ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಉತ್ಪಾದನೆಗೆ ತಕ್ಷಣಕ್ಕೆ ಅಡ್ಡಿ ಇಲ್ಲ

Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ವಿದ್ಯುತ್‌ ನಿಗ­ಮದ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಮಹಾರಾಷ್ಟ್ರದಲ್ಲಿ ಮಂಜೂರು ಮಾಡಿದ್ದ ಕಲ್ಲಿದ್ದಲು ಗಣಿ­ಗಳನ್ನು ಸುಪ್ರೀಂ ಕೋರ್ಟ್‌ ರದ್ದುಪಡಿ­ಸಿದೆ. ಆದರೆ, ಕಾರ್ಯಾಚರಣೆ ನಿಲ್ಲಿ­ಸಲು ಆರು ತಿಂಗಳ ಕಾಲಾವಕಾಶ ನೀಡಿ­ರುವು­ದರಿಂದ ತಕ್ಷಣಕ್ಕೆ ವಿದ್ಯುತ್‌ ಉತ್ಪಾ­ದನೆಗೆ ಯಾವುದೇ ತೊಂದರೆ ಇಲ್ಲ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ ಆರ್‌.ಎಂ. ಲೋಧಾ ಅವರು ರದ್ದುಪಡಿಸಿರುವ 214 ಕಲ್ಲಿದ್ದಲು ಗಣಿಗಳಲ್ಲಿ ಮಹಾರಾಷ್ಟ್ರ ಬಾರಂಜಾದ ನಾಲ್ಕು, ಕಿಲೋನಿ, ಮತ್ತು ಮನೋಹರ ದೀಪದ ತಲಾ ಒಂದು ಬ್ಲಾಕ್‌ಗಳು ಸೇರಿವೆ. ಈ ಆರು ಬ್ಲಾಕುಗಳನ್ನು ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಮಂಜೂರು ಮಾಡಲಾಗಿತ್ತು.

ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಬಳ್ಳಾರಿ ವಿದ್ಯುತ್‌ ಸ್ಥಾವರಕ್ಕೆ ತಕ್ಷಣಕ್ಕೆ ಕಲ್ಲಿದ್ದಲು ತೊಂದರೆ ಆಗುವುದಿಲ್ಲ. ಗಣಿಗಾರಿಕೆ ನಿಲ್ಲಿಸಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಆರು ತಿಂಗಳ ಬಳಿಕ ಕಲ್ಲಿದ್ದಲು ಗಣಿ ಕೇಂದ್ರ ಸರ್ಕಾರದ ಅಧೀನಕ್ಕೆ ಹೋಗಲಿದೆ. ಬಳಿಕ ರಾಜ್ಯ ಸರ್ಕಾರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ‘ಬಿಡ್‌’ ಮಾಡಬೇಕಿದೆ.

ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಮೂರು ಘಟಕಗಳಿದ್ದು, ತಲಾ 500ಮೆ.ವಾ ಸಾಮರ್ಥ್ಯದ ಒಂದು ಮತ್ತು ಎರಡನೇ ಘಟಕ ಕಾರ್ಯನಿರ್ವಹಿಸುತ್ತಿವೆ. 700 ಮೆ.ವಾ ಸಾಮರ್ಥ್ಯದ ಮೂರನೇ ಘಟಕ ನಿರ್ಮಾಣ ಹಂತದಲ್ಲಿದೆ. ಈ ಮೂರೂ ಘಟಕಗಳ ಒಟ್ಟು ಸಾಮರ್ಥ್ಯ 1700 ಮೆ.ವಾ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಕೇಂದ್ರ ಸರ್ಕಾರ 2003ರಲ್ಲಿ ಕಲ್ಲಿದ್ದಲು ಗಣಿಗಳನ್ನು ಮಂಜೂರು ಮಾಡಿತ್ತು. ರಾಜ್ಯ ಸರ್ಕಾರ ಖಾಸಗಿ ಕಂಪೆನಿ ‘ಕೆಂಪ್ಟಾ’ ಜತೆಗೂಡಿ ಗಣಿಗಾರಿಕೆ ನಡೆಸಿತ್ತು.  ಇದುವರೆಗೆ 140ಲಕ್ಷ ಟನ್‌ ಕಲ್ಲಿದ್ದಲು ತೆಗೆಯಲಾಗಿದ್ದು, ಕೋರ್ಟ್‌ ತೀರ್ಪಿನಂತೆ ಟನ್‌ಗೆ ರೂ.295ರಂತೆ ನಷ್ಟ ತುಂಬಿಕೊಡಲು 400 ಕೋಟಿ ಪಾವತಿಸಬೇಕಾಗಿದೆ.

ಪೂರ್ಣ ತೀರ್ಪು ಅಧ್ಯಯನ: ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಅಧ್ಯಯನದ ಬಳಿಕ ಮುಂದಿನ ಕ್ರಮ ಕುರಿತು ತೀರ್ಮಾನಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

‘ನಾವು ಲಾಭ ಮಾಡುವ ಉದ್ದೇಶಕ್ಕೆ ಕಲ್ಲಿದ್ದಲು ಬಳಸಿಲ್ಲ. ಕರ್ನಾಟಕ ವಿದ್ಯುತ್‌ ನಿಗಮದ ಅಧೀನದಲ್ಲಿರುವ ಬಳ್ಳಾರಿ ವಿದ್ಯುತ್‌ ಸ್ಥಾವರಕ್ಕೆ ಇದನ್ನು ಬಳಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾ­ಗುವುದು. ಕಾನೂನು ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಜತೆ ಸಮಾಲೋಚಿಸಿದ ಬಳಿಕ ಮುಂದಿನ ತೀರ್ಮಾನ ಏನೆಂದು ನಿರ್ಧರಿಸ­ಲಾಗುವುದು’ ಎಂದು ಶಿವಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT