ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗಳಲ್ಲಿ ಪಾಲನೆಯಾಗದ ಸುರಕ್ಷತಾ ಕ್ರಮ

Last Updated 16 ಏಪ್ರಿಲ್ 2014, 19:53 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಯಾಣಿಕರ ಸುರಕ್ಷತೆಗಾಗಿ ತುರ್ತು ನಿರ್ಗಮನ ದ್ವಾರಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂಬ ರಾಜ್ಯ ಸರ್ಕಾರದ ಆದೇಶ ಬಹುತೇಕ ಖಾಸಗಿ ಬಸ್‌ಗಳಲ್ಲಿ ಈವರೆಗೂ ಪಾಲನೆಯಾಗಿಲ್ಲ.

2013ರಲ್ಲಿ ಸಂಭವಿಸಿದ್ದ ಜಬ್ಬಾರ್‌ ಟ್ರಾವೆಲ್ಸ್‌ ಮತ್ತು ನ್ಯಾಷನಲ್‌ ಟ್ರಾವೆಲ್ಸ್‌ನ ವೋಲ್ವೊ ಬಸ್‌ ದುರಂತದಲ್ಲಿ 52 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದರು.

ಆ  ದುರ್ಘಟನೆಗಳಿಂದ ಎಚ್ಚೆತ್ತುಕೊಂಡಿದ್ದ ಸರ್ಕಾರ ಐಷಾರಾಮಿ ಬಸ್‌ಗಳು ಸೇರಿದಂತೆ ಎಲ್ಲಾ ಬಗೆಯ ಬಸ್‌­ಗಳಲ್ಲಿ ತುರ್ತು ನಿರ್ಗಮನ ದ್ವಾರ ಅಳವಡಿಸ­ಬೇಕು ಮತ್ತು ಇತರೆ ಸುರಕ್ಷತಾ ಕ್ರಮಗಳನ್ನು ಪಾಲಿಸ­ಬೇ­ಕೆಂದು 2013ರ ನ.16ರಂದು ಆದೇಶ ಹೊರ­ಡಿಸಿತ್ತು.

ಐಷಾರಾಮಿ ಬಸ್‌ಗಳ ಹಿಂಭಾಗ ಅಥವಾ ಬಲ ಭಾಗದ ಕಿಟಕಿ ಗಾಜು ತೆಗೆಸಿ -ತುರ್ತು ನಿರ್ಗಮನ ದ್ವಾರಗಳನ್ನು ಅಳವಡಿಸಬೇಕೆಂದು ಹೇಳಿದ್ದ ಸರ್ಕಾರ ಆ ಪ್ರಕ್ರಿಯೆಗೆ ಮೂರು ತಿಂಗಳ ಗಡುವು ನೀಡಿತ್ತು. ಆದರೆ, ಖಾಸಗಿ ಬಸ್‌ಗಳ ಮಾಲೀಕರ ಮನವಿ ಮೇರೆಗೆ ಸರ್ಕಾರ ಮೂರ್ನಾಲ್ಕು ಬಾರಿ ಗಡುವು ವಿಸ್ತರಿಸಿದೆ.

ಒತ್ತಡಕ್ಕೆ ಮಣಿದು ಗಡುವು ವಿಸ್ತರಿಸಿಲ್ಲ: ‘ಖಾಸಗಿ ಬಸ್‌ಗಳ ಮಾಲೀಕರ ಒತ್ತಡಕ್ಕೆ ಮಣಿದು ಗಡುವು ವಿಸ್ತರಿಸಿಲ್ಲ. ಖಾಸಗಿ ಬಸ್‌ಗಳ ಮರುವಿನ್ಯಾಸ ಮಾಡಲು ಮಾಲೀಕರಲ್ಲಿ ಸ್ವಂತ ಕಾರ್ಯಾಗಾರ ಇಲ್ಲ. ಹೀಗಾಗಿ ತುರ್ತು ನಿರ್ಗಮನ ದ್ವಾರ ಅಳವಡಿಕೆಗೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸುಮಾರು 500 ಹವಾನಿಯಂತ್ರಿತ ಐಷಾರಾಮಿ ಬಸ್‌ಗಳಿವೆ. ಆ ಎಲ್ಲಾ ಬಸ್‌ಗಳಿಗೆ ಈಗಾಗಲೇ ತುರ್ತು ನಿರ್ಗಮನ ದ್ವಾರಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದ್ದಾರೆ.

ಆರು ತಿಂಗಳಲ್ಲಿ ಮೂರು ದುರಂತ: ಕಳೆದ ಆರು ತಿಂಗಳಲ್ಲಿ ಮೂರು ಬಸ್‌ ದುರಂತಗಳು ಸಂಭವಿಸಿವೆ. ಆಂಧ್ರಪ್ರದೇಶದ ಪಾಲೆಂ ಬಳಿ 2013ರ ಅ.30ರಂದು ಜಬ್ಬಾರ್‌ ಟ್ರಾವೆಲ್ಸ್‌ನ ವೋಲ್ವೊ ಬಸ್‌ ಮತ್ತು ಹಾವೇರಿಯ ಕುಣಿಮೆಳ್ಳಿಹಳ್ಳಿ ಸಮೀಪ ನ.14ರಂದು ನ್ಯಾಷನಲ್‌ ಟ್ರಾವೆಲ್ಸ್‌ನ ವೋಲ್ವೊ ಬಸ್‌ ಅಪಘಾತ­ಕ್ಕೀ­ಡಾಗಿತ್ತು. ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸಿದ ಆ ಎರಡು ಬಸ್‌ ದುರಂತಗಳಲ್ಲಿ 52 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದರು.

ಮಂಗಳವಾರ (ಏ.15) ರಾತ್ರಿ ಚಿತ್ರದುರ್ಗ ಜಿಲ್ಲೆಯ ಮೇಟಿಕುರ್ಕೆ ಬಳಿ ಎಸ್‌ಪಿಆರ್‌ ಟ್ರಾವೆಲ್ಸ್‌ನ ಸ್ಲೀಪರ್‌ ಬಸ್‌ ಅಪಘಾತಕ್ಕೀಡಾಗಿ ಆರು ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.

ಸಿಬ್ಬಂದಿ ಕೊರತೆಯಿಂದ ಅಡ್ಡಿ
ಇಲಾಖೆಯಲ್ಲಿ ಸುಮಾರು 300 ಮಂದಿ ಸಿಬ್ಬಂದಿ ಕೊರತೆ ಇದೆ. ಇದರಿಂದ ಬಸ್‌ಗಳ ತಪಾಸಣಾ ಕಾರ್ಯಕ್ಕೆ ತೊಂದರೆಯಾಗಿದೆ. ಲಭ್ಯ ಸಿಬ್ಬಂದಿಯೇ ಸುರಕ್ಷತಾ ನಿಯಮಗಳನ್ನು ಪಾಲಿಸದ ಬಸ್‌ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ದಂಡ ವಿಧಿಸುತ್ತಿದ್ದಾರೆ. ಜತೆಗೆ ಅಂತಹ ಬಸ್‌ಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ.
–ಕೆ.ಅಮರನಾರಾಯಣ, ಸಾರಿಗೆ ಇಲಾಖೆ ಆಯುಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT