ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಪ್ರಯಾಣ ದರ ಇಳಿಕೆಗೆ ಹಿಂದೇಟು

Last Updated 31 ಅಕ್ಟೋಬರ್ 2014, 20:02 IST
ಅಕ್ಷರ ಗಾತ್ರ

ಬೆಂಗಳೂರು: 12 ದಿನಗಳ ಅಂತರದಲ್ಲಿ ಎರಡನೆ ಬಾರಿಗೆ ಡೀಸೆಲ್‌ ದರ ಇಳಿಕೆಯಾಗಿದ್ದರೂ, ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳು ಪ್ರಯಾಣ ದರ ಇಳಿಸುವ ಸಾಧ್ಯತೆ ಇಲ್ಲ. ಅಕ್ಟೋಬರ್‌ 19ರಂದು ಪ್ರತಿ ಲೀಟರ್‌ ಡೀಸೆಲ್‌ ದರದಲ್ಲಿ ₨ 4ರಷ್ಟು ಇಳಿಕೆ ಮಾಡಲಾಗಿತ್ತು. ಶನಿವಾರ ಮತ್ತೆ ದರ ಇಳಿಕೆ ಮಾಡಲಾಗಿದೆ. 12 ದಿನಗಳ ಅಂತರದಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರದಲ್ಲಿ ₨ 6ಕ್ಕೂ ಹೆಚ್ಚು ಇಳಿಕೆ ಆಗಿದೆ.

ಡೀಸೆಲ್‌ ದರ ನಿರಂತರವಾಗಿ ಇಳಕೆ ಆಗುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು  ಬೆಂಗಳೂರು ಮಹಾನಗರ ಸಾರಿಗೆ ನಿಗಮಗಳು ಬಸ್‌ ಪ್ರಯಾಣ ದರ ಕಡಿತ ಮಾಡಬಹುದು ಎಂದು ಸಾರ್ವಜನಿಕರು ನಿರೀಕ್ಷಿಸಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇದೆ.

ದರ ಇಳಿಕೆ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್‌ ಕುಮಾರ್‌ ಕಟಾರಿಯಾ, ‘ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನೂ ನಷ್ಟದಲ್ಲೇ ಇದೆ. ಒಂದೂವರೆ ವರ್ಷದ ಹಿಂದೆ ಬಸ್‌ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಅಂದಿನಿಂದ ಹಲವು ಬಾರಿ ಡೀಸೆಲ್‌ ದರ ಏರಿಕೆ ಆಗಿತ್ತು. ಆದರೆ, ಪ್ರಯಾಣ ದರ ಹೆಚ್ಚಿಸಿರಲಿಲ್ಲ. ಈಗ ದಿಢೀರನೆ ದರ ಇಳಿಕೆ ಸಾಧ್ಯವಿಲ್ಲ’ ಎಂದರು.

ಚರ್ಚಿಸಿ ನಿರ್ಧಾರ: ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಕುರಿತು ಅಧಿಕಾರಿಗಳ ಜೊತೆ ಸೋಮವಾರ ಚರ್ಚೆ ನಡೆಸುತ್ತೇನೆ. ಆ ಬಳಿಕ ದರ ಇಳಿಕೆ ಸಾಧ್ಯತೆ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT