ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬವಣೆ ನೀಗಿಸುವ ಉಬನವಣೆ

Last Updated 30 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ನವಣೆ ಅನ್ನ ಉಂಡವನು ಹೈವಾನನಾಗಿರುವನು’ ಎನ್ನುವುದು ಉತ್ತರ ಕರ್ನಾಟಕದ ಪ್ರಚಲಿತ ಗಾದೆಮಾತು. ಆದರೆ ಇದರ ಅನ್ನ ಉಣ್ಣಲು ಅದರ ಕೃಷಿಯೇ ಇಲ್ಲವಾಗಿಬಿಟ್ಟಿದೆ. ಕೃಷಿಕನ ಕೈತುಂಬಿಸುವುದು ಎನ್ನಲಾಗುವ ವಾಣಿಜ್ಯ ಬೆಳೆಗಳಾದ ಕಬ್ಬು, ಮೆಕ್ಕೆಜೋಳ ತಂಬಾಕು ಇವೆಲ್ಲಾ ಕಿರುಧಾನ್ಯವಾಗಿರುವ ನವಣೆ ಕ್ಷೇತ್ರವನ್ನು ಆಕ್ರಮಿಸಿಬಿಟ್ಟಿವೆ. ಹತ್ತಿ, ಸೋಯಾ, ಮುಸುಕಿನ ಜೋಳ ಮುಂತಾದ ವಾಣಿಜ್ಯ ಬೆಳೆಗಳಿಗೆ ಜನಪ್ರಿಯತೆ ಹೆಚ್ಚುತ್ತಿದೆ.

ಅಷ್ಟೇ ಅಲ್ಲದೇ ಈಗ ಎಲ್ಲಿ ನೋಡಿದರೂ ಹೈಬ್ರಿಡ್ ತಳಿಗಳ ಕಾರುಬಾರು. ಇದರ ಜೊತೆಗೆ ನವಣೆಯನ್ನು ಮಿಶ್ರಬೆಳೆಯಾಗಿ ಬೆಳೆಯದೇ ಇರುವುದು, ಸಂಸ್ಕರಣೆ ಮಾಡಲು ಹೊಸ ಪ್ರಯೋಗಗಳ ಕೊರತೆ ಇತ್ಯಾದಿಗಳಿಂದಲೂ ನವಣೆ ತೆರೆಮರೆಗೆ ಸರಿಯುತ್ತಿದೆ. ಉತ್ತರ ಕರ್ನಾಟಕದ ಪ್ರಮುಖ ಹಬ್ಬವಾದ ಶೀಗೆ ಹುಣ್ಣಿಮೆಯ ಹುರಕ್ಕಿ ಹೋಳಿಗೆ ಈ ನವಣಿಯ ಖಾದ್ಯ ಬಹಳ ಪ್ರಸಿದ್ಧ. ಆದರೆ ಹಬ್ಬದ ಸಮಯದಲ್ಲೂ ನವಣೆಯನ್ನು ಹುಡುಕಿ ಹೋಗುವ ಪ್ರಸಂಗ ಎದುರಾಗಿದೆ. ಉತ್ತಮ ಪೌಷ್ಟಿಕ ಮೌಲ್ಯ ಹೊಂದಿದ್ದರೂ ಈ ಧಾನ್ಯದ ಬಳಕೆ ಕಡಿಮೆ. ಇದಕ್ಕೆ ಕಾರಣ ಉತ್ತಮ ಮಾರುಕಟ್ಟೆ ಮತ್ತು ಬೆಂಬಲಬೆಲೆ ಸಿಗದೇ ಇರುವುದು. ‘ಬಡವರ ಆಹಾರ’  ಎಂಬ ಭಾವನೆ ಕೂಡ ಇರುವುದರಿಂದ ಇದು  ಅವಸಾನದ ಅಂಚನ್ನು ಮುಟ್ಟುತ್ತಿವೆ.

ಹೀಗೆ ತೆರೆಮರೆ ಸರಿಯುತ್ತಿರುವ ಸಿರಿಧಾನ್ಯ ನವಣೆಯನ್ನು ಮತ್ತೆ ಬೆಳಕಿಗೆ ತರುವ  ಕೆಲಸವನ್ನು  ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿಯ ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಮಾಡುತ್ತಿದ್ದಾರೆ. ಸಾವಯವ ಕೃಷಿಕರಾದ ಇವರು ತಮ್ಮ ಒಟ್ಟು ಜಮೀನಿನಲ್ಲಿ ಕಾಲುಭಾಗ ಸಿರಿಧಾನ್ಯಗಳನ್ನು ಪ್ರತಿ ವರ್ಷವೂ ಬೆಳೆಯುತ್ತಾರೆ. 11 ಎಕರೆ ಪೈಕಿ 5 ಎಕರೆಯಲ್ಲಿ ದೇಶಿ ಜೋಳ ಬೆಳೆದಿರುವ ಇವರು  15 ಗುಂಟೆಯಲ್ಲಿ ಉಬನವಣೆಯನ್ನು  ಬೆಳೆಯುತ್ತಿದ್ದಾರೆ.

ಕೃಷಿ ಹೀಗೆ
ನವಣೆ ಅಲ್ಪಾವಧಿ ಬೆಳೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಿಮೆ ಆಳದ, ಹೆಚ್ಚು ಫಲವತ್ತತೆಯಿಲ್ಲದ ಮಣ್ಣಿನಲ್ಲಿ ಮತ್ತು ಗುಡ್ಡ-ಗಾಡು ಪ್ರದೇಶಗಳಲ್ಲಿ ಸಹ, ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಧಾನ್ಯ. ಕೀಟ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದೆ. ಕಲ್ಲಪ್ಪನವರು ಹೊಲವನ್ನು ಹದ ಮಾಡಿ ಬೀಜೋಪಚಾರ ಮಾಡಿ ನವಣೆ ಬೀಜವನ್ನು ಬಿತ್ತಿದ್ದಾರೆ. ಒಮ್ಮೆ ನೀರುಣಿಸಿರುವ ನವಣಿಗೆ ಯಾವುದೇ ರೋಗಬಾಧೆ ಬಂದಿಲ್ಲ. ‘ಇದು ತುಂಬಾ ಸಣ್ಣ ಕಾಳಾಗಿದ್ದು ನುಣಪಾದ ಹೊರಮೈ ಇರುವ ಕಾರಣದಿಂದ ಕೀಟಗಳಿಗೆ ತತ್ತಿ ಇಡಲು ಆಗುವುದಿಲ್ಲ.

ಆದ್ದರಿಂದ ಇದಕ್ಕೆ ಹುಳುಗಳ ಬಾಧೆ ಇಲ್ಲ. ಇದೇ ಕಾರಣಕ್ಕಾಗಿ ದೀರ್ಘಕಾಲ ದವರೆಗೂ ಸಂಗ್ರಹಿಸಿಡಬಹುದಾಗಿದೆ’ ಎನ್ನುತ್ತಾರೆ ಕಲ್ಲಪ್ಪ. ಇತ್ತೀಚಿಗೆ ಸಿರಿಧಾನ್ಯ ಬೆಳೆಯುವ ಕ್ಷೇತ್ರ ಕಡಿಮೆ ಯಾದ್ದರಿಂದ ಯಾರು ಸಿರಿಧಾನ್ಯಗಳನ್ನು ಬೆಳೆಯುತ್ತಾರೋ ಆ ಬೆಳೆಗೆ ಪಕ್ಷಿಗಳ ಕಾಟ ಜಾಸ್ತಿ. ಆದರೆ ಎಲ್ಲಾ ಪ್ರಕಾರ ಭೂಮಿಗೂ ಉತ್ತಮ ಇಳುವರಿ ನೀಡಬಲ್ಲ ಈ ಊಬನವಣಿ ಹಕ್ಕಿ ತಿನ್ನುವುದಿಲ್ಲ. ಕಾರಣ ಇದರಲ್ಲಿಯ ಊಬು ಕಣ್ಣಿಗೆ ಚುಚ್ಚುವುದರಿಂದ ಇದರ ಸನಿಹ ಸುಳಿಯುವುದಿಲ್ಲ.  

ಕೊಯ್ಲು ಮತ್ತು ಇಳುವರಿ‌
ಅಕ್ಟೋಬರ್ ಕೊನೆಯಲ್ಲಿ ಉಬನವಣೆ ಬಿತ್ತಿದರೆ 3 ರಿಂದ 4 ತಿಂಗಳಿಗೆ ಫಸಲು ನೀಡುತ್ತದೆ. ಇದರ ಜೊತೆ ಸೋಯಾ, ಶೇಂಗಾವನ್ನು ಮಿಶ್ರಬೆಳೆಯಾಗಿಯೂ ಬೆಳೆಯಬಹುದು. ‘ನವಣೆಯನ್ನು ಕೊಯ್ಲು ಮಾಡುವುದು ಸುಲಭ. ತೆನೆಗಳನ್ನು ಗಟ್ಟಿಯಾಗಿ ಒಂದು ಚೀಲದಲ್ಲಿ ಕಟ್ಟಿ ಒಂದು ರಾತ್ರಿ ಇಡಬೇಕು. ಇದರಿಂದ ಅದರಲ್ಲಿಯ ಅರ್ಧ ಭಾಗದಷ್ಟು ಕಾಳು ಬಲಿತಿರುತ್ತವೆ. ಇನ್ನು ಉಳಿದ ಕಾಳುಗಳನ್ನು ಲಘುವಾಗಿ ಬಡಮನಿಯಲ್ಲಿ ಬಡಿಯಬೇಕು.

ಆಗ ಉದುರಿದ ನವಣೆಯನ್ನು ಗಾಳಿಗೆ ತೂರಿದಾಗ ಶುದ್ಧ ನವಣಿ ಸಿಗುವುದು’ ಎನ್ನುತ್ತಾರೆ ಕಲ್ಲಪ್ಪ ನೇಗಿನಹಾಳ. ಇನ್ನು ನವಣೆಯ ಹುಲ್ಲುಗಳು ಜಾನುವಾರುಗಳಿಗೆ ಉತ್ತಮ ಮೇವಾಗಿದ್ದು ಇದರಿಂದ ಹೈನುಗಾರಿಕೆಗೂ ಸಹಾಯ ವಾಗುತ್ತದೆ. ಕಲ್ಲಪ್ಪನವರು 15 ಗುಂಟೆಯಿಂದ 1.5  ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಪ್ರತಿ ಕ್ವಿಂಟಾಲಿಗೆ ಮಾರುಕಟ್ಟೆಯಲ್ಲಿ 3,200 ರೂಪಾಯಿ ಬೆಲೆ ಇದೆ.

ಆಯುರ್ವೇದದಲ್ಲಿ ನವಣೆ
ಸಂಸ್ಕೃತದಲ್ಲಿ ಪ್ರಿಯಾಂಗು ಎಂದು ಕರೆಯಲಾಗುವ ನವಣೆ ನೋವು ನಿವಾರಕವಾಗಿ  ಬಳಕೆಯಾಗುವುದು. ಪ್ರೊಟೀನ್ 11 ಲಿಪಿಡ್ 4 ಕಾರ್ಬೋಹೈಡ್ರೇಟ್ 70 ರಷ್ಟು ಪ್ರಮಾಣ ಹೊಂದಿದೆ. ನಾರಿನಾಂಶ ಜಾಸ್ತಿ ಹೊಂದಿರುವುದರಿಂದ ಮಲಬದ್ಧತೆ ತಡೆಯುವುದು. ಮೇಧುಮೇಹಿಗಳಿಗೂ ಇದು ವರದಾನ. ಇದರಲ್ಲಿರುವ ಸಿರೋಟಿನ ಅಂಶದಿಂದ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಸಹಕಾರಿ. ಹಾಗೆಯೇ ಕುಸ್ತಿ ಪಟುಗಳ ನೆಚ್ಚಿನ ಆಹಾರ ಇದಾಗಿದೆ ಎನ್ನುತ್ತಾರೆ ಆಯುರ್ವೇದ ವೈದ್ಯರಾದ ಡಾ.ಶಿವಾನಂದ ಕಳಸಣ್ಣವರ. ಹಸಿವೆ ತಡೆಯುವ ಶಕ್ತಿ ಹೊಂದಿರುವ ನವಣೆ, ಕಡಿಮೆ ನೀರಿನಿಂದಲೂ ಬೆಳೆಯಬಹುದು.
ಸಂಪರ್ಕಕ್ಕೆ 9980634062.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT