಲ್ಲಿ ರಾಜಿ ಆಗಬಾರದು’ ಎಂದು ಕಾಂಗ್ರೆಸ್‌ ಮುಖಂಡ ಶಕೀಲ್‌ ಅಹ್ಮದ್‌ ಹೇಳಿದ್ದಾರೆ.


‘ಗಡಿಯಾಚೆಯ ಭಯೋತ್ಪಾದನೆ, ಮಂದಗತಿಯಲ್ಲಿ ಸಾಗುತ್ತಿರುವ  26/11 ದಾಳಿ ಪ್ರಕರಣ ಕುರಿತ ವಿಚಾರಣೆ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಹೊಸ ಸರ್ಕಾರ ಪಾಕ್‌ ಪ್ರಧಾನಿ ಅವರೊಂದಿಗೆ ಮಾತುಕತೆ ನಡೆಸಬೇಕು’ ಎಂದು ನಿರ್ಗಮಿತ ಸಚಿವ ಮನೀಶ್‌ ತಿವಾರಿ ಒತ್ತಾಯಿಸಿದ್ದಾರೆ.

‘ಪಾಕ್‌ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮುಂಬೈ ಮೇಲೆ ನಡೆದ (26/11) ದಾಳಿ ಕುರಿತ ಪ್ರಕರಣದ ವಿಚಾರಣೆಯು ಮಂದಗತಿಯಲ್ಲಿ ಸಾಗುತ್ತಿದೆ ಎಂದು ಬಿಜೆಪಿ ಹಲವು ಸಾರಿ ಟೀಕಿಸಿದೆ. ಈಗ ಹೊಸ ಸರ್ಕಾರಕ್ಕೆ ಈ ವಿಷಯವು ಸಮಸ್ಯೆಯಾಗಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ದಾವೂದ್‌ ಇಬ್ರಾಹಿಂಗೆ ಪಾಕಿಸ್ತಾನ ಆಶ್ರಯ ನೀಡಿದೆ ಎಂದು ಬಿಜೆಪಿ ಬಹಳ ಹಿಂದಿನಿಂದಲೂ ಆಪಾದಿಸುತ್ತಲೇ ಬಂದಿದೆ. ಆ ಪಕ್ಷ ತನ್ನ ನಿಲುವಿಗೆ ಬದ್ಧವಾಗಿರುವುದೇ ನಿಜವಾದರೆ ದಾವೂದ್‌ನನ್ನು ಹಸ್ತಾಂತರಿಸುವಂತೆ ಪಾಕ್‌ ಸರ್ಕಾರದ ಮೇಲೆ ಒತ್ತಡ ತರಲಿ. ಜೊತೆಗೆ ಉಗ್ರ ಹಫೀಜ್‌ ಸಯೀದ್‌ನನ್ನು ಹಸ್ತಾಂತರಿಸುವಂತೆ ಕೇಳಲಿ’ ಎಂದಿದ್ದಾರೆ.
 

ಪ್ರತಿಕ್ರಿಯೆಗಳು...


ಸಂತೋಷದಾಯಕ ಸುದ್ದಿ
‘ಮೋದಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಕ್‌ ಪ್ರಧಾನಿ ನವಾಜ್ ಷರೀಫ್‌ ಅವರು ಭಾಗವಹಿಸುವುದು ಸಂತೋಷದಾಯಕ  ಸುದ್ದಿ. ಪಾಕಿಸ್ತಾನದ ಈ ನಿಲುವನ್ನು ಪಕ್ಷ ಸ್ವಾಗತಿಸುತ್ತದೆ’.
– ಪ್ರಕಾಶ್‌ ಜಾವಡೇಕರ್‌, ಬಿಜೆಪಿ ವಕ್ತಾರ

ಒಟ್ಟಿಗೆ ಸಾಗಲು ಸಾಧ್ಯವಿಲ್ಲ
‘ಭಯೋತ್ಪಾದನೆ ಮತ್ತು ಮಾತುಕತೆ ಎರಡು ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬುದು ಬಿಜೆಪಿ ನಿಲುವು. ಆ ಪಕ್ಷ ಕಳೆದ ಒಂದು ದಶಕದಿಂದ ಏನನ್ನು ಪ್ರತಿಪಾದಿಸುತ್ತಿದೆಯೋ ಆ ಸಿದ್ಧಾಂತಕ್ಕೆ ಬದ್ಧವಾಗಿರುತ್ತದೆ ಎಂದು ನಾವು ನಂಬಿದ್ದೇವೆ’.
– ಮನೀಶ್‌ ತಿವಾರಿ, ನಿರ್ಗಮಿತ ಸಚಿವ

ನಾನೂ ಭಾಗವಹಿಸುತ್ತೇನೆ
‘ಮೋದಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿಯವರೇ ದೂರದ ಇಸ್ಲಾಮಾಬಾದ್‌ನಿಂದ ಬರುತ್ತಿದ್ದಾರೆ ಎಂದ ಮೇಲೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ನಾನು ಹಿಂದೆ ಬೀಳಬಾರದು. ಭಾಗವಹಿಸಲೇಬೇಕು. ನನಗೂ ಆಹ್ವಾನ ಬಂದಿದೆ’.
– ಒಮರ್‌ ಅಬ್ದುಲ್ಲಾ, ಜಮ್ಮು ಕಾಶ್ಮೀರ ಸಿ.ಎಂ

ಆಹ್ವಾನ ಅತ್ಯುತ್ತಮ ಹೆಜ್ಜೆ
‘ಮಾತುಕತೆಯಿಂದ ಮಾತ್ರವೇ ಅಂತರ ಕಡಿಮೆ ಮಾಡಲು ಸಾಧ್ಯ. ಪಾಕಿಸ್ತಾನದ ಪ್ರಧಾನಿಯವರನ್ನು ಆಹ್ವಾನಿಸಿರುವುದು ಅತ್ಯುತ್ತಮ ಹೆಜ್ಜೆ. ಪಾಕಿಸ್ತಾನವು ಭಾರತದ ಆತಂಕವನ್ನು ನಿವಾರಿಸಬೇಕು’.
– ಕಮಲ್‌ ಫಾರೂಕಿ, ದೆಹಲಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರು

ಸಂಬಂಧಗಳು ಸುಧಾರಿಸಬಹುದು
‘ಇದು ಶುಭಾರಂಭ. ಮೋದಿ ಅವರ ಈ ನಡೆಯಿಂದ ಸಂಬಂಧಗಳು ಸುಧಾರಿಸಬಹುದು. ಇದು ಅಟಲ್‌ ಬಿಹಾರಿ ವಾಜಪೇಯಿ ಯುಗವನ್ನು ನೆನಪಿಸುತ್ತಿದೆ’.
– ಎಸ್‌ಕ್ಯುಎಸ್‌ ಇಲಿಯಾಸ್‌, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರು

ಅನುಕೂಲವಾಗಲಿದೆ
‘ಉತ್ತಮ ಸಂಬಂಧದಿಂದ ಉಭಯ ದೇಶಗಳಿಗೆ ಅನುಕೂಲವಾಗಲಿದೆ’.
– ಸಫ್‌ದರ್‌ ಎಚ್‌.ಖಾನ್‌, ದೆಹಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು

ಅತಿ ಉತ್ಸಾಹ ಬೇಡ
‘ಪಾಕ್ ಜತೆ ನಮ್ಮ ಸಂಬಂಧ ಸುಧಾರಿಸು­ತ್ತದೆ ಎಂದು ನಾವು ಭರವಸೆ ಇಡಬೇಕಷ್ಟೆ. ಈ ಹಿಂದೆ ಪಾಕಿಸ್ತಾನವು ಅನೇಕ ಬಾರಿ ತನ್ನ ಮಾತನ್ನು ಉಳಿಸಿ­ಕೊಂಡಿಲ್ಲ. ಆದ್ದರಿಂದ ಈ ಬಾರಿ ನಾವು ಅತಿ ಉತ್ಸಾಹ ತೋರಿಸುವುದು ಬೇಡ’.
–ಮಹಮ್ಮದ್‌ ಮದನಿ, ಜಮಾತ್‌ ಉಲೆಮಾ ಹಿಂದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT