ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆದಾರರಿಗೆ ನೆರವಾಗುವ ಸ್ಟಾರ್ಟ್‌ಅಪ್‌

Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರಿನಂತಹ ಮಹಾನಗರಗಳಿಗೆ ಕೆಲಸ ಹುಡುಕಿಕೊಂಡು, ಉದ್ಯಮ ವಹಿವಾಟು ವಿಸ್ತರಿಸಲು ಮತ್ತು ಇತರ ಉದ್ದೇಶಗಳಿಗೆ ವಲಸೆ ಬರುವವರು ಸೂಕ್ತ ತಮ್ಮ ಅನುಕೂಲಕ್ಕೆ ತಕ್ಕಂತೆ ಬಾಡಿಗೆ ಮನೆಯ ಹುಡುಕಾಟ ನಡೆಸಿ ಸೂರು ಕಲ್ಪಿಸಿಕೊಳ್ಳುವ ಹೊತ್ತಿಗೆ  ಸಾಕಷ್ಟು ಹೈರಾಣಾಗುತ್ತಾರೆ.

ಅಪರಿಚಿತ ಊರಿನಲ್ಲಿ ದಳ್ಳಾಳಿಗಳ ಕೈಗೆ ತಮ್ಮ ಬಾಡಿಗೆ ಮನೆ ಶೋಧದ ಹೊಣೆ ಒಪ್ಪಿಸುವ ಹೊಸಬರು, ಈ ಮಧ್ಯವರ್ತಿಗಳು ಹೇಳುವ ಅಥವಾ ನಿಗದಿ ಮಾಡುವ ಬಾಡಿಗೆ ದರವನ್ನೇ ಕಮಕ್‌ ಕಿಮಕ್‌ ಅನ್ನದೇ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ.

ಈ ಮಧ್ಯವರ್ತಿಗಳು ಹೇಳಿದ್ದೇ ಬಾಡಿಗೆ ದರ. ಮನೆ ಮಾಲೀಕರ ಜತೆ ನೇರವಾಗಿ ಮಾತನಾಡಲು  ಅವಕಾಶವನ್ನೇ ಕೊಡದ ಈ ದಳ್ಳಾಳಿಗಳು ಆಡಿದ್ದೇ ಆಟ. ಇವರಿಂದಾಗಿ ಬಾಡಿಗೆ ಮನೆಗಳು ಸಿಗುತ್ತವೆ ಎನ್ನುವುದು ನಿಜವಾದರೂ ಅವರು ವಸೂಲಿ ಮಾಡುವ ಕಮಿಷನ್‌ ದರ ದುಬಾರಿಯಾಗಿರುತ್ತದೆ ಎಂದು ಬಾಡಿಗೆದಾರರು ಗೊಣಗುತ್ತಲೇ ಇರುತ್ತಾರೆ.

ಬಾಡಿಗೆದಾರರು ಎದುರಿಸುವ ಇಂತಹ ಸಮಸ್ಯೆಗಳ ಪರಿಹಾರಕ್ಕೆಂದೇ ಅಂತರ್ಜಾಲ ತಾಣ ‘ನೋ ಬ್ರೋಕರ್‌ ಡಾಟ್‌ ಇನ್‌’ (www.nobroker.in) ಜನ್ಮ ತಳೆದಿದೆ. ​ಹೆಸರೇ ಹೇಳುವಂತೆ, ಇದೊಂದು ದಳ್ಳಾಳಿಗಳ ಹಸ್ತಕ್ಷೇಪ ಇಲ್ಲದ, ತಿಂಗಳ ಬಾಡಿಗೆ ದರದಷ್ಟೇ ಕಮಿಷನ್‌ ನೀಡುವ ಗೋಜೂ  ಇಲ್ಲದೆ ಸುಲಭವಾಗಿ ಬಾಡಿಗೆ ಮನೆ ಹುಡುಕಿಕೊಳ್ಳಲು ನೆರವಾಗುವ ವಿಶಿಷ್ಟ  ಸ್ಟಾರ್ಟ್‌ಅಪ್‌ ಆಗಿದೆ.

ಬಾಡಿಗೆದಾರ  ಮತ್ತು  ಮನೆ ಮಾಲೀಕರ ನಡುವಿನ ಕೊಂಡಿಯಂತೆ ಇದು ಕೆಲಸ ಮಾಡುತ್ತಿದೆ. ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಪುಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಾಡಿಗೆದಾರರು ಮಾಲೀಕರ ಜತೆಗೆ ನೇರವಾಗಿ ವ್ಯವಹರಿಸಿ ಬಾಡಿಗೆ ಮತ್ತು ಠೇವಣಿ ಮೊತ್ತ ನಿಗದಿಪಡಿಸುವ ವಿಶೇಷ ಸೌಲಭ್ಯ ಇಲ್ಲಿದೆ. ಅಂತರ್ಜಾಲ ತಾಣ ಮತ್ತು  ಮೊಬೈಲ್‌ ಆ್ಯಪ್‌ನಲ್ಲಿ ಬಾಡಿಗೆ ಮನೆಗಳ ಸಮಗ್ರ ವಿವರ ಇರಲಿದೆ.

​ಈ ಅಂತರ್ಜಾಲ ತಾಣವು ಬಾಡಿಗೆದಾರರು ಮಾಲೀಕರ ಜತೆ ನೇರವಾಗಿ ಮಾತುಕತೆ ನಡೆಸಿ ಬಾಡಿಗೆ ನಿಗದಿಪಡಿಸಲು ಅವಕಾಶ ಮಾಡಿಕೊಡುತ್ತದೆ. ಜತೆಗೆ ದಳ್ಳಾಳಿ ಶುಲ್ಕ ಪಾವತಿಸುವ ಹೊರೆಯನ್ನೂ ಇಲ್ಲವಾಗಿಸುತ್ತದೆ.

ಈ ಸ್ಟಾರ್ಟ್‌ಅಪ್‌, 2014ರಲ್ಲಿ ಮುಂಬೈನಲ್ಲಿ ಆರಂಭಗೊಂಡರೂ, ಈಗ ಬೆಂಗಳೂರಿನಲ್ಲಿಯೇ ಪ್ರಧಾನ ಕಚೇರಿ ಹೊಂದಿದೆ. ಇಲ್ಲಿಂದಲೇ ನಾಲ್ಕು ಪ್ರಮುಖ ನಗರಗಳಲ್ಲಿನ ವಹಿವಾಟನ್ನು ನಿರ್ವಹಿಸಲಾಗುತ್ತಿದೆ.

ಅಂತರ್ಜಾಲ ತಾಣ ಮತ್ತು ಮೊಬೈಲ್‌ ಆ್ಯಪ್‌ನಲ್ಲಿ ಪ್ರದೇಶವಾರು ಲಭ್ಯ ಇರುವ ಬಾಡಿಗೆ ಮನೆಗಳ ಸಚಿತ್ರ ವಿವರವನ್ನು ಕುಳಿತಲ್ಲಿಯೇ ವೀಕ್ಷಿಸಿ ತೀರ್ಮಾನಕ್ಕೆ ಬರಲು ಇದು ಬಾಡಿಗೆದಾರರಿಗೆ ನೆರವಾಗುತ್ತದೆ. ಬಾಡಿಗೆ  ಪ್ರಕ್ರಿಯೆ ಪೂರ್ಣಗೊಳಿಸಿ ಬಾಡಿಗೆದಾರ ಮತ್ತು ಮಾಲೀಕರ ಮಧ್ಯದ ಒಪ್ಪಂದದ ದಾಖಲೆಗಳನ್ನೂ ಬಾಡಿಗೆದಾರರಿಗೆ ತಲುಪಿಸುವ ವ್ಯವಸ್ಥೆಯೂ ಇಲ್ಲಿದೆ.

​​ಮನೆ ಬಾಡಿಗೆ ಹುಡುಕಿ ಕೊಡುವ ಈ ರಿಯಲ್‌ ಎಸ್ಟೇಟ್‌ ಉದ್ದಿಮೆಯಲ್ಲಿ ಕೆಲ ಮಧ್ಯವರ್ತಿಗಳು ಎರಡು ತಿಂಗಳ ಬಾಡಿಗೆ ವಸೂಲಿ ಮಾಡುತ್ತಾರೆ. ಮುಂಬೈನಲ್ಲಿ 11 ತಿಂಗಳ ಅವಧಿ ಮುಗಿದ ಕೂಡಲೇ ಬಾಡಿಗೆದಾರ ಅದೇ ಮನೆಯಲ್ಲಿ ಮುಂದುವರೆದರೆ ಇನ್ನೊಂದು ತಿಂಗಳ ಬಾಡಿಗೆಯನ್ನು ಕಮಿಷನ್ ರೂಪದಲ್ಲಿ ಒತ್ತಾಯದಿಂದ ವಸೂಲಿ ಮಾಡುತ್ತಾರೆ. ದಳ್ಳಾಳಿಗಳು ನಡೆಸುವ ಬಾಡಿಗೆದಾರರ ಇಂತಹ ಶೋಷಣೆಯನ್ನು ನಮ್ಮ ವಹಿವಾಟು ಸಂಪೂರ್ಣವಾಗಿ ನಿರ್ಬಂಧಿಸಿದೆ ಎಂದು  ಅಖಿಲ್‌ ಗುಪ್ತ ವಿಶ್ವಾಸದಿಂದ ಹೇಳುತ್ತಾರೆ.

ದೇಶದ ಬಾಡಿಗೆ ಮನೆಗಳ ಕಮಿಷನ್‌ ರೂಪದಲ್ಲಿ ವರ್ಷಕ್ಕೆ ₹ 36 ಸಾವಿರ ಕೋಟಿಗಳಷ್ಟು ಹಣ ಕೈ ಬದಲಾಯಿಸುತ್ತದೆ. ಮಧ್ಯವರ್ತಿಗಳ ಪಾಲಾಗುವ ಈ ಹಣ ತೆರಿಗೆ ವ್ಯಾಪ್ತಿಗೆ ಬರದೆ ಕಪ್ಪು ಹಣದ ರೂಪದಲ್ಲಿ ಚಲಾವಣೆಯಲ್ಲಿ ಇರುತ್ತದೆ ಎಂದು ಅವರು ಈ ವ್ಯವಸ್ಥೆಯಲ್ಲಿನ ಲೋಪಗಳನ್ನು ಪಟ್ಟಿ ಮಾಡುತ್ತಾರೆ.
‘ನೋ ಬ್ರೋಕರ್‌ ಡಾಟ್‌ ಇನ್‌’ ತಾಣವು ಇಂತಹ ವಹಿವಾಟಿಗೆ ಸಂಪೂರ್ಣವಾಗಿ ತಡೆ ಹಾಕಿದೆ. ಇಲ್ಲಿ ಎಲ್ಲವೂ ಪಾರದರ್ಶಕವಾಗಿ ವಹಿವಾಟು ನಡೆಯುತ್ತದೆ ಎನ್ನುತ್ತಾರೆ.

ಸಂಸ್ಥೆಯಲ್ಲಿ ಸದ್ಯಕ್ಕೆ  2.50 ಲಕ್ಷ ಮಾಲೀಕರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಬೆಂಗಳೂರಿನ ಮಾಲೀಕರ ಸಂಖ್ಯೆ ಶೇ 40ರಷ್ಟಿದೆ. ಪ್ರತಿ ತಿಂಗಳೂ ಸಾವಿರಾರು ಬಾಡಿಗೆದಾರರು ಮತ್ತು ಮಾಲೀಕರು ಸೇರ್ಪಡೆ ಆಗುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ನಾಲ್ಕು ಮಹಾನಗರಗಳಲ್ಲಿ 25 ಸಾವಿರ ಹೊಸ ಮನೆಗಳು ಸಂಸ್ಥೆಯಲ್ಲಿ ದಾಖಲಾಗಿವೆ. 75 ಸಾವಿರದಷ್ಟು ಹೊಸ ಬಾಡಿಗೆದಾರರು ಸಂಸ್ಥೆಯ ಸೇವೆ ಪಡೆಯಲು ಮುಂದೆ ಬಂದಿದ್ದಾರೆ. ಸಂಸ್ಥೆಯು ಈ ವಹಿವಾಟು ಆರಂಭಿಸಿದ್ದರಿಂದ ಬಾಡಿಗೆದಾರರು ಪಾವತಿಸುತ್ತಿದ್ದ ₹ 20 ಕೋಟಿಗಳಷ್ಟು ಕಮಿಷನ್‌ ಉಳಿತಾಯ ಆಗುತ್ತಿದೆ.

ಐಐಟಿ ಬಾಂಬೆಯ  ಎಂಜಿನಿಯರ್‌ ಪದವೀಧರನಾಗಿರುವ ಅಖಿಲ್‌ ಗುಪ್ತಾ  ಆರಂಭದಲ್ಲಿ ಐ.ಟಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸಿದ್ದರು.  ಮದುವೆ ನಂತರ ಮನೆ ಬೇಟೆ ಆರಂಭಿಸಿದಾಗ, ಇವರಿಗೆ ಸಕಾಲದಲ್ಲಿ ಸೂಕ್ತ ಬಾಡಿಗೆ ಮನೆ ಸಿಗಲಿಲ್ಲ. ಮಧ್ಯವರ್ತಿಗಳ  ಹಾವಳಿ ಕಂಡು ಬೇಸತ್ತರು. ವಾರಾಂತ್ಯದಲ್ಲಿ ಸಿನಿಮಾ ವೀಕ್ಷಿಸಲು ಆನ್‌ಲೈನ್‌ನಲ್ಲಿಯೇ ಟಿಕೆಟ್‌ ಬುಕ್‌ ಮಾಡುವಾಗ, ಬಾಡಿಗೆ ಮನೆಯ ಹುಡುಕಾಟಕ್ಕೂ ಇದೇ ಬಗೆಯ ಸೌಲಭ್ಯ ಕಲ್ಪಿಸಿದರೆ ಹೇಗೆ ಎನ್ನುವ ಆಲೋಚನೆ ಹೊಳೆಯಿತು. ಈ ಹೊಸ ಆಲೋಚನೆಯನ್ನು ತಮ್ಮ ಇಬ್ಬರು ಸಹಪಾಠಿಗಳ ಜತೆ ಸೇರಿ ಕಾರ್ಯರೂಪಕ್ಕೆ ತಂದರು.

ಪಾಶ್ಚಿಮಾತ್ಯ ದೇಶಗಳಲ್ಲಿನ ಯಶಸ್ವಿ ಮಾದರಿಗಳನ್ನು  ಅನುಕರಣೆ ಮಾಡುವ ಪ್ರವೃತ್ತಿಗೆ (look west copy east) ಬದಲಾಗಿ ​ಸ್ಥಳೀಯವಾಗಿಯೇ ಹೊಸ ಆಲೋಚನೆಯನ್ನು ಅಭಿವೃದ್ಧಿಪಡಿಸಿದ ಹೆಗ್ಗಳಿಗೆ ಇವರದ್ದು.

ಸಂಸ್ಥೆಯ ವಹಿವಾಟು ಜನಪ್ರಿಯತೆ ಗಳಿಸುತ್ತಿದ್ದಂತೆ ತಮ್ಮ ವೃತ್ತಿಗೆ ಧಕ್ಕೆ ಒದಗಿದ್ದರಿಂದ ಕಳೆದ ವರ್ಷ ಸ್ಥಳೀಯ ಕೆಲ ದಳ್ಳಾಳಿಗಳು ಬೆಂಗಳೂರಿನ ಎಚ್‌್ಎಸ್‌ಆರ್‌ ಲೇಔಟ್‌ನಲ್ಲಿನ ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆಸಿ ಪೀಠೋಪಕರಣ ನಾಶ ಮಾಡಿದ್ದರು. ಈಗ ಇಂತಹ ಬೆದರಿಕೆ ನಿಂತಿದೆ. ದಳ್ಳಾಳಿಗಳು ಬದಲಾದ ಕಾಲಮಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಸಂಸ್ಥೆಯ ವಹಿವಾಟಿಗೆ ಯಾವುದೇ ಬಗೆಯಲ್ಲಿ ಅಡ್ಡಿ ಎದುರಾಗುತ್ತಿಲ್ಲ ಎಂದು ಅಮಿತ್‌ ಹೇಳುತ್ತಾರೆ.

​​ಅಖಿಲ್‌ ಗುಪ್ತ, ಅಮಿತ್‌ ಅಗರವಾಲ್ ಮತ್ತು ಸೌರಭ್‌ – ಈ  ತ್ರಿಮೂರ್ತಿಗಳು ಸೇರಿಕೊಂಡು ಈ ಸ್ಟಾರ್ಟ್‌ಅಪ್‌ ಸ್ಥಾಪಿಸಿ ಬೆಳೆಸುತ್ತಿದ್ದಾರೆ. ಐಐಟಿ ಬಾಂಬೆ ಮತ್ತು ಐಐಎಂ  ಅಹಮದಾಬಾದ್‌ನ ಪದವೀಧರರಾಗಿರುವ ಈ ಮೂವರು ಈಗ ಪೂರ್ಣ ಪ್ರಮಾಣದಲ್ಲಿ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಮೂವರ ಪತ್ನಿಯರು ದುಡಿಯುತ್ತಿದ್ದರಿಂದ ಆರಂಭದಲ್ಲಿ ಈ ಮೂವರೂ ಈ ಸ್ಟಾರ್ಟ್‌ಅಪ್‌ ಸ್ಥಾಪನೆಗೆ ತಮ್ಮೆಲ್ಲ ಗಮನ ಕೇಂದ್ರೀಕರಿಸಲು ಸಾಧ್ಯವಾಗಿತ್ತು. ಒಂದೇ ಟೇಬಲ್ಲಿನ ಮೇಲೆ ಮೂವರು  ಕುಳಿತುಕೊಂಡು ವಹಿವಾಟು ಆರಂಭಿಸಿ ಮಾಲೀಕರು, ಬಾಡಿಗೆದಾರರ ಜತೆ ಸಂವಹನ ಬೆಳೆಸುತ್ತ ಸಂಸ್ಥೆಯ ವಹಿವಾಟು ವಿಸ್ತರಿಸುವಲ್ಲಿ  ಸಾಕಷ್ಟು ಶ್ರಮ ಪಟ್ಟಿದ್ದಾರೆ.

ಈಗ ಬೆಂಗಳೂರಿನ ಕಚೇರಿಯಲ್ಲಿ ​180 ಸಿಬ್ಬಂದಿ  ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಸ್ಟಾರ್ಟ್‌ಅಪ್‌ ಯಶಸ್ವಿಯಾಗಿರುವ ಬಗ್ಗೆ ವಿಶ್ವದ ಯಾವುದೇ ಮೂಲೆಯಲ್ಲಿ  ಪೂರ್ವ ನಿದರ್ಶನ ಇದ್ದಿರಲಿಲ್ಲ. ಹೀಗಾಗಿ ಈ ವಹಿವಾಟಿನ ಸ್ವರೂಪದ ಯಶಸ್ಸಿನ ಬಗ್ಗೆ ಆರಂಭದಲ್ಲಿ ಈ ಮೂವರು ಸ್ಥಾಪಕರಿಗೆ ಸಾಕಷ್ಟು ಅನು
ಮಾನಗಳೂ ಇದ್ದವು. ಮೊದ ಮೊದಲಿಗೆ ಮಾಲೀಕರಿಂದಲೂ ಪ್ರತಿಕ್ರಿಯೆ ನಿಧಾನವಾಗಿತ್ತು.

 ಮನೆ ಮಾಲೀಕರ ಮನವೊಲಿಸಿ, ದಳ್ಳಾಳಿಗಳ ಹಾವಳಿ ನಿವಾರಿಸಿ ಬಾಡಿಗೆದಾರರ ಅಗತ್ಯಗಳಿಗೆ ತಕ್ಕಂತೆ ಮನೆಗಳನ್ನು ಹುಡುಕಿ ಕೊಡುವಲ್ಲಿನ ಯಶಸ್ಸಿನಿಂದಾಗಿ ವಹಿವಾಟು  ನಿಧಾನವಾಗಿ ಚೇತರಿಸಿಕೊಂಡಿತು. 14 – 15 ತಿಂಗಳ ಕಾಲ ಪಟ್ಟ ಪರಿಶ್ರಮ ಕೊನೆಗೂ ಕೈಹಿಡಿಯಿತು ಎಂದು     ಅಮಿತ್‌ ಹೇಳುತ್ತಾರೆ.

ಮೊಬೈಲ್‌ ಆ್ಯಪ್‌ ಮೂಲಕವೂ ಬಾಡಿಗೆ ಮನೆ  ಆಯ್ಕೆ ಮಾಡಿಕೊಳ್ಳುವ  ಸೌಲಭ್ಯವೂ ಇಲ್ಲಿದೆ.  ಪ್ರಾಮಾಣಿಕ ಬಾಡಿಗೆದಾರರನ್ನು ಗುರುತಿಸುವ ಅವರ ವಿಳಾಸ ದೃಢಪಡಿಸುವ  ವಿಶಿಷ್ಟ ವ್ಯವಸ್ಥೆಯನ್ನು ಸಂಸ್ಥೆ ಅಳವಡಿಸಿಕೊಂಡಿದೆ. ಕಂಪ್ಯೂಟರ್‌ನಲ್ಲಿ ಈ ಪ್ರಕ್ರಿಯೆ ಎರಡೇ ನಿಮಿಷಗಳಲ್ಲಿ ಖಾತರಿಪಡಿಸಿಕೊಳ್ಳುವ ಸಾಫ್ಟ್‌ವೇರ್‌ ಅನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ.

ಮಾಲೀಕರು ಮಿಸ್ಡ್‌್ ಕಾಲ್‌ ನೀಡಿದರೂ ಸಾಕು. ಸಂಸ್ಥೆಯೇ ಸಿಬ್ಬಂದಿಯೇ ಸ್ಥಳಕ್ಕೆ ತೆರಳಿ ಮಾಲೀಕರನ್ನು ಮಾತನಾಡಿಸಿ ಮನೆಯ ಸಮಗ್ರ ಮಾಹಿತಿ ಕಲೆಹಾಕಿ ಅಂತರ್ಜಾಲ ತಾಣದಲ್ಲಿ ಪ್ರದರ್ಶೀಸುತ್ತಿದೆ. ದಳ್ಳಾಳಿಗಳು   ಇದರ ದುರ್ಬಳಕೆ ಮಾಡಿಕೊಳ್ಳಲು ಅವಕಾಶವೇ ಇಲ್ಲ.

‘ಬಾಡಿಗೆದಾರರು ಮಾಲೀಕರ ಜತೆ ನೇರವಾಗಿ ವ್ಯವಹರಿಸಬಹುದು. ಮಾಲೀಕ ಮತ್ತು ಬಾಡಿಗೆದಾರರ ಮಧ್ಯೆ  ಭೇಟಿ ನಿಗದಿ ಮಾಡುವುದಕ್ಕೆ  ಸಂಸ್ಥೆಯ ಪಾತ್ರ ಸೀಮಿತವಾಗಿರುತ್ತದೆ’ ಎಂದು ಅಮಿತ್‌  ಸ್ಪಷ್ಟನೆ ನೀಡುತ್ತಾರೆ.

​ಮಹಾರಾಷ್ಟ್ರದಲ್ಲಿ ಮನೆ ಬಾಡಿಗೆ ಪಡೆಯುತ್ತಿದ್ದಂತೆ  ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಾಯಿಸಬೇಕಾಗುತ್ತದೆ. ಇಲ್ಲಿಯೂ ಮಧ್ಯವರ್ತಿಗಳು ಬಾಡಿಗೆದಾರರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಾರೆ. ಆಧಾರ್‌ ಮೂಲಕವೇ   ಬಾಡಿಗೆ ಕರಾರು ಪತ್ರ ನೋಂದಾಯಿಸ ಬೇಕಾಗುತ್ತದೆ. ಹೀಗಾಗಿ ಸಂಸ್ಥೆಯ ಸಿಬ್ಬಂದಿ ಈ ಕೆಲಸವನ್ನೂ ಮಾಡಿ ಕೊಟ್ಟು ಬಾಡಿಗೆದಾರರ ಹಣ, ಸಮಯ ಉಳಿಸುತ್ತಾರೆ.

ಅರಂಭದಲ್ಲಿ ₹ 18 ಕೋಟಿ ಹೂಡಿಕೆ  ಮಾಡಲಾಗಿತ್ತು. ಆ ಮೊತ್ತ ಈಗ  ರೂ 83 ಕೋಟಿಗಳಿಗೆ ಏರಿಕೆಯಾಗಿದೆ. ಮುಂದಿನ 3 ವರ್ಷಗಳವರೆಗೆ ವಹಿವಾಟು ವಿಸ್ತರಣೆಗೆ ಹಣದ ಅಗತ್ಯ ಇಲ್ಲ. ಒಂದೂವರೆ ವರ್ಷದಲ್ಲಿ ಸಂಸ್ಥೆಯು ಲಾಭದತ್ತ ಮುಖ ಮಾಡಲಿದೆ ಎಂದೂ ಅಮಿತ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಫ್ರೀಡಂ’, ‘ರಿಲ್ಯಾಕ್ಸ್’ ಯೋಜನೆ
ಮಾಲೀಕರ ಪಾಲಿಗೆ ಇದು ಸಂಪೂರ್ಣ ಉಚಿತ ಸೇವೆ ಒದಗಿಸುತ್ತಿದೆ. ಬಾಡಿಗೆದಾರರು 9 ಮಾಲೀಕರನ್ನು ಉಚಿತವಾಗಿ ಸಂಪರ್ಕಿಸುವ ಸೌಲಭ್ಯವನ್ನು ಈ ತಾಣ ಒದಗಿಸುತ್ತದೆ. ಈ ಪ್ರಯತ್ನದಲ್ಲಿ ಬಾಡಿಗೆ ಮನೆ ಸಿಕ್ಕರೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

 ಇನ್ನಷ್ಟು ಸೂಕ್ತವಾದ ಮನೆಯ ಹುಡುಕಾಟಕ್ಕೆ ಸಂಸ್ಥೆಯ ನೆರವು ಬೇಕೆಂದರೆ ಎರಡು ಸೇವಾ ಶುಲ್ಕದ ಯೋಜನೆಗಳ ಪ್ರಯೋಜನ ಪಡೆಯಬಹುದು.  ₹ 999 ಪಾವತಿಸುವ ‘ಫ್ರೀಡಂ’ ಯೋಜನೆಯಡಿ,  ಬಾಡಿಗೆದಾರರು 25 ಮಾಲೀಕರನ್ನು ಸಂಪರ್ಕಿಸಬಹುದು.  ₹ 1,999 ಪಾವತಿಸುವ ‘ರಿಲ್ಯಾಕ್ಸ್‌’ ಯೋಜನೆಯಡಿ  ಸಂಸ್ಥೆಯ ನಿರ್ದಿಷ್ಟ ಅಧಿಕಾರಿಯು 50 ಮಂದಿ ಅರ್ಹ ಮಾಲೀಕರನ್ನು ಸಂಪರ್ಕಿಸಲು ನೆರವಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT