ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತದ ಗರ್ಭಪಾತ ಮತ್ತು ಕಾನೂನಿನ ಗೊಂದಲ

ಎಂಟಿಪಿ ಕಾಯ್ದೆಯ ಉದ್ದೇಶಿತ ತಿದ್ದುಪಡಿ, ಸುರಕ್ಷಿತ ಗರ್ಭಪಾತಕ್ಕೆ ಒತ್ತು ನೀಡಬೇಕಿದೆ
Last Updated 17 ಜೂನ್ 2016, 19:30 IST
ಅಕ್ಷರ ಗಾತ್ರ

ಮದುವೆಯ ಬಂಧನಕ್ಕೆ ಒಳಗಾಗದೆ ಸಹಬಾಳ್ವೆ ನಡೆಸುತ್ತಿದ್ದ ಇಬ್ಬರು ಖ್ಯಾತನಾಮ ಯುವತಿಯರು ಒತ್ತಾಯದ ಗರ್ಭಪಾತಕ್ಕೆ ಗುರಿಯಾಗಿ, ಸೋಂಕು ತಗುಲಿಸಿಕೊಂಡು ಆತ್ಮಹತ್ಯೆಗೆ ಶರಣಾದ ಮನಕಲಕುವ ಪ್ರಕರಣಗಳು ಸ್ತ್ರೀಯರು ಅನುಭವಿಸುವ ಮಾನಸಿಕ, ದೈಹಿಕ ಸಂಕಟಕ್ಕೆ ಸಾಕ್ಷಿಯಾಗಿವೆ. ಸಹಬಾಳ್ವೆ ನಡೆಸುವ ಮಹಿಳೆಯರು ಬೇಡದ ಗರ್ಭ ತೆಗೆದು ಹಾಕಲು ಹೋಗಿ ಎದುರಿಸುವ ಸಂಕಷ್ಟದ ಪರಿಸ್ಥಿತಿಯಿಂದ ಪಾರಾಗಲು ಸಾಧ್ಯವಾಗದೆ ಸಾವಿಗೆ ಶರಣಾಗುತ್ತಿರುವುದು ತೀವ್ರ ಕಳವಳಕ್ಕೆ ಎಡೆಮಾಡಿಕೊಟ್ಟಿದೆ.

ಮಹಿಳೆಯರ ದೈಹಿಕ, ಮಾನಸಿಕ ಆರೋಗ್ಯದ ಹಕ್ಕು, ದೈಹಿಕ ಸ್ವಾತಂತ್ರ್ಯ,  ಸಮಗ್ರತೆ, ಘನತೆ, ಗರ್ಭಪಾತ ಬಯಸುವ ಹಕ್ಕು, ಬದುಕುವ ಹಕ್ಕು, ಮಾನವ ಹಕ್ಕುಗಳ ಉಲ್ಲಂಘನೆ ಜತೆಗೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕೌಟುಂಬಿಕ ಹಿಂಸೆ ಅಥವಾ  ಪುರುಷರ ದಬ್ಬಾಳಿಕೆಯು ಹೇಗೆ ಧಕ್ಕೆ ತರುತ್ತಿದೆ ಎನ್ನುವುದಕ್ಕೆ ಇವು ಸ್ಪಷ್ಟ ನಿದರ್ಶನಗಳಾಗಿವೆ.

ಮಹಿಳೆ ವಿರುದ್ಧ ನಡೆಯುವ ಕೌಟುಂಬಿಕ ಅಥವಾ ಸಹಬಾಳ್ವೆಯ  ಹಿಂಸೆ ಮತ್ತು ಅದು ಆಕೆಯ ಮೇಲೆ ಬೀರುವ ಅಪಾಯಕಾರಿ ಪರಿಣಾಮವು ‘ಗುರುತರವಾದ ಜಾಗತಿಕ ಆರೋಗ್ಯ ಸಮಸ್ಯೆ’ಯಾಗಿದೆ ಎಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ಪರಿಗಣಿಸಿದೆ.

ವೈದ್ಯಕೀಯ ಸಂಶೋಧನಾ ವರದಿಗಳ ಪ್ರಕಾರ, ಮಹಿಳೆಯರು ಹಿಂಸಾತ್ಮಕ ಸ್ವರೂಪದ ಸಂಬಂಧ ಹೊಂದಿದ್ದಾಗ ಅಸುರಕ್ಷಿತ ಲೈಂಗಿಕತೆ, ಅನಪೇಕ್ಷಿತ ಗರ್ಭಧಾರಣೆಯಂತಹ ಲೈಂಗಿಕ ಹಿಂಸಾಚಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗುರಿಯಾಗುತ್ತಾರೆ. ಇದರ ಫಲವಾಗಿ ಮಹಿಳೆಯರ ಅನುಮತಿ ಇಲ್ಲದೆ ಅಸುರಕ್ಷಿತವಾದ ರೀತಿಯಲ್ಲಿ ಒತ್ತಾಯದಿಂದ ಗರ್ಭಪಾತ ನಡೆಸಲಾಗುತ್ತಿದೆ. ಇದರಿಂದಾಗಿ ಅವರ ಆರೋಗ್ಯವು ತೀವ್ರ ಸ್ವರೂಪದ ಗಂಡಾಂತರಕ್ಕೆ ಸಿಲುಕುತ್ತದೆ. ಮಾನಸಿಕವಾಗಿ ಕುಸಿದು ಹೋಗುವ ಮಹಿಳೆಯರಲ್ಲಿ ಒತ್ತಡ, ಖಿನ್ನತೆ ಆವರಿಸುತ್ತದೆ. ಕೆಲವರು ಆತ್ಮಹತ್ಯೆಗೂ ಮೊರೆ ಹೋಗುತ್ತಾರೆ. ಸೋಂಕು, ಕಾಯಿಲೆಗಳು ಅವರನ್ನು ತೀವ್ರವಾಗಿ ಬಾಧಿಸಿ ಸಾವಿಗೂ ಕಾರಣವಾಗುತ್ತವೆ.

ಮೂರು ವರ್ಷಗಳ ಹಿಂದೆ ಹಿಂದಿ ಚಿತ್ರನಟಿ ಜಿಯಾ ಖಾನ್‌ (25) ಮುಂಬೈನಲ್ಲಿನ ತಮ್ಮ ಸ್ವಗೃಹದಲ್ಲಿ  ಆತ್ಮಹತ್ಯೆ ಮಾಡಿಕೊಂಡರು. ಆಕೆ ಬರೆದಿಟ್ಟು ಹೋದ ಪತ್ರದಲ್ಲಿ ತನ್ನ ಮೇಲೆ ನಡೆದ ದೈಹಿಕ–ಮಾನಸಿಕ ಹಿಂಸೆ, ವಂಚನೆ, ಹಿಂದಿ ಚಿತ್ರನಟ ಸೂರಜ್‌ ಪಾಂಚೋಲಿ ಜತೆಗಿನ ಸಂಬಂಧದಲ್ಲಿನ ಗರ್ಭಧಾರಣೆಯ ಹೊರತಾಗಿಯೂ ಒತ್ತಾಯದ ಗರ್ಭಪಾತದಲ್ಲಿ ಆತ ಎಸಗಿದ ಕೃತ್ಯದ ವಿವರಗಳೆಲ್ಲ ಇದ್ದವು. 

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ  ಸೂರಜ್‌ರನ್ನು   ಪೊಲೀಸರು  ಬಂಧಿಸಿ ಆಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಅಪೂರ್ಣಗೊಂಡ ಗರ್ಭಪಾತದಿಂದಾಗಿ ನಟ ಸೂರಜ್‌ ಸ್ವತಃ ಭ್ರೂಣ ಹೊರತೆಗೆದು ಶೌಚಾಲಯದಲ್ಲಿ ಬಿಸಾಕಿದ್ದ ಎನ್ನುವ ನಿರ್ದಯ ಕೃತ್ಯವು ಸಿಬಿಐ ತನಿಖೆಯಿಂದ ತಿಳಿದುಬಂದಿತ್ತು. ಇದು ಜಿಯಾ ಖಾನ್‌ರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಆ ಆಘಾತದಿಂದ ಹೊರ ಬರಲಾರದೆ ಅವರು ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ.

 ಹಿಂದಿ ಕಿರುತೆರೆಯ ಜನಪ್ರಿಯ ನಟಿ ಪ್ರತ್ಯೂಷಾ ಬ್ಯಾನರ್ಜಿ ಈ ವರ್ಷದ ಏಪ್ರಿಲ್‌ 1ರಂದು ಮುಂಬೈನಲ್ಲಿನ ತನ್ನ  ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಅವರಿಗೆ ಅಸುರಕ್ಷಿತ ಗರ್ಭಪಾತದ ಸೋಂಕು ತಗುಲಿತ್ತು ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿತ್ತು. ಕಿರುತೆರೆ ಕಲಾವಿದ ರಾಹುಲ್‌ ರಾಜ್‌ ಜತೆ ಸಹಬಾಳ್ವೆ ನಡೆಸುತ್ತಿದ್ದ ಅವರ ಮೇಲೆ ದೈಹಿಕ ಹಿಂಸೆ ನಡೆಯುತ್ತಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿತ್ತು. ಅವರ ದೇಹದ ಮೇಲೆ ಹಲ್ಲೆಯ ಗಾಯದ ಗುರುತುಗಳೂ ಇದ್ದವು.

ಈ ಪ್ರಕರಣವನ್ನು ಪೊಲೀಸರು  ಕೌಟುಂಬಿಕ ಹಿಂಸೆಯ ದೃಷ್ಟಿಯಿಂದಲೂ  ತನಿಖೆ ನಡೆಸಿದ್ದರು. ಆತ್ಮಹತ್ಯೆಗೆ ಕುಮ್ಮಕ್ಕು, ಹಲ್ಲೆ, ಬೆದರಿಕೆ ಆರೋಪದಡಿ ಪೊಲೀಸರು ರಾಹುಲ್‌ರನ್ನು ಬಂಧಿಸಿದರೂ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಈ ಎಲ್ಲ  ಸಂಗತಿಗಳ ಆಧಾರದ ಮೇಲೆ ಹೇಳುವುದಾದರೆ, ಪ್ರತ್ಯೂಷಾ ಪ್ರಕರಣದಲ್ಲಿಯೂ  ಒತ್ತಾಯದ ಗರ್ಭಪಾತ ನಡೆದಿರುವ ಸಾಧ್ಯತೆಯನ್ನು ತಳ್ಳಿ  ಹಾಕುವಂತಿಲ್ಲ.

ಈ ಎರಡೂ ಪ್ರಕರಣಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ.  ಗರ್ಭಪಾತದ ನಂತರವೇ ಆತ್ಮಹತ್ಯೆ ನಡೆದಿರುವುದು ಸ್ಪಷ್ಟವಾಗಿದೆ. ಮಹಿಳೆಯರ ಸಮ್ಮತಿ ಪಡೆಯದೆ, ಅವರ ಮಾತಿಗೆ ಬೆಲೆಕೊಡದೆ ಗರ್ಭಪಾತಕ್ಕೆ ಬಲವಂತ ಮಾಡಿರುವ, ಪುರುಷ ಸಂಗಾತಿ ನಡೆಸಿದ ಮಾನಸಿಕ, ದೈಹಿಕ ಹಿಂಸೆಯ ಫಲವಾಗಿಯೇ ಈ ಇಬ್ಬರೂ ಮಹಿಳೆಯರು ತಮ್ಮ ಇಚ್ಛೆಗೆ ವಿರುದ್ಧವಾಗಿ ಗರ್ಭ ತೆಗೆಸಲು ಮುಂದಾಗಿರುವ ಸಾಧ್ಯತೆ ಇದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದಆರೋಪದ ಮೇಲೆ  ಪುರುಷ ಸಂಗಾತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಜನಪ್ರಿಯ ತಾರೆಯರು  ದುರಂತ ಅಂತ್ಯ ಕಂಡ ಈ ಎರಡೂ ಪ್ರಕರಣಗಳನ್ನು ಹೋಲುವ ಅಸಂಖ್ಯ ಘಟನೆಗಳು ಜನಸಾಮಾನ್ಯರಲ್ಲಿ ದಿನನಿತ್ಯ ಘಟಿಸುತ್ತಲೇ ಇರುತ್ತವೆ. ಬಹುತೇಕ ಘಟನೆಗಳು ವರದಿಯಾಗುವುದೇ ಇಲ್ಲ. ಹಲವಾರು ಯುವತಿಯರು ಹಿಂಸಾತ್ಮಕ ಸಹಬಾಳ್ವೆ ನಡೆಸುತ್ತ, ಮರ್ಯಾದೆಗೆ ಹೆದರಿ ಅನಿವಾರ್ಯವಾಗಿ ಮೌನಕ್ಕೆ ಶರಣಾಗಿ ದಬ್ಬಾಳಿಕೆ  ಸಹಿಸಿಕೊಂಡು ಭಯ, ಆತಂಕದಲ್ಲಿಯೇ  ಬದುಕುತ್ತಿದ್ದಾರೆ. ಸಂಗಾತಿಯ ಜತೆ ಸಂಬಂಧ ಕಡಿದುಕೊಳ್ಳದೆ, ಹಿಂಸೆಯಿಂದಲೂ ಹೊರಬರದೆ ಸುರಕ್ಷಿತವಲ್ಲದ, ಬಲವಂತದ ಗರ್ಭಪಾತಕ್ಕೆ ಒಳಗಾಗುವ ಯುವತಿಯರಲ್ಲಿ ದೈಹಿಕ ಮತ್ತು ಮಾನಸಿಕ ಚೇತರಿಕೆಯ ಸಾಧ್ಯತೆಯೂ ಕ್ಷೀಣಿಸಿರುತ್ತದೆ.

ಇಂತಹ ಪರಿಸ್ಥಿತಿ ಎದುರಿಸುವ ಮಹಿಳೆಯರಿಗೆ, ಬಲವಂತದ ಗರ್ಭಪಾತ ಮತ್ತು ಕೌಟುಂಬಿಕ ಹಿಂಸೆ, ಸಂಗಾತಿಯ ದೌರ್ಜನ್ಯ ಮತ್ತಿತರ ಸಂಗತಿಗಳ ಬಗೆಗಿನ ಕಾಯ್ದೆಗಳ ಅರಿವು, ಅಪೇಕ್ಷಿತ ಮಾಹಿತಿ, ವೈದ್ಯಕೀಯ, ಮಾನಸಿಕ ಮತ್ತು ಸಾಮಾಜಿಕ ಆಪ್ತ ಸಮಾಲೋಚನೆಯ ತುರ್ತು ಅಗತ್ಯ ಇದೆ.

ಗಂಡು– ಹೆಣ್ಣು ಮದುವೆಯ ಬಂಧನ ಇಲ್ಲದೆ ‘ಸಹಬಾಳ್ವೆ’ (live in relations) ನಡೆಸುವುದಕ್ಕೆ ನಮ್ಮಲ್ಲಿ ಕಾನೂನಿನ ಮಾನ್ಯತೆ ನೀಡಲಾಗಿದೆ. ‘ಕೌಟುಂಬಿಕ ಹಿಂಸೆ ಕಾಯ್ದೆ– 2005’ರ ಅನ್ವಯ ‘ಸಹ ಬಾಳ್ವೆ’ ಸಹ ‘ಕೌಟುಂಬಿಕ ಸಂಬಂಧ’, ಮದುವೆಯಂತಹ ಸಂಬಂಧವಾಗಿದೆ ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ.

ಭಾರತೀಯ ದಂಡ ಸಂಹಿತೆಯಲ್ಲಿನ (ಐಪಿಸಿ) ಕಾನೂನು ಕ್ರಮದ ವೈಫಲ್ಯಕ್ಕೂ  ಈ ಎರಡೂ ಪ್ರಕರಣಗಳು ಕನ್ನಡಿ ಹಿಡಿಯುತ್ತವೆ. ‘ಬಲವಂತದ ಗರ್ಭಪಾತ’ದ ಪ್ರಕರಣಗಳಲ್ಲಿ, ಗರ್ಭಿಣಿಯರ ಇಚ್ಛೆಗೆ ವಿರುದ್ಧವಾಗಿ  ಪುರುಷ ಸಂಗಾತಿ ನಡೆಸುವ ಹಲ್ಲೆ, ಹಿಂಸೆಗೆ  ಸಂಬಂಧಿಸಿದಂತೆ   ಐಪಿಸಿಯಲ್ಲಿನ ಲೋಪ ದೋಷಗಳು ಬೆಳಕಿಗೆ ಬಂದಿವೆ.

‘ಐಪಿಸಿ–1860’ರ ಸೆಕ್ಷನ್‌ 312ರ ಪ್ರಕಾರ, ಕೇವಲ ಗರ್ಭಪಾತದ ಬಗ್ಗೆಯಷ್ಟೇ ಕ್ರಮ ಕೈಗೊಳ್ಳಲು ಅವಕಾಶ ಇದೆ. ಸಕಾರಣವಿಲ್ಲದೆ  ಗರ್ಭಪಾತಕ್ಕೆ ಕಾರಣವಾದರೆ 7 ವರ್ಷಗಳವರೆಗೆ ಜೈಲು ಶಿಕ್ಷೆಗೆ ಅವಕಾಶ ಇದೆ.  ಸೆಕ್ಷನ್‌ 313– ಮಹಿಳೆಯ ಸಮ್ಮತಿ ಇಲ್ಲದೆ ಗರ್ಭಪಾತಕ್ಕೆ ಕಾರಣವಾಗುವುದಕ್ಕೆ ಸಂಬಂಧಿಸಿದೆ.  ಇದಕ್ಕೆ 10 ವರ್ಷಗಳ ಜೈಲು ಶಿಕ್ಷೆ ಜತೆಗೆ  ದಂಡವನ್ನೂ  ವಿಧಿಸಬಹುದಾಗಿದೆ.  ಅದರೆ ಐಪಿಸಿ ಕಲಂಗಳಲ್ಲಿ ಗರ್ಭಪಾತದ ಕುರಿತು ಸ್ಪಷ್ಟ ವ್ಯಾಖ್ಯಾನವೇ ಇಲ್ಲ.

ಮಗು ಜೀವಂತವಾಗಿ ಜನಿಸುವುದನ್ನು  ತಡೆಯುವ ಉದ್ದೇಶ ಅಥವಾ ಹುಟ್ಟಿನ ನಂತರ ಮಗುವಿನ ಸಾವಿಗೆ ಕಾರಣವಾಗುವ ಕೃತ್ಯಕ್ಕೆ ಐಪಿಸಿಯ ಸೆಕ್ಷನ್‌ 315ರ ಅನ್ವಯ 10 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಒತ್ತಾಯದ ಗರ್ಭಪಾತಕ್ಕೆ ಕಾಯ್ದೆಯಲ್ಲಿ ಶಿಕ್ಷೆಗೆ ಅವಕಾಶ ಕಲ್ಪಿಸಲಾಗಿದ್ದರೂ, forced miscarriage ಮತ್ತು forced abortion ಮಧ್ಯೆ ಕಾನೂನಿನ ಗೊಂದಲವೂ ಇದೆ.

ಗರ್ಭಪಾತಕ್ಕೆ, ಅಬಾರ್ಷನ್‌ ಮತ್ತು ಮಿಸ್‌ ಕ್ಯಾರೇಜ್‌ ಶಬ್ದಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತಿದೆ. ಆದರೆ, ಅವೆರಡೂ ಬೇರೆ ಬೇರೆಯಾಗಿವೆ. ಸೋಮನಾಥ ಭಾರ್ತಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದ್ದು, ಅಬಾರ್ಷನ್‌ ಮತ್ತು ಮಿಸ್‌ ಕ್ಯಾರೇಜ್‌ ಮಧ್ಯೆ ಇರುವ ಅಂತರವನ್ನು ಸ್ಪಷ್ಟಪಡಿಸಿದೆ.

ಗರ್ಭಧಾರಣೆಯ ಮೊದಲ ತಿಂಗಳು, ಮಾಸು ರೂಪುಗೊಳ್ಳುವ ಮುನ್ನವೇ ಅಂಡಾಣುವನ್ನು ದೇಹವು ಹೊರಹಾಕುವುದಕ್ಕೆ ಅಬಾರ್ಷನ್‌ ಎನ್ನುತ್ತಾರೆ. ಗರ್ಭಧಾರಣೆಯ ನಾಲ್ಕರಿಂದ ಏಳು ತಿಂಗಳ ಅವಧಿಯಲ್ಲಿ ಭ್ರೂಣವನ್ನು ದೇಹದಿಂದ ಹೊರ ಹಾಕುವುದಕ್ಕೆ ‘ಮಿಸ್‌ ಕ್ಯಾರೇಜ್‌’ ಎನ್ನುತ್ತಾರೆ. ಕಾನೂನಿನ ಚೌಕಟ್ಟಿನಲ್ಲಿ ಎರಡರ ಮಧ್ಯೆ  ಇರುವ ವ್ಯತ್ಯಾಸವನ್ನು ಸಮರ್ಥವಾಗಿ ಬಳಸಲಾಗುತ್ತಿಲ್ಲ.

ಗರ್ಭಪಾತ ಮಾಡಿಕೊಳ್ಳುವ ಮಹಿಳೆಯ ಹಕ್ಕನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದೆ.  ಸಂವಿಧಾನದ 21ನೇ ಕಲಂನಡಿ ಗರ್ಭಪಾತವು  ಬದುಕುವ ಹಕ್ಕು, ಖಾಸಗಿತನ, ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ಎಂದು ಕೋರ್ಟ್‌ ತಿಳಿಸಿದೆ.

ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ನಡೆಯುವ ಬಲವಂತದ ಗರ್ಭಧಾರಣೆ, ಒತ್ತಾಯದ ಗರ್ಭಪಾತವು ಕೌಟುಂಬಿಕ ಹಿಂಸೆ ಕಾಯ್ದೆ 2005ರ ಅನ್ವಯ ಲೈಂಗಿಕ ಹಿಂಸೆಯಾಗುತ್ತದೆ. ಜತೆಗೆ, ಮೆಡಿಕಲ್‌ ಟರ್ಮಿನೇಷನ್‌ ಆಫ್‌ ಪ್ರೆಗ್ನೆನ್ಸಿ ಕಾಯ್ದೆ 1971ರ (ಎಂಟಿಪಿ) ಪ್ರಕಾರ, ಗರ್ಭಿಣಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ನಡೆಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ಗರ್ಭಧಾರಣೆಯ 12ರಿಂದ 20 ವಾರಗಳಲ್ಲಿ ಗರ್ಭಿಣಿಯ ಆರೋಗ್ಯದ ಮೇಲಾಗುವ ಅಪಾಯಗಳನ್ನು ಲೆಕ್ಕಕ್ಕೆ ತೆಗೆದುಕೊಂಡು, ನೋಂದಾಯಿತ ವೈದ್ಯರು ಸುರಕ್ಷಿತವಾಗಿ ಗರ್ಭಪಾತ ಮಾಡಿಸಬೇಕು ಎಂದೂ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ‘ಎಂಟಿಪಿ (ತಿದ್ದುಪಡಿ) ಮಸೂದೆ– 2014’ ರೂಪಿಸಿದ್ದು,  ‘ಗರ್ಭಧಾರಣೆಯನ್ನು  ವೈದ್ಯಕೀಯವಾಗಿ ಕೊನೆಗೊಳಿಸುವುದು ಅಥವಾ ಗರ್ಭಪಾತ ಮಾಡಿಸುವುದನ್ನು’ ಮೊದಲ ಬಾರಿಗೆ ವ್ಯಾಖ್ಯಾನಿಸಿದೆ.  ಸುರಕ್ಷಿತ ವೈದ್ಯಕೀಯ ವಿಧಾನಗಳ ಮೂಲಕ ಬಸಿರು ಕೊನೆಗೊಳಿಸುವುದೇ ಗರ್ಭಪಾತ ಎಂದು ಸ್ಪಷ್ಟಪಡಿಸಿದೆ.

ಗರ್ಭಪಾತಕ್ಕೆ ಈ ಮೊದಲು ನಿಗದಿ ಮಾಡಿದ್ದ 20 ವಾರಗಳ ಗಡುವನ್ನು 24 ವಾರಗಳಿಗೆ ವಿಸ್ತರಿಸಿರುವುದು ಮಹಿಳೆಯರ ಸ್ವಾತಂತ್ರ್ಯ ಮತ್ತು ಮರು ಸಂತಾನೋತ್ಪತ್ತಿ ಹಕ್ಕನ್ನು ಉತ್ತೇಜಿಸುವ ಕ್ರಮವಾಗಿದೆ.

ಗರ್ಭಪಾತಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ನೆರವಿನ ಸೇವಾ ವ್ಯಾಪ್ತಿ ವಿಸ್ತರಿಸಲೂ ಉದ್ದೇಶಿತ ಮಸೂದೆಯಲ್ಲಿ  ಅವಕಾಶ ಕಲ್ಪಿಸಲಾಗಿದೆ. ಅಲೋಪಥಿ ವೈದ್ಯರಷ್ಟೇ ಅಲ್ಲದೆ, ಆಯುರ್ವೇದ, ಯುನಾನಿ, ಹೋಮಿಯೋಪಥಿ ವೈದ್ಯರು, ದಾದಿಯರು, ಸೂಲಗಿತ್ತಿಯರು ಕೂಡ ಗರ್ಭಪಾತಕ್ಕೆ  ನೆರವಾಗುವುದನ್ನು ಕಾನೂನುಬದ್ಧಗೊಳಿಸಲು ಉದ್ದೇಶಿಸಲಾಗಿದೆ.

ಎಂಟಿಪಿ ಕಾಯ್ದೆಗೆ ಹಲವಾರು ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದರೂ, ಮುಖ್ಯ ವಿಷಯವಾದ ಬಲವಂತದ, ಅಸುರಕ್ಷಿತ  ಗರ್ಭಪಾತ, ಗರ್ಭಪಾತದ ಮುಂಚೆ ಆರೋಗ್ಯದ ಬಗ್ಗೆ ಸಲಹೆ ಪಡೆಯುವ, ಮಹಿಳೆಯಿಂದ ಒಪ್ಪಿಗೆ ಪಡೆಯುವ ಮತ್ತು ಸುರಕ್ಷಿತ ಗರ್ಭಪಾತದ ಕಾನೂನಾತ್ಮಕ ಹಕ್ಕಿನ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವ ಮತ್ತು ಕಾನೂನಿನಲ್ಲಿ ಕಡ್ಡಾಯ ಮಾಡಿರುವಂತೆ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ  ಸುರಕ್ಷಿತ  ಗರ್ಭಪಾತ ನಡೆಸುವ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿಲ್ಲ.

ಬಲವಂತದ ಗರ್ಭಪಾತದ ಪ್ರಕರಣಗಳನ್ನು  ಕಾನೂನಿನ ಅನ್ವಯ ಶಿಕ್ಷೆಗೆ ಒಳಪಡಿಸಲು ಮತ್ತು ಮಹಿಳೆಯರನ್ನು ಬಲಿಪಶು ಮಾಡುವುದನ್ನು ನಿರ್ಬಂಧಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೆ ಮಾತ್ರ ಮಹಿಳೆಯರು ಬಲವಂತದ, ಅಸುರಕ್ಷಿತ ಗರ್ಭಪಾತಕ್ಕೆ ಬಲಿಯಾಗುವುದನ್ನು, ಅವರ ಜೀವಕ್ಕೆ ಎರವಾಗುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ.

ಲೇಖಕಿ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಸಂಶೋಧನಾ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT