ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಬಸ್ಸಿಗಾಗಿ ಕಾಯುತ್ತಿದೆ ಆಡಳಿತಶಾಹಿ!

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕದ ಅಭಿವೃದ್ಧಿಗೆ ರಾಜ್ಯದ  ಸಂಪತ್ತು ಸಾಕು. ಆದರೆ ಅದು ಸಾಕಾಗುತ್ತಿಲ್ಲ. ಏಕೆಂದರೆ ಇಲ್ಲೊಂದು ವಿಪತ್ಕಾರಿ ಆಡಳಿತಶಾಹಿ ಇದೆ. ಇದು ಜನಸಾಮಾನ್ಯನಿಗೆ ಎಂತಹ ಭಯ ಹುಟ್ಟಿಸುತ್ತದೆಂದರೆ ಭೂಮಿಯನ್ನೇ ಕಬಳಿಸಲು ಹೊರಟ ಹಿರಣ್ಯಾಕ್ಷನ ಹಾಗೆ. ತಾನು ಜನರಿಂದ ಏನನ್ನೂ, ಎಷ್ಟನ್ನೂ, ಎಷ್ಟು ವೇಗದಲ್ಲಿ ಬೇಕಾದರೂ ಕೊಡುವಂತೆ ಕೇಳಬಹುದು. ಆದರೆ ತಾನು ಮಾತ್ರ ಜನರ ಯಾವ ವಿನಂತಿಗಳಿಗೂ ಪ್ರಶ್ನೆಗಳಿಗೂ ಸ್ಪಂದಿಸಬೇಕಾಗಿಯೂ ಇಲ್ಲ, ಉತ್ತರಿಸಬೇಕಾಗಿಯೂ ಇಲ್ಲ.

ಅಧಿಕಾರದ ಮದ ಹಿರಣ್ಯಾಕ್ಷನಿಗೆ ಇದ್ದಂತೆ ಇವರಿಗೂ ಇದೆ. ಹಾಗಾಗಿ ಸ್ವೇಚ್ಛಾ ಮನೋಧರ್ಮದ ಈ ಅಧಿಕಾರಶಾಹಿಯ ಒಳಗಿರುವ ಖಡಕ್ ಅಧಿಕಾರಿಗಳು ಪೆಟ್ಟು ತಿನ್ನಬೇಕಾಗುತ್ತದೆ. ಆದರೆ ಜನರಿಗೆ ತಾವು ಹೀಗೆ ಮಾಡುವುದರಿಂದ ತಮ್ಮನ್ನೇ ಬಲಿ ತೆಗೆದುಕೊಳ್ಳುವ ಹಿರಣ್ಯಾಕ್ಷರನ್ನು ರಕ್ಷಿಸುತ್ತಿದ್ದೇವೆ ಎಂಬುದು ಗೊತ್ತಿರುವುದಿಲ್ಲ. ಎಂತಹ ಮುಗ್ಧ ಜನ. ಇವರನ್ನು ಮೋಸಗೊಳಿಸುವುದು ಮತ್ತು ಅವರು ತಮ್ಮ ಪರವಾಗಿ ಇರುವಂತೆ ಮಾಡು­ವುದು ಈ ಧೂರ್ತರಿಗೆ ಅದೆಷ್ಟು ಸುಲಭ.

ಈ ವರ್ಷದ ಅಕ್ಟೋಬರ್ ೧೫ರಂದು ನಡೆದ ಅಧಿಕಾರಶಾಹಿಯ ಎಡವಟ್ಟುಗಳ ಎರಡು ಘಟನೆಗಳು  ಮಾಧ್ಯಮಗಳಲ್ಲಿ ವರದಿಯಾದವು. ಒಂದನೆಯದು ಮುಖ್ಯಮಂತ್ರಿಗಳ ಎದುರೇ ಅಧಿಕಾರಿಗಳು ನಡೆಸಿದ ಜಟಾಪಟಿ. ಇದಕ್ಕೆ ಒಂದೇ ಕಾರಣ. ಯಾಕೆ ಕೆಲಸವಾಗಿಲ್ಲ ಎಂದು ನೋಡುವ ಬದಲು ಯಾರು ಕೆಲಸ ಮಾಡಿಲ್ಲ ಎಂಬ ಬಗ್ಗೆ ಆಪಾದನೆಗಳ ವಿನಿಮಯವಾಯಿತು. ವಾಸ್ತವದಲ್ಲಿ ಯಾರೂ ಕೆಲಸ ಮಾಡಿಲ್ಲ.

ಇನ್ನೊಬ್ಬರು ಕೆಲಸ ಮುಗಿಸಲಿ, ಮತ್ತೆ ನೋಡೋಣ ಎಂದು ಪ್ರತಿಯೊಬ್ಬರೂ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದಾರೆ. ಆ ಬಸ್ಸು ಬರುವುದೇ ಇಲ್ಲ. ಏಕೆಂದರೆ ಚಾಲಕ ಇಲ್ಲ, ಇದ್ದರೆ ಡೀಸೆಲ್ ಇಲ್ಲ, ಅದು ಇದ್ದರೆ ಚಕ್ರದಲ್ಲಿ ಗಾಳಿ ಇಲ್ಲ, ಗಾಳಿ ಇದ್ದರೆ ರಿಸೋಲ್ ಆಗಿಲ್ಲ,  ಏಕೆಂದರೆ ಹೊಸ ಟಯರ್ ಖರೀದಿಸಿಲ್ಲ, ಅದಕ್ಕಾಗಿ ಆರ್ಥಿಕ ಇಲಾಖೆ­ಯಿಂದ ಹಣಕಾಸಿನ ಮಂಜೂರಾತಿ ಆಗಿಲ್ಲ, ಇದಕ್ಕೆ ನಿಯಮಾವಳಿಗಳು ಅಡ್ಡ­ಬರುತ್ತವೆ, ಅವು ಕೆಲವು ದಶಕಗಳಷ್ಟು ಹಿಂದಿನ­ವಾಗಿದ್ದು ಹೊಸ ನಿಯಮಾವಳಿಗಳನ್ನು ರೂಪಿ­ಸಿಲ್ಲ, ಅದಕ್ಕಾಗಿ ಕಾನೂನು ಸಲಹಾ ಮಂಡಲಿ ಇನ್ನೂ ಒಪ್ಪಿಗೆ ಕೊಟ್ಟಿಲ್ಲ, ಏಕೆಂದರೆ ಮಂಡಲಿಗೆ  ಈವರೆಗೂ ಪ್ರಸ್ತಾವವನ್ನೇ ಸಲ್ಲಿಸಿಲ್ಲ...!

ಕೆಲಸ ಮುಂದೆ ಹೋಗದಂತೆ ಒಂದನ್ನೊಂದು ಬಿಗಿದೆಳೆದು ಹಿಡಿವ ಎಂತಹ ಭವ್ಯ ಸರಪಳಿ! ಹಾಗಿದ್ದ ಮೇಲೆ ಬಸ್ಸು ಹೊರಡುವುದು ಹೇಗೆ? ಮತ್ತೆ ಉನ್ನತ ಅಧಿಕಾರಿಗಳ ನಡುವೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಂತೆ ಜಗಳವಾಗದ ಹೊರತು ಇನ್ನೇನಾದೀತು? ಪತ್ರಕರ್ತರಿದ್ದಾರೆ ಎಂದು ಒಬ್ಬ ಸಚಿವರು ಇನ್ನೊಬ್ಬ ಸಚಿವರಿಗೆ ಎಚ್ಚರ ಇರುವಂತೆ ಸೂಚಿಸುವುದು, ಸ್ವತಃ ಮುಖ್ಯ­ಮಂತ್ರಿಗಳೇ ಸಚಿವರ ವಿರುದ್ಧ ಬಹಿರಂಗವಾಗಿ ಮಾತಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡುವುದು, ಒಂದು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯೊಬ್ಬರು ಮುಖ್ಯ­ಮಂತ್ರಿ­ಗಳ ಹೆಚ್ಚುವರಿ ಕಾರ್ಯದರ್ಶಿ ಮೇಲೆ ಸಭೆಯಲ್ಲೇ ಮುಕ್ತವಾಗಿ ಆರೋಪ ಹೊರಿಸುವುದು, ಇಂತಹ ಒಂದು ಸಭೆಯಿಂದ ಅಧಿಕಾರಿಣಿಯೊಬ್ಬರು ಸಿಟ್ಟಿನಿಂದಲೇ ಎದ್ದು ಹೋಗುವುದು ಮುಂತಾದವೆಲ್ಲ ಯಾವುದರ  ಸೂಚನೆ?

ಆಡಳಿತಶಾಹಿಗೆ ಉತ್ತರದಾಯಿತ್ವ ಇಲ್ಲ ಎಂಬುದಕ್ಕೆ ಸಾಕಷ್ಟು ಅನುಭವಗಳು ನನ್ನ ಬಳಿ ಇವೆ.  ಇತ್ತೀಚಿನ ಒಂದೆರಡನ್ನು ಇಲ್ಲಿ ಹಂಚಿ­ಕೊಳ್ಳುತ್ತೇನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಒಂದು ಪತ್ರಿಕಾ ಹೇಳಿಕೆ ನೀಡಿದರು. ಅದರಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮದ ಎಲ್‌ ಕೆ.ಜಿ. ಮಕ್ಕ­ಳನ್ನು ಸರ್ಕಾರಿ ಅಂಗನವಾಡಿಗಳಿಗೆ  ಸೆಳೆಯುವುದಕ್ಕಾಗಿ ಪಠ್ಯಪುಸ್ತಕವನ್ನು ಸಿದ್ಧ ಪಡಿಸುತ್ತಿರು­ವುದಾ­ಗಿಯೂ, ಅದನ್ನು ಬಳಸಲು ಅಂಗನವಾಡಿ ಶಿಕ್ಷಕಿ­ಯರಿಗೆ ತರಬೇತಿ ಕೊಡುವುದಾಗಿಯೂ ಹೇಳಿ­ದ್ದರು. ಒಬ್ಬ ಶಿಕ್ಷಣ ತಜ್ಞನಾಗಿ ನನಗಿದು ಸರಿ­ಕಾಣಲಿಲ್ಲ. ಹಾಗಾಗಿ ‘ಅಂಗನವಾಡಿಗಳ ಸುಧಾರಣೆಗೆ ಪಠ್ಯಪುಸ್ತಕಗಳಲ್ಲ, ಬೇರೆ ಚಿಕಿತ್ಸೆ ಬೇಕು’ ಎಂಬ ವಿನಂತಿಯೊಂದಿಗೆ ಸಾಕಷ್ಟು ಕಾರಣ­­ಗಳನ್ನು ನೀಡಿ, ತಾವು ಅಧಿಕಾರ ಹೊಂದಿರುವುದರಿಂದ ಖಾಸಗಿಯವರು ಪಠ್ಯ ಪುಸ್ತಕಗಳನ್ನು ಬಳಸಿ ಮಕ್ಕಳನ್ನು ಗೋಳು ಹೊಯ್ದುಕೊಳ್ಳುವುದರಿಂದ ಕಾಪಾಡಿ ಎಂದು ವಿನಂತಿಸಿದ್ದೆ. ಆದರೆ ಇದಾಗಿ ಎರಡು ತಿಂಗಳು ಕಳೆದರೂ  ಅವರಿಂದ ಈ ತನಕ ಉತ್ತರವಿಲ್ಲ. ಜನ­ಸಾಮಾನ್ಯರ ಅಭಿಪ್ರಾಯಗಳಿಗೆ ತಾವೂ ಉತ್ತರಿ­ಸುವ ಬಾಧ್ಯತೆ ಹೊಂದಿದ್ದೇವೆ ಎಂಬ  ನೈತಿಕ ಪ್ರಜ್ಞೆಯನ್ನು ಅಧಿಕಾರಿಗಳು ಕಳೆದು­ಕೊಂಡಿದ್ದಾರೆ.

ಇನ್ನೊಂದು  ಉದಾಹರಣೆ ಶಿಕ್ಷಣ ಇಲಾಖೆ­ಯದ್ದು. ರೂ೧೨,೦೦೦- ಶುಲ್ಕ ಪಡೆದು ನಮ್ಮ ಶಾಲೆಯ ಮೌಲ್ಯಾಂಕನವನ್ನು ೨೦೧೪ರ ಮಾರ್ಚ್ ತಿಂಗಳಲ್ಲಿ ನಡೆಸಲಾಗಿದ್ದು, ಈ ತನಕ ಫಲಿತಾಂಶವನ್ನು ನೀಡದೇ ಇರುವುದರ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅವರಿಗೆ ಸ್ಪೀಡ್‌ಪೋಸ್ಟ್‌ನಲ್ಲಿ ದೂರು ಸಲ್ಲಿಸಿ  ಒಂದೂವರೆ ತಿಂಗಳು ಕಳೆಯಿತು. ಇದರ ಪ್ರತಿಗಳನ್ನು ಸಂಬಂಧಪಟ್ಟ ಅಧಿಕಾರಿ­ಗಳಿಗೂ ಕಳಿಸಿದ್ದೆ. ಆದರೆ ಯಾರೂ ಕ್ಯಾರೇ ಎಂದಿಲ್ಲ. ದುಡ್ಡು ಕಟ್ಟಿಸಿಕೊಂಡ ಬಳಿಕವೂ ಉತ್ತರಿ­ಸುವ ಜವಾಬ್ದಾರಿ ಇಲ್ಲವೆಂದರೆ ಜನಸಾಮಾನ್ಯ­ರಿಗೆ ಇವರ ದೃಷ್ಟಿಯಲ್ಲಿ ಬೆಲೆಯೇ ಇಲ್ಲವೇ?

ಆಡಳಿತಶಾಹಿ ಎಷ್ಟು ವಿಚಿತ್ರವಾಗಿದೆ ಎಂದರೆ, ಮಾಹಿತಿ ಹಕ್ಕಿನಡಿ ನಾನು ಶಿಕ್ಷಣ ಇಲಾಖೆಯ ಆಯುಕ್ತರಲ್ಲಿ ಒಂದು ಮಾಹಿತಿ ಕೇಳಿದ್ದೆ. ಅದೆಂದರೆ, ಕಳೆದ ಹತ್ತು ವರ್ಷಗಳಲ್ಲಿ ರಾಜ್ಯ ದಲ್ಲಿ ಅನುದಾನಕ್ಕೆ ಒಳಪಡಿಸಿದ ಶಾಲೆಗಳೆಷ್ಟು? ಅವು ಯಾವ ವರ್ಷಗಳಲ್ಲಿ ಪ್ರಾರಂಭವಾಗಿವೆ? ಈ ಮಾಹಿತಿಯು ಅವರ ಕಚೇರಿಯಲ್ಲಿ ಇರಲೇಬೇಕು. ಅವರೇ ನನಗೆ ಅದನ್ನು ನೀಡಬಹುದಿತ್ತು. ಆದರೆ ಜನಸಾಮಾನ್ಯರ ಸಂಪರ್ಕಕ್ಕೆ ಬರುವುದು ತಮ್ಮ ಸ್ಥಾನಮಾನಕ್ಕೆ ಕಡಿಮೆ ಎಂದು ಅವರು ಭಾವಿಸಿದರೋ ಏನೋ ತಿಳಿಯದು. ಅವರು ನನಗೆ ಮಾಹಿತಿ ನೀಡುವಂತೆ ಸೂಚಿಸಿ ನನ್ನ ಅರ್ಜಿಯನ್ನು ಪ್ರಾಥಮಿಕ ಶಿಕ್ಷಣ ನಿರ್ದೇಶಕರಿಗೆ ಕಳಿಸಿದರು. ಅವರು ಅದನ್ನು ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರಿಗೆ ಕಳಿಸಿದರು. ಅವರಲ್ಲಿ ಕೆಲವರು ಪ್ರಾಮಾಣಿಕವಾಗಿ ತಮ್ಮ ಕಚೇರಿಯಿಂದಲೇ ಮಾಹಿತಿಯನ್ನು ಕಳಿಸಿದರು. ಆದರೆ ಇನ್ನು ಕೆಲವು ಜಾಣರು ಅದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರ್ಗಾಯಿಸಿದರು. ಅವರಲ್ಲಿ ಕೆಲವರು ತಮ್ಮ ವ್ಯಾಪ್ತಿಯ ಮಾಹಿತಿಯನ್ನು ನೀಡಿದರು. ಆದರೆ ಅವರಲ್ಲೂ ಕೆಲವರು ಬುದ್ಧಿವಂತಿಕೆಯನ್ನು ಪ್ರಯೋಗಿಸಿ ಅದನ್ನು ಶಾಲೆಗಳಿಗೇ ಕಳಿಸಿದರು.

ಈಗ ನನಗೆ ಪತ್ರಗಳು ಬರುತ್ತಲೇ ಇವೆ. ಜಿಲ್ಲಾ ಉಪ ನಿರ್ದೇಶಕರುಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳಿಸಲಾಗಿದೆಯೆಂತಲೂ, ಇನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಕಳಿಸಲಾಗಿದೆ ಎಂತಲೂ ಆಯಾ ಶಾಲೆಗಳವರು ನನಗೂ, ಮಾಹಿತಿಯ ಪ್ರತಿಯನ್ನು  ತಮ್ಮ ಮೇಲಿನ ಕಚೇರಿಗೂ, ಅವರು ಮತ್ತೆ ತಮ್ಮ ಮೇಲಿನ ಕಚೇರಿಗೂ ಕಳಿಸುತ್ತಿದ್ದಾರೆ. ಇದರಿಂದ ನನ್ನ ಹೆಸರು ಬಹಳಷ್ಟು ಕಚೇರಿಗಳಲ್ಲಿ ಪರಿಚಿತ­ವಾಯಿತು. ಆದರೆ ಆಯುಕ್ತರ  ಕಚೇರಿಯ ಒಂದೇ ಒಂದು  ಪತ್ರದಿಂದ ಆಗಬಹುದಾಗಿದ್ದ ಕೆಲಸವನ್ನು ನೂರಿನ್ನೂರು ಕಚೇರಿಗಳಿಗೆ ಹೊರಿಸಿ ಅಲ್ಲಿಯ ಸಿಬ್ಬಂದಿಯ ಶ್ರಮ, ನೂರಾರು ಪತ್ರಗಳ ರವಾನೆ, ಅಂಚೆ ವೆಚ್ಚ, ಅದರಿಂದಾಗುವ ಸಮಯದ ವ್ಯಯ ಇತ್ಯಾದಿ ಮಾಡಿದ್ದು ನೋಡಿದರೆ ಎಂಥ ಹುಚ್ಚು ಇದು ಎನಿಸುತ್ತದೆ. ಸರ್ಕಾರಿ ಇಲಾಖೆಗಳ ಕಾರ್ಯಶೈಲಿ ನೋಡಿದಾಗ ಸರ್ಕಾರದ ಸಂಪತ್ತು ಉಳಿಸಲು ಆಡಳಿತ ವ್ಯವಸ್ಥೆ ಸುಧಾರಣೆಯ ಬಹುದೊಡ್ಡ ಅಗತ್ಯ ಎದ್ದು ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT