ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನ್ಸುರಿ ಕೊಂಡಿ; ಗೋಡ್ಖಿಂಡಿ

ವ್ಯಕ್ತಿ ಸ್ಮರಣೆ
Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಏಕಲವ್ಯನ ಸಾಧನೆ, ಅಭ್ಯಾಸ, ಪರಿಶ್ರಮದ ಕಥೆ ಗೊತ್ತಲ್ಲ? ಸಂಗೀತದಲ್ಲಿ ಇಂತಹ ‘ಏಕಲವ್ಯ’ ಸಾಧನೆ ಮಾಡಿ ಕರ್ನಾಟಕದ ಮೊದಲ ಬಾನ್ಸುರಿ ವಾದಕ ಎಂಬ ಖ್ಯಾತಿಗೆ ಪಾತ್ರರಾಗಿದ್ದವರು ಪಂ. ವೆಂಕಟೇಶ್‌ ಗೋಡ್ಖಿಂಡಿ. ಸಂಗೀತವೇ ಇರಲಿ, ನೃತ್ಯವೇ ಇರಲಿ ಈ ಕಲಾ ಪ್ರಕಾರಗಳನ್ನು ಗುರು ಮುಖೇನ ಕಲಿಯಬೇಕು, ಗುರುಗಳ ಸಮ್ಮುಖದಲ್ಲಿ ಅಭ್ಯಾಸ ಮಾಡಬೇಕು ಎಂಬುದು ನಿಯಮ.

ಏಕೆಂದರೆ ಗುರುಗಳು ಸಾಧಕರಿರುತ್ತಾರೆ, ಕಲೆಯಲ್ಲಿ ಪಳಗಿದವರಿರುತ್ತಾರೆ, ಪರಿಣತರಿರುತ್ತಾರೆ, ಸಂಗೀತದಲ್ಲಿ ಪಾಂಡಿತ್ಯ ಹೊಂದಿ ಕರಗತ ಮಾಡಿದವರಿರುತ್ತಾರೆ. ಆದರೆ ಗುರುವಿಲ್ಲದೇ ಸಂಗೀತ ಕಲಿಯಲು ಸಾಧ್ಯವಿಲ್ಲವೇ? ಸ್ವಪ್ರಯತ್ನದಿಂದ, ಸತತ ಪರಿಶ್ರಮದಿಂದ, ಆಸಕ್ತಿ, ಆತ್ಮವಿಶ್ವಾಸದಿಂದ ಸಂಗೀತದಲ್ಲಿ ಸಾಧನೆ ಮಾಡ ಲಾಗದೇ...? ಖಂಡಿತಾ ಸಾಧ್ಯ ಎಂದು ತೋರಿಸಿಕೊಟ್ಟು ಹಿಂದೂಸ್ತಾನಿ ಸಂಗೀತದ ಬಾನ್ಸುರಿಯಲ್ಲಿ, ಗಾಯನದಲ್ಲಿ, ಹಾರ್ಮೋನಿಯಂ ವಾದನದಲ್ಲಿ ಸಾಧನೆಯ ಶಿಖರ ಏರಿದವರು ಈ ಅಪರೂಪದ ಬಾನ್ಸುರಿ ವಾದಕ.

ಧಾರವಾಡದಲ್ಲಿ 1940ರಲ್ಲಿ ಹುಟ್ಟಿದ ಪಂ. ವೆಂಕಟೇಶ್‌ ಗೋಡ್ಖಿಂಡಿ ಅವರಿಗೆ ಚಿಕ್ಕಂದಿನಿಂದಲೂ ಸಂಗೀತದಲ್ಲಿ ಆಸಕ್ತಿ ಇತ್ತು. ಮನೆಯಲ್ಲಿ ಉತ್ತಮ ಸಂಗೀತ ವಾತಾವರಣವೂ ಇತ್ತು. ಇವರ ತಂದೆ ಉತ್ತಮ ಹಾರ್ಮೋನಿಯಂ ವಾದಕರಾಗಿದ್ದರು. ಹೀಗಾಗಿ ಮೊದಲು ಹಾರ್ಮೋನಿಯಂನಲ್ಲಿ ಒಲವು ಬೆಳೆಯಿತು. ಧಾರವಾಡ ಸಂಗೀತದ ತವರು. ಸಂಗೀತ ದಿಗ್ಗಜರೆಲ್ಲರ ಒಡನಾಟ, ಜತೆಗೆ ಗಾಯಕ ಪಂ. ಮಾಧವ ಗುಡಿ ಅವರು ಬಾಲ್ಯ ಸ್ನೇಹಿತರಾಗಿದ್ದರು. ಇವರೆಲ್ಲರ ಸಂಗೀತ ಗೋಡ್ಖಿಂಡಿ ಅವರಿಗೆ ಸತತ ಪ್ರೇರಣೆ ನೀಡಿತ್ತು.

ಹಾರ್ಮೋನಿಯಂನಲ್ಲಿ ಪಾಂಡಿತ್ಯ ಪಡೆದ ಬಳಿಕ ಧಾರವಾಡದ ಐವರು ಸಂಗೀತ ರತ್ನಗಳಾದ ಗಂಗೂಬಾಯಿ ಹಾನಗಲ್‌, ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಕುಮಾರ ಗಂಧರ್ವ ಹಾಗೂ ಭೀಮಸೇನ ಜೋಶಿ ಅವರ ಸಂಗೀತ ಕಛೇರಿಗಳಿಗೆ ಹಾರ್ಮೋನಿಯಂ ಸಾಥಿಯನ್ನೂ ನೀಡಲಾರಂಭಿಸಿದರು. ಇವರೆಲ್ಲರ ಸಂಗೀತ ಕೇಳಿ ಕೇಳಿ ಗಾಯನ ಶೈಲಿಯನ್ನೂ ರೂಢಿಸಿಕೊಂಡರು. ಹೀಗೆ ಹಾರ್ಮೋನಿಯಂನಲ್ಲಿ ಪರಿಪಕ್ವತೆ ಸಾಧಿಸಿಕೊಂಡರು.

ಅದೇ ಸಮಯದಲ್ಲಿ ಧಾರವಾಡದಲ್ಲಿ ಸಂಗೀತಗಾರರಾಗಿದ್ದ ನಾರಾಯಣರಾವ್ ಮಜುಂದಾರ್‌ ಅವರ ಬಳಿ ಕೆಲ ದಿನ ಗಾಯನ ಕಲಿತರು. ಹೀಗೆ ಹಾರ್ಮೋನಿಯಂ, ಗಾಯನಗಳಲ್ಲಿ ಪಳಗಿದರು. ಗಾಯನದಲ್ಲಿ ಕಿರಾಣಾ ಘರಾಣ ಸಂಗೀತ ಶೈಲಿಯನ್ನು ರೂಢಿಸಿ ಕೊಂಡಿದ್ದ ಈ ಹಿರಿಯ ವಿದ್ವಾಂಸ, ಬಾನ್ಸುರಿಯಲ್ಲಿ ಕೂಡ ಗಾಯನವನ್ನು ಹಾಗೇ ಪಡಿಮೂಡಿಸುತ್ತಿದ್ದರು. ಇದನ್ನು ಸ್ವತಃ ಪಂ. ಭೀಮಸೇನ ಜೋಶಿ ಅವರೂ ಕೊಂಡಾಡಿದ್ದರು.

ಕೊಳಲ ಗಾನದ ಮೋಡಿ
ಅದು ಊರ ಜಾತ್ರೆಯ ಸಂಭ್ರಮ. ಆಟಿಕೆಗಳ ಹಾಗೆ ಕೊಳಲನ್ನೂ ಅಲ್ಲಿ ಮಾರುತ್ತಿದ್ದರು. ಅದರ ನಾದಕ್ಕೆ ಮಾರು ಹೋದ ವೆಂಕಟೇಶ್‌ ಗೋಡ್ಖಿಂಡಿ ಅವರ ಕೈಗೆ ಯಾರೋ ಒಂದು ಕೊಳಲು ಕೊಟ್ಟರಂತೆ. ಸಂಗೀತದಲ್ಲಿ ಜ್ಞಾನ ಪಡೆದುದನ್ನು ಜಾಣ್ಮೆಯಿಂದ ಬಳಸಿಕೊಂಡು ಕೊಳಲಿನಲ್ಲಿ ಗಾಯನವನ್ನು ಪಡಿಮೂಡಿಸಲು ಪ್ರಯತ್ನಿಸಿದರು. ಮುಂದೆ ಕಲಿಯುತ್ತಾ ಕಲಿಯುತ್ತಾ ಬಾನ್ಸುರಿಯಲ್ಲೂ ಸಾಕಷ್ಟು ಹಿಡಿತ ಸಾಧಿಸಿದರು. ಓದು ಮುಗಿಸಿ ಧಾರವಾಡ ಆಕಾಶವಾಣಿಗೆ ಸೇರಿದರು. ಅಲ್ಲಿ ಸಂಗೀತಕ್ಕೆ ವಿಪುಲ ಅವಕಾಶ ದೊರೆಯಿತು.

ಆಗಿನ ಕಾಲದಲ್ಲಿ ಬಾನ್ಸುರಿಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ಪಂ. ಪನ್ನಾಲಾಲ್‌ ಘೋಷ್‌ ಅವರ ನುಡಿಸಾಣಿಕೆ ಕೇಳಿ ಕೇಳಿ ತಾವೂ ಹೆಚ್ಚಿನ ಅಭ್ಯಾಸ ಮಾಡಿಕೊಂಡರು. ತಪ್ಪು-ಒಪ್ಪುಗಳನ್ನು ಗಮನಿಸುತ್ತಾ, ಕೊಳಲಿನಲ್ಲಿ ‘ಷಡ್ಜ’ (ಆಧಾರ ಸ್ವರ) ಹಿಡಿಯುವುದರಿಂದ ಆರಂಭಿಸಿ ರಾಗಾಲಾಪನೆ ಯಲ್ಲೂ ಸತತವಾಗಿ ತೊಡಗಿಸಿಕೊಂಡರು.

1970ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಉದ್ಯೋಗಕ್ಕೆ ಸೇರಿದರು. ಉದ್ಘೋಷಕರಾಗಿ ವೃತ್ತಿ ಆರಂಭಿಸಿ ನಿಲಯ ನಿರ್ದೇಶಕರು, ವಿಶೇಷ ಅಧಿಕಾರಿಯಾಗಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಹೈದರಾಬಾದ್‌, ಪಣಜಿ, ದೆಹಲಿ, ಮಂಗಳೂರು ಆಕಾಶವಾಣಿಗಳ ಲ್ಲಿಯೂ ಕೆಲಸ ಮಾಡಿದರು. ಸುಮಧುರ ರಾಗಗಳಾದ ಶುದ್ಧ ಕಲ್ಯಾಣ್‌, ದರ್ಬಾರಿ ಕಾನಡ, ಮಿಯಾಕಿ ಮಲ್ಹಾರ್‌ ರಾಗಗಳನ್ನು ವೆಂಕಟೇಶ್‌ ಗೋಡ್ಖಿಂಡಿ ಬಹಳ ಇಷ್ಟಪಡುತ್ತಿದ್ದರು. ಇದನ್ನು ಬಾನ್ಸುರಿಯಲ್ಲಿ ಹೆಚ್ಚಾಗಿ ನುಡಿಸುತ್ತಿದ್ದರು.

ಅಗಾಧವಾದ ಶಿಷ್ಯವೃಂದ
ಬಾನ್ಸುರಿ ವಾದನದಲ್ಲಿ ಖ್ಯಾತರಾದ ಇವರ ಮಗ ಪಂ. ಪ್ರವೀಣ್‌ ಗೋಡ್ಖಿಂಡಿ, ಮೊಮ್ಮಗ ಷಡ್ಜ ಅವರೂ ಸೇರಿದಂತೆ ಅಗಾಧವಾದ ಶಿಷ್ಯವೃಂದವನ್ನು ಇವರು ಹೊಂದಿದ್ದಾರೆ. ತಮ್ಮಲ್ಲಿರುವ ಅಸಾಧಾರಣ ಚಾಕಚಕ್ಯತೆ, ನುಡಿಸಾಣಿಕೆಯ ತಂತ್ರಗಾರಿಕೆಯನ್ನು ಎಲ್ಲ ಶಿಷ್ಯಂದಿರಿಗೂ ಧಾರೆ ಎರೆದರು. ಯಾವುದೇ ತಾರತಮ್ಯ ತೋರದೆ ಎಲ್ಲ ಶಿಷ್ಯರ ಮೇಲೂ ಅಪಾರ ಕಾಳಜಿ, ಕಳಕಳಿ ಇಟ್ಟು ಕಲಿಸಿದರು. ಇದರ ಫಲವಾಗಿ ಇಂದು ಅನೇಕ ಶಿಷ್ಯಂದಿರು ದೇಶದಾದ್ಯಂತ ಉತ್ತಮ ಸ್ಥಾನದಲ್ಲಿದ್ದಾರೆ.

ಅಶ್ವಿನ್‌ ಬಾಲಿವುಡ್‌ ಸಂಗೀತದಲ್ಲಿ ಮುಂಚೂಣಿಯಲ್ಲಿದ್ದರೆ, ದತ್ತಾತ್ರೇಯ ದೇಸಾಯಿ ಅಖಿಲ ಭಾರತ ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ವಿಜೇತ. ಕಲ್ಯಾಣ್‌ ಎಂಬ ಹುಡುಗನ ಸಾಧನೆಯೂ ಮೆಚ್ಚುವಂಥದ್ದೆ, ಶಿರಸಿಯ ನಾಗರಾಜ ಹೆಗಡೆ ಬಾನ್ಸುರಿಯಲ್ಲಿ ಗ್ರೇಡೆಡ್‌ ಕಲಾವಿದ. ಸುಮಾರು 200ಕ್ಕೂ ಹೆಚ್ಚು ಉತ್ತಮ ಕಲಾವಿದರನ್ನು ರೂಪಿಸಿದ ಹೆಗ್ಗಳಿಕೆ ಇವರದು. ಬಾನ್ಸುರಿಯಲ್ಲಿ ಮೀಂಡ್ಸ್‌, ಗಮಕಗಳ ಪ್ರಯೋಗ, ಸ್ವರ ಶುದ್ಧತೆ, ಲಯ, ನಿಖರತೆ, ರಾಗ ವೈವಿಧ್ಯ ಸಾಧ್ಯ.

ಇದನ್ನು ಯಥಾವತ್‌ ಪಾಲಿಸಿ ಕೇಳುಗರಲ್ಲಿ ರೋಮಾಂಚನ ಉಂಟುಮಾಡುತ್ತಿದ್ದ ಪಂ. ಗೋಡ್ಖಿಂಡಿ ಅವರ ಪುತ್ರ ಪ್ರವೀಣ್‌ ಗೋಡ್ಖಿಂಡಿ ಹಾಗೂ ಮೊಮ್ಮಗ ಷಡ್ಜ ಅವರ ‘ಮೂರು ತಲೆಮಾರಿನ ಬಾನ್ಸುರಿ ವಾದನ’ ಬಹಳ ಜನಪ್ರಿಯವಾಗಿದೆ. ಉತ್ತಮ ಕಲಾವಿದರಾಗಿ ಮಾತ್ರವಲ್ಲದೆ ತಂದೆಯಾಗಿಯೂ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಪಂ. ಗೋಡ್ಖಿಂಡಿ ಅವರ ಜೀವನಶೈಲಿಯನ್ನು ಅವರ ಮಗ ಪ್ರವೀಣ್‌ ಗೋಡ್ಖಿಂಡಿ ಅವರ ಮಾತುಗಳಲ್ಲೇ ಕೇಳಿ:

‘ನಮ್ಮ ತಂದೆಗೆ ಸಂಗೀತದಲ್ಲಿ ಯಾವುದೇ ತಾರತಮ್ಯ ಇರಲಿಲ್ಲ. ಹೀಗಾಗಿ ಕರ್ನಾಟಕ ಸಂಗೀತ, ಸಿನಿಮಾ ಸಂಗೀತ, ಫ್ಯೂಷನ್‌ ಸಂಗೀತ ಎಲ್ಲವನ್ನೂ ಆಸ್ವಾದಿಸಲು ಮುಕ್ತ ಮನಸ್ಸಿನಿಂದ ಒಪ್ಪುತ್ತಿದ್ದರು. ರಿಯಾಜ್‌ನಲ್ಲಿ ಬಹಳ ಕಟ್ಟುನಿಟ್ಟು ಇತ್ತು. ಒಂದು ರಾಗವನ್ನು ಹತ್ತು ಸಲ ನುಡಿಸಲು ಹೇಳುತ್ತಿದ್ದರು. ಬದುಕಿನ ಕೊನೆಯವರೆಗೂ ಸಂಗೀತ ಪ್ರೀತಿಯೊಂದಿಗೆ ಆತುಕೊಂಡಿದ್ದರು. ನಮ್ಮ ತಂದೆ ಜೀವಮಾನದಲ್ಲಿ ಒಂದೇ ಒಂದು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದರು. 2005ರಲ್ಲಿ ಕಥಾರ್‌ನಲ್ಲಿ ನಡೆದ ಸಂಗೀತೋತ್ಸವದಲ್ಲಿ ಮೂರು ತಲೆಮಾರಿನ ಬಾನ್ಸುರಿ ವಾದನದಲ್ಲಿ ಭಾಗವಹಿಸಿದ್ದರು. ಅದನ್ನು ಕೊನೆಯವರೆಗೂ ಮೆಲುಕು ಹಾಕುತ್ತಿದ್ದರು. ಸಂಗೀತವನ್ನು ಜಗತ್ತಿನ ಮೂಲೆ ಮೂಲೆಗೂ ತಲುಪಿಸಿ ಎಂದು ನಮಗೆ ಹೇಳುತ್ತಿದ್ದರು’.

‘ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಉಸ್ತಾದ್‌ ಜಾಕಿರ್‌ ಹುಸೇನ್‌ ಅವರ ತಬಲಾ ವಾದನಕ್ಕೆ ಹಾರ್ಮೋನಿಯಂ ಲೆಹರಾ ನೀಡಿದ್ದು ಇವರಿಗೆ ಬಹಳ ಸಮಾಧಾನ, ಖುಷಿ ತಂದಿದೆ. ಈ ಖುಷಿಯನ್ನು ಅವರು ಆಗಾಗ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಿದ್ದರು’. ಸಾಧನೆಗೆ ತಕ್ಕ ಮನ್ನಣೆಯೂ ಈ ಕಲಾವಿದನಿಗೆ ಸಂದಿದೆ. ಕರ್ನಾಟಕ ಸರ್ಕಾರದ ‘ಕರ್ನಾಟಕ ಕಲಾಶ್ರೀ’, ‘ನಿಜಗುಣ ಪುರಂದರ’ ಪ್ರಶಸ್ತಿ ಲಭಿಸಿದೆ. ಬಾನ್ಸುರಿಯಲ್ಲಿ ಎ ಗ್ರೇಡ್‌ ಕಲಾವಿದರಾಗಿ ರೂಪುಗೊಂಡ ಏಕೈಕ ಕೊಳಲು ವಾದಕ ಎಂಬ ಹೆಗ್ಗಳಿಕೆಯೂ ವೆಂಕಟೇಶ್‌ ಗೋಡ್ಖಿಂಡಿ ಅವರ ಬೆನ್ನಿಗಿದೆ.

ಪತ್ನಿ ಪದ್ಮಜಾ, ಪ್ರವೀಣ್‌ ಗೋಡ್ಖಿಂಡಿ ಜೊತೆಗೆ ಮತ್ತೊಬ್ಬ ಪುತ್ರರಾದ ತಬಲಾ ವಾದಕ ಕಿರಣ್‌ ಗೋಡ್ಖಿಂಡಿ, ಶಿಷ್ಯವೃಂದ, ಅಪಾರ ಸಂಗೀತ ಪ್ರೇಮಿಗಳನ್ನು ಅಗಲಿದ ಈ ‘ಬಾನ್ಸುರಿ ರತ್ನ’ ಸಂಗೀತದ ಅಮೂಲ್ಯ ಆಸ್ತಿಯನ್ನು ಬಿಟ್ಟುಹೋಗಿದ್ದಾರೆ. ಅದನ್ನು ಜತನದಿಂದ ಕಾಪಾಡುವ ಹೊಣೆ ಸಂಗೀತ ಕಲಾವಿದರು ಮತ್ತು ಸಂಗೀತಾಭಿಮಾನಿಗಳ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT