ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಸಮಸ್ಯೆಗಳು ಬಗೆ ಬಗೆ

Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬಸ್‌ ಸೌಕರ್ಯವಿಲ್ಲ
ಜೆ.ಪಿ.ನಗರದ ಒಂದು, ಎರಡು ಮತ್ತು ಐದನೆಯ ಹಂತಗಳಿಂದ ಬಿ.ಟಿ.ಎಂ. ಲೇ ಔಟ್‌, ಸಿಲ್ಕ್ ಬೋರ್ಡ್‌ ಕಡೆಗೆ ಹಾಗೂ ಬನಶಂಕರಿ, ಶ್ರೀನಗರ, ಕೆಂಗೇರಿ ಕಡೆಗೆ ಹೋಗಲು ನೇರ ಬಸ್‌ ಸೌಕರ್ಯ ಇರುವುದಿಲ್ಲ. ಜೆ.ಪಿ.ನಗರ 24ನೇ ಮುಖ್ಯರಸ್ತೆ ಮತ್ತು 15ನೇ ಕ್ರಾಸ್‌ ಜಂಕ್ಷನ್‌ನಲ್ಲಿ ಅಂಡರ್‌ ಪಾಸ್‌ ನಿರ್ಮಾಣವಾಗುವುದಕ್ಕೆ ಮುಂಚೆ ಬನಶಂಕರಿ ಡಿಪೋದಿಂದ ಜೆ.ಪಿ.ನಗರದ 15ನೇ ಕ್ರಾಸ್‌ ರಿಂಗ್‌ ರೋಡ್‌ ಮೂಲಕ ಹಲವು ಬಸ್ಸುಗಳು ಬಂದು ಹೋಗುತ್ತಿದ್ದವು.

ಅಂಡರ್‌ ಪಾಸ್‌ ನಿರ್ಮಾಣ ಕಾರ್ಯ ಮುಗಿದು ಈಗಾಗಲೇ ಹಲವು ವರ್ಷಗಳು ಕಳೆದಿದ್ದರೂ ಹಿಂದೆ ಇದ್ದ ಬಸ್‌ಗಳ ಸೌಕರ್ಯವನ್ನು ಪುನರಾರಂಭಿಸಿಲ್ಲ. ಇದರಿಂದ ಇಲ್ಲಿನ ಸಾಮಾನ್ಯ ಜನತೆ ಹಾಗೂ ಹಿರಿಯ ನಾಗರಿಕರಿಗೆ ತುಂಬ ಅನಾನುಕೂಲವಾಗಿದೆ. ಈಗ ಸದರಿ ಪ್ರದೇಶಗಳಿಗೆ ತೆರಳಲು ಜಯನಗರ ಐದನೇ ಬ್ಲಾಕಿಗೆ ಹೋಗಿ ಬೇರೆ ಬಸ್ಸುಗಳಲ್ಲಿ ಪ್ರಯಾಣಿಸಬೇಕು. ಇದು ಬಡ ಜನತೆಗೆ ತ್ರಾಸದಾಯಕವಾಗಿದ್ದು, ಎರಡು ಬಾರಿ ಟಿಕೆಟ್‌ಗಳನ್ನು ಕೊಳ್ಳಬೇಕಾಗಿದೆ. ಜಂಬೂಸವಾರಿ ದಿಣ್ಣೆ ಪ್ರದೇಶದಿಂದ ಪ್ರಯಾಣಿಸುವವರೂ ಜಯನಗರ ಐದನೆಯ ಬ್ಲಾಕ್‌ಗೆ ಬಂದು ಪ್ರಯಾಣ ಮುಂದುವರಿಸಬೇಕಾದ ಪರಿಸ್ಥಿತಿ ಇದೆ.

ಇದಕ್ಕೆ ಪರಿಹಾರವಾಗಿ ಬನಶಂಕರಿ ಡಿಪೋ ಮತ್ತು ಜಂಬು ಸವಾರಿ ಡಿಪೋದಿಂದ ಹೊರಡುವ ಕೆಲವು ಬಸ್ಸುಗಳನ್ನು ಜೆ.ಪಿ.ನಗರದ 15ನೇ ಕ್ರಾಸ್‌ನ ರಿಂಗ್‌ರೋಡ್‌ ಮುಖಾಂತರ ನೇರ ಪ್ರಯಾಣಿಸುವ ವ್ಯವಸ್ಥೆ ಮಾಡಲು ಬಿ.ಎಂ.ಟಿ.ಸಿ. ಅಧಿಕಾರಿಗಳನ್ನು ಕೋರುತ್ತೇನೆ.
– ಜಿ.ಕೆ.ನಟರಾಜ್‌

ಏನೀ ದುರವಸ್ಥೆ?

ಬಾಲಗಂಗಾಧರನಾಥ ಸ್ವಾಮಿ ಫ್ಲೈ ಓವರ್‌ ಕೆಳಗಿನ ರಸ್ತೆ, ಮೈಸೂರು ಸರ್ಕಲ್‌ ಕಡೆಗೆ ಬರುವ ಎಡಭಾಗದ ರಸ್ತೆ ಕಳೆದ ಎರಡೂವರೆ ವರ್ಷಗಳಿಂದ ಹಾಗೆಯೇ ಇದೆ. ಈ ರಸ್ತೆಯಲ್ಲಿ ಸಾಕಷ್ಟು ವಾಹನ ದಟ್ಟಣೆ ಇದೆ. ರಸ್ತೆ ಹದಗೆಟ್ಟಿರುವುದರಿಂದ ಜನ ದೂಳು ಕುಡಿದು ಆರೋಗ್ಯ ಹಾಳುಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟವರು ಇನ್ನಾದರೂ ರಸ್ತೆ ದುರಸ್ತಿಗೊಳಿಸಿ ಜನ ನೆಮ್ಮದಿಯಿಂದ ಉಸಿರಾಡಲು ಅನುಕೂಲ ಮಾಡಿಕೊಡಬೇಕು.

ಹಾಗೆಯೇ, ಬಸವೇಶ್ವರನಗರ ಬಸ್‌ ಸ್ಟಾಪ್‌ನಲ್ಲಿ ‘181 ಸಿ’ ಬಸ್‌ ನಿಲ್ಲಿಸುವುದಿಲ್ಲ. ಬದಲಾಗಿ ಸರ್ಕಲ್‌ ಹತ್ತಿರ ನಿಲ್ಲಿಸುತ್ತಾರೆ. ಈ ಬಗ್ಗೆ ಬಸ್ಸಿನ ಡ್ರೈವರ್‌–ಕಂಡಕ್ಟರ್‌ ಇಬ್ಬರನ್ನೂ ವಿಚಾರಿಸಿದರೆ, ಅಲ್ಲಿ ಜನ ಕ್ಯೂ ನಿಂತಿರುತ್ತಾರೆ ಎಂದು ಉಡಾಫೆಯ ಉತ್ತರ ನೀಡುತ್ತಾರೆ. ಮೊದಲಿಗೆ ‘89 ಕೆ’ ಬಸ್ ಬರುತ್ತಿತ್ತು. ಇಲ್ಲಿಂದ ಮಾರುಕಟ್ಟೆಗೆ ನಿಗದಿತ ಸಮಯಕ್ಕೆ ಹೋಗುತ್ತಿತ್ತು. ಆ ಬಸ್‌ ಬಾರದೆ ಮೂರ್‍್ನಾಲ್ಕು ವರ್ಷಗಳಾದವು. ಈಗ ‘ಕೆ 3’ ಬಸ್‌ ಬರುತ್ತದೆ. ಆದರೆ, ಆ ಬಸ್ ಸಮಯಕ್ಕೆ ಸರಿಯಾಗಿ ಹೊರಡುವುದಿಲ್ಲ. ಡ್ರೈವರ್, ಕಂಡಕ್ಟರ್‌ ಆರಾಮವಾಗಿ ತಿಂಡಿ ತಿಂದು, ಕಾಫಿ ಕುಡಿದು ಆಮೇಲೆ ಹೊರಡುತ್ತಾರೆ. ಇದರಿಂದಾಗಿ ಕಚೇರಿ ತಲುಪುವುದು ತುಂಬ ತಡ ಆಗುತ್ತಿದೆ. ಬಸ್‌ ಇದ್ದೂ, ಪರದಾಡುವ ಪರಿಸ್ಥಿತಿ ನಮ್ಮದು. ಸಂಬಂಧಪಟ್ಟವರು ಸಮಸ್ಯೆಗೆ ಇನ್ನಾದರೂ ಸ್ಪಂದಿಸಲಿ.
– ಮೋಹನ್‌ ಕುಮಾರ್

ಸಾರಿಗೆ ಸಂಪರ್ಕ ಕಲ್ಪಿಸಿ

ಪೀಣ್ಯ 2ನೇ ಹಂತದಿಂದ ಜಾಲಹಳ್ಳಿ, ಯಶವಂತಪುರ, ಕರ್ನಾಟಕ ಸೋಪ್‌ ಫ್ಯಾಕ್ಟರಿ, ಮಹಾಲಕ್ಷ್ಮೀ ಬಡಾವಣೆ, ರಾಜಾಜಿನಗರ, ಮರಿಯಪ್ಪನಪಾಳ್ಯದ ಮುಖಾಂತರ ಮಲ್ಲೇಶ್ವರದ ಸಂಪಿಗೆ ರಸ್ತೆಯವರೆಗೆ ಸಾರ್ವಜನಿಕರು ಯಾವುದೇ ಅಡೆತಡೆ ಇಲ್ಲದೇ ಸಂಚರಿಸಲು ಅನುಕೂಲವಾಗುವಂತೆ ‘ನಮ್ಮ ಮೆಟ್ರೋ’ ಸಂಚರಿಸುತ್ತಿದೆ.

ರಾಜಗೋಪಾಲನಗರ, ಪೀಣ್ಯ, ಜಾಲಹಳ್ಳಿ, ಯಶವಂತಪುರ, ನಂದಿನಿ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಸವೇಶ್ವರ ನಗರ, ರಾಜಾಜಿನಗರ 1ನೇ ಬ್ಲಾಕ್‌, ಮರಿಯಪ್ಪನ ಪಾಳ್ಯದಲ್ಲಿ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಹೈಕೋರ್ಟ್, ಕೆ.ಜಿ.ಐ.ಡಿ. ಉದ್ಯೋಗ ಸೌಧದಲ್ಲಿ ಕೆಲಸ ಮಾಡುವ ಸಿ ಮತ್ತು ಡಿ ವರ್ಗದ ನೌಕರರು ಹಾಗೂ ಎ–ಬಿ ಸಮೂಹದ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಅವರು ವಾಸವಿರುವ ಬಡಾವಣೆಗಳು ಮೇಲೆ ತಿಳಿಸಿದ ಕಚೇರಿಗಳಿಂದ ದೂರವಿದ್ದು, ರಸ್ತೆ ಮಾರ್ಗದಲ್ಲಿ ವಾಹನ ದಟ್ಟಣೆಯಿಂದಾಗಿ ಕಚೇರಿ ಅವಧಿಯೊಳಗೆ ತಲುಪಲು ಪರದಾಡಬೇಕಿದೆ.

ಪೀಣ್ಯ–ಮಲ್ಲೇಶ್ವರಂ ನಡುವೆ ಸಾಗುತ್ತಿರುವ ‘ಮೆಟ್ರೋ ರೈಲು’ ಸಂಪರ್ಕ ಬಳಸಿಕೊಂಡು ಈ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರು ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ಹೋಗಲು ಅನುಕೂಲ ಕಲ್ಪಿಸಬೇಕಿದೆ. ಹಾಗಾಗಿ, ಸಂಪಿಗೆ ರಸ್ತೆಯಿಂದ ವಿಧಾನಸೌಧ, ಶಿವಾಜಿನಗರಕ್ಕೆ ಮಿನಿ ಬಸ್‌ ಸಂಪರ್ಕ ಕಲ್ಪಿಸುವುದು ಒಳ್ಳೆಯದು (ಮಾರ್ಗ: ಆನಂದರಾವ್ ಸರ್ಕಲ್ ಮೇಲು ಸೇತುವೆ, ಕೆ.ಆರ್.ಸರ್ಕಲ್, ವಿಧಾನಸೌಧ, ಶಿವಾಜಿನಗರ). ಈ ನಿಟ್ಟಿನಲ್ಲಿ ಬಿಎಂಟಿಸಿ ಚಿಂತಿಸಲಿ.
–ಬಸವರಾಜ ಹುಡೇದಗಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT