ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳೆ ಸುತ್ತ ಮುತ್ತ

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬಳೆ! ಮಹಿಳೆಯರ ಫ್ಯಾಷನ್‌ ಜಗತ್ತಿನ ಅವಿಭಾಜ್ಯ ವಸ್ತುಗಳಲ್ಲಿ ಒಂದು. ನಮ್ಮ ಸಂಸ್ಕೃತಿಯ ಭಾಗವೂ ಹೌದು. ಮಣ್ಣು, ಚಿಪ್ಪು, ತಾಮ್ರ, ಕಂಚು, ಚಿನ್ನ, ಬೆಳ್ಳಿ, ಬೆಲೆಬಾಳುವ ಶಿಲೆಗಳಿಂದ ತಯಾರಿಸಲಾಗುವ ಬಳೆಗೆ 5000 ವರ್ಷಗಳ ಇತಿಹಾಸವಿದೆ! ಇದರ ಚರಿತ್ರೆಯ ಬೇರು ಬಿಟ್ಟಿರುವುದು ನಮ್ಮ ದೇಶದಲ್ಲಿ. ಕ್ರಿ.ಪೂ 2600 ರ ಅವಧಿಯಲ್ಲಿದ್ದ ಮೊಹಂಜೊದಾರೊ ನಾಗರಿಕತೆಯ ಸಮಯದಲ್ಲೇ ಬಳೆಗಳು ಬಳಕೆಯಲ್ಲಿದ್ದವು ಎಂಬುದಕ್ಕೆ ಪುರಾವೆಗಳಿವೆ. ಎಡ ಕೈಗೆ ಬಳೆ ತೊಟ್ಟಿದ್ದ ಬಾಲಕಿಯೊಬ್ಬಳು ನೃತ್ಯ ಮಾಡುತ್ತಿರುವ ಭಂಗಿಯ ಪುತ್ಥಳಿಯು ಉತ್ಖನನ ಸಂದರ್ಭದಲ್ಲಿ ದೊರೆತಿದೆ.

   ಕ್ರಿ.ಪೂ 6ನೇ ಶತಮಾನದ ಐತಿಹಾಸಿಕ ಸ್ಥಳವಾದ ತಕ್ಷಶಿಲೆಯಲ್ಲಿ (ಪಾಕಿಸ್ತಾನದ ರಾವಲ್ಪಿಂಡಿ) ಉತ್ಖನನ ನಡೆಸಿದ್ದಾಗ ಚಿನ್ನದ ಬಳೆಯ ಮಾದರಿ ಪತ್ತೆಯಾಗಿತ್ತು. ಅಲಂಕಾರ ಮಾಡಿದ್ದ ಚಿಪ್ಪಿನ ಬಳೆಗಳು ಮೌರ್ಯರ ಆಡಳಿತಾವಧಿಯ (ಕ್ರಿ.ಪೂ 322-185) ಹಲವು ಪ್ರದೇಶಗಳಲ್ಲಿ ಕಂಡು ಬಂದಿವೆ. ಮರ, ಲೋಹಗಳಿಂದ ಮಾಡಿದ ಬಳೆಗಳು ಪುರಾತನ ಈಜಿಪ್ಟ್‌ ಮತ್ತು ಗ್ರೀಸ್‌ನಲ್ಲೂ ಜನರ ಕೈಗಳನ್ನು ಅಲಂಕರಿಸಿದ್ದವು.

   ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಬಳೆಗಳು ಹೆಚ್ಚು ಬಳಕೆಯಲ್ಲಿತ್ತು ಎಂಬುದು ಇತಿಹಾಸವನ್ನು ಗಮನಿಸಿದರೆ ತಿಳಿಯುತ್ತದೆ. ಇವುಗಳು ಇಲ್ಲಿನ ಮಹಿಳೆಯರ ದೈನಂದಿನ ಬದುಕಿನ ವೇಷಭೂಷಣದ ಅಂಗವಾಗಿತ್ತು. ಆಭರಣವಾಗಿ ಸಂಸ್ಕೃತಿ ಮತ್ತು ಆಚರಣೆಯ ಭಾಗವಾಗಿದ್ದ ಬಳೆಗಳು ಪ್ರತಿಷ್ಠೆ, ಸಾಮಾಜಿಕ ಸ್ಥಾನಮಾನದ ಸಂಕೇತವಾಗಿತ್ತು.

ಯೂರೋಪ್‌, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜನರು ಇವುಗಳನ್ನು ಬಳಸುತ್ತಿದ್ದರಾದರೂ ಹೆಚ್ಚು ಜನಪ್ರಿಯತೆ ಪಡೆದಿರಲಿಲ್ಲ. ವೆಸ್ಟ್‌ ಇಂಡೀಸ್‌ನ ಸಂಸ್ಕೃತಿಯಲ್ಲಿ ಬಳೆಗೆ ಮಹತ್ವದ ಸ್ಥಾನವಿದೆ. ಕೆರೆಬಿಯನ್ನರು ಮಗುವೊಂದರ ಮೊದಲ ಹುಟ್ಟುಹಬ್ಬಕ್ಕೆ ಬಳೆಯನ್ನು ಉಡುಗೊರೆಯಾಗಿ ಕೊಡುತ್ತಾರೆ. ಅಲ್ಲಿನ ಮಹಿಳೆಯರೂ ಫ್ಯಾಷನ್‌ ವಸ್ತುವಾಗಿ ಇದನ್ನು ತೊಡುತ್ತಾರೆ. ‘ಮನಿಲಾ’ ಎಂಬ ಹೆಸರಿನಿಂದ ಕರೆಯಲಾಗುವ ಈ ಬಳೆ ಕೆರೆಬಿಯನ್‌ ನಾಡಿನಲ್ಲಿ ಸಾಮಾಜಿಕ ಸ್ಥಾನಮಾನದ ಪ್ರತೀಕ. ಅಲ್ಲಿನ ಮಹಿಳೆಯರಿಗೆ ಬಳೆಯು ಪತಿಯ ಸಿರಿವಂತಿಕೆಯನ್ನು ಪ್ರದರ್ಶಿಸುವ ವೇದಿಕೆ!

ಚೀನಾ ಸಂಸ್ಕೃತಿಯಲ್ಲಿ ಬಳೆ ದೀರ್ಘಾಯುಷ್ಯ, ಅಭ್ಯುದಯದ ಸಂಕೇತ. ಜೇಡ (ಆಭರಣಗಳಲ್ಲಿ ಬಳಸುವ ಒಂದು ಬಗೆಯ, ಸಾಮಾನ್ಯವಾಗಿ ಹಸಿರು ಬಣ್ಣದ) ಶಿಲೆಗಳಿಂದ ಮಾಡಿದ ಬಳೆಗಳು ಅದೃಷ್ಟ ತರುವುದಲ್ಲದೇ, ಸಿರಿವಂತಿಕೆಯನ್ನು ತರುತ್ತದೆ; ಆರೋಗ್ಯವನ್ನೂ ಕಾಪಾಡುತ್ತದೆ ಎಂಬ ನಂಬಿಕೆ ಚೀನೀಯರದ್ದು. 
ಪಶ್ಚಿಮ ಆಫ್ರಿಕಾದ ಇತಿಹಾಸದಲ್ಲಿ ಬಳೆಯ ಹಿಂದೆ ಕರಾಳ ಅಧ್ಯಾಯವೊಂದಿದೆ. ಕುದುರೆ ಲಾಳ ಆಕಾರದ ‘ಮನಿಲಾ’, ಒಂದು ಕಾಲದಲ್ಲಿ ಅಲ್ಲಿನ ಕರೆನ್ಸಿ ಆಗಿತ್ತಂತೆ. ಅಮೆರಿಕನ್ನರು ಜೀತದಾಳುಗಳನ್ನು ಖರೀದಿಸಲು ಇವುಗಳನ್ನು ಬಳಸುತ್ತಿದ್ದರು ಎಂದು ಹೇಳುತ್ತದೆ ಚರಿತ್ರೆ. ಹಾಗಾಗಿ ಈ ಬಳೆಯನ್ನು ಜೀತದಾಳುಗಳ ವ್ಯಾಪಾರ ಮಾಡುವ ಹಣ (slave trading money) ಎಂದೇ ಕರೆಯಲಾಗುತ್ತಿತ್ತು.

ಬಳೆ ಜನಪ್ರಿಯವಾಗಿದ್ದು ಗಾಜಿನ ಆವಿಷ್ಕಾರದ ನಂತರ. ಭಾರೀ ಪ್ರಮಾಣದಲ್ಲಿ ವಿವಿಧ ವಿನ್ಯಾಸದ ಗಾಜಿನ ಆಕರ್ಷಕ ಬಳೆಗಳು ಮಹಿಳೆಯರ ಕೈ ಅಲಂಕರಿಸಿದವು.  ಪ್ಲಾಸ್ಟಿಕ್‌ ಆವಿಷ್ಕಾರದ ನಂತರ ಬಳೆಗಳು ಇನ್ನಷ್ಟು ಅಗ್ಗವಾಯಿತು. ಭಾರತದಲ್ಲಿ ಬಳೆ ತಯಾರಿಕೆ, ಮಾರಾಟವೇ ದೊಡ್ಡ ಉದ್ದಿಮೆಯಾಯಿತು.

ಬಣ್ಣ –ಅರ್ಥ
ನಮ್ಮ ದೇಶದ ಸಂಸ್ಕೃತಿಯಲ್ಲಿ ಪ್ರತಿಯೊಂದು ಬಣ್ಣದ ಬಳೆಯೂ ಒಂದೊಂದು ಅರ್ಥವನ್ನು ಧ್ವನಿಸುತ್ತದೆ. ಕೆಂಪು ಬಣ್ಣದ ಬಳೆ ತೊಡುವುದರಿಂದ ಶಕ್ತಿ ಮತ್ತು ಉತ್ಸಾಹ ವೃದ್ಧಿಸಿದರೆ, ನೀಲಿ ಬಣ್ಣ ಬುದ್ಧಿವಂತಿಕೆ ಪ್ರತಿಪಾದಿಸುತ್ತದೆ. ನೇರಳೆ ಬಣ್ಣ ಸ್ವಾತಂತ್ರ್ಯ, ಹಸಿರು ಬಣ್ಣ ಅದೃಷ್ಟ, ಹಳದಿ ಬಣ್ಣ ಸಂತೋಷ, ಕೇಸರಿ ಬಣ್ಣ ಯಶಸ್ಸು, ಕಪ್ಪು ಮತ್ತು ಬಿಳಿ ಬಣ್ಣ  ಕ್ರಮವಾಗಿ ಬಲ ಹಾಗೂ ಹೊಸ ಶಕೆಯನ್ನು ಅರ್ಥವನ್ನು ಧ್ವನಿಸುತ್ತದೆ. ಚಿನ್ನದ ಬಳೆಯನ್ನು ಧರಿಸುವುದರಿಂದ ಸುಯೋಗ ಮತ್ತು ಏಳಿಗೆ ಲಭಿಸುತ್ತದೆ ಎಂಬ ನಂಬಿಕೆ ಇದೆ. ಮಹಿಳೆಯರು ಧರಿಸಿರುವ ಬಳೆ ಒಡೆದರೆ ಪತಿಗೆ ತೊಂದರೆ ಆಗುತ್ತದೆ ಎಂಬ ನಂಬಿಕೆ ಹಿಂದಿನ ಜನರಲ್ಲಿತ್ತು. ಪತಿ ಸತ್ತಾಗ ಹೆಂಡತಿಯ ಕೈಯಲ್ಲಿರುವ ಬಳೆಗಳನ್ನು ಒಡೆಯುವ ಪದ್ಧತಿ ಈಗಲೂ ಹಲವೆಡೆ ರೂಢಿಯಲ್ಲಿದೆ.

ಪೌರುಷದ ಸಂಕೇತ
ಪುರುಷರೂ ಬಳೆಯನ್ನೇ ಹೋಲುವ ವಸ್ತುವನ್ನು ತೊಡುತ್ತಾರೆ. ಅದನ್ನು ಸಾಮಾನ್ಯ ಪರಿಭಾಷೆಯಲ್ಲಿ ‘ಕಡಗ’ ಎಂದು ಕರೆಯಲಾಗುತ್ತದೆ. ಗಾತ್ರದಲ್ಲಿ ದೊಡ್ಡದಾಗಿರುವ ಮತ್ತು ದಪ್ಪವಿರುವ ಈ ಬಳೆ ಪೌರುಷದ ಸಂಕೇತ! ಕುಸ್ತಿ ಸೇರಿದಂತೆ ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ಸಂಗೀತ ಸೇರಿಂದತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಡಗವನ್ನು ಬಹುಮಾನವಾಗಿ ನೀಡಿ ಸನ್ಮಾನಿಸುವ ಸಂಪ್ರದಾಯ ಇದೆ. ಎಂತಹ ವಿಪರ್ಯಾಸ !  

ಬಳೆ ಮತ್ತು ಸಂಸ್ಕೃತಿ
ಬಳೆಯ ಮೂಲ ಇರುವುದು ಭಾರತದಲ್ಲಿ. ಬಳೆಯು ಇಲ್ಲಿನ ಸಂಸ್ಕೃತಿ, ಧಾರ್ಮಿಕ ಆಚರಣೆಯೊಂದಿಗೆ ಬೆರೆತು ಹೋಗಿದೆ. ಇದರ ಬಳಕೆಯಲ್ಲಿ ಧರ್ಮ ಭೇದವಿಲ್ಲ. ಎಲ್ಲಾ ಧರ್ಮದ ಮಹಿಳೆಯರು ಬಳೆ ತೊಡುತ್ತಾರೆ. ವಿಶೇಷ ಕಾರ್ಯಕ್ರಮ, ಕೌಟುಂಬಿಕ ಸಮಾರಂಭಗಳಲ್ಲಿ ಚಿನ್ನ, ಗಾಜು, ಪ್ಲಾಸ್ಟಿಕ್‌ ಬಳೆಗಳು ಮಹಿಳೆಯರ ಕೈಯನ್ನು ಅಲಂಕರಿಸುತ್ತವೆ.

ಹಿಂದೂ ಧರ್ಮ ಹಾಗೂ ಬಳೆಯ ನಡುವೆ ಅವಿನಾಭಾವ ಸಂಬಂಧವಿದೆ. ಇಲ್ಲಿ ಬಳೆ ಸೌಭಾಗ್ಯದ ಸಂಕೇತ. ಮದುವೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇದರ ಪಾತ್ರ ಹಿರಿದು. ಮದುವೆ ಸಮಾರಂಭದಲ್ಲಿ ವಧು ಸುಂದರವಾಗಿ ಕಾಣುವುದರಲ್ಲಿ ಬಳೆಗಳ ಪಾಲೂ ಇದೆ. ಸೀಮಂತದ ಸಂದರ್ಭದಲ್ಲಿ ಗರ್ಭಿಣಿಗೆ ಬಳೆ ತೊಡಿಸುವ ಸಂಪ್ರದಾಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT