ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ರೂ 10 ಕೋಟಿ ಹವಾಲಾ ನಗದು ಪತ್ತೆ

ಪ್ರತಿ ಮತಗಟ್ಟೆಗೆ 50 ಸಾವಿರದಂತೆ ಹಂಚುವ ಉದ್ದೇಶ
Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಮಾದರಿ ನೀತಿ ಸಂಹಿತೆ ಜಾರಿ ತಂಡ ಶುಕ್ರವಾರ ರಾತ್ರಿ ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ಪ್ರತ್ಯೇಕ ದಾಳಿ ನಡೆಸಿ ಒಟ್ಟು ರೂ 9.99 ಕೋಟಿ ನಗದು ಹಾಗೂ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಉಳಿತಾಯ ಪ್ರಮಾಣಪತ್ರಗಳು, ಚೆಕ್‌ಗಳು, ನೂರಾರು ಎಕರೆ ಜಮೀನಿನ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಸತ್ಯನಾರಾಯಣ ಪೇಟೆ ಬಳಿಯ ಗಣೇಶ ಕಾಲೊನಿ­ಯಲ್ಲಿ ಲೇವಾದೇವಿ ವ್ಯವಹಾರ ನಡೆಸುವ ರಮೇಶ ಪರಶುರಾಮ ಪೂರಿಯಾ ಅಲಿಯಾಸ್‌ ಚೋರ್‌ ಬಾಬುಲಾಲ್‌ ಮತ್ತವರ ಮಕ್ಕಳ ಮೂರು ಮನೆಗಳು ಹಾಗೂ ನಟರಾಜ ಚಿತ್ರಮಂದಿರದ ಬಳಿ ಇರುವ ಅವರ ಕಚೇರಿಗಳಲ್ಲಿ ರೂ 8.77 ಕೋಟಿ ನಗದು, ರೂ 4.5 ಕೋಟಿ ಮೌಲ್ಯದ ರಾಷ್ಟ್ರೀಯ ಉಳಿ­ತಾಯ ಪ್ರಮಾಣ ಪತ್ರಗಳು, ಕಿಸಾನ್‌ ವಿಕಾಸ ಪತ್ರ­ಗಳು, ರೂ 5 ಕೋಟಿ ಮೌಲ್ಯದ ಚೆಕ್‌ಗಳು, 600 ಗ್ರಾಂ ಚಿನ್ನಾ­ಭರಣ ದೊರೆತಿವೆ. ಹೊಸಪೇಟೆ ನಗರದಲ್ಲಿ ವ್ಯಾಪಾರಿ ವಿಕ್ರಂ ಜೈನ್‌ ಎಂಬುವ­ವರ ಕಾರಿನಲ್ಲಿದ್ದ  ರೂ 1 ಕೋಟಿ, ಹಾಗೂ ಮುಖ್ಯ ಮಾರುಕಟ್ಟೆ­­ಯಲ್ಲಿನ ಅವರ ಅಂಗಡಿಯಲ್ಲಿ ರೂ 22 ಲಕ್ಷ ನಗದು  ದೊರೆತಿದೆ.

ಮಕ್ಕಳ ಮನೆಯಲ್ಲೂ ಸಂಪತ್ತು: ರಮೇಶ ಪೂರಿಯಾ, ಮಗ ಶ್ರೀಕಾಂತ್‌, ಮಗಳು ಪ್ರಕೃತಿ ಅವರ ಮನೆಗಳು ಹಾಗೂ ಕಚೇರಿಗಳಲ್ಲಿ ಕ್ರಮವಾಗಿ 8.52 ಕೋಟಿ, ರೂ 20.20 ಲಕ್ಷ ಹಾಗೂ ರೂ 4.80 ಲಕ್ಷ ನಗದು ಪತ್ತೆಯಾಯಿತು.. ಅಲ್ಲಿದ್ದ ರೂ 500, ರೂ 1,000 ಮುಖಬೆಲೆ  ನೋಟು­­­­ಗಳನ್ನು ಸಿಬ್ಬಂದಿ ಬೆಳ­ಗಿನ ಜಾವ­ದವ­ರೆಗೂ ಯಂತ್ರದ ಸಹಾಯ­ದಿಂದ ಎಣಿಸಿದರು.

ಮನೆಯಲ್ಲಿ ಇಷ್ಟೊಂದು  ಹಣ ಇಟ್ಟುಕೊಂಡಿ­ದ್ದನ್ನು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ರಮೇಶ್‌ ಅವರಿಗೆ ನೋಟಿಸ್‌ ಜಾರಿ ಮಾಡಿ, ಶನಿ­ವಾರ ಸಂಜೆಯವರೆಗೂ ವಿಚಾರಣೆಗೆ ಒಳಪಡಿ­ಸಿತು.

ಯಾರ ಪರ ಬಳಸಲು ಕೂಡಿಡಲಾಗಿತ್ತು ಗೊತ್ತಾಗಿಲ್ಲ
ಹವಾಲಾ ಮಾದರಿಯಲ್ಲಿ ಒಬ್ಬರಿಂದ ಇನ್ನೊಬ್ಬರ ಕೈಗೆ ಹಸ್ತಾಂತರಕ್ಕೆ ಬಳಸಲು ಇಷ್ಟೊಂದು ಬೃಹತ್‌ ಮೊತ್ತವನ್ನು ಸಂಗ್ರಹಿಸಿ ಇಟ್ಟಿರುವ ಶಂಕೆ ಇದ್ದು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆದಿತ್ಯ ಅಮ್ಲಾನ್‌ ಬಿಸ್ವಾಸ್‌ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

‘ಈ ಹಣವನ್ನು ಚುನಾವಣೆ ಉದ್ದೇಶಕ್ಕೆ ಬಳಸಲು ಮತ್ತು ಪ್ರತಿ ಬೂತ್‌ಗೆ ₨ 50 ಸಾವಿರದಂತೆ ವಿತರಿಸಲು ಯೋಜನೆ ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ. ಅಲ್ಲದೇ, ಪೂರಿಯಾ ಮನೆಯಲ್ಲಿ ನೂರಾರು ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ.

ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಆ ವ್ಯಕ್ತಿ ಸಾರ್ವಜನಿಕರಿಗೆ ಸಾಲ ನೀಡಿ ಮರುಪಾವತಿ ಆಗದ ಸಂದರ್ಭದಲ್ಲಿ ಕಬಳಿಸಿದ ಭೂಮಿಗೆ ಸಂಬಂಧಿಸಿದ ದಾಖಲೆಗಳೂ ಆಗಿರಬಹುದು ಎಂಬ ಶಂಕೆ ಇದೆ’ ಎಂದು ಹೇಳಿದರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್‌ ಅಭ್ಯರ್ಥಿ ಎಸ್. ಮುರಳಿಕೃಷ್ಣ ಅವರ ಹೆಸರಿನಲ್ಲಿ ಬರೆದಿದ್ದ 3.50 ಲಕ್ಷದ ಚೆಕ್ ಸಹ ಪತ್ತೆಯಾಗಿದೆ. ಪೂರಿಯಾ ಒಡೆತನದ ಗೋದಾಮಿನಲ್ಲಿ ಅಪಾರ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿರುವುದು ಪತ್ತೆಯಾಗಿದೆ. ಗೋದಾಮನ್ನು ವಶಕ್ಕೆ ಪಡೆದು, ಬೀಗ ಹಾಕಲಾಗಿದೆ ಎಂದು ಅವರು ವಿವರ ನೀಡಿದರು.

ಈ ಹಣ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿ ಪರ ಬಳಕೆಯಾಗಲಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ.  ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್‌ಸಿಂಗ್ ರಾಥೋರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT