ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬವಣೆಯ ಬಂದ್ ಅನಿವಾರ್ಯವೆ?

Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ವಿವಿಧ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಬಂದ್ ಹೊರತಾಗಿ ನಾವು ಬೇರೆ ಆಲೋಚಿಸಲಾರೆವೇ? ಬಂದ್ ನಮಗೆ ನಾವೇ ವಿಧಿಸಿಕೊಳ್ಳುವ ಬಂಧನವಲ್ಲವೆ? ಪ್ರಜಾಪ್ರಭುತ್ವದಲ್ಲಿ ಜನರೇ ಸಾರ್ವಭೌಮರು. ಅವರಿಗೆ  ತಮ್ಮ  ಹಕ್ಕಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಭಟಿಸುವ ಹಕ್ಕಿದೆ. ಇದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆದರೆ ಜನಜೀವನ ಸ್ಥಗಿತಗೊಳಿಸಿದ ಮಾತ್ರಕ್ಕೆ ಈ ಉದ್ದೇಶ ಈಡೇರುವುದೇ? ಬಂದ್‌ನ ಅಡ್ಡ ಪರಿಣಾಮಗಳನ್ನೇಕೆ ನಾವು ಗಂಭೀರವಾಗಿ ಚಿಂತನೆಗೊಳಪಡಿಸುತ್ತಿಲ್ಲ?

ಬೆಂಗಳೂರಿನ ಕೆಂಗೇರಿಯಿಂದ ನಿತ್ಯ ಬನಶಂಕರಿಗೆ ಗಾರೆ ಕೆಲಸಕ್ಕೆ ಬರುವ ಮೂವತ್ತರ ಯುವಕನೊಬ್ಬ ಬಂದ್  ಮುನ್ನಾದಿನ ತನ್ನ ಸಹಚರನಿಗೆ ಹೇಳುತ್ತಿದ್ದ, ‘ಯಪ್ಪ ನಾಳೆ ಕೂಲಿಯಿಲ್ಲ... ಜ್ವಾಳ, ಕಲ್ಲೆಣ್ಣೆ, ಜ್ವರಕ್ಕೆ ಗುಳಿಗೆ ನಾಳಿದ್ದೇಯಾ ಏನಿದ್ರುನು’. ಆಯಾ ದಿನದ ಮಾರಾಟದ ಲಾಭದಿಂದ ಮಾತ್ರ ತುತ್ತಿನ ಚೀಲ ತುಂಬಿಸಿಕೊಳ್ಳುವ ತಳ್ಳುಗಾಡಿಯವರು, ಯಾವುದೋ ಚುನಾವಣೆ ಪ್ರಚಾರಕ್ಕೆ ಬಳಸಿದ ಹರಿದ ಬ್ಯಾನರನ್ನೇ ಸೂರಾಗಿಸಿಕೊಂಡು ಸೌತೆ, ಮಾವಿನಕಾಯಿ ಸೀಳು ಮಾರುವವರು, ಫುಟ್‌ಪಾತ್ ವ್ಯಾಪಾರಿಗಳು  ಪಡುವ ಪಾಡು ಎಂಥದ್ದು ಎಂಬುದರ ಬಗ್ಗೆ ಯೋಚಿಸಬೇಕಲ್ಲವೆ?

ಬ್ಯಾಂಕು, ಕಚೇರಿಗಳಲ್ಲಿ ನಾನಾ ಬಗೆಯ  ಅರ್ಜಿ ಸಲ್ಲಿಸಬೇಕಾದವರು,  ವಹಿವಾಟು ನಡೆಸಬೇಕಾದವರು   ಎದುರಿಸುವ  ಅಸಹಾಯಕತೆ ಅದೆಷ್ಟು? ಹಾಗೆ ನೋಡಿದರೆ ಕಾಡುವ ಸವಾಲು, ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಮತ್ತು ಜಾಗೃತಿ ಮೂಡಿಸಲು ನಾನಾ ಮಾರ್ಗಗಳಿವೆ. ನಾವು ಇಂದು ಸಂದೇಶ ಯುಗದಲ್ಲಿದ್ದೇವೆ. ಬೆಳಕಿನ ವೇಗದಷ್ಟೇ ತ್ವರಿತವಾಗಿ ಆಗುಹೋಗುಗಳು ಜನರಿಗೆ ತಲುಪುತ್ತವೆ.

ಅಂತೆಯೆ ಅವರ ಪ್ರತಿಕ್ರಿಯೆಗಳೂ ವ್ಯಕ್ತವಾದಾವು. ನೋಡಪ್ಪ ಹೀಗಿದೆ ಎಡವಟ್ಟು,  ಇದು  ಅನ್ಯಾಯ, ಇದು ಆತಂಕ, ಇದು ಮುಂದೊದಗಬಹುದಾದ ಅಪಾಯ ಮುಂತಾಗಿ ಸಾರುವ ಅನಿವಾರ್ಯವೇನೂ ಇಲ್ಲ. ಅತ್ಯಂತ ಪ್ರಬಲ ಮಾಧ್ಯಮ ಟಿ.ವಿ. ಇದೆ. ಮೊಬೈಲ್, ಐಪ್ಯಾಡ್, ಲ್ಯಾಪ್‌ಟಾಪ್ ಮೂಲಕ ಜಗತ್ತಿನಲ್ಲಿ ಯಾವುದೇ ಮೂಲೆಯಿಂದ ಇನ್ನೊಂದು  ಮೂಲೆಗೆ ಒಗ್ಗರಣೆ ಸಿಡಿಸಲಿಕ್ಕೂ ನಿರ್ದೇಶನ ಪಡೆಯಬಹುದು.

ಜಾಗೃತಿ ಮೂಡಿಸದಿದ್ದರೆ ಅವರಷ್ಟಕ್ಕೆ ಅವರು ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದುಬಿಡುತ್ತಾರೆ ಎನ್ನುವಂತಿಲ್ಲ. ನೀನು ಮೂಟೆ ಹೊರದೆ, ಕಬ್ಬಿಣ ಕುಟ್ಟದೆ, ಬೈಸಿಕಲ್ ದುರಸ್ತಿ ಮಾಡದೆ, ಬೆಸುಗೆ ಹಾಕದೆ  ಆ ದಿನ ಉಪವಾಸ ಇದ್ದುಬಿಡು ಎನ್ನುವುದು ಅಗತ್ಯವಿಲ್ಲ. ಚಾ ವಾಲಾಗೆ ‘ಈ ದಿನ ನೀನು ಗಿರಾಕಿ ಅರಸುವುದು ಬೇಡ’ ಎಂದು, ಕೆಡವಿದ ಕಟ್ಟಡದ ಅವಶೇಷಗಳನ್ನು ವಿಲೇವಾರಿ ಮಾಡುವ ಸಲುವಾಗಿ ಅವನ್ನು ಟ್ರ್ಯಾಕ್ಟರಿಗೇರಿಳಿಸುವ ಆಳುಗಳಿಗೆ ‘ಮುದ್ದೆ ಒಂದು ದಿನ ಬಿಡು’ ಎಂಬಿತ್ಯಾದಿ ಪರೋಕ್ಷ ಒತ್ತಾಯ ಅನಗತ್ಯ. 

ಬಂದ್ ಬಿಸಿ ತಟ್ಟುವುದು ಕೆಳಸ್ತರದವರಿಗೇ. ಮಧ್ಯಮ ವರ್ಗದವರು ತಮ್ಮ ಮನೆ ಸ್ವಚ್ಛಗೊಳಿಸಲು, ಅದನ್ನು ಇನ್ನಷ್ಟು ಓರಣವಾಗಿಸಲು ಬಿಡುವನ್ನು ಬಳಸಿಕೊಳ್ಳುತ್ತಾರೆ. ಸಿರಿವಂತರಂತೂ ಹೇಗೊ ಒಂದು ದಿನ ರಜೆ ಸಿಗುವುದಲ್ಲ ಎಂದು ಪ್ರೇಕ್ಷಣೀಯ ತಾಣಗಳಿಗೆ ತೆರಳಲು ಮುಂಚಿತವಾಗಿಯೇ ಯೋಜಿಸಿರುತ್ತಾರೆ. ವೃದ್ಧರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ ಯಾವುದೇ ಸಮಯದಲ್ಲಿ ವೈದ್ಯಕೀಯ ಸೇವೆ ಅವಶ್ಯವಿರುತ್ತದೆ. ಸಂಚಾರ ನಗರದ ನಾಡಿ. ಬಹುತೇಕ  ಎಲ್ಲರೂ ಸಾರಿಗೆ ಬಸ್ಸುಗಳನ್ನೇ ಪೂರ್ಣವಾಗಿ ಅವಲಂಬಿಸಿರುತ್ತಾರೆ.

ಸಾರ್ವಜನಿಕ ಗ್ರಂಥಾಲಯಗಳ ಬಾಗಿಲು ಮುಚ್ಚಿದರೆ  ಅದನ್ನು ನೆಚ್ಚಿದವರ  ಓದಿಗೆ  ಅಡ್ಡಿ. ಪರೀಕ್ಷೆಗಳು, ಸಂದರ್ಶನಗಳನ್ನು ಮುಂದೂಡಿದರೆ ವಿದ್ಯಾರ್ಥಿಗಳ, ಅಭ್ಯರ್ಥಿಗಳ ಮೇಲಾಗುವ ಮಾನಸಿಕ ತಳಮಳ ತೀವ್ರವೆ. ಇಂದಿಗೂ ಸಿನಿಮಾ ಶ್ರೀಸಾಮಾನ್ಯರ ಮನರಂಜನೆ, ಅದನ್ನು ತಪ್ಪಿಸಬಾರದು. ಸ್ವಯಂಪ್ರೇರಣೆಯ ಮಾತು ಬೇರೆ.

ಎಷ್ಟು ಮಂದಿ ಹೇಗೆ ಅನನುಕೂಲಕ್ಕೊಳಗಾದರು, ಯಾರುಯಾರಿಗೆ  ಏನೇನು ಲಭ್ಯವಾಗದೆ ತೊಂದರೆಪಡುವಂತಾಯಿತು ಎನ್ನುವುದೇ ಬಂದ್ ಯಶಸ್ಸಿನ ಮಾಪನವಾಗುವುದು ವಿಪರ್ಯಾಸ. ಇನ್ನು ಬಂದ್ ದಿನ ಶಿಸ್ತು, ಕಾನೂನು, ಶಾಂತಿ ಪಾಲನೆಗೆ ಪೊಲೀಸರು ಹರಸಾಹಸ ಪಡಬೇಕಾದುದು ಬೇರೆ. ಅಗಾಧ ಸಂಖ್ಯೆಯಲ್ಲೇ ಅವರ ನಿಯೋಜನೆ ಬೇಕಾದೀತು.

ಈಚೆಗೆ ಜಕಾರ್ತ ಪ್ರವಾಸದಲ್ಲಿದ್ದಾಗ ನಾನು ಕಂಡಿದ್ದು ಇದು. ನಮ್ಮ ತಂಡ ಭಾರತೀಯ ದೂತಾವಾಸದ ಸಭಾಂಗಣದಲ್ಲಿ ಕನ್ನಡ ಸಮ್ಮೇಳನದ ಸಮಾರೋಪದ ಬಳಿಕ, ನಾವು ತಂಗಿದ್ದ ಹೋಟೆಲ್‌ಗೆ  ಬಸ್ಸಿನಲ್ಲಿ ವಾಪಸಾಗುತ್ತಿತ್ತು. ಆ ನಡುರಾತ್ರಿಯಲ್ಲಿ  ನಿಶ್ಶಬ್ದ ಬೈಕ್  ಮೆರವಣಿಗೆ! ಅಪ್ಪಿತಪ್ಪಿಯೂ ಒಂದೂ ಬೈಕ್ ಹಾರ್ನ್ ಮಾಡಲಿಲ್ಲ. ಇದೇನು ಈ ಹೊತ್ತಿನಲ್ಲಿ ಹೆಂಗಸರು ಮಕ್ಕಳೆನ್ನದೆ ಹೀಗೆ ಬ್ಯಾನರ್ ಹಿಡಿದು ಹೊರಟಿದ್ದಾರಲ್ಲ ಎಂಬ ಕುತೂಹಲ ನಮಗೆ.

ಕತ್ತಲೆಯಲ್ಲಿ ಅದರಲ್ಲಿನ ಒಕ್ಕಣೆ ಕಾಣಿಸುತ್ತಿರಲಿಲ್ಲ. ಬಸ್ ಚಾಲಕ ‘ಮೊನ್ನೆ ತಾನೆ ಚುನಾವಣೆಯಾಗಿದೆಯಲ್ಲ... ಮತ ಎಣಿಕೆ ನ್ಯಾಯಯುತವಾಗಿ ನಡೆಸಿ ಅಂತ ಒತ್ತಾಯಿಸುವ ಸಲುವಾಗಿ ಈ ದಿಬ್ಬಣ’ ಎಂದು ವಿವರಿಸಿದ. ಅದು ಹಗಲನ್ನು ವೃಥಾ ಪೋಲಾಗಿಸದೆ, ವ್ಯವಸ್ಥೆಯ ಗಮನ ಸೆಳೆಯಲು ಇರುಳಿನಲ್ಲಿ ಆಯೋಜಿಸಿದ್ದ ಒಂದು ತಾಸಿನ ರ್‍ಯಾಲಿಯಾಗಿತ್ತಷ್ಟೆ. ಅದರ ಪ್ರಭಾವ ಮುಖ್ಯವೇ ಹೊರತು ಎಷ್ಟು ದೀರ್ಘ ಎನ್ನುವುದಲ್ಲ.

ಜಪಾನ್ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದೆ. ಜಗತ್ತಿಗೇ ಮಾದರಿಯಾಗಿದೆ. ಅಲ್ಲಿನ ನೌಕರರು ತಮ್ಮ ನಿತ್ಯದ ಕೆಲಸದ ಅವಧಿಯೊಂದಿಗೆ ಮತ್ತೂ ಒಂದು ತಾಸು ಹೆಚ್ಚುವರಿ ಕೆಲಸ ನಿರ್ವಹಿಸಿ ಬೇಡಿಕೆಗಳನ್ನು ಪ್ರಚುರಪಡಿಸುತ್ತಾರೆ. ಹಾಗಾಗಿಯೆ ಅಲ್ಲಿ ಭೀಕರ ಭೂಕಂಪ, ಸುನಾಮಿ, ನೆರೆಗಳಂಥ ಪ್ರಾಕೃತಿಕ ವಿಕೋಪಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಿದೆ.

ಮನೆಯಲ್ಲಿ ಎಂಥದ್ದೇ ಸಮಸ್ಯೆ ಇರಲಿ ನಾವು ಅಡುಗೆ ಮನೆಯನ್ನೇನೂ ಮುಚ್ಚುವುದಿಲ್ಲ!  ಗುಡಿಸುವುದು, ಸಾರಿಸುವುದು, ಬಟ್ಟೆ ಒಗೆಯುವುದು, ತರಕಾರಿ ಹೆಚ್ಚುವುದು ವಗೈರೆ ನಡೆದೇ ತೀರಬೇಕು. ಬದುಕಿನ ಯಂತ್ರ ಅಡೆತಡೆಯಾಗದೆ ಸಾಗುತ್ತಿರಬೇಕು. ಒಂದು ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮುಷ್ಕರ, ಬಂದ್, ಧರಣಿ ಯಾವುದನ್ನೂ ಇನ್ನೂ ಹೂಡಿಲ್ಲವಲ್ಲ, ಆಮೇಲೆ ನೋಡಿದರಾಯಿತು ಎನ್ನುವುದು ಆಡಳಿತ ವಲಯದ ಧೋರಣೆಯಾಗಿಬಿಟ್ಟರೆ? ಪ್ರಸಕ್ತ ವರ್ಷದ ಆರಂಭದಲ್ಲೇ ನಾನಾ ಸಂಪುಗಳನ್ನು ಕಂಡಿದ್ದಾಯಿತು.

ಲಾರಿ ವಾರವಿಡೀ ನಿಂತಿತು. ಬ್ಯಾಂಕು ಎರಡು ದಿನ ಒಟ್ಟಿಗೆ ಬಾಗಿಲು ಹಾಕಿ ಉದಾರತೆ ಪ್ರದರ್ಶಿಸಿತು. ನಾವು ಹೇಗೆ ಭಾವಿಸಿದರೂ ಮುಷ್ಕರ ಮನುಷ್ಯ ಮನಸ್ಸುಗಳ ನಡುವಿನ ಸಂಘರ್ಷ. ಇದು ಹಗುರಾಗುವುದು ಅಸಾಧ್ಯವೇನಲ್ಲ. ಎಲ್ಲ ನ್ಯಾಯಯುತ ಅಹವಾಲುಗಳಿಗೂ ಪರಿಹಾರವಿದೆ. ಮನವರಿಕೆಯಾಗಿಸುವ, ಕೊಡು-ಪಡೆವ ಪ್ರವೃತ್ತಿ ಅಗತ್ಯವಷ್ಟೆ.

ಈ ನಿಟ್ಟಿನಲ್ಲಿ ವಿಚಾರವಂತರು, ಮನೋವಿಜ್ಞಾನಿಗಳು  ಮಾರ್ಗದರ್ಶನ ನೀಡಬೇಕು. ಏನೇ ಬೇಡಿಕೆಗಳಿರಲಿ, ಜನಜಾಗೃತಿ  ಮೂಡಿಸುವುದಿರಲಿ  ಸಾಂಕೇತಿಕವಾಗಷ್ಟೇ ಪ್ರತಿಭಟನೆ ಯುಕ್ತ. ‘ಲಂಚ್  ಅವರ್‌’ನಲ್ಲಿ  ಸಂಪು ಕೈಗೊಂಡರೂ ಆಯಿತು. ಇಡೀ ದಿನ ಬಂದ್ ತರವಲ್ಲ. ಆಗ  ನಿಸ್ಸಂದೇಹವಾಗಿ ಸರ್ವರ ಸಹಕಾರವೂ ದೊರೆಯುತ್ತದೆ. ಸಾರಾಂಶವಿಷ್ಟೆ. ಪ್ರತಿಭಟಿಸೋಣ, ನಮ್ಮನ್ನು ನಾವೇ ಕಟ್ಟಿಹಾಕಿಕೊಳ್ಳದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT