ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶ ಅಭಿವೃದ್ಧಿಗೆ ಕುಲಾಂತರಿ ತಳಿ ಕೊಡುಗೆ

Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಕುಲಾಂತರಿ ತಳಿ ಬಳಸಿದ ನಂತರ ಬಾಂಗ್ಲಾದೇಶ ಕೃಷಿಕ್ಷೇತ್ರದಲ್ಲಿ ಗಣನೀಯವಾಗಿ ಅಭಿವೃದ್ಧಿ ಹೊಂದಿದೆ’ ಎಂದು ಬಾಂಗ್ಲಾದೇಶದ ಕೃಷಿ ಸಚಿವೆ ಮತಿಯಾ ಚೌಧರಿ ಹೇಳಿದರು.

ಇಲ್ಲಿ ನಡೆಯುತ್ತಿರುವ ‘ಬೆಂಗಳೂರು ಇಂಡಿಯಾ ಬಯೊ 2016’ ಜೈವಿಕ ಮೇಳದಲ್ಲಿ ಬುಧವಾರ ಅವರು ಕೃಷಿ ಜೈವಿಕ ತಂತ್ರಜ್ಞಾನ ಗೋಷ್ಠಿಯಲ್ಲಿ ಮಾತನಾಡಿದರು.

‘ಬಾಂಗ್ಲಾದೇಶ  ಸ್ವತಂತ್ರವಾದ ನಂತರ (1971) ಜನಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಆದರೆ, ಕೃಷಿ ಉತ್ಪಾದನೆ ಮೂರು ಪಟ್ಟು  ಹೆಚ್ಚಾಗಿದೆ. 2000ನೇ ಇಸವಿಯಲ್ಲಿ  ಬಾಂಗ್ಲಾದಲ್ಲಿ ಕುಲಾಂತರಿ ತಳಿಗಳನ್ನು ಪರಿಚಯಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಸಮಸ್ಯೆಯಾಗಿಲ್ಲ’ ಎಂದರು. 

‘ನಮ್ಮ ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು  ಭತ್ತದ ಅನೇಕ ತಳಿಗಳನ್ನು ಅಭಿವೃದ್ಧಿಪಡಿಸಿವೆ. ಕಡಿಮೆ ಅವಧಿಯಲ್ಲಿ ಬೆಳೆಯುವ, ಹೆಚ್ಚು ನೀರಿರುವ ಪ್ರದೇಶ ಮತ್ತು ಕಡಿಮೆ  ನೀರಿನ ಆಶ್ರಯದಲ್ಲಿ ಬೆಳೆಯುವ ನಮ್ಮದೇ ಆದ ಭತ್ತದ ತಳಿ ಅಭಿವೃದ್ಧಿಪಡಿಸಿದ್ದೇವೆ. ಆಲೂಗೆಡ್ಡೆ, ಸೆಣಬುವಿನಲ್ಲೂ ಕುಲಾಂತರಿ ತಳಿ ಅಳವಡಿಸಿದ್ದೇವೆ. 2013ರಲ್ಲಿ ಬಿಟಿ ಬದನೆ ಬೆಳೆಯಲು ಆರಂಭಿಸಿದ್ದೇವೆ. ಈಗ ಇಡೀ ವರ್ಷ ಬದನೆ ಬೆಳೆಯುತ್ತಿದ್ದೇವೆ. ಇದರಿಂದ ಬೂದಿರೋಗ ಹತೋಟಿಗೆ ಬಂದಿದೆ’ ಎಂದರು.

ಜನಸಂಖ್ಯೆ ನಿಯಂತ್ರಣ, ಕಡಿಮೆಯಾಗುತ್ತಿರುವ ಭೂಪ್ರದೇಶ ಮತ್ತು ಹವಾಮಾನದ ವೈಪರೀತ್ಯವನ್ನು ಎದುರಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಇದಕ್ಕೆ ಜೈವಿಕ ತಂತ್ರಜ್ಞಾನದಿಂದ ಮಾತ್ರ ಪರಿಹಾರ ಸಾಧ್ಯ ಎಂದರು.

‘ಬಾಂಗ್ಲಾದೇಶ ಈಗ  ಕೆಳಮಧ್ಯಮ ವರ್ಗದವರ ರಾಷ್ಟ್ರವಾಗಿದೆ. 2021ರ ವೇಳೆಗೆ ಮಧ್ಯಮ ವರ್ಗಗಳ ರಾಷ್ಟ್ರವಾಗಲಿದೆ. 2041ರ ವೇಳೆಗೆ ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿ ಹೊಂದಿದ್ದೇವೆ’ ಎಂದರು. 

ಅಸಹಿಷ್ಣುತೆ: ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ  ಮಾತನಾಡಿ,  ‘ನಮ್ಮ ವೈಜ್ಞಾನಿಕ ಮನೋಧರ್ಮದಲ್ಲೂ ಅಸಹಿಷ್ಣುತೆಯಿದೆ. ಕೃಷಿ ವಿಜ್ಞಾನಿಗಳು  ರೈತರ ಅಗತ್ಯಕ್ಕನುಗುಣವಾಗಿ ಸಂಶೋಧನೆ ನಡೆಸಬೇಕು’ ಎಂದರು.

‘ರೈತರಿಗೆ ಬೀಜ, ಗೊಬ್ಬರ, ಕೀಟನಾಶಕಗಳನ್ನು ಪೂರೈಸುವ ಕಂಪೆನಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಕೊಳ್ಳುವ ಅಗತ್ಯವಿದೆ. 2013ರಲ್ಲಿ ಬಿಟಿ ಹತ್ತಿ ಬೀಜದಲ್ಲಿ ಆದ ದೋಷದಿಂದಾಗಿ  ಕೋಟ್ಯಂತರ ನಷ್ಟ ಪರಿಹಾರವನ್ನು  ಸರ್ಕಾರ ನೀಡಬೇಕಾಯಿತು. ಈ ಪ್ರಕರಣದಲ್ಲಿ ಬೀಜ ಪೂರೈಸಿದ ಕಂಪೆನಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ  ಈಗಲೂ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT