ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತೇತ ಶಾಂತಿಯುತ ಮತದಾನ

Last Updated 18 ಏಪ್ರಿಲ್ 2014, 9:46 IST
ಅಕ್ಷರ ಗಾತ್ರ

ಮಂಡ್ಯ: ಮತಯಂತ್ರದಲ್ಲಿ ದೋಷ, ಮತದಾನ ಬಹಿಷ್ಕಾರದ ಬೆದರಿಕೆ, ಮಾತಿನ ಚಕಮಕಿ ಹೊರತುಪಡಿಸಿದರೆ, ಮಂಡ್ಯ ಲೋಕಸಭೆ ಚುನಾವಣೆಗೆ ಗುರುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಮಂಡ್ಯ ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನ ಚುರುಕು ಪಡೆದುಕೊಂಡಿತ್ತು. ಸಾಲುಗಟ್ಟಿ ಮತಚಲಾಯಿಸಲು ಮತದಾರರು ಮುಂದಾಗಿದ್ದರು. ಮತಗಟ್ಟೆಯ ಗೊಂದಲದಿಂದಾಗಿ ಕೆಲವರು ಮತಗಟ್ಟೆಯಿಂದ ಮತಗಟ್ಟೆಗೆ ತಿರುಗಾಡುತ್ತಿದ್ದ ದೃಶ್ಯವೂ ಅಲ್ಲಲ್ಲಿ ಕಂಡು ಬಂದಿತು. ಕೆಲವರ ಹೆಸರು ಮತಪಟ್ಟಿಯಿಂದ ಕಾಣೆಯಾಗಿತ್ತು.

ಮತದಾನ ಬಹಿಷ್ಕಾರ: ಮದ್ದೂರು ತಾಲ್ಲೂಕಿನ ಸುಣ್ಣದದೊಡ್ಡಿಯಲ್ಲಿ ಸುಟ್ಟು ಹೋಗಿರುವ ವಿದ್ಯುತ್‌ ಪರಿವರ್ತಕವನ್ನು (ಟಿಸಿ) ಬದಲಾಯಿಸಿಲ್ಲ ಎಂದು ದೂರಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ವಿದ್ಯುತ್‌್ ಇಲಾಖೆಯ ಅಧಿಕಾರಿಗಳು ಬಂದು ವಿದ್ಯುತ್‌ ಪರಿವರ್ತಕ ಅಳವಡಿಸುವುದಾಗಿ ಭರವಸೆ ನೀಡಿದ ಮೇಲೆ ಮತ್ತೆ ಮತದಾನ ಕಾರ್ಯ ಶುರುವಾಯಿತು.

ಅಡೆ ತಡೆ: ಶ್ರೀರಂಗಪಟ್ಟಣ ತಾಲ್ಲೂಕಿನ ಚಿಕ್ಕಹಾರೋಹಳ್ಳಿ 14 ಮಂದಿಯ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಕೆಲವರು ಮತದಾನವನ್ನೇ ತಡೆದಿದ್ದರು. ಇದನ್ನು ವಿರೋಧಿಸಿ ಕೆಲವರು ವಾಗ್ವಾದಕ್ಕೆ ಇಳಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ಮತದಾನ ತಡೆಯುವಂತಿಲ್ಲ ಎಂದು ತಿಳಿಸಿ, ಮತದಾನ ಮುಂದುವರಿಯಲು ಅನುವು ಮಾಡಿಕೊಟ್ಟರು.

ಮದ್ದೂರು ತಾಲ್ಲೂಕಿನ ಕುರುಬರದೊಡ್ಡಿಯಲ್ಲಿ ವಯಸ್ಸಾದ ತಾಯಿಯೊಂದಿಗೆ ಮಗನೂ ಒಳ ಹೋದದ್ದಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದೆ. ಕಾಂಗ್ರೆಸ್‌್ ಹಾಗೂ ಜೆಡಿಎಸ್‌್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ, ಸಮಧಾನಗೊಳಿಸುವ ಸಂದರ್ಭದಲ್ಲಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಕಾರ್ಯಕರ್ತರು ತಿರುಗಿಬಿದ್ದರು. ಆಗ ಅಲ್ಲಿಗೆ ಆಗಮಿಸಿದ ಶಾಸಕ ಡಿ.ಸಿ. ತಮ್ಮಣ್ಣ ಎಲ್ಲರನ್ನೂ ಸಮಾಧಾನಗೊಳಿಸಿದರು. ನಾಗಮಂಗಲ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ತಾಲ್ಲೂಕಿನ ಕೆಲವೆಡೆ ಮತಯಂತ್ರಗಳು ಕೈಕೊಟ್ಟ ಪ್ರಕರಣ ನಡೆದಿವೆ. ಕೂಡಲೇ ಅಲ್ಲಿಗೆ ತೆರಳಿದ ಚುನಾವಣಾ ಸಿಬ್ಬಂದಿ ಮತಯಂತ್ರ ಬದಲಾಯಿಸುವ ಮೂಲಕ ಸಮಸ್ಯೆಯನ್ನು ನಿವಾರಿಸಿದರು.

ಜನರಿಗೋಸ್ಕರ ಎಲ್ಲವನ್ನೂ ಸಹಿಸಿಕೊಂಡಿದ್ದೆ: ರಮ್ಯಾ
ಮಂಡ್ಯ: ಮೊದಲ ಬಾರಿಗೆ ಮಂಡ್ಯದಲ್ಲಿ ಮತದಾನ ಮಾಡಿದ್ದು ಖುಷಿ ತಂದಿದೆ. ರಾಜಕೀಯ ಏರಿಳಿತಗಳ ನಡುವೆಯೇ ಪ್ರಚಾರವನ್ನು ಮಾಡಿದ್ದೇನೆ ಎಂದು ಕಾಂಗ್ರೆಸ್‌್ ಅಭ್ಯರ್ಥಿ ರಮ್ಯಾ ಹೇಳಿದರು.  ಎಲ್ಲರೂ ಮತದಾನ ಮಾಡಬೇಕು. ಮಾಡದಿದ್ದರೆ, ಸಮಸ್ಯೆಗಳ ಬಗೆಗೆ ಜನಪ್ರತಿನಿಧಿಗಳನ್ನು ಕೇಳುವ ಹಕ್ಕಿರುವುದಿಲ್ಲ ಎಂದರು. ಏನೇ ರಾಜಕೀಯ ಇದ್ದರೂ ಜನರಿಗೋಸ್ಕರ ಸಹಿಸಿಕೊಂಡು ಬಂದಿದ್ದೇನೆ. ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಪಕ್ಷದ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದ ಪ್ರಶ್ನೆಗೆ, ದುಃಖ ಆಗುತ್ತೆ. ಕಾರಣ ಬೇಕಾಗಿಲ್ಲ. ಕಾರಣ ಹುಡುಕುತ್ತಿರುತ್ತಾರೆ. ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಸಿಲಲ್ಲೂ ಬತ್ತದ ಉತ್ಸಾಹ
ಮಂಡ್ಯ: ಉತ್ಸಾಹದಿಂದ ಸಾಲಿನಲ್ಲಿ ನಿಂತಿದ್ದ ಮತದಾರ... ಬಿಸಿಲಿನಲ್ಲಿಯೂ ಅಭ್ಯರ್ಥಿಯ ಪರ ಮತಯಾಚಿಸುತ್ತಿದ್ದ ಕಾರ್ಯಕರ್ತ... ಮತಪಟ್ಟಿಯಲ್ಲಿ ಹೆಸರು ಹುಡುಕಲು ಅಲೆದಾಡುತ್ತಿದ್ದ ಮತದಾರರು... ಮತದಾರರನ್ನು ಕರೆ ತರಲು ಆಟೊಗಳ ವ್ಯವಸ್ಥೆ...!
ಇದು ಗುರುವಾರ ಮಂಡ್ಯ ಲೋಕಸಭೆ ಚುನಾವಣೆಗೆ ನಡೆದ ಮತದಾದನ ವೇಳೆ ನಗರ ಹಾಗೂ ಗ್ರಾಮೀಣ ಪ್ರದೇಶದ ವಿವಿಧ ಮತಗಟ್ಟೆಗಳಲ್ಲಿ ಕಂಡು ಬಂದ ದೃಶ್ಯ.

ಉಪಚುನಾವಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಸಾಹದ ಮೂಲಕ ಮತದಾರರು ಮತದಾನದಲ್ಲಿ ಭಾಗವಹಿಸಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂದಿತು. ಹೀಗಾಗಿ ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮತದಾರರು ಮತಗಟ್ಟೆಗಳತ್ತ ಆಗಮಿಸತೊಡಗಿದರು. ಗುರುತಿನ ಚೀಟಿ ಪಡೆದುಕೊಂಡು ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮಧ್ಯಾಹ್ನದ ವೇಳೆಗೆ ಬಿಸಿಲಿನ ಬೇಗೆ ಹೆಚ್ಚಾಗಿದ್ದರಿಂದ ಮತದಾರರ ಸಂಖ್ಯೆಯಲ್ಲಿಯೂ ಇಳಿಮುಖವಾಯಿತು. ಸಂಜೆಯ ವೇಳೆಗೆ ಮತ್ತೆ ಮತಗಟ್ಟೆಗಳ ಮುಂದೆ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತು.

ಬಿಸಿಲಿನ ಬೇಗೆಯ ನಡುವೆಯೂ ವಿವಿಧ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಗಳ ಮುಂದೆ ಕುಳಿತುಕೊಂಡು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಕೇಳುವ ಕೆಲಸದಲ್ಲಿ ನಿರತರಾಗಿತ್ತು. ಕೆಲವೆಡೆ ಕಾರ್ಯಕರ್ತರು ಗಿಡದ ನೆರಳನ್ನು ಆಶ್ರಯಿಸಿದ್ದರೆ, ಇನ್ನೂ ಕೆಲವು ಕಡೆ ಬಿಸಿಲಿನಲ್ಲಿಯೇ ಇದ್ದರು. ಕೆಲವು ಕಡೆ ಮಧ್ಯಾಹ್ನದ ವೇಳೆಗೆ ಕಾರ್ಯಕರ್ತರು ಕಾಣೆಯಾಗಿದ್ದರು. ಕೆಲವು ಕಡೆಗಳಲ್ಲಿ ಹಿರಿಯ ನಾಗರಿಕರನ್ನು ಕರೆ ತರಲು ಆಟೊಗಳ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ಮಧ್ಯವಯಸ್ಕರೂ ಆಗಮಿಸುತ್ತಿದ್ದರು. ಮತ ಹಾಕಿದ ಮೇಲೆ ಮನೆಗೆ ಮತ್ತೆ ಬಿಟ್ಟು ಬರಲಾಗುತ್ತಿತ್ತು.

ಕುತೂಹಲ ಮೂಡಿಸಿದ ಮತದಾನದ ಹೆಚ್ಚಳ
ಮಂಡ್ಯ: ಮಂಡ್ಯ ಲೋಕಸಭಾ ಉಪಚುನಾವಣೆಗಿಂತ ಹೆಚ್ಚಿನ ಮತದಾನ ನಡೆದಿರುವುದು ಎಲ್ಲ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಉಪಚುನಾವಣೆಯಲ್ಲಿ ಶೇ 58.28 ರಷ್ಟು ಮತದಾನವಾಗಿತ್ತು. ಗುರುವಾರ ನಡೆದಿರುವ ಮತದಾನದಲ್ಲಿ ಪ್ರಾಥಮಿಕ ವರದಿಯಂತೆ ಶೇ 65 ಪ್ರಮಾಣದಷ್ಟು ಮತದಾನವಾಗಿದೆ. ಉಪಚುನಾವಣೆಗಿಂತ ಶೇ 7 ರಷ್ಟು ಹೆಚ್ಚು ಮತದಾನವಾಗಿರುವುದು ಹಾಗೂ ಈ ಬಾರಿ ಕಣದಲ್ಲಿ ಬಿಜೆಪಿ ಹಾಗೂ ಬಿಎಸ್ಪಿ ಅಭ್ಯರ್ಥಿಗಳು ಇರುವುದು ಹೊಸ ಲೆಕ್ಕಚಾರಕ್ಕೆ ಕಾರಣವಾಗಿದೆ.

ಗೆಲುವಿನ ವಿಶ್ವಾಸ: ಬಿ. ಶಿವಲಿಂಗಯ್ಯ
ಮಂಡ್ಯ: ಪ್ರಚಾರ ಸಂದರ್ಭದಲ್ಲಿ ಸಿಕ್ಕಿರುವ ಪ್ರತಿಕ್ರಿಯೆ ನೋಡಿದರೆ ಗೆಲುವಿನ ವಿಶ್ವಾಸ ಮೂಡಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ. ಶಿವಲಿಂಗಯ್ಯ ಹೇಳಿದರು. ಮಂಡ್ಯದಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಅವರು, ಬಿಜೆಪಿ ಪ್ರಧಾನಿ ಅಭ್ಯರ್ಥಿ ಅಲೆ ದೇಶದಲ್ಲಿ ಇದೆ. ಮಂಡ್ಯವೂ ದೇಶದಲ್ಲಿ ಬರುವುದರಿಂದ ಇಲ್ಲಿಯೂ ಅಲೆ ಇರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT