ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ ಕೃಷಿ: ಮತ್ತಷ್ಟು ಹೊಸತು...

Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಬಾದಾಮಿ ಸಸಿ ಬೇಕಲ್ಲಾ. ಎಲ್ಲಿ ಸಿಗುತ್ತದೆ’ ಎಂದರು ಕಾರವಾರದ ಎಲ್.ಎಂ.ಭಟ್ರು. ‘ಅಂಥ ಶ್ರೀಮಂತ ರಾಷ್ಟ್ರದಲ್ಲೂ ನೀರನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತಾರಲ್ಲಾ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದು ಕೋಲಾರದ ರೈತ ಚಂದ್ರಶೇಖರ್. ‘ಕೂಲಿಕಾರರ ಸಮಸ್ಯೆಗೆ ಬೃಹತ್ ಯಂತ್ರಗಳ ಬಳಕೆಯ ಬಗ್ಗೆ ಓದಿದ ಮೇಲೆ, ಅಡಿಕೆ ಕೊಯ್ಲಿಗೆ ನಮಗೂ ಇಂಥ ಯಂತ್ರಗಳು ಬೇಕು’ ಎಂದರು ಪುತ್ತೂರಿನ ಕಾರಂತರು...!

ಕೃಷಿ ಪುರವಣಿಯಲ್ಲಿ ಇತ್ತೀಚೆಗೆ ಪ್ರಕಟವಾದ ‘ಬಾದಾಮಿ ನಾಡಿನಿಂದ’ ಸರಣಿಗೆ ಓದಗರು ನೀಡಿದ ಪ್ರತಿಕ್ರಿಯೆಗಳ ಸ್ಯಾಂಪಲ್ ಗಳಿವು. ಇಂಥ ಪ್ರತಿಕ್ರಿಯೆಗಳಲ್ಲಿ ಕೆಲವು ಅಚ್ಚರಿ ಮಾಹಿತಿಗಳಿದ್ದರೆ, ಕೆಲವು ಕುತೂಹಲಕರ ಪ್ರಶ್ನೆಗಳೂ ಇದ್ದವು. ಇಂಥ ಅನೇಕ ಪ್ರಶ್ನೆಗಳಿಗೆ ಕ್ಯಾಲಿಫೋರ್ನಿಯಾ ಬಾದಾಮಿ ಮಂಡಳಿ (ಎಬಿಸಿ) ವಿವರಣೆಯ ಜೊತೆಗೆ ಒಂದಷ್ಟು ಹೊಸ ಮಾಹಿತಿಗಳನ್ನು ನೀಡಿದೆ.

ಭಾರತದಲ್ಲಿ ಬೆಳವಣಿಗೆ ಕಡಿಮೆ: ಬಾದಾಮಿ ಕೃಷಿಗೆ ಮೆಡಿಟರೇನಿಯನ್ (hot, dry summers and cool, rainy winters) ಹವಾಗುಣ ಅಗತ್ಯ. ಅಂಥ ವಾತಾವರಣ ಭಾರತದಲ್ಲಿಲ್ಲ. ಹಾಗಾಗಿ ಇಲ್ಲಿ ಬಾದಾಮಿ ಬೆಳೆಯುವುದಿಲ್ಲ. ಭಟ್ಟರು ಕೇಳಿದಂತೆ ಬಾದಾಮಿ ಗಿಡ ದೊರೆತರೂ ಬೆಳವಣಿಗೆ ಕಷ್ಟ. ಕ್ಯಾಲಿಫೋರ್ನಿಯಾದ ಸೆಂಟ್ರಲ್ ವ್ಯಾಲಿಯಲ್ಲಿ ಇಂಥ ಹವಾಗುಣವಿದೆ. ಹಾಗಾಗಿಯೇ ಅಲ್ಲಿ ಶೇ 72ರಷ್ಟು ಕೃಷಿ ಕುಟುಂಬಗಳು ಬಾದಾಮಿ ಬೆಳೆಯುತ್ತಿವೆ. ಬೆಳೆದ ಬಾದಾಮಿಯನ್ನು ಸಂಸ್ಕರಣಾ ಘಟಕಕ್ಕೆ ರವಾನಿಸುತ್ತಾರೆ. ಈ ಘಟಗಳಿಗೆ ಬಾದಾಮಿ ಮಾರಾಟದ ಜವಾಬ್ದಾರಿ. ಸಂಸ್ಕರಣಾ ಘಟಕದವರೂ ಬಾದಾಮಿ ಬೆಳೆಯುತ್ತಾರೆ. ಆದರೆ, ಯಾವುದೇ ಕಂಪೆನಿಗಳ ಒಡೆತನದಲ್ಲಿ ಬಾದಾಮಿ ತೋಟಗಳಿಲ್ಲ ಎನ್ನುತ್ತದೆ ಕ್ಯಾಲಿಫೋರ್ನಿಯಾ ಬಾದಾಮಿ ಮಂಡಳಿ(ಎಬಿಸಿ).

ನಿರ್ಬಂಧಗಳಿಲ್ಲ, ಮಿತ ಬಳಕೆಯಿದೆ
ಕ್ಯಾಲಿಫೋರ್ನಿಯಾದಾದ್ಯಂತ ವೈವಿಧ್ಯಮಯ ಹವಾಗುಣವಿದೆ. ಬಾದಾಮಿ ತೋಟಗಳಿರುವ ಶೇ 65ರಷ್ಟು ಪ್ರದೇಶದಲ್ಲಿ 508 ಮಿ.ಮೀಗಿಂತ ಕಡಿಮೆ ಮಳೆ ಬೀಳುತ್ತದೆ. ಹಾಗಾಗಿ ನೀರಿನ ಬಳಕೆ ಮಿತವಾಗಿದೆ. ‘ಬಾದಾಮಿಯ ಎರಡನೇ ಸರಣಿಯಲ್ಲಿ’ ಬಾದಾಮಿ ಬೆಳೆವ ಪ್ರದೇಶದ ನೀರಿನಲ್ಲಿ ಕ್ಲೋರೈಡ್ ಅಂಶ ಹೆಚ್ಚು. ಹಾಗಾಗಿ ಬೆಳೆಗಾರರು ಕೊಳವೆಬಾವಿ ಬಳಸುವುದಿಲ್ಲ. ಕೇವಲ ಮೇಲ್ಮೈ ನೀರನ್ನೇ ಅವಲಂಬಿಸಿದ್ದಾರೆ. ಕಲುಷಿತ ಅಂತರ್ಜಲ ಬಳಸಬೇಕಾದರೂ, ಶುದ್ಧೀಕರಿಸಿ ಬಳಸಬೇಕೆಂದು ಅಮೆರಿಕ ಸರ್ಕಾರದ ಕೃಷಿ ಇಲಾಖೆ, ಆಹಾರ ಸುರಕ್ಷತಾ ನಿಯಮದ ಅಡಿ ನಿರ್ಬಂಧ ಹೇರಿದೆ’ ಎಂದು ಉಲ್ಲೇಖಿಸಲಾಗಿತ್ತು. ಆದರೆ, ‘ಅಂತರ್ಜಲ ಬಳಕೆಗಾಗಲಿ, ಕೊಳವೆ ಬಾವಿ ಕೊರೆಸುವುದಕ್ಕಾಗಲಿ ಸರ್ಕಾರ ಅಂಥ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ’ ಎಂದು ಎಬಿಸಿ ಸ್ಪಷ್ಟಪಡಿಸಿದೆ. ಹಾಗೆಯೇ, ಬಾದಾಮಿ ಕೃಷಿ ಒಂದೇ ಜಲಮೂಲ ಆಧರಿಸಿಲ್ಲ. ಮಳೆ, ಹಿಮಬೆಟ್ಟಗಳಿಂದ ಕರಗುವ ನೀರು ಹಾಗೂ ಅಂತರ್ಜಲ ಸೇರಿದಂತೆ ವಿವಿಧ ಜಲ ಮೂಲಗಳನ್ನು ಆಶ್ರಯಿಸಿದೆ. ಕೆಲವು ಬೆಳೆಗಾರರು ಕೊಳವೆ ಬಾವಿಗಳನ್ನೂ ಬಳಸುತ್ತಿದ್ದಾರೆ. ಆದರೆ ‘ನೀರನ್ನು ಮಿತವಾಗಿ ಬಳಸಬೇಕು. ಉತ್ತಮ ಬಾದಾಮಿಗಾಗಿ ಪರಿಶುದ್ಧ ನೀರು (ನಿಗದಿತ ಪೋಷಕಾಂಶಗಳುಳ್ಳ ನೀರನ್ನು) ಉಪಯೋಗಿಸಬೇಕೆಂಬ ಸ್ವಘೋಷಿತ ನಿಯಮಗಳನ್ನು ಪಾಲಿಸುತ್ತಾರೆ. ಅದಕ್ಕಾಗಿ  ಪರಿಣಾಮಕಾರಿ ತಂತ್ರಜ್ಞಾನ­ಗಳನ್ನು ಅಳವಡಿಸಿಕೊಂಡಿದ್ದಾರೆ’ ಎಂದು ಮಂಡಳಿ ಸ್ಪಷ್ಟಪಡಿಸಿದೆ.

‘ಒಂದು ಬಾದಾಮಿ ಬೆಳೆಯಲು 1.1ಗ್ಯಾಲನ್ ನೀರು ಬೇಕು’ ಎಂದು ಲೇಖನದಲ್ಲಿ ಪ್ರಸ್ತಾಪಿಸಲಾಗಿತ್ತು. ಅದು ನಿಜ, ಆದರೆ ಈ ಪ್ರಮಾಣದ ನೀರು ಬಾದಾಮಿ ಬೆಳೆಸುವ ಜೊತೆಗೆ, ಅದರ ಮೇಲಿನ ಸಿಪ್ಪೆ ಬೆಳೆವಣಿಗೆಗೂ ಸಹಕರಿಸುತ್ತದೆ. ಆ ಸಿಪ್ಪೆಯನ್ನು ಜಾನುವಾರುಗಳಿಗೆ ಮೇವಾಗಿ, ಪರ್ಯಾಯ ಇಂಧನ ತಯಾರಿಕೆಯ ಕಚ್ಚಾವಸ್ತುವಾಗಿ (ಫಾಸಿಲ್ ಫ್ಯುಯೆಲ್) ಬಳಸಲಾಗುತ್ತಿದೆ. ಈ ಮೂಲಕ ಪರಿಸರ ಸ್ನೇಹಿ ತಂತ್ರಜ್ಞಾ­ನಕ್ಕೆ ಒತ್ತು ನೀಡಲಾಗಿದೆ’ ಎಂದು ಎಬಿಸಿ ವಿವರಿಸಿದೆ.

ಬಾಡಿಗೆ ಜೇನು ಏಕೆ
ಬಾದಾಮಿ ಪರಾಗಸ್ಪರ್ಶಕ್ಕೆ ಬಾಡಿಗೆ ಜೇನು ಏಕೆ? ಎಂಬುದು ಹಲವರ ಕುತೂಹಲದ ಪ್ರಶ್ನೆ. ‘ನಿಜ, ಬಾಡಿಗೆ ಜೇನ್ನೊಣಗಳಿಂದಲೇ ಬಾದಾಮಿ ಅರಳುತ್ತದೆ. ಅದಕ್ಕೆ ಕಾರಣ, ಕ್ಯಾಲಿಫೋರ್ನಿಯಾದ ಸೆಂಟ್ರಲ್ ವ್ಯಾಲಿಯಲ್ಲಿ ಕಾಡು ಜೇನಿನ ಪ್ರಮಾಣ ಕಡಿಮೆ. ಬಹು ದೊಡ್ಡ ಪ್ರಮಾಣದಲ್ಲಿರುವ ಬಾದಾಮಿ ಮರಗಳಲ್ಲಿ ನಿಗದಿತ ಅವಧಿಯಲ್ಲಿ ಪರಾಗಸ್ಪರ್ಶ ಕ್ರಿಯೆ ನಡೆಯಬೇಕಿರುವುದರಿಂದ ಹೆಚ್ಚುವರಿ ಕಾಡು ಜೇನ್ನೊಣಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಆದರೆ, ಇಷ್ಟು ಬಾದಾಮಿ ಮರಗಳಿಗೆ ಇಂತಿಷ್ಟೇ ಜೇನಿನ ಪೆಟ್ಟಿಗೆಗಗಳು (48 ಶತಕೋಟಿ ಜೇನುಹುಳುಗಳ ಅಗತ್ಯದ ಬಗ್ಗೆ ಉಲ್ಲೇಖಿಸಲಾಗಿತ್ತು) ಜೇನ್ನೊಣಗಳು ಬೇಕೆಂದು ಅಂದಾಜಿಸುವುದು ಕಷ್ಟ’ ಎಂದು ಮಂಡಳಿ ಸ್ಪಷ್ಟಪಡಿಸಿದೆ.

‘ಅತಿಯಾದ ಕೀಟನಾಶಕದ ಬಳಕೆ, ಬೆಳೆ ಹಾಗೂ ರುಚಿಯಲ್ಲಿ ಏಕತಾನತೆಯಿಂದ ಜೇನು ಹುಳುಗಳು ಕ್ಷೀಣಿಸುತ್ತಿವೆ. ಹಾಗಾಗಿ ಕೀಟನಾಶಕಗಳ ಬಳಕೆ ನಿಯಂತ್ರಣಕ್ಕಾಗಿ ಎಬಿಸಿ ನಿಯಮ ರೂಪಿಸುತ್ತಿದೆ’ ಎಂದು ಸರಣಿ ಮೂರರಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಕೀಟನಾಶಕ ನಿಯಂತ್ರಣಕ್ಕೆ ಮಂಡಳಿ ಅಂಥ ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಬದಲಿಗೆ, ಬಾದಾಮಿ ಹಾಗೂ ಜೇನು ಕೃಷಿಕರಿಗೆ ಆರೋಗ್ಯವಂತ ಜೇನ್ನೊಣಗಳ ಸಾಕಾಣಿಕೆ ಬಗ್ಗೆ ಮಾರ್ಗದರ್ಶನ ನೀಡುತ್ತಿದೆ’ ಎಂದು ಮಂಡಳಿ ಸ್ಪಷ್ಟಪಡಿಸಿದೆ. 

‘ಜೇನುನೊಣಗಳ ಸಮಸ್ಯೆಯಿಂದಾಗಿ 2003-2009ರ ನಡುವೆ ಬಾದಾಮಿ ಉತ್ಪಾದನೆ ಶೇ 26ಷ್ಟು ಕುಸಿದಿತ್ತು. ನೀರಿನ ಕೊರತೆಯಿಂದ 2007-2009ರಲ್ಲಿ ಶೇ 10 ರಿಂದ 15ರಷ್ಟು ಉತ್ಪಾದನೆ ಕುಸಿದಿತ್ತು’ ಎಂದು ಸರಣಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ‘ಉತ್ಪಾದನೆ ಕುಸಿಯಲು ಬೇರೆ ಬೇರೆ ಕಾರಣಗಳಿದ್ದು, ಅದರಲ್ಲಿ ಜೇನ್ನೊಣಗಳ ಸಮಸ್ಯೆ ಮತ್ತು ಪರಾಗಸ್ಪರ್ಶವೂ ಒಂದು ಕಾರಣವಿರಬಹುದು. ಮಾತ್ರವಲ್ಲ, ದಶಕದ ಅವಧಿಯಲ್ಲಿ ಬಾದಾಮಿ ಉತ್ಪಾದನೆಯಲ್ಲಿ ಕುಸಿತವಾಗಿಲ್ಲ. ಆ ಮಟ್ಟಿಗೆ ಬಾದಾಮಿ ಮಂಡಳಿ ಬೆಳೆಗಾರರಿಗೆ ಮಾರ್ಗದರ್ಶನ ನೀಡುತ್ತಿದೆ’ ಎನ್ನುವುದು ಮಂಡಳಿ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT