ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನಿರ್ವಹಣೆ: ಕಾಗೋಡು ತಿಮ್ಮಪ್ಪ ಅಸಮಾಧಾನ

Last Updated 2 ಸೆಪ್ಟೆಂಬರ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಬರ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಸರಿಯಾದ ಪೂರ್ವ ಸಿದ್ಧತೆ ನಡೆಸಿಲ್ಲ’ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬರಪೀಡಿತ ತಾಲ್ಲೂಕುಗಳ ಘೋಷಣೆ ಮಾಡುವ ಮುನ್ನವೇ ಬರದ ಪರಿಸ್ಥಿತಿ ಬಗ್ಗೆ ಸರ್ಕಾರ ಸಮಗ್ರ ವರದಿ ತರಿಸಿಕೊಳ್ಳಬೇಕಿತ್ತು’ ಎಂದು ಅಭಿಪ್ರಾಯಪಟ್ಟರು. ‘ರಾಜ್ಯದ ಪರಿಸ್ಥಿತಿ ಸಂಕಷ್ಟದಲ್ಲಿದೆ. ಮಂತ್ರಿಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು. ಕಂದಾಯ ಸಚಿವರೂ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿದಂತಿಲ್ಲ. ಬರ ಪರಿಸ್ಥಿತಿಯ ಬಗ್ಗೆ ಸಮಗ್ರ ಚಿತ್ರಣ ಇಲ್ಲದೆಯೇ ಪರಿಹಾರ ಕಾರ್ಯಗಳನ್ನು  ಯಾವ ಆಧಾರದಲ್ಲಿ ಕೈಗೊಳ್ಳಲಾಗುತ್ತದೆ’ ಎಂದು ಅವರು ಪ್ರಶ್ನಿಸಿದರು.

‘ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಬರ ಅಧ್ಯಯನಕ್ಕೆ ಸದನ ಸಮಿತಿ ರಚಿಸಿದ್ದರು. ಈಗಲೂ ಜಂಟಿ ಸದನ ಸಮಿತಿ ರಚಿಸಿ ಬರ ಪರಿಸ್ಥಿತಿಯ ಸಮಗ್ರ  ಅಧ್ಯಯನ ನಡೆಸಬಹುದು. ಈ ಬಗ್ಗೆ ವಿಶೇಷ ಅಧಿವೇಶನ ಕರೆದು ಚರ್ಚಿಸಬಹುದು. ವಿರೋಧ ಪಕ್ಷಗಳೂ ಇದಕ್ಕೆ ಒತ್ತಾಯಿಸಬೇಕು’ ಎಂದು ಸಲಹೆ ನೀಡಿದರು.

‘ಕೆಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ ಆರಂಭದಲ್ಲೇ ಕುಡಿಯುವ ನೀರು ಹಾಗೂ ಮೇವಿನ ಕೊರತೆ  ಎದುರಾಗಿದೆ.   ಇನ್ನು ಮಳೆಗಾಗಿ ಎಂಟು ತಿಂಗಳು ಕಾಯಬೇಕು. ನನ್ನ ವಿಧಾನಸಭಾ ಕ್ಷೇತ್ರದಲ್ಲೂ ವಾಡಿಕೆಗಿಂತ ಶೇ 41ರಷ್ಟು ಕಡಿಮೆ ಮಳೆಯಾಗಿದೆ. ಮಲೆನಾಡಿನಲ್ಲೇ ಈ ಪರಿಸ್ಥಿತಿ ಇದ್ದರೆ ಉಳಿದ ಕಡೆಯ ಪರಿಸ್ಥಿತಿ ಹೇಗಿರಬಹುದು’ ಎಂದು ಅವರು ಪ್ರಶ್ನಿಸಿದರು.

‘ಲೋಕಾಯುಕ್ತರ ಪದಚ್ಯುತಿ  ವಿಚಾರಕ್ಕೆ  ವಿಶೇಷ ಅಧಿವೇಶನ ಕರೆಯುವ ಪ್ರಸ್ತಾವ ಸದ್ಯಕ್ಕೆ ಇಲ್ಲ. ವಿಶೇಷ ಅಧಿವೇಶನ ಕರೆಯುವ ಬಗ್ಗೆ ತೀರ್ಮಾನಿಸಬೇಕಾಗಿರುವುದು ಸರ್ಕಾರ. ಈ ಬಗ್ಗೆ ಕಾನೂನು ಸಚಿವರ ಜತೆ ಚರ್ಚಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT