ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿಯಲಿ ಹಸಿರು ದಿಬ್ಬಣ

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬಾದಾಮಿ ಮತ್ತೆ ಕೈಬೀಸಿ ಕರೆಯುತ್ತಿದೆ- ಕಲಾರಸಿಕರನ್ನು, ಕಲಾಪ್ರೇಮಿಗಳನ್ನು, ಸಂಶೋಧಕರನ್ನು, ಪ್ರವಾಸಿಗರನ್ನು, ಚಿತ್ರರಂಗದವರನ್ನು... ಕಮರಿದ್ದ ಕಲೆಯ ಬಲೆಯಲ್ಲೀಗ ನವಚೇತನ. ಬಾದಾಮಿ ಅದೇ ಹಳೆಯ ಬಾದಾಮಿಯಾಗಿ ಉಳಿದಿಲ್ಲ. ಬದಲಾವಣೆಯ ಗಾಳಿ ಬೀಸಿದೆ. ಕಾಯಕಲ್ಪದ ಕಾರ್ಯದಿಂದಾಗಿ ಅಷ್ಟಿಷ್ಟು ಶಿಥಿಲಗೊಂಡ ಮೂರ್ತಿಗಳು, ಕೋಟೆ, ಹುಡೆ ಬುರುಜು ಮರುಜೀವ ಪಡೆದಿವೆ. ಮನಮೋಹಕ ವಸ್ತುಸಂಗ್ರಹಾಲಯ ಸಿದ್ಧಗೊಂಡಿದೆ.

ಅಳಿವಿನ ಅಂಚಿನಲ್ಲಿದ್ದ ಕಪ್ಪೆ ಅರಭಟ್ಟನ ಶಾಸನ ಹೊಸ ರೂಪ ಪಡೆದಿದೆ. ಅಲ್ಲಿಗೆ ಹೋಗಲು ಹಾದಿ ಸಜ್ಜಾಗಿದೆ. ಕಂಟಿಗಳ ಪೊದೆಗಳು ಮಾಯವಾಗಿ, ಬಯಲು ಶೌಚಾಲಯ ಕಣ್ಮರೆಯಾಗಿದೆ. ಸ್ವಚ್ಛತಾ ಯಜ್ಞದ ಫಲವಾಗಿ ಆ ಪರಿಸರದಲ್ಲಿ ಹಸಿರು ಹುಲ್ಲು ನಳನಳಿಸುತ್ತಿದೆ. ಬಣ್ಣ ಬಣ್ಣದ ಹೂವಿನ ಗಿಡಗಳು ತುಂಬಿವೆ. ಬಾದಾಮಿ ಕಲಾ ಶ್ರೀಮಂತಿಕೆಗೆ ಪುಟವಿಟ್ಟಂತೆ ಈಗ ಅಗಸ್ತ್ಯ ತೀರ್ಥದ ಮೆಟ್ಟಿಲುಗಳಲ್ಲೂ ಜೀವಂತಿಕೆ... ಯಾವುದೋ ಅನುಭೂತಿಯ ಆಸೆಯಲ್ಲಿ ಬಂದಿಳಿದ ಯಾತ್ರಿಕರು ನಿರಾಸೆಗೊಳ್ಳುವುದಿಲ್ಲ. ಕೊಳಕು ಕೊಚ್ಚಿಹೋಗಿದೆ. ಕಲಾಲೋಕದ ಸಿರಿ ಹೆಚ್ಚಿ ಪ್ರವಾಸಿಗರನ್ನು ಮೆಚ್ಚಿಸಿದೆ.

ಅಗಸ್ತ್ಯ ತೀರ್ಥದ ಉತ್ತರಕ್ಕೆ ಚಾರಣ ಪ್ರಿಯರ, ಶಿಲಾರೋಹಿಗಳ ಸ್ವರ್ಗವಾಗಿರುವ ಭವ್ಯ ಬಂಡೆಗಳು, ರಣಮಂಡಲಕೋಟೆ, ಶಿವಾಲಯಗಳು, ದಕ್ಷಿಣಕ್ಕೆ ವಾಸ್ತು ಶಿಲ್ಪದ ಖನಿಯಾಗಿರುವ ಗುಹಾಲಯಗಳಿವೆ. ಮಾನವ ವಿಕಾಸದ ವಿಜ್ಞಾನ ಪಾಠ ಹೇಳುವ ಮಾನವ ಪಾರ್ಕ್‌, ಪಶ್ಚಿಮದ ದಡದಲ್ಲಿರುವ ಎಲ್ಲಮ್ಮನ ಗುಡಿ, ಪೂರ್ವಕ್ಕೆ ನೀರಿನಲ್ಲಿ ತೇಲುವಂತೆ ಕಾಣುವ ಭೂತನಾಥ ಗುಡಿಗಳ ಸಂಕೀರ್ಣ, ಕುಷ್ಟುರಾಯನ ಗುಡಿ, ಮಧ್ಯೆ ವಿಶಾಲವಾದ ಜಲಾಶಯ... ವ್ಹಾವ್ ಬಾದಾಮಿಯ ಬೆಡಗನ್ನು, ಇಲ್ಲಿಯ ಕಲಾ ವೈಭವವನ್ನು ಈಗ ನೋಡಬೇಕು ನೀವು. ಇತಿಹಾಸದ ಪುಟವನ್ನು ಮತ್ತೊಮ್ಮೆ ಆದಿಯಿಂದ ಓದಿದ ಅನುಭವವಾಗದಿದ್ದರೆ ಕೇಳಿ....

ಬಾದಾಮಿಯ ಚೆಲುವು ಇಮ್ಮಡಿಗೊಳ್ಳಲು ಪ್ರಕೃತಿ ಕೃಪೆಯೂ ಇದೆ. ಧೋ ಎಂದು ಸುರಿದ ಮುಂಗಾರು ಮಳೆಗೆ ಕೊಳೆಯೆಲ್ಲ ಕೊಚ್ಚಿ ಹೋಗಿದೆ. ಗುಡ್ಡ ಮಡ್ಡಿ ಹಸುರಿನ ಹಾಸಿಗೆ ಹೊದ್ದಿದೆ. ಚಾಲುಕ್ಯ ಕಲಾ ಶಾಲೆ ಕಳೆಗಟ್ಟಿದೆ. ನವವಧುವಿನಂತೆ ಸಿಂಗಾರಗೊಂಡಿರುವ ಈ ಕಲಾ ಲೋಕವನ್ನು ನೋಡುವುದೇ ಹಬ್ಬ. ನಸುಗೆಂಪು ಬಣ್ಣದ ಬಂಡೆಗಳ ಗುಡ್ಡದ ಮೇಲ್ಭಾಗದಲ್ಲಿ ಸಮತಟ್ಟಾದ ಪ್ರದೇಶ. ಇದು ಅಗಸ್ತ್ಯ ತೀರ್ಥದತ್ತ ಸ್ವಲ್ಪ ಇಳಿಜಾರಾಗಿದೆ. ಮಗಿಮಳೆ ಬಿಡದೆ ಜಡಿಮಳೆಯಾಗಿ ಸುರಿದಾಗ ಸಂಗ್ರಹವಾದ ನೀರು ಅಬ್ಬರಿಸುತ್ತ ರಭಸದಿಂದ ಅಗಸ್ತ್ಯ ತೀರ್ಥದತ್ತ ಹರಿದುಬರುವುದು. ಕಡಿದಾದ ಬಂಡೆಗಳ ಮೇಲೆ ಧುಮ್ಮಿಕ್ಕಿ ಬೀಳುವ ದಿಡಗು (ಅಲ್ಪಾಯು ಜಲಪಾತ) ನಯನ ಮನೋಹರ! ಬೆಟ್ಟದ ತುದಿಯಿಂದ ಶ್ವೇತ ಸುಂದರಿಯಂತೆ ಬಳಕುತ್ತ ಬಂಡೆಗಲ್ಲಿನ ನಡುವೆ ಅಂಕುಡೊಂಕಾಗಿ ಹರಿಯುವ ಈ ಜಲಧಾರೆಯ ಚೆಲುವು ಮೋಹಕ.

ಸುಮಾರು 250 ಅಡಿಗಳ ಬುಡದಲ್ಲಿ ಬೀಳುವ ನೀರು ಬಂಡೆಗಳಿಗೆ ಅಪ್ಪಳಿಸಿದಾಗ ಮುತ್ತಿನ ಮಣಿಗಳನ್ನು ತೂರಿದಂತೆ ಕಾಣುವ ದೃಶ್ಯ ಆಕರ್ಷಣೀಯ. ನಂತರ ಕಲ್ಲು ಬಂಡೆಗಳ ಸಂದಿಗೊಂದಿಗಳಲ್ಲಿ ಸದ್ದುಮಾಡುತ್ತ ಸಡಗರ ಸಂಭ್ರಮದಿಂದ ನೊರೆನೊರೆಯಾಗಿ ಹರಿದು ಬರುವ ಜಲಧಾರೆ ಹಾಲಿನ ಹೊಳೆಯಂತೆ ಕಾಣುವುದು. ಸೂರ್ಯಕಿರಣಗಳ ಚೆಲ್ಲಾಟದಿಂದ ಅಲ್ಪಾಯು ಜಲಪಾತದ ಹಿಂದೆ ನೃತ್ಯಗೈಯುವ ಕಾಮನಬಿಲ್ಲು ಕಣ್ಮನಗಳನ್ನು ತಣಿಸುವುದು. ದಿಡಿಗಿನ ಮಗ್ಗಲು ಜವಳು ನೆಲದಲ್ಲಿ ಊಟಿ ಕೀಳುವುದರಿಂದ ಚಿಮ್ಮುವ ಕಾರಂಜಿಗಳ ವೈವಿಧ್ಯಮಯ ವೈಯಾರ ವರ್ಣಿಸಲಸದಳ. ಈ ಬೆಡಗಿನ ದಿಡಗಿನ ಬಗ್ಗೆ ಚಾಲುಕ್ಯರ ತಾಮ್ರ ಶಾಸನವೊಂದು ಉಲ್ಲೇಖಿಸಿದೆ.

ಗುಡ್ಡದ ಮೇಲಿಂದ ಅಬ್ಬರಿಸುತ್ತ ಧರೆಗಿಳಿಯುವ ಈ ಜಲಧಾರೆ, ಎರಡು ಕವಲುಗಳಾಗಿ ಹರಿದು ಬರುವುದು. ಹೀಗಾಗಿ ಸ್ಥಳೀಯರು ಇದಕ್ಕೆ ಅಕ್ಕತಂಗಿಯರ ದಿಡಗು ಎಂದು ಕರೆಯುತ್ತಾರೆ. ಈ ವರ್ಷದ ಮಗಿಮಳೆ ಅನೇಕ ಸಮಸ್ಯಗಳಿಗೆ ಕಾರಣವಾಗಿದೆ. ಆದರೆ ಬಾದಾಮಿಯಲ್ಲಿ ಅಲ್ಪಾಯು ಜಲಪಾತಕ್ಕೆ ಮರುಹುಟ್ಟು ನೀಡಿದೆ... ಈ ರಮಣೀಯ ನೋಟ ನ ಭೂತೋ ನ ಭವಿಷ್ಯತ್ ಎಂಬಂತಿದೆ.

ಈ ನಯನ ಮನೋಹರ ದೃಶ್ಯ ವರ್ಷವಿಡೀ ಸಿಗುವಂತೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ. ಮನಸಿದ್ದಲ್ಲಿ ಮಾರ್ಗವಿದೆ. ಹೊಂಡದಲ್ಲಿಯ ನೀರನ್ನು ಮೋಟಾರು ಮೂಲಕ ಮೇಲೆತ್ತಿ ಹೊಂಡದತ್ತ ಇಳಿಜಾರಾಗಿರುವ ಕಲ್ಲು ಬಂಡೆಯ ಮೇಲೆ ಬೀಳುವಂತೆ ಮಾಡಿದರೆ ಅಲ್ಪಾಯು ಜಲಪಾತ ಚಿರಾಯು ಜಲಪಾತವಾಗಿ ಮಾರ್ಪಾಡಾಗುವುದು. ಸುಮಾರು 250 ಅಡಿ ಎತ್ತರದಿಂದ ರಭಸದಿಂದ ಬೀಳುವ ನೀರಿನ ಬುಡದಲ್ಲಿ ಚಕ್ರಗಳನ್ನು ಅಳವಡಿಸಿದರೆ ವಿದ್ಯುತ್ ಉತ್ಪಾದನೆ! ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಜೊತೆಗೆ ಸರಕಾರದ ಎಲ್ಲಾ ಇಲಾಖೆಗಳು ಒಮ್ಮನಸ್ಸಿನಿಂದ ಕೈ ಜೋಡಿಸಿದರೆ ಇಲ್ಲೊಂದು ಪವಾಡವೇ ಆದೀತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT