ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಯಾಗದ ಭೂಮಿ ಸರ್ಕಾರದ ಸ್ವಾದೀನ

ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಮಸೂದೆಗೆ ಒಪ್ಪಿಗೆ
Last Updated 25 ಜುಲೈ 2014, 20:09 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕೆಗಳು ಕರ್ನಾಟಕ ಭೂ ಸುಧಾ­ರಣೆ ಕಾಯ್ದೆಯಡಿ ಪಡೆದ ಭೂಮಿಯನ್ನು ಏಳು ವರ್ಷಗಳೊಳಗೆ ಆಯಾ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳ­ದಿದ್ದರೆ ಅದನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯುವ ಮಸೂದೆಗೆ ವಿಧಾನಸಭೆ ಶುಕ್ರವಾರ ಒಪ್ಪಿಗೆ ನೀಡಿತು.

‘ಕರ್ನಾಟಕ ಭೂ ಸುಧಾರಣೆಗಳ ಮತ್ತು ಕೆಲವು ಇತರ ಕಾನೂನು (ತಿದ್ದು­ಪಡಿ) ಮಸೂದೆ–2014’ ಕುರಿತು ವಿವ­ರಣೆ ನೀಡಿದ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್‌, ‘ಅನುಮೋದಿತ ಉದ್ದೇ­ಶಕ್ಕೆ ನೀಡಲಾದ ಭೂಮಿ­ಯನ್ನು ನಿಯಮಿತ ಅವಧಿಯೊಳಗೆ (ಗರಿಷ್ಠ 7 ವರ್ಷ) ಬಳಕೆ ಮಾಡದಿ­ದ್ದರೆ, ಅದನ್ನು ಸರ್ಕಾರದ ಭೂ ಬ್ಯಾಂಕ್‌ಗೆ ಬಿಟ್ಟುಕೊಡಬೇಕು ಎಂಬ ಷರತ್ತು ಹಾಕಲಾಗಿದೆ’ ಎಂದು ಹೇಳಿದರು.

‘ಅವಧಿ ಮೀರಿದರೂ ಭೂ ಬ್ಯಾಂಕ್‌ಗೆ ಭೂಮಿ ಒಪ್ಪಿಸದಿದ್ದರೆ ಆ ಯೋಜನೆಗೆ ನೀಡಲಾದ ಸೆಕ್ಷನ್‌ 109ರ  ವಿನಾಯ್ತಿ ರದ್ದುಗೊಳಿಸಿ, ಯಾವುದೇ ಪರಿ­ಹಾರ ನೀಡದೆ ಭೂಮಿ­ಯನ್ನು ಸರ್ಕಾ­ರವೇ ಮುಟ್ಟುಗೋಲು ಹಾಕಿ­ಕೊಳ್ಳಲು ಅವ­ಕಾಶ ಕಲ್ಪಿಸಲಾಗಿದೆ’ ಎಂದರು.
‘ಯಾವುದೇ ಸಂಸ್ಥೆ, ಕಾಯ್ದೆಯ 109ನೇ ಸೆಕ್ಷನ್‌ನಿಂದ ವಿನಾಯ್ತಿ ಪಡೆದ ದಿನಾಂಕದಿಂದ ಹತ್ತು ವರ್ಷಗಳ ಒಳಗೆ ಯೋಜನೆ ವಿಸ್ತರಣೆ, ಆರ್ಥಿಕ ಮುಗ್ಗಟ್ಟು ನಿರ್ವಹಣೆ ಇಲ್ಲವೆ ಭೂಮಿ ಬಳಕೆ ಬದಲಾವಣೆಗೆ ಅರ್ಜಿ ಸಲ್ಲಿಸಲು ಅವ­ಕಾಶ ಇದೆ.

ಸರ್ಕಾರದ ಮುಖ್ಯ ಕಾರ್ಯ­ದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿ ಅದರ ವಾಸ್ತವ ಸ್ಥಿತಿ ಪರಿಶೀಲಿಸಿ ನಿರ್ಧರಿ­ಸ­ಲಿದೆ’ ಎಂದು ಮಾಹಿತಿ ನೀಡಿದರು. ‘ಕಾಯ್ದೆಯಲ್ಲಿ ಮಾಡಲಾದ ತಿದ್ದುಪ­ಡಿ­ಯಿಂದ ಕೃಷಿ ಭೂಮಿಯಿಂದ ಕೃಷಿಯೇ­ತ­ರ ಪರಿವರ್ತನೆಗೆ ವಿವಿಧ ಇಲಾಖೆಗಳಿಗೆ ಅಲೆದಾಡುವುದು ತಪ್ಪಲಿದೆ’ ಎಂದರು.

‘ಕರ್ನಾಟಕ ಭೂ ಸುಧಾರಣೆಗಳ ಕಾಯ್ದೆ 1961ರ 109ನೇ ಸೆಕ್ಷನ್‌ ಅಡಿಯಲ್ಲಿ ಒಮ್ಮೆ ಅನುಮತಿ ಪಡೆದು­ಕೊಂಡರೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ 95ನೇ ಸೆಕ್ಷನ್‌ ಅಡಿ­ಯಲ್ಲೂ ಅನುಮತಿ ಪಡೆದಂತೆ ಎಂಬ ಉಪ­ಬಂಧವನ್ನು ಸಹ ಸೇರ್ಪಡೆ ಮಾಡಲಾಗಿದೆ’ ಎಂದು ವಿವರಿಸಿದರು.

ಡಿ.ಸಿಗಳಿಗೆ ಅಧಿಕಾರ: ‘ಸೆಕ್ಷನ್‌ 63, 79ಎ, 79ಬಿ ಇಲ್ಲವೆ 80ರ ಪ್ರಕಾರ ಎಷ್ಟೇ ಪ್ರಮಾಣದ ಭೂಮಿಗೂ ಮಂಜೂ­ರಾತಿ ನೀಡಲು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗ­ಳನ್ನು ಹೊರತು­ಪ­ಡಿಸಿ ಉಳಿದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾ­ರಿ­ಗ­ಳಿಗೆ ಅನುಮತಿ ನೀಡಲಾಗಿದೆ. ಬೆಂಗ­ಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ­ಗಳ ಜಿಲ್ಲಾಧಿಕಾರಿ­ಗಳಿಗೆ ಗರಿಷ್ಠ ಅರ್ಧ ಹೆಕ್ಟೇರ್‌ ಭೂಮಿ ಮಂಜೂರಾತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ’ ಎಂದರು.

ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಸೂದೆಯನ್ನು ಸ್ವಾಗತಿಸಿದರೆ, ಬಿಜೆಪಿಯ ಬಸವರಾಜ ಬೊಮ್ಮಾಯಿ ವಿರೋಧ ವ್ಯಕ್ತಪಡಿಸಿ­ದರು. ‘ಸಿಮೆಂಟ್‌ ಕೈಗಾರಿಕೆ ಸ್ಥಾಪನೆಗೆ ಸಾವಿ­ರಾರು ಎಕರೆ ಭೂಮಿ ಹಂಚಿಕೆ ಮಾಡಿಸಿ­ಕೊಂಡು ಬಳಿಕ ಅವನ್ನು ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಬಳಸಿ­ಕೊಂಡ ಉದಾ­­ಹರಣೆ ನಮ್ಮ ಮುಂದೆ ಸಾಕಷ್ಟಿವೆ’ ಎಂದು ಹೇಳಿದರು. ‘ಭೂಪರಿ­ವ­ರ್ತನೆ ಮೇಲೆ ವಲಯವಾರು ನಿರ್ಬಂಧ ಹೇರ­ಬೇಕು’ ಎಂದು ಒತ್ತಾಯಿಸಿದರು.

‘ಭೂ ಸುಧಾರಣೆ ಕಾಯ್ದೆಯಂತಹ ದೊಡ್ಡ ಕೊಡುಗೆಯನ್ನು ರಾಜ್ಯಕ್ಕೆ ಕೊಟ್ಟ ಕಾಂಗ್ರೆಸ್‌ ಪಕ್ಷವೇ ಆ ಕಾಯ್ದೆಯನ್ನು ಸಮಾಧಿ ಮಾಡಲು ಹೊರಟಿದೆ’ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿ­ದರು. ಬಿಜೆಪಿಯ ಜಗದೀಶ ಕುಮಾರ್‌, ‘ಯಾವುದೇ ಪರಿಶೀಲನೆ ನಡೆಸದೆ ಕೈಗಾರಿ­ಕೆಗಳು ಕೇಳಿದಷ್ಟು ಭೂಮಿಯನ್ನು ಸರ್ಕಾರ ಮಂಜೂರು ಮಾಡುತ್ತಿದೆ.

ಜಪಾ­ನ್‌­ನಲ್ಲಿ 50 ಎಕರೆ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸುವ ಸಂಸ್ಥೆ, ಇಲ್ಲಿ 5,000 ಎಕರೆ ಭೂಮಿ ಕೇಳುತ್ತದೆ’ ಎಂದು ಹೇಳಿದರು. ‘ಕೃಷಿಗೂ ಭೂಮಿ­ ಮೀಸ­ಲಿಡಬೇಕು. ಅದರ ಭೂಬಳಕೆ­ಯನ್ನು ಯಾವ ಕಾರಣಕ್ಕೂ ಪರಿವರ್ತನೆ ಮಾಡಬಾರದು’ ಎಂದು ಆಗ್ರಹಿಸಿದರು.

ಕೃಷಿ ಸಚಿವ ಕೃಷ್ಣ ಬೈರೇಗೌಡ, ‘ಭೂಮಿ ಮಂಜೂರು ಮಾಡುವ ಮುನ್ನ ಭೂ ಲೆಕ್ಕ ತಪಾಸಣೆ ನಡೆಸಲಾಗುತ್ತದೆ’ ಎಂದು ಹೇಳಿದರು. ‘ಬಂಡವಾಳ ಆಕರ್ಷಿ­ಸಲು ಕಾಯ್ದೆಗೆ ಸಣ್ಣ ಬದಲಾವಣೆ  ಮಾಡಲಾಗಿದೆ’ ಎಂದು ಕಂದಾಯ ಸಚಿವರು ಸ್ಪಷ್ಟನೆ ನೀಡಿದರು. ಕೊನೆಗೆ ಸದನ ಮಸೂದೆಗೆ ಒಪ್ಪಿಗೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT