ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹು ಬೇಡಿಕೆ ಗಿಟ್ಟಿಸಿದ ಆಡಿನ ಹಾಲು

Last Updated 30 ಮೇ 2016, 19:30 IST
ಅಕ್ಷರ ಗಾತ್ರ

ಆರೋಗ್ಯಪೂರ್ಣ ಪಾನೀಯಗಳಲ್ಲಿ ಆಡಿನ ಹಾಲೂ ಒಂದು. ಜೀರ್ಣಕ್ರಿಯೆ ಜತೆಗೆ ಅನೇಕ ರೋಗ ನಿವಾರಕಗಳಲ್ಲಿ ಆಡಿನ ಹಾಲಿನ ಪಾತ್ರ ಮಹತ್ವದ್ದು. ಅಂತೆಯೇ ಈ ಹಾಲಿಗೆ ಬೇಡಿಕೆಯೂ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಇದು ಸುಲಭವಾಗಿ ಸಿಗದೆ ಅನೇಕರು ಪರಿತಪಿಸುವುದುಂಟು. ಈ ದಾಹ ನೀಗಿಸಲು ಲಗ್ಗೆ ಇಡುತ್ತಿದೆ ‘ಮೈ ಗೋಟ್‌’ ಮಿಲ್ಕ್‌...

ಕೃಷಿ ಬಗ್ಗೆ ಶೂನ್ಯ ಅನುಭವ ಹೊಂದಿದ್ದ ವ್ಯಕ್ತಿ ಇಂದು ಸಾವಿರ ಮೇಕೆಗಳ ಒಡೆಯ. ಸಾವಯವ ಕೃಷಿ, ಹೈನುಗಾರಿಕೆ, ಆಡು ಸಾಕಾಣಿಕೆಗೆ ಮುಂದಾಗಿ ಸಾಕಷ್ಟು ಬಾರಿ ಕೈಸುಟ್ಟುಕೊಂಡ ಅವರು, ಕಡೆಗೆ ದೃಢ ನಿಶ್ಚಯದಿಂದ ಆಡು ಸಾಕಾಣಿಕೆಯನ್ನೇ ಮುಂದುವರಿಸಿ ಯಶಸ್ಸು ಕಂಡಿದ್ದಾರೆ. ಈ ಪ್ರಯತ್ನದ ಫಲವಾಗೇ ಇಂದು ‘ಮೈ ಗೋಟ್‌’ ಮಿಲ್ಕ್‌ ಬ್ರಾಂಡಿನಡಿ ಮೈಸೂರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆಯನ್ನೂ ಪಡೆದುಕೊಳ್ಳುತ್ತಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಯಡೆಹಳ್ಳಿಯಿಂದ ಅನತಿ ದೂರದಲ್ಲಿರುವ ‘ಯಶೋಧವನ ಗೋಟ್‌ ಫಾರ್ಮ್‌’ನ ಮಾಲೀಕ ಶ್ರೀನಿವಾಸ್‌ ಆಚಾರ್ಯ ಅವರ ಯಶಸ್ಸಿನ ಕಥೆಯಿದು. 2012ರಲ್ಲಿ ಕೃಷಿ ಮಾಡುವ ಉದ್ದೇಶದಿಂದ 50 ಎಕರೆ ಜಮೀನು ಖರೀದಿಸಿ ಶ್ರೀನಿವಾಸ್‌, ಸಾವಯವ ಕೃಷಿಗೆ ಕೈ ಹಾಕಿದರು. ಆದರೆ, ಅದರ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದ ಕಾರಣ, ತೊಡಗಿಸಿದ ಖರ್ಚನ್ನೂ ಭರಿಸಲಾಗದೆ ಕೈಸುಟ್ಟುಕೊಂಡರು.

ಗೆಳೆಯರ ಸಲಹೆಯಂತೆ ಹೈನುಗಾರಿಕೆಗೆ ಮುಂದಾಗಿ ಅದನ್ನು ಸರಿಯಾಗಿ ನಿರ್ವಹಿಸಲಾಗದೇ ಕೈಬಿಟ್ಟರು. ಹೀಗೆ ಸಾಕಷ್ಟು ಪ್ರಯೋಗ ಮಾಡಿ ನಷ್ಟ ಅನುಭವಿಸಿ ಜಮೀನು ಮಾರಲೂ ನಿರ್ಧರಿಸಿದ್ದರು. ಇಟ್ಟ ಹೆಜ್ಜೆ ಹಿಂತೆಗೆಯಬಾರದೆಂದೆನಿಸಿ, ಗೆಳೆಯರೊಬ್ಬರ ಸಲಹೆಯಂತೆ ಮೇಕೆ ಸಾಕಾಣಿಕೆಗೆ ಮುಂದಾದರು. ಆಂಧ್ರ ಹಾಗೂ ರಾಜಸ್ತಾನದಿಂದ 180 ಮೇಕೆ ಖರೀದಿಸಿ ತಂದರು. ಆದರೆ, ಆಗಲೂ ಅವುಗಳನ್ನು ಹೇಗೆ ಸಾಕಬೇಕು, ಎಷ್ಟು ಪ್ರಮಾಣದಲ್ಲಿ ಆಹಾರ ನೀಡಬೇಕು, ಯಾವ ಆಹಾರ ನೀಡಬೇಕು.

ಹೊರ ರಾಜ್ಯದ ಆಡುಗಳನ್ನು ಸ್ಥಳೀಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಜ್ಞಾನವಿಲ್ಲದ್ದರಿಂದ, ದಿನೇದಿನೇ ಒಂದೊಂದೇ ಆಡುಗಳು ಸಾವಿನ ಹಾದಿ ಹಿಡಿದವು. ಆದರೂ ಧೃತಿಗೆಡದೆ, ಮೇಕೆ ಸಾಕಾಣಿಕೆಯಲ್ಲೇ ಮುಂದುವರಿದರು. ಆಡಿನ ಸಾವಿಗೆ ವೈಜ್ಞಾನಿಕ ಕಾರಣಗಳನ್ನು ಅವರೇ ಗುರುತಿಸಿದರು. ಹೊರಗಡೆ ಓಡಾಡಿಕೊಂಡು ಬೆಳೆದ ಆಡುಗಳನ್ನು ಒಂದೆಡೆ ಕೂಡಿಹಾಕಿ ಸಾಕುವ ಬಗೆ, ಅವುಗಳ ಆಹಾರ ಪದ್ಧತಿ ಈ ಎಲ್ಲವನ್ನೂ ವೈಜ್ಞಾನಿಕ ರೀತಿಯಲ್ಲಿ ತಮ್ಮದೇ ಆದ ಪರಿಭಾಷೆಯಲ್ಲಿ ಅರ್ಥೈಸಿಕೊಂಡರು.

ಮಣ್ಣಿನ– ಸೂರ್ಯನ ಸ್ಪರ್ಶ: ಒಂದು ಅಂದಾಜಿನ ಪ್ರಕಾರ ಹಳ್ಳಿಗಾಡಿನಲ್ಲಿ ಬೆಳೆಯುವ ಆಡು ಸಾಮಾನ್ಯವಾಗಿ ದಿನಕ್ಕೆ ಏನಿಲ್ಲವೆಂದರೂ 10-12 ಕಿ.ಮೀ ಓಡಾಡುತ್ತದೆ. ಅಲ್ಲದೇ ಇದು ಎಲ್ಲ ಬಗೆಯ ಸೊಪ್ಪನ್ನೂ (Tylophora indica ಸೊಪ್ಪನ್ನು ಹೊರತುಪಡಿಸಿ) ತಿಂದು ಜೀರ್ಣಿಸಿಕೊಳ್ಳುತ್ತದೆ. ಹೀಗಿರುವಾಗ ಸಾಕಾಣಿಕಾ ಕೇಂದ್ರದಲ್ಲಿ ಅವುಗಳನ್ನು ಕೂಡಿಹಾಕಿದರೆ ಹೇಗೆ ಬೆಳೆದಾವು ಎಂಬ ಪ್ರಶ್ನೆ ಅವರನ್ನು ಕಾಡಿತು. ಇದಕ್ಕೆ ಉತ್ತರ ಕಂಡುಕೊಳ್ಳಲಾಗದೆ ಈ ಉದ್ಯಮದಲ್ಲಿ ಸೋಲನುಭವಿಸಿರುವವರು ಬಹುತೇಕರಿದ್ದಾರೆ. ಆದರೆ, ಶ್ರೀನಿವಾಸ್‌ ಅವರು ಈ ಎಲ್ಲದಕ್ಕೂ ಉತ್ತರ ಕಂಡುಕೊಂಡಿದ್ದಾರೆ!

ಆಡುಗಳಿಗೆ ಮಣ್ಣಿನ ಹಾಗೂ ಸೂರ್ಯನ ಕಿರಣದ ಸ್ಪರ್ಶ ಇದ್ದರೇನೆ ಆರೋಗ್ಯವಾಗಿರಲು ಸಾಧ್ಯ ಎಂಬುದನ್ನು ಅರಿತ ಅವರು ಶೆಡ್‌ಗಳ ಬಳಿಯಲ್ಲಿಯೇ ಪ್ರತ್ಯೇಕ ಯಾರ್ಡ್‌ಗಳನ್ನು ನಿರ್ಮಿಸಿದ್ದಾರೆ. ದಿನಕ್ಕೆ  4ರಿಂದ 5 ಗಂಟೆ ಅಲ್ಲಿ ಆಡುಗಳನ್ನು ಬಿಡಲಾಗುತ್ತದೆ. ಇದರಿಂದ ಆಡುಗಳ ಚಟುವಟಿಕೆಗೆ ಭಂಗ ಬರುವುದಿಲ್ಲ. ಇನ್ನು ಆಹಾರದ ಪ್ರಶ್ನೆ. ಸುಮಾರು 20–25 ಎಕರೆ ಪ್ರದೇಶದಲ್ಲಿ ಮೇಕೆಗಳಿಗಾಗೇ ಅಜೋಲಾ, ಮುಸುಕಿನ ಜೋಳ, ಸೆಸ್‌ಬೆನಿಯ, ಮಲ್ಬರಿ, ಸಬಬುಲ್‌, ಹಿಪ್ಪುನೇರಳೆ ಸೊಪ್ಪು, ಅವರೆ ಸೇರಿದಂತೆ ವಿವಿಧ ಸೊಪ್ಪು ಬೆಳೆಯುತ್ತಿದ್ದಾರೆ.

ಜತೆಗೆ ಅಕ್ಕಿತೌಡು, ತೊಗರಿ ನುಚ್ಚು, ಹೆಸರು ಬೇಳೆ ನುಚ್ಚು, ಕಡಲೆಕಾಯಿ ನುಚ್ಚು, ಗೋದಿ ಬೂಸಾ, ಅಲಸಂದೆ, ಹುರುಳಿಯ ಒಣ ಸೊಪ್ಪು, ಅವರೆ ಸೊಪ್ಪು, ಹುಲ್ಲುಕಡ್ಡಿ, ರಾಗಿಕಡ್ಡಿ ಮತ್ತಿತರ ಆಹಾರಗಳನ್ನು ನಿಗದಿತ ಪ್ರಮಾಣದಲ್ಲಿ ನೀಡುತ್ತಾರೆ. ಒಂದು ಮೇಕೆಗೆ ಅದು ತೂಕವಿರುವ ಶೇ10ರಷ್ಟು ಆಹಾರವನ್ನು ನೀಡಬೇಕು. ಶೇ10ರಲ್ಲಿ ಪ್ರೊಟೀನ್‌, ಕ್ಯಾಲ್ಸಿಯಂ, ಶಕ್ತಿಯುಕ್ತ ಆಹಾರವನ್ನೇ ನೀಡಬೇಕು’ ಎನ್ನುತ್ತಾರೆ ಶ್ರೀನಿವಾಸ್‌.

ಪ್ರತ್ಯೇಕ ಶೆಡ್‌: ಪಂಜಾಬ್‌, ಬಿಹಾರ, ರಾಜಸ್ತಾನ, ಉತ್ತರ ಪ್ರದೇಶ ಮತ್ತಿತರ ಕಡೆಗಳಿಂದ ಆಡುಗಳನ್ನು ತಂದು ಎಲ್ಲವನ್ನೂ ಒಂದೆಡೆ ಕೂಡಿದರೆ ಹೊಂದಾಣಿಕೆ ಕಷ್ಟವೆಂದು ಅರಿತ ಅವರು, ಮೊದಲು ಸ್ವಲ್ಪ ದಿನ ಆಯಾ ತಳಿಗಳನ್ನು ಪ್ರತ್ಯೇಕ ಶೆಡ್‌ಗಳಲ್ಲಿ ಇಟ್ಟು, ನಿಧಾನಕ್ಕೆ ಬೇರೆ ಬೇರೆ ತಳಿಗಳನ್ನು ಜತೆಗೂಡಿಸಿ ಹೊಂದಿಕೊಳ್ಳುವಂತೆ ವ್ಯವಸ್ಥೆ ಮಾಡಿದರು. ಒಂದೊಂದರ ಜೀವನ ಶೈಲಿ ಒಂದೊಂದು ಬಗೆಯದ್ದಾಗಿರುತ್ತದೆ. ಆಗ ಇಲ್ಲಿ ರೂಪಿಸುವ ಶೈಲಿಗೆ ಅವು ಹೊಂದಿಕೊಳ್ಳಲು ಒಂದಷ್ಟು ಸಮಯ ಬೇಕಾಗುತ್ತದೆ.

ಆಡಿನ ಮರಿಗಳು, ಗರ್ಭಿಣಿ ಆಡುಗಳು, ತಾಯಿ ಆಡುಗಳು, ಸಹಜ ಆಡುಗಳು ಇವೆಲ್ಲವನ್ನು ಒಂದೆಡೆ ಬಿಟ್ಟಿದ್ದರಿಂದ ಉಸಿರುಕಟ್ಟಿದ ವಾತಾವರಣ ಸೃಷ್ಟಿಯಾಗಿ, ಹಲವು ಆಡುಗಳು ಸಾವನ್ನಪ್ಪಿವೆ. ಇದಕ್ಕೂ ಉತ್ತರ ಕಂಡುಕೊಂಡ ಶ್ರೀನಿವಾಸ್‌, ಎಲ್ಲ ವಯಸ್ಸಿನ ಆಡುಗಳಿಗೂ ಪ್ರತ್ಯೇಕ ಶೆಡ್‌ಗಳನ್ನು ನಿರ್ಮಿಸಿದ್ದಾರೆ. ಹೊಸದಾಗಿ ಬಂದ ಆಡುಗಳಿಗೆ ‘ಕ್ವಾರಂಟೇನ್‌’ ಶೆಡ್‌, ಹಾಲು ಕೊಡುವ ಹಾಗೂ ಗಂಡು ಆಡುಗಳಿಗೆ ‘ಲ್ಯಾಕ್ಟೇಟಿಂಗ್‌’ ಶೆಡ್‌, ಗರ್ಭಿಣಿ ಆಡುಗಳಿಗೆ ‘ಬ್ರೀಡಿಂಗ್‌’ ಶೆಡ್‌, ಮರಿಗಳಿಗೆ ‘ಕಿಡ್ಸ್‌’ ಶೆಡ್‌, ಅನಾರೋಗ್ಯದಿಂದ ಬಳಲುವ ಆಡಿಗೆ ‘ಸಿಕ್‌ ಯಾರ್ಡ್‌’... ಹೀಗೆ ಎಲ್ಲಕ್ಕೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಶೆಡ್‌ನಲ್ಲೂ ಗಾಳಿ ಬೆಳಕು ಹೇರಳವಾಗಿ ದೊರಕುವ ವ್ಯವಸ್ಥೆ ಮಾಡಿದ್ದಾರೆ.

ಆಡುಗಳ ಬಾಣಂತನಕ್ಕೆ ವಿಶೇಷ ಆದ್ಯತೆ ನೀಡಿದ್ದಾರೆ. ಮರಿ ಹುಟ್ಟಿದ ಬಳಿಕ ಸಾಕಷ್ಟು ನಿಶ್ಶಕ್ತಿ ಹೊಂದುವ ತಾಯಿ ಆಡಿಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಮರಿ ಹುಟ್ಟಿದ 30 ದಿನಗಳವರೆಗೆ ತಾಯಿಯೊಂದಿಗೆ ಇರಲು ಬಿಡಲಾಗುತ್ತದೆ. ಬಳಿಕ ಅವುಗಳನ್ನು ಬೇರ್ಪಡಿಸಿ 60 ದಿನಗಳವರೆಗೆ ಬಾಟಲ್‌ನಲ್ಲಿ ಮರಿಗಳಿಗೆ ಹಾಲು ಪೂರೈಕೆ ಮಾಡಲಾಗುತ್ತದೆ. 5 ತಿಂಗಳವರೆಗೂ ಕಿಡ್ಸ್‌ ಶೆಡ್‌ನಲ್ಲೇ ಅವುಗಳ ಆರೈಕೆ ಮುಂದುವರಿಯುತ್ತದೆ. ಬಳಿಕ ಬೇರೆ ಆಡುಗಳೊಂದಿಗೆ ಅವುಗಳನ್ನು ಬಿಡಲಾಗುತ್ತದೆ.

ಆಡುಗಳು ಸಾಮಾನ್ಯವಾಗಿ ವರ್ಷಕ್ಕೆ 2 ಬಾರಿ ಅಂದರೆ ಜೂನ್‌– ಜುಲೈ ಹಾಗೂ ನವೆಂಬರ್‌–ಡಿಸೆಂಬರ್‌ ಸಮಯದಲ್ಲಿ ಗರ್ಭಕಟ್ಟುತ್ತವೆ. ಗರ್ಭ ಧರಿಸಿದ 149–150ನೇ ದಿನಕ್ಕೆ ಹೆರಿಗೆ ಆಗುತ್ತದೆ. ಒಂದೇ ಬಾರಿ ಅಷ್ಟೂ ಆಡುಗಳು ಗರ್ಭಕಟ್ಟಿದರೆ ಅವುಗಳ ಸಾಕಾಣಿಕೆ ಕಷ್ಟ ಸಾಧ್ಯ. ಅಲ್ಲದೇ, ಹಾಲು ಉತ್ಪತ್ತಿ ಒಮ್ಮೆಲೆ ಸ್ಥಗಿತಗೊಳ್ಳುತ್ತದೆ ಎಂಬುದನ್ನು ಮನಗಂಡ ಅವರು ವರ್ಷಪೂರ್ತಿ ಈ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಇದರಿಂದ ತಿಂಗಳಿಗೆ ಏನಿಲ್ಲವೆಂದರೂ 10ರಿಂದ 12 ಆಡುಗಳು ಮರಿ ಹಾಕುತ್ತವೆ.

ಹೆಚ್ಚು ಆಡುಗಳಿರುವ ಜಾಗದಲ್ಲಿ ಉಣ್ಣೆ, ಹೇನು ಮತ್ತಿತರ ಹುಳುಬಾಧೆ ಸಹಜ. ಈ ಸಮಸ್ಯೆ ನಿವಾರಣೆಗೆ ಶ್ರೀನಿವಾಸ್‌ ಅವರು ಡಿಪ್ಪಿಂಗ್‌ ಟ್ರೀಟ್‌ಮೆಂಟ್‌ ನೀಡುತ್ತಾರೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ಮೇಕೆಗಳನ್ನು ಡಿಪ್ಪಿಂಗ್‌ ಟ್ಯಾಂಕ್‌ನಲ್ಲಿ ಮೈತೊಳೆಯಲಾಗುತ್ತದೆ. ಅದರಲ್ಲಿ ರೋಗ ನಿರೋಧಕ ರಾಸಾಯನಿಕಗಳಿರುವುದರಿಂದ ಈ ಬಾಧೆಯಿಂದ ದೂರ ಉಳಿಯಬಹುದು. ಮೇಕೆಗಳ ಆಕಸ್ಮಿಕ ಸಾವಿಗೆ ಕಾರಣ ತಿಳಿದುಕೊಳ್ಳುವ ಉದ್ದೇಶದಿಂದ ಹಲವಾರು ಮೇಕೆಗಳ ಮರಣೋತ್ತರ ಪರೀಕ್ಷೆ ಮಾಡಿಸಿ, ವೈದ್ಯರಿಂದ ಮಾಹಿತಿ ಪಡೆದಿದ್ದಾರೆ ಶ್ರೀನಿವಾಸ್‌.

ಇದರಿಂದ ಇತರ ಮೇಕೆಗಳ ಆರೋಗ್ಯವನ್ನು ಹೇಗೆ ಕಾಪಾಡಬಹುದು, ರೋಗ ಬರದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಬಹುದು ಎಂಬುದರ ಕುರಿತೂ ತಿಳಿದಿದ್ದಾರೆ. ತಳಿ ಅಭಿವೃದ್ಧಿ, ಹಾಲು ಸಂಸ್ಕರಣೆ, ಮೇಕೆಗಳ ಗೊಬ್ಬರ ಮಾರಾಟ ಇತ್ಯಾದಿ ಯೋಜನೆಗಳನ್ನು ಅವರು ರೂಪಿಸಿದ್ದು, ಮೇಕೆ ಸಾಕಾಣಿಕೆಯಲ್ಲಿ ಯಶಸ್ಸು ಕಂಡ ಬಳಿಕ ಪಾಶ್ಚರೀಕರಿಸಿದ ಹಾಲನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಪಾಶ್ಚರೀಕರಣದ ಘಟಕವನ್ನೂ ಸ್ಥಾಪಿಸಿದ್ದಾರೆ. ಅಲ್ಲದೇ ಒಟ್ಟಿಗೆ 5ರಿಂದ 10 ಮೇಕೆಗಳ ಹಾಲು ಕರೆಯುವ ಘಟಕ ಕೂಡ ಇಲ್ಲಿದೆ.

ನಿತ್ಯ 200ರಿಂದ 250 ಲೀಟರ್‌ ಹಾಲು ಇಲ್ಲಿ ಉತ್ಪತ್ತಿಯಾಗುತ್ತಿದೆ. ಈ ಉದ್ಯಮದಲ್ಲಿ ಆಸಕ್ತಿ ಇರುವವರಿಗೆ ತರಬೇತಿ ಕೂಡ ನೀಡುತ್ತಿದ್ದಾರೆ. ಘಟಕದ ಭೇಟಿಗೆ ಒಬ್ಬರಿಗೆ ₹ 200 ಶುಲ್ಕ. ಇನ್ನು ತರಬೇತಿ ಪಡೆಯಲು ಇಚ್ಚಿಸಿದರೆ ಮೂರು ದಿನಗಳ ತರಬೇತಿಗೆ ₹7,500. (ಊಟ ಮತ್ತು ವಸತಿಯೊಂದಿಗೆ) ‘50 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಕೈಗೊಳ್ಳಬೇಕು ಎಂದು ಬಯಸಿದ್ದೆ. ಹಲವಾರು ಬೆಳೆ ಹಾಕಿ ಯಾವುದನ್ನೂ ಸರಿಯಾಗಿ ಬೆಳೆಯದೆ ನಷ್ಟ ಅನುಭವಿಸಿದೆ. ಯಾವುದಕ್ಕೂ ಧೃತಿಗೆಡದೆ ನಿರಂತರ ಪ್ರಯೋಗ, ಸಂಶೋಧನೆಯಲ್ಲಿ ತೊಡಗಿದೆ. ಇದನ್ನು ಮೇಕೆಗಳ ಸಂಶೋಧನಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಆಶಯವಿದೆ’ ಎನ್ನುತ್ತಾರೆ ಶ್ರೀನಿವಾಸ್‌. 

ಅವರ ಸಂಪರ್ಕಕ್ಕೆ ಮೊ: 9620590777. ವೆಬ್‌ಸೈಟ್‌: www.yashodavanagoatfarm.com.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT