ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗಾಗಿ ವಿದ್ಯಾರ್ಥಿಗಳ ದಿಢೀರ್‌ ಪ್ರತಿಭಟನೆ

ಸುಮಾರು ಒಂದೂವರೆ ಗಂಟೆ ವಾಹನಗಳ ಸಂಚಾರಕ್ಕೆ ತೊಂದರೆ
Last Updated 22 ಆಗಸ್ಟ್ 2014, 10:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಸ್‌ಗಳಲ್ಲಿ ವಿದ್ಯಾ­ರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ, ತಂಗುದಾಣದಲ್ಲಿ ಬಸ್‌ ನಿಲುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಎಸ್‌ಜೆಸಿಐಟಿ ಕಾಲೇಜಿನ ವಿದ್ಯಾರ್ಥಿ­ಗಳು ಕಾಲೇಜಿನ ಮುಂಭಾಗದಲ್ಲಿ ಗುರುವಾರ ಸಂಜೆ ದಿಢೀರ್‌ ರಸ್ತೆ ತಡೆ ನಡೆಸಿದರು.

ರಸ್ತೆ ಮಧ್ಯೆಯೇ ಕೂತು ವಿದ್ಯಾರ್ಥಿ­ಗಳು ಪ್ರತಿಭಟನೆ ನಡೆಸಿದ್ದರಿಂದ ಸುಮಾರು 1 ಕಿ.ಮೀ.ಗೂ ಹೆಚ್ಚು ದೂರ­ದ­ವರೆಗೆ ಬಸ್‌ಗಳು ಸೇರಿದಂತೆ ಇತರ ವಾಹನಗಳು ಸಾಲಾಗಿ ನಿಂತಿದ್ದವು.

ಸಂಜೆ 5.30ರಿಂದ 7ರ ವರೆಗೆ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಲ್ಲದೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪ­ಡಿಸಿದರು. ‘ಬಸ್‌ಪಾಸ್‌ ಇದ್ದರೂ ಬಸ್‌ಗಳಲ್ಲಿ ಹತ್ತಿಸಿಕೊಳ್ಳುತ್ತಿಲ್ಲ. ಸರ್ಕಾರಿ ಬಸ್‌ಗಳನ್ನು ಹತ್ತದೇ ಬೇರೆ ಯಾವ ಬಸ್‌ಗಳಲ್ಲಿ ಪ್ರಯಾಣಿಸ­ಬೇಕು? ಸರ್ಕಾರವೇ ನೀಡಿದ ಪಾಸ್‌ ತೊಗೊಂಡು ಏನು ಮಾಡಬೇಕು’ ಎಂದು ಅವರು ಪ್ರಶ್ನಿಸಿದರು.

‘ಬೆಳಿಗ್ಗೆ ಮತ್ತು ಸಂಜೆ ವೇಳೆ ಬಸ್‌­ಗಳನ್ನು ಹತ್ತಲು ಹರಸಾಹಸ ಪಡಬೇಕಾ­ಗುತ್ತದೆ. ಗ್ರಾಮದಿಂದ ಸಮರ್ಪಕವಾದ ಬಸ್‌ ಸೌಕರ್ಯವಿಲ್ಲ. ಕಾಲೇಜು ತರಗತಿ ಮುಗಿಸಿಕೊಂಡು ಮನೆಗೆ ಮರಳ­ಬೇಕೆಂದರೂ ಬಸ್‌ಗಳು ನಿಲುಗಡೆ ಆಗುವುದಿಲ್ಲ. ಸಂಜೆ 5 ಗಂಟೆಯಿಂದ ಕಾದರೂ ಸರಿಯಾದ ಸಮಯಕ್ಕೆ ಬಸ್‌ ಬಾರದಿದ್ದರೆ, ರಾತ್ರಿ 9 ಗಂಟೆ ನಂತರವೇ ಮನೆಗೆ ಹೋಗಬೇಕಾದಂತಹ ಪರಿಸ್ಥಿತಿ­ಯಿದೆ. ನಮ್ಮ ಪಾಡು ಯಾರೂ ಕೇಳು­ವ­ವರೇ ಇಲ್ಲ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಗುಂಪುಗುಂಪಾಗಿ ನಿಂತಿರು­ವುದು ಕಂಡು ಚಾಲಕರು ಬಸ್‌ ನಿಲ್ಲಿಸದೇ ವೇಗವಾಗಿ ಚಾಲನೆ ಮಾಡು­ತ್ತಾರೆ. ಬಸ್‌ ನಿಲುಗಡೆ ಕೋರಿ ಕೈ ಮಾಡಿದರೂ ಬಸ್ ನಿಲ್ಲಿಸಲಾಗು­ವುದಿಲ್ಲ. ನಾವು ಬಸ್‌ಪಾಸ್‌ ಹೊಂದಿರುವುದು ಮತ್ತು ಬಸ್‌ಗಾಗಿ ಕಾಯುವುದು ತಪ್ಪೇ’ ಎಂದು ವಿದ್ಯಾ­ರ್ಥಿ­ಗಳು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುವುದು ಕಂಡು ಸಮೀಪದ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳು ಸಹ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದರು.
ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಪ್ರತಿಭ­ಟ­ನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಕೆಎಸ್‌ಆರ್‌ಟಿಸಿ ಅಧಿಕಾರಿಗ­ಳೊಂದಿಗೆ ಚರ್ಚಿಸಿ ಬಸ್‌ನ ವ್ಯವಸ್ಥೆ ಮಾಡ­ಲಾಗುವುದೆಂದು ಪೊಲೀಸರು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆ­ಯಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT