ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮುಖಿ ವ್ಯಕ್ತಿತ್ವದ ಸಮನ್ವಯಕಾರ

Last Updated 24 ಡಿಸೆಂಬರ್ 2014, 19:53 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂಚೂಣಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬ­ರಾದ ಮದನ ಮೋಹನ ಮಾಳವೀಯ ಅವರು ಬನಾರಸ್‌ ಹಿಂದೂ ವಿಶ್ವವಿದ್ಯಾ­ಲಯದ ಸ್ಥಾಪಕರು ಕೂಡ. ಸ್ವಾತಂತ್ರ್ಯ ಆಂದೋಲನದಲ್ಲಿ ಸೌಮ್ಯ­ವಾದಿ ಹಾಗೂ ತೀವ್ರವಾದಿ ಬಣಗಳ ನಡು­ವಣ ಸಮನ್ವಯಕಾರರಾಗಿ ಕಾರ್ಯ­ನಿರ್ವ­ಹಿಸಿದ ಬಹುಮುಖಿ ವ್ಯಕ್ತಿತ್ವದ ಮುತ್ಸದ್ದಿ ಅವರು.

ಹಿಂದೂ ರಾಷ್ಟ್ರೀಯತೆಯ ಕಟ್ಟಾ ಪ್ರತಿಪಾದಕರಾದ ಮಾಳವೀಯ ಅವರು ಹಿಂದೂ ಮಹಾಸಭಾದ ಆರಂಭ ಕಾಲದ ಮುಖಂಡರೂ ಹೌದು. ಉತ್ತಮ ಸಂಸದೀಯ ಪಟು­ವಾಗಿ­ದ್ದ­ರಲ್ಲದೆ ಸಾಮಾಜಿಕ ಸುಧಾರಕ­ರಾಗಿಯೂ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್‌ನಲ್ಲಿ ಅರ್ಧ ಶತಮಾನ ಕಾಲ ಸೇವೆ ಸಲ್ಲಿಸಿದ್ದ ಅವರು, 1909 ರಿಂದ 1932ರ ನಡುವೆ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ­ರಾಗಿದ್ದರು.

1930ರಲ್ಲಿ ಮೋಹನದಾಸ್‌ ಕರಮಚಂದ್‌ ಗಾಂಧಿ ಅವರ ಉಪ್ಪಿನ ಸತ್ಯಾಗ್ರಹ ಹಾಗೂ ಅಸಹಕಾರ ಚಳವಳಿ­ಯಲ್ಲಿ ಪಾಲ್ಗೊಂಡು ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಪ್ರಯಾಗ್‌ನಲ್ಲಿ (ಅಲಹಾಬಾದ್) 1861ರಲ್ಲಿ ಸುಶಿಕ್ಷಿತ ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಹುಟ್ಟಿದ ಅವರು ಅಲಹಾಬಾದ್‌ ಜಿಲ್ಲಾ ಶಾಲೆ­ಯಲ್ಲಿ ಶಿಕ್ಷಕನಾಗಿ ವೃತ್ತಿಜೀವನ ಆರಂಭಿ­ಸಿ­ದರು.

ಶಿಕ್ಷಕ ವೃತ್ತಿಯೊಟ್ಟಿಗೆ ವ್ಯಾಸಂಗ­ವನ್ನೂ ಮುಂದುವರಿಸಿ ಎಲ್‌ಎಲ್‌ಬಿ ಪದವಿ ಪಡೆದರು. ನಂತರ ಜಿಲ್ಲಾ ನ್ಯಾಯಾ­ಲಯ ಮತ್ತು ಹೈಕೋರ್ಟ್‌­ನಲ್ಲಿ ವಕೀಲಿ ವೃತ್ತಿ ನಡೆಸಿದರು. ವೃತ್ತಿ­ಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಇದ್ದ ಸಂದರ್ಭದಲ್ಲೇ ತಮ್ಮ 50ನೇ ಹುಟ್ಟಿದ ದಿನದಂದು ವಕೀಲಿಕೆಯನ್ನು ಕೈಬಿಟ್ಟು ದೇಶ­ಸೇವೆ­­ಯಲ್ಲಿ ತೊಡಗಲು ನಿರ್ಧರಿ­ಸಿದ್ದರು.

1909ರಲ್ಲಿ ಆರಂಭವಾಗಿ ಅಲಹಾ­ಬಾದ್‌ನಿಂದ ಪ್ರಕಟವಾಗುತ್ತಿದ್ದ ಅತ್ಯಂತ ಪ್ರಭಾವಿ ಇಂಗ್ಲಿಷ್‌ ದೈನಿಕ ‘ದಿ ಲೀಡರ್‌’ನ ಸ್ಥಾಪಕರೆಂಬುದು ಅವರ ಮತ್ತೊಂದು ಅಗ್ಗಳಿಕೆ. 1937ರಲ್ಲಿ ಸಕ್ರಿಯ ರಾಜಕಾರಣ  ತೊರೆದ ಅವರು ನಂತರ ತಮ್ಮನ್ನು ಸಂಪೂರ್ಣವಾಗಿ ಸಾಮಾಜಿಕ ಕಾರ್ಯ­ಗಳಿಗಾಗಿ ಅರ್ಪಿಸಿಕೊಂಡರು. ಮಹಿಳೆ­ಯರ ಶಿಕ್ಷಣ, ವಿಧವಾ ವಿವಾಹದ ಬೆಂಬಲಿಗರಾಗಿದ್ದ ಅವರು ಬಾಲ್ಯ ವಿವಾಹದ ವಿರೋಧಿಯಾ­ಗಿದ್ದರು. 1946­ರಲ್ಲಿ ಕೊನೆಯುಸಿ­ರೆಳೆದರು.

ಬಾಳಾ ಠಾಕ್ರೆಗೆ ‘ಭಾರತ ರತ್ನ’: ಶಿವಸೇನಾ ಆಗ್ರಹ
ಮುಂಬೈ (ಪಿಟಿಐ): ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆ ಅವರಿಗೆ ‘ಭಾರತ ರತ್ನ’ ನೀಡಬೇಕು ಎಂದು ಪಕ್ಷವು ಬುಧವಾರ ಆಗ್ರಹಿಸಿದೆ. ‘ವಾಜಪೇಯಿ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಖುಷಿಯ ವಿಷಯ. ಆದರೆ ಬಾಳಾ ಠಾಕ್ರೆ ಕೂಡ ಇದಕ್ಕೆ ಅರ್ಹರು’ ಎಂದು ಸೇನಾದ ಹಿರಿಯ ನಾಯಕ ಮನೋಹರ್‌್ ಜೋಷಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT