ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮಹಡಿ ಕಟ್ಟಡಗಳ ಮೇಲೆ ಪ್ರಹಾರ

Last Updated 17 ಏಪ್ರಿಲ್ 2015, 20:18 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಪಿ.ನಗರದ ಸಾರಕ್ಕಿ ಕೆರೆಯ ಒತ್ತುವರಿ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು. ಇದೇ ವೇಳೆ ಮೂರು ಮಹಡಿಯ ಕಟ್ಟಡವೊಂದು ಹಿಟಾಚಿಯ ಮೇಲೆ ಬಿದ್ದ ಘಟನೆಯೂ ನಡೆಯಿತು. ಹಿಟಾಚಿಯ ಮುಂಭಾಗಕ್ಕೆ ಹಾನಿಯಾಗಿದೆ. ಚಾಲಕ ಸೇರಿದಂತೆ ಒಂದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತೆರವು ಕಾರ್ಯಾಚರಣೆಗೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಬಿಬಿಎಂಪಿ ಸದಸ್ಯ ರಮೇಶ್‌ ಹಾಗೂ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಪಾಲಿಕೆ ಸದಸ್ಯರ ಬೆಂಬಲಿಗರ ಗದ್ದಲ ಹೆಚ್ಚಿದಾಗ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದರು. 

ಜಿಲ್ಲಾಧಿಕಾರಿ ವಿ.ಶಂಕರ್‌ ಸಾರಥ್ಯದಲ್ಲಿ  ಜಿಲ್ಲೆಯ ಕಂದಾಯ ಹಾಗೂ ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ ತಂಡ ಶುಕ್ರವಾರ ಬೆಳಿಗ್ಗೆ 7.30ಕ್ಕೆ ಕಾರ್ಯಾಚರಣೆ ಆರಂಭಿಸಿತು. ಬೆಳಿಗ್ಗೆ 9 ಗಂಟೆಯ ವೇಳೆಗೆ ಆಕ್ಸ್‌ಫರ್ಡ್‌ ಕಾಲೇಜಿನ ಪಕ್ಕದ ಮೂರು ಮಹಡಿಯ ಕಟ್ಟಡ ನೆಲಸಮವಾಯಿತು. ಆಕ್ಸ್‌ಫರ್ಡ್‌ ಕಾಲೇಜಿನ ಕಟ್ಟಡ ತೆರವು ಕಾರ್ಯಾಚರಣೆ ಶೇ 60ರಷ್ಟು ಪೂರ್ಣಗೊಂಡಿದೆ. ಅಲ್ಲೇ ಸಮೀಪದಲ್ಲಿರುವ ಏಳು ಮಹಡಿಯ ತೆರವು ಕಾರ್ಯಾಚರಣೆ ಅರ್ಧದಷ್ಟು ಪೂರ್ಣಗೊಂಡಿದೆ.  ಈ ವೇಳೆ ಮಾಲೀಕರು ತಾವೇ ಶನಿವಾರ ಕಟ್ಟಡ ತೆರವು ಮಾಡುವುದಾಗಿ ತಿಳಿಸಿದರು. ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.  ‌
‘ಕಟ್ಟಡ ಮಾಲೀಕರು ಶನಿವಾರ ತೆರವು ಮಾಡದಿದ್ದರೆ ಜಿಲ್ಲಾಡಳಿತ ಭಾನುವಾರ ಕಾರ್ಯಾಚರಣೆ ನಡೆಸಲಿದೆ’ ಎಂದು ಎಲ್‌.ಸಿ. ನಾಗರಾಜು ತಿಳಿಸಿದರು.

ಎರಡನೇ ದಿನ 10 ಮನೆಗಳ ತೆರವು ಮಾಡಲಾಯಿತು. ಇನ್ನೂ ನಾಲ್ಕು ವಾಣಿಜ್ಯ ಸಂಕೀರ್ಣಗಳ ನೆಲಸಮಗೊಳಿಸುವುದು ಬಾಕಿ ಇದೆ. ಇದಕ್ಕೆ ದೊಡ್ಡ ಯಂತ್ರಗಳ ಅಗತ್ಯ ಇದೆ. ಯಂತ್ರಗಳನ್ನು ತಂದು ಭಾನುವಾರ ತೆರವು ಮಾಡಲಾಗುವುದು ಎಂದು ಅವರು ತಿಳಿಸಿದರು.

‘ಕೆರೆಯಂಗಳದಲ್ಲಿ ನಿರ್ಮಾಣಗೊಂಡ 12 ಕಟ್ಟಡಗಳು ಇದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ’ ಎಂದರು. ‘ಪುರುವಂಕರ ಅಪಾರ್ಟ್‌ಮೆಂಟ್‌ನವರು ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದೆ. ಈ ಅಪಾರ್ಟ್‌ಮೆಂಟ್‌ನಿಂದ ಕೆರೆಗೆ ಕೊಳಚೆ
ನೀರು ಸೇರುತ್ತಿರುವ ಅನುಮಾನ ಇದೆ. ಹೀಗಾಗಿ ಭಾನುವಾರ ಮತ್ತೊಮ್ಮೆ ಸಮೀಕ್ಷೆ ನಡೆಸಲಾಗುವುದು’ ಎಂದು ತಿಳಿಸಿದರು.

ಈ ನಡುವೆ, ‘ಬೇರೆಯವರಿಂದ ಖರೀದಿ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕೆರೆಯಂಗಳವನ್ನು ಸಂಸ್ಥೆ ಒತ್ತುವರಿ ಮಾಡಿಲ್ಲ’ ಎಂದು ಪುರುವಂಕರ ಸಂಸ್ಥೆ ಸ್ಪಷ್ಟಪಡಿಸಿದೆ. ಶನಿವಾರ ಕಾರ್ಯಾಚರಣೆ ಇಲ್ಲ:  ಕರ್ನಾಟಕ ಬಂದ್‌ ಕಾರಣದಿಂದ ಶನಿವಾರ ಕಾರ್ಯಾಚರಣೆ ನಡೆಸದಿರಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಆಮ್‌ ಆದ್ಮಿ ಪಕ್ಷ ಸ್ವಾಗತ:  ಕಳೆದ ಹತ್ತಾರು ವರ್ಷಗಳಿಂದ ತನ್ನ ಜವಾಬ್ದಾರಿ ಮರೆತು, ಅಕ್ರಮಗಳಿಗೆ ಪ್ರೋತ್ಸಾಹ ಕೊಡುತ್ತ ಬಂದಿದ್ದ ಜಿಲ್ಲಾಡಳಿತ, ಈಗ ನ್ಯಾಯಾಲಯ ನಿಂದನೆ ಪ್ರಕರಣಕ್ಕೆ ಅಂಜಿಯಾದರೂ ಕೆರೆ ಒತ್ತುವರಿ ತೆರವಿಗೆ ಮುಂದಾಗಿರುವುದು ಶ್ಲಾಘನೀಯ ಎಂದು ಆಮ್‌ ಆದ್ಮಿ ಪಕ್ಷ ತಿಳಿಸಿದೆ.

ಆರು ತಿಂಗಳ ಹಿಂದೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದಲ್ಲಿ ಭೂಕಬಳಿಕೆ ವಿರುದ್ಧ ನಡೆದ ಸತ್ಯಾಗ್ರಹದಲ್ಲಿ ಆಮ್ ಆದ್ಮಿ ಪಕ್ಷವೂ ಪಾಲ್ಗೊಂಡಿತ್ತು. ಆಗ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ನಗರ ಒಂದರಲ್ಲೇ 22 ಸಾವಿರ ಎಕರೆಗೂ ಮೀರಿದ ಸರ್ಕಾರಿ ಜಮೀನು ಕಳ್ಳತನ ಆಗಿರುವುದರ ಬಗ್ಗೆ ಕ್ರಮ ಕೈಗೊಳ್ಳಲು ಮತ್ತು ಆ ಪ್ರಕರಣಗಳ ವಿಲೇವಾರಿಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಆಗ ಆ ಎಲ್ಲ ಬೇಡಿಕೆಗಳಿಗೆ ಒಪ್ಪಿಕೊಂಡಿದ್ದ ಸರ್ಕಾರ ಇಲ್ಲಿಯ ತನಕ ಶಾಸನಬದ್ಧ ಕ್ರಮಕ್ಕೆ ಮುಂದಾಗಿಲ್ಲ. ಸರ್ಕಾರ ಬೇಜವಾಬ್ದಾರಿ ನಡವಳಿಕೆ ತೋರುತ್ತಿದೆ ಎಂದು ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

ಈಗ ಸಾರಕ್ಕಿ ಕೆರೆಯಲ್ಲಿ ನಡೆಯುತ್ತಿರುವುದು ಒತ್ತುವರಿ ತೆರವು ಕಾರ್ಯಾಚರಣೆ. ಆದರೆ, ಇದೇ ಸ್ಥಳದಲ್ಲಿ ಭೂಗಳ್ಳರು ಅಮಾಯಕ ಜನರಿಗೆ ಸರ್ಕಾರಿ ಜಮೀನನ್ನೇ ಮಾರಿದ್ದರು.  ಒಂದಷ್ಟು ಜನ ಮುಗ್ಧರು ಅಲ್ಲಿ ಮನೆಗಳನ್ನೂ ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಈ ಇಡೀ ಪಿತೂರಿಯಲ್ಲಿ ಕಂದಾಯ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ಕೆಲವು ಬಲಾಢ್ಯ ರಾಜಕಾರಣಿಗಳು ಮತ್ತು ಕ್ರಿಮಿನಲ್ ಹಿನ್ನೆಲೆಯ ಭೂಗಳ್ಳರು ಭಾಗಿಯಾಗಿದ್ದಾರೆ. ಇವರ ವ್ಯವಸ್ಥಿತ  ಪಿತೂರಿಗೆ ಅಮಾಯಕ ಬಡಜನರು ಬಲಿಯಾಗಿದ್ದಾರೆ. ಜಿಲ್ಲಾಡಳಿತ ಈ  ಕ್ರಿಮಿನಲ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಅನ್ಯಾಯಕ್ಕೆ ಒಳಗಾಗಿರುವ ಅಮಾಯಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT