ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನಂಜಿಗೆ ಉಪ್ಪು ಸವರುವ ವಿಷ ನೀರು

ಬದುಕನ್ನು ತತ್ತರಿಸುವಂತೆ ಮಾಡುವ ಬರಗಾಲ: ಗ್ರಾಮಸ್ಥರಿಗೆ ಶುದ್ಧ ನೀರು ಎಂಬುದು ಹಗಲುಗನಸು
Last Updated 31 ಆಗಸ್ಟ್ 2015, 10:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬದುಕನ್ನು ತತ್ತರಿಸುವಂತೆ ಮಾಡುವ ಬರಗಾಲ ಈ ಭಾಗದ ಜನರಿಗೆ ಪ್ರತಿ ವರ್ಷದ ಶೋಕವಾದರೆ, ಫ್ಲೋರೈಡ್‌ಯುಕ್ತ ನೀರು ಇಲ್ಲಿ ನಿತ್ಯದ ವಿಷಸೇವನೆ. ಜಿಲ್ಲೆ ಬಹುತೇಕ ಕಡೆ ಇಂತಹದ್ದೇ ಪರಿಸ್ಥಿತಿಯಿದೆ. ಪರ್ಯಾಯ ಮಾರ್ಗ ಮತ್ತು ಉಪಾಯವಿಲ್ಲದೆ ಇಲ್ಲಿನ ಜನರು ಅನಿವಾರ್ಯವಾಗಿ ಬರಗಾಲದ ಜತೆ ಬಯಸದ ಸ್ನೇಹ ಬೆಳೆಸಿಕೊಂಡಿದ್ದರೆ, ದೇಹದೊಳಗೆ ಬಲವಂತದಿಂದ ಹನಿಹನಿಯಾಗಿ ವಿಷನೀರು ಶೇಖರಣೆಗೊಂಡಿದೆ.

ಕಳೆದ 20 ವರ್ಷಗಳಿಂದ ಬರಗಾಲ ಮತ್ತು ಫ್ಲೋರೈಡ್‌ ನೀರು ಜಿಲ್ಲೆಯಲ್ಲಿ ದಟ್ಟ ಪ್ರಭಾವ ಬೀರಿದ್ದು, ಅವುಗಳ ಜಂಟಿ ಪರಿಣಾಮ ಬಹುತೇಕ ಗ್ರಾಮಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ನಿರಂತರ ಮಳೆ ಕಾಣದೇ ಗ್ರಾಮಗಳು ಒಣಗಿದ ಮರದಂತೆ ಕಂಡು ಬಂದರೆ, ಅಲ್ಲಿನ ಜನರು ಅಂಗವೈಕಲ್ಯ ಸೇರಿದಂತೆ ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ಪತ್ತೆ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ.

ಉದಾಹರಣೆಗೆ, ಗುಡಿಬಂಡೆ ತಾಲ್ಲೂಕಿನ ಯರಲಕ್ಕೇನಹಳ್ಳಿಯಲ್ಲಿ ಶೇ 50ಕ್ಕೂ ಹೆಚ್ಚು ಮಂದಿ ಕಿವುಡರು ಮತ್ತು ಮೂಗರಾಗಿದ್ದಾರೆ. 4 ವರ್ಷದ ಪುಟ್ಟ ಮಗುವಿನಿಂದ ಆರಂಭಗೊಂಡು 80 ವರ್ಷದ ಅಜ್ಜನವರೆಗೆ ಒಬ್ಬರಾದರೂ ಒಂದಿಲ್ಲೊಂದು ರೀತಿಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದು ಸುಲಭವಾಗಿ ಗುರುತಿಸಬಹುದು. ಜಿಲ್ಲೆಯ ವೈದ್ಯರೇ ಇದನ್ನು ದೃಢಪಡಿಸಿದ್ದಾರೆ.

ಬದುಕು ಕಸಿದುಕೊಂಡಿದೆ: ಬಾಗೇಪಲ್ಲಿ ತಾಲ್ಲೂಕಿನ ಗುಳೂರು ಹೋಬಳಿ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಡಪಲ್ಲಿ, ಹೊನ್ನಂಪಲ್ಲಿ, ಮದಕವಾರಪಲ್ಲಿ, ಕೊಲಿಂಪಲ್ಲಿ, ಕೃಷ್ಣಾಪುರ, ಪೆಸಲಪರ್ತಿ, ಚಿನ್ನೇಪಲ್ಲಿ, ಮಾಮಿಡಿಕಾಯಲಪಲ್ಲಿ, ಕೊತ್ತಪಲ್ಲಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲೂ ಫ್ಲೋರೈಡ್‌ ನೀರು ತನ್ನ ಪ್ರಭಾವ ಗಾಢವಾಗಿ ಬೀರಿದೆ. ಬರಗಾಲದಿಂದ ಈಗಾಗಲೇ ಚೈತನ್ಯ ಕಳೆದುಕೊಂಡಿರುವ ಜನರ ಚೆಂದದ ಬದುಕನ್ನು ವಿಷ ಯುಕ್ತ ನೀರು ಕಸಿದುಕೊಳ್ಳುತ್ತಿದೆ.

‘ಆಂಧ್ರಪ್ರದೇಶಕ್ಕೆ ಬರೀ 3 ಕಿ.ಮೀ.ನಷ್ಟು ಸಮೀಪದಲ್ಲಿರುವ ನಾವು ಜಿಲ್ಲೆಯ ಅತ್ಯಂತ ಗಡಿಭಾಗದಲ್ಲಿ ವಾಸವಿದ್ದೇವೆ. ಮಳೆ ಮೇಲೆ ನಂಬಿಕೆ ಕಳೆದುಕೊಂಡಿರುವ ನಮಗೆ ಕೊಳವೆಬಾವಿಗಳು ಕೂಡ ಕೈಕೊಟ್ಟಿವೆ. ಉತ್ತಮ ಮಳೆ ಸುರಿದು, ಕೆರೆಕುಂಟೆ ತುಂಬಿ 15 ವರ್ಷಗಳು ಗತಿಸಿವೆ. ಬದುಕಿಗೆ ಆಸರೆಯಾಗುವಷ್ಟು ಮಳೆಯಾಗದೇ ಒಂದೊಂದು ದಿನವನ್ನೂ ದಯನೀಯ ಸ್ಥಿತಿಯಲ್ಲಿ ನೂಕುತ್ತಿದ್ದೇವೆ’ ಎಂದು ಮಾಡಪಲ್ಲಿ ಗ್ರಾಮಸ್ಥ ಎಂ.ಎಲ್‌.ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜೀವನಶೈಲಿ ಬದಲು: ‘ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 1500ಕ್ಕೂ ಹೆಚ್ಚು ಮನೆಗಳಿದ್ದು, ಬಹುತೇಕ ಮಂದಿ ಬದುಕಿಗೆ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಬರಗಾಲವು ಕೆಟ್ಟನೋಟ ಬೀರಿದ ವರ್ಷದಿಂದ ಗ್ರಾಮಸ್ಥರು ವಲಸೆ ಹೊರಟರು. ಕೆಲವರು ಆಂಧ್ರಪ್ರದೇಶಕ್ಕೆ ಸೇರಿ ಕೂಲಿಗೆಲಸ ಮಾಡುತ್ತಿದ್ದರೆ, ಕೆಲವರು ಬೆಂಗಳೂರು ಸೇರಿ ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಬಾಳಿ ಬದುಕಬೇಕಿದ್ದ ಕುಟುಂಬಗಳು ಚೂರುಚೂರಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿವೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಮಳೆಯಿಲ್ಲದೇ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ. ಇದಕ್ಕೆ ಪೂರಕವಾಗಿ ಕೃಷಿಗೆಲಸ ಮಾಡಲು ಕೂಲಿಗೆಲಸಗಾರರು ಸಿಗದಿರುವುದು ಒಂದು ಕಾರಣವಾದರೆ, ಜಮೀನು ಹೊಂದಿರವವರೇ ಕೃಷಿಗೆಲಸ ಮಾಡಲು ಬಯಸದಿರುವುದು ಮತ್ತೊಂದು ಕಾರಣ. ಕೆಲವರು ಜಮೀನನ್ನು ಭೋಗ್ಯಕ್ಕೆ ನೀಡಿ ವಲಸೆ ಹೋಗಿದ್ದರೆ, ಇನ್ನೂ ಕೆಲವರು ಮಾರಾಟ ಮಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ಜೀವನಶೈಲಿಯೇ ಬದಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಲ್ಪಸ್ವಲ್ಪ ಓದಿಕೊಂಡವರು ಬೆಂಗಳೂರಿಗೆ ಸೇರಿಕೊಂಡು ಸೆಕ್ಯೂರಿಟಿ ಗಾರ್ಡ್‌, ಸಿಮೆಂಟ್‌ ಕೆಲಸ ಮಾಡುತ್ತಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಎಲ್ಲಿಯೂ ಓಡಾಡಲಾಗದೇ ಗ್ರಾಮದಲ್ಲೇ ಉಳಿದುಕೊಂಡು ಇಂದಿನ ಪರಿಸ್ಥಿತಿ ಕುರಿತು ವ್ಯಥೆ ಪಡುತ್ತಿದ್ದಾರೆ. ‘ಇಂತಹ ಭೀಕರ ದಿನ ನೋಡಲು ನಾನಿಷ್ಟು ವರ್ಷ ಬದುಕಿರಬೇಕಿತ್ತಾ? ನನ್ನ ಮಕ್ಕಳು, ಮೊಮ್ಮಕ್ಕಳು ಸಂಕಷ್ಟದಲ್ಲಿ ಸಿಲುಕಿರುವುದನ್ನು ನೋಡಿ ಕಣ್ತುಂಬಿಕೊಳ್ಳಬೇಕಾ’ ಎಂದು ವೃದ್ಧೆ ಗಂಗಮ್ಮ ನೋವು ತೋಡಿಕೊಂಡರು.

ನೀರು ಹಾಲಿನ ಕೆನೆಯಂತೆ ಉಕ್ಕುತ್ತದೆ
ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳ ಬಹುತೇಕ ಗ್ರಾಮಸ್ಥರ ಬದುಕಿನಲ್ಲಿ ಫ್ಲೋರೈಡ್ ನೀರು ಯಾವ ಪರಿ ಹಾಸುಹೊಕ್ಕಿದೆಯೆಂದರೆ, ಪಾತ್ರೆಪರಿಕರ, ಸಿಸ್ಟನ್‌ ಮುಂತಾದ ಕಡೆ ಅದು ಅಳಿಸಲಾಗದ ಗುರುತು ಬಿಟ್ಟಿದೆ. ಫ್ಲೋರೈಡ್‌ ನೀರನ್ನು ಕುದಿಸಿದರೆ, ಅದು ಹಾಲಿನ ಕೆನೆಯಂತೆ ಉಕ್ಕುತ್ತದೆ. ಒಂದು ದಿನಕ್ಕೂ ಹೆಚ್ಚು ಕಾಲ ನೀರನ್ನು ಶೇಖರಿಸಿಟ್ಟರೆ, ಆ ಪಾತ್ರೆಯಂಚಿನಲ್ಲಿ ಬಿಳಿ ಬಣ್ಣ ಅಥವಾ ಪದರ ಉಳಿದುಕೊಳ್ಳುತ್ತದೆ.

‘ಗ್ರಾಮದಲ್ಲಿನ ನೀರಿನ ಸಿಸ್ಟನ್‌ಗಳನ್ನು ಸೂಕ್ಷ್ಮವಾಗಿ ನೋಡಿದರೆ, ಅವುಗಳ ಮೇಲೆಯೂ ಬಿಳಿ ಬಣ್ಣ ಕಾಣುತ್ತದೆ. ನೀರು ತುಂಬಿ ಸಿಸ್ಟನ್‌ ಮೇಲೆ ಹರಿದಾಗ, ಕ್ರಮೇಣ ಅಲ್ಲಿ ಬಿಳಿ ಬಣ್ಣ ಆವರಿಸಿಕೊಳ್ಳುತ್ತದೆ. ಸುಣ್ಣ ಬಳಿದಂತೆ ಗೋಚರವಾಗುತ್ತದೆ. ಕೆರೆಕುಂಟೆಗಳು ಮತ್ತು ಕೊಳವೆಬಾವಿಗಳು ಬತ್ತಿರುವ ಕಾರಣ ನಾವೆಲ್ಲರೂ ಸಿಸ್ಟನ್‌ನಲ್ಲಿನ ನೀರನ್ನು ಸೇವಿಸುತ್ತೇವೆ. ಕನಿಷ್ಠ ಬಾಯಾರಿಸಿಕೊಳ್ಳಲಾದರೂ ಈ ನೀರನ್ನೇ ಸೇವಿಸಬೇಕು’ ಎಂದು ಗ್ರಾಮಸ್ಥ ಸಿ.ವೆಂಕಟೇಶ್‌ ತಿಳಿಸಿದರು.

ಬಹುತೇಕ ಗ್ರಾಮಗಳಲ್ಲಿ ಸಮಸ್ಯೆ
ಜಿಲ್ಲೆಯಲ್ಲಿರುವ 1561 ಗ್ರಾಮಗಳ ಪೈಕಿ 403 ಗ್ರಾಮಗಳಲ್ಲಿನ ಕೊಳವೆಬಾವಿ ನೀರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪರೀಕ್ಷಿಸಿದೆ. 414 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ 10,561 ಮಕ್ಕಳ ಹಲ್ಲು ಮತ್ತು ಆರೋಗ್ಯ ಪರೀಕ್ಷಿಸಿದೆ. 5299 ಮಕ್ಕಳಲ್ಲಿ ಮತ್ತು 5227 ಹಿರಿಯರಲ್ಲಿ ಶಂಕಿತ ದಂತ ಫ್ಲೋರೋಸಿಸ್‌ ಕಾಯಿಲೆ ಕಾಣಿಸಿಕೊಂಡಿದ್ದರೆ, 48 ಹಿರಿಯರಲ್ಲಿ ಶಂಕಿತ ಮೂಳೆಗಳ ಫ್ಲೋರೋಸಿಸ್‌ ಕಾಯಿಲೆ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಆರೋಗ್ಯ ವಿಭಾಗದ ಸಲಹೆಗಾರ ವಿನೋದ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಥಮ ಹಂತದ ಸಮೀಕ್ಷೆ ಪ್ರಕಾರ, ಜಿಲ್ಲೆಯಲ್ಲಿ 2174 ಶಾಲಾ ಮಕ್ಕಳು ಮತ್ತು 2066 ಹಿರಿಯರು ಶಂಕಿತ ಫ್ಲೋರೋಸಿಸ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬಹುತೇಕ ಜನರ ಹಲ್ಲುಗಳು ಹಾಳಾಗಿದ್ದು, ಮೂಳೆಗಳು ಸವೆದಿವೆ. ಕಿರಿಯ ವಯಸ್ಸಿನವರು ಶಕ್ತಿ ಕಳೆದುಕೊಂಡು ವೃದ್ಧರಂತೆ ಕಾಣುತ್ತಾರೆ. ಈ ಸಮಸ್ಯೆ ಗ್ರಾಮೀಣ ಪ್ರದೇಶದಲ್ಲಿ ಆಳವಾಗಿ ಬೇರು ಬಿಟ್ಟಿದೆ ಎಂದು ಅವರು ತಿಳಿಸಿದರು.

ಬರ ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ, ಭವಿಷ್ಯದಲ್ಲಿ ಗ್ರಾಮಗಳಲ್ಲಿ ಜನರೇ ಸಿಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯುವಕರು ಕಾಣೆಯಾಗಿದ್ದು, ಗ್ರಾಮಗಳು ವೃದ್ಧಾಶ್ರಮವಾಗಿ ಮಾರ್ಪಟ್ಟಿವೆ.
–ಕೆ.ವಿ.ಆದಿನಾರಾಯಣ,
ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT