ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಪಾವತಿಸದ ಮಳಿಗೆಗಳಿಗೆ ಬೀಗ

ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್‌. ನಂಜುಂಡಪ್ಪ ಎಚ್ಚರಿಕೆ
Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೇರಿದ ಮಾರುಕಟ್ಟೆಗಳ ಮಳಿಗೆಗಳನ್ನು ಬಾಡಿಗೆ ಪಡೆದವರು ಬಾಕಿ ಉಳಿಸಿ­ಕೊಂಡಿರುವ ಬಾಡಿಗೆಯನ್ನು 15 ದಿನ­ಗಳೊಳಗೆ ಪಾವತಿಸಬೇಕು. ಇಲ್ಲದಿದ್ದರೆ ಬಾಕಿ ಉಳಿಸಿಕೊಳ್ಳುವ ಮಳಿಗೆಗಳಿಗೆ ಬೀಗ ಹಾಕಲಾಗುವುದು’ ಎಂದು ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್‌. ನಂಜುಂಡಪ್ಪ ಅವರು ತಿಳಿಸಿದರು.

ಶನಿವಾರ ಅವರು ಸಮಿತಿಯ ಸದಸ್ಯರೊಂದಿಗೆ ಶ್ರೀನಗರ ಬಸ್‌ ನಿಲ್ದಾಣದ ಬಳಿ ಇರುವ  ಪಾಲಿಕೆ ಮಳಿಗೆಗಳಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀನಗರದಲ್ಲಿ 16 ಮಳಿಗೆಗಳಿಂದ ಬರಬೇಕಾಗಿದ್ದ  ರೂ10 ಲಕ್ಷ ಬಾಡಿಗೆ ಬಾಕಿ ಪೈಕಿ ಕೆಲ ಮಳಿಗೆದಾರರಿಂದ ಸ್ಥಳದಲ್ಲಿಯೇ ಪಟ್ಟು ಹಿಡಿದು ಸಮಿತಿಯು ರೂ2.5 ಲಕ್ಷದ ಚೆಕ್‌ ವಸೂಲಿ ಮಾಡಿತು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಡಿಗೆ ಬಾಕಿ ಉಳಿಸಿಕೊಂಡ ಕೆಲ ಮಳಿಗೆದಾರರಿಗೆ ಮಧ್ಯಾಹ್ನದ ಒಳಗೆ ಬಾಕಿ ಪಾವತಿಸಲು ಗಡವು ನೀಡಿದರು. ಇದೇ ವೇಳೆ ಎರಡು ಮಳಿಗೆಗಳಿಗೆ ಬೀಗ ಹಾಕಲಾಯಿತು. 

ನಂತರ ಸಮಿತಿ ಜಯನಗರದ 9ನೇ ಬ್ಲಾಕ್‌ನಲ್ಲಿರುವ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿತು. 40 ಮಳಿಗೆಗಳ ಪೈಕಿ ಮೊದಲ ಮಹಡಿಯಲ್ಲಿರುವ 10 ಬಾಡಿಗೆದಾರರಿಗೆ ವಾರದೊಳಗೆ ಪರಿಷ್ಕೃತ ದರದಂತೆ ಬಾಕಿ ಪಾವ­ತಿ­ಸುವಂತೆ ನೋಟಿಸ್‌ ಜಾರಿಗೊಳಿಸಿದರು.

ರೂ100 ಕೋಟಿ ಆದಾಯ ನಿರೀಕ್ಷೆ

ಗುತ್ತಿಗೆ ನವೀಕರಣ ಮತ್ತು ಪರಿಷ್ಕೃತ ದರದನ್ವಯ ಬಾಕಿ ಇರುವ ಬಾಡಿಗೆ ವಸೂಲಿಯಿಂದ ಸುಮಾರು ರೂ100 ಕೋಟಿ ಆದಾಯದ ನಿರೀಕ್ಷೆ ಇದೆ. ಬಾಡಿಗೆ ವಸೂಲಿ ವಿಷಯದಲ್ಲಿ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ.
– ಬಿ.ಆರ್.ನಂಜುಂಡಪ್ಪ, ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷ

ಶೇ 40 ರಷ್ಟು ಬಾಡಿಗೆ ವಸೂಲಿ
ಪಾಲಿಕೆ ವ್ಯಾಪ್ತಿಯಲ್ಲಿರುವ 121 ಮಾರುಕಟ್ಟೆಗಳಲ್ಲಿ 6101 ಮಳಿಗೆಗಳಿವೆ. ಅವುಗಳಲ್ಲಿ  4000 ಮಳಿಗೆಗಳು ಸುಸಜ್ಜಿತವಾಗಿ ಬಳಕೆಯಲ್ಲಿವೆ. ಅವುಗಳಿಗೆ ಪರಿಷ್ಕೃತ ದರದ ಪ್ರಕಾರ ಬಾಡಿಗೆ ನಿಗದಿ ಮಾಡಿದ್ದೇವೆ. ಪರಿಷ್ಕೃತ ದರದ ಬಾಕಿಯೇ ರೂ40 ಕೋಟಿ ಇದೆ. ಇದರಲ್ಲಿ ರೂ15–20 ಕೋಟಿ ಸರ್ಕಾರದಿಂದ ಬಾಡಿಗೆ ಬಾಕಿ ಬರಬೇಕು. ಒಟ್ಟಾರೆ ಬಾಡಿಗೆ ಬಾಕಿಯಲ್ಲಿ ಈಗಾಗಲೇ ಶೇ 30–40 ರಷ್ಟು ವಸೂಲಿ ಮಾಡಲಾಗಿದೆ. ಉಳಿದವರಿಂದ ವಸೂಲಿಗೆ ಕ್ರಮತೆಗೆದುಕೊಳ್ಳಲಾಗಿದೆ.
– ಶ್ರೀನಿವಾಸ್‌, ಮಾರುಕಟ್ಟೆ ಸ್ಥಾಯಿ ಸಮಿತಿಯ ವಿಶೇಷಾಧಿಕಾರಿ

ಲಕ್ಕಸಂದ್ರದಲ್ಲಿರುವ 16 ಮಳಿಗೆಗಳಿಗೆ ಸಮಿತಿ ಭೇಟಿ ನೀಡಿ ಪರಿಶೀಲಿಸಿತು. ಈ ವೇಳೆ ನಂಜುಂಡಪ್ಪ ಅವರು ‘ಎಲ್ಲ ಬಾಡಿಗೆದಾರರು ಪರಿಷ್ಕೃತ ಬಾಡಿಗೆಯನ್ನು ನೀಡಬೇಕು. ಇಲ್ಲದಿದ್ದರೆ ಮಳಿಗೆಗಳಿಗೆ ಬೀಗ ಹಾಕಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ನಂತರ ಸಮಿತಿಯು ವಿಲ್ಸನ್‌ ಗಾರ್ಡನ್‌ ಮಾರುಕಟ್ಟೆಗೆ ಭೇಟಿ ನೀಡಿತು. ಅಲ್ಲಿ ಮೂಲ ಮಳಿಗೆಗಳನ್ನು ಅನಧಿಕೃತವಾಗಿ ವಿಸ್ತರಿಸಿಕೊಂಡು ವಹಿವಾಟು ನಡೆಸುತ್ತಿದ್ದ ಬಾಡಿಗೆದಾರರನ್ನು ತರಾಟೆಗೆ ತೆಗೆದು­ಕೊಂಡ ನಂಜುಂಡಪ್ಪ ಅವರು ಅಧಿಕಾರಿ­ಗಳಿಗೆ ‘ಒಟ್ಟು ಮಳಿಗೆಯ ವಿಸ್ತೀರ್ಣವನ್ನು ಲೆಕ್ಕ ಹಾಕಿ ಪರಿಷ್ಕೃತ ದರದಂತೆ ಬಾಡಿಗೆ ವಸೂಲಿ ಮಾಡಿ.

ಇದಕ್ಕೆ ಒಪ್ಪದವರ ಮಳಿಗೆ ವಿಸ್ತರಣೆಯನ್ನು ಒಡೆದು ಹಾಕಿ’ ಎಂದು ಸೂಚನೆ ನೀಡಿದರು. ಸಮಿತಿಯ ಸದಸ್ಯರಾದ ಪಿ.ಎನ್‌.­ಸದಾಶಿವ, ಗೌರಮ್ಮ ಮತ್ತು ಆರ್‌.ಎಸ್‌. ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT