ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನ ಅಂಗಾಂಗ ದಾನ

ಎರಡು ‘ಗ್ರೀನ್‌ ಕಾರಿಡಾರ್‌’ನಿಂದ ಅಂಗಾಂಗಗಳ ರವಾನೆ
Last Updated 31 ಜುಲೈ 2015, 19:49 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರದ ಕೊಲಂಬಿಯಾ ಏಷ್ಯಾ ರೆಫರಲ್‌ ಆಸ್ಪತ್ರೆಯಿಂದ ನಗರದ ಇತರ ಆಸ್ಪತ್ರೆಗಳಿಗೆ ಶುಕ್ರವಾರ ಬಾಲಕನ ‘ಜೀವಂತ ಹೃದಯ’ ಸೇರಿದಂತೆ ಇತರ ಅಂಗಾಂಗಗಳನ್ನು ಯಶಸ್ವಿಯಾಗಿ ಸಾಗಿಸಲಾಯಿತು.

ಅಂಗಾಂಗಗಳನ್ನು ಎರಡು  ‘ಗ್ರೀನ್‌ ಕಾರಿಡಾರ್‌’ನಿಂದ (ಸಿಗ್ನಲ್‌ ಮುಕ್ತ ಸಂಚಾರ ವ್ಯವಸ್ಥೆ) ಆಂಬುಲೆನ್ಸ್‌ ಮೂಲಕ ಕೊಂಡೊಯ್ಯಲಾಯಿತು. ಹೆಬ್ಬಾಳ ನಿವಾಸಿ ಹೇಮಂತ್‌ ಗೌಡ (17) ಗುರುವಾರ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಬಳಿಕ ಬಾಲಕನನ್ನು ಯಶವಂತಪುರದ ಕೊಲಂಬಿಯಾ ಏಷ್ಯಾ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಬಾಲಕ ಮೃತಪಟ್ಟಿರುವುದನ್ನು  ಘೋಷಿಸಿದರು.

ಆಸ್ಪತ್ರೆಯ ವೈದ್ಯರು ಹಾಗೂ ಅಂಗಾಂಗ ದಾನಕ್ಕೆ ಸಂಬಂಧಿಸಿದ ಕರ್ನಾಟಕ ಕಸಿ ಸಮನ್ವಯ ಸಮಿತಿಯ (ಝಡ್‌ಸಿಸಿಕೆ) ವೈದ್ಯರ ತಂಡವು ಪೋಷಕರಿಗೆ ಅಂಗಾಂಗ ದಾನದ ಮಹತ್ವ ತಿಳಿಹೇಳಿ ಅಂಗಾಂಗ ದಾನಕ್ಕೆ ಒಪ್ಪಿಸಿದ್ದರು.

ಬಾಲಕನ ಹೃದಯವನ್ನು ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಕಳುಹಿಸಿಕೊಡಲಾಯಿತು. ತಮಿಳುನಾಡು ಮೂಲದ 45 ವರ್ಷದ ವ್ಯಕ್ತಿಗೆ ಅದನ್ನು ಯಶಸ್ವಿಯಾಗಿ ಕಸಿ ಮಾಡಲಾಯಿತು. ಮೇದೋಜ್ಜೀರಕ ಗ್ರಂಥಿ ಮತ್ತು ಮೂತ್ರಪಿಂಡವನ್ನು ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಗೆ ಸಾಗಿಸಲಾಯಿತು. ಇನ್ನೊಂದು ಮೂತ್ರಪಿಂಡವನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಕಾರ್ನಿಯವನ್ನು ನಾರಾಯಣ ನೇತ್ರಾಲಯಕ್ಕೆ ಸಾಗಿಸಲಾಯಿತು.

ಆಸ್ಪತ್ರೆಯಲ್ಲಿರುವ ರೋಗಿಯೊಬ್ಬರಿಗೆ ಯಕೃತ್ತಿನ ಅಗತ್ಯವಿದ್ದ ಕಾರಣ ಯಕೃತ್ತನ್ನು ಕೊಲಂಬಿಯಾ ಆಸ್ಪತ್ರೆ ತನ್ನ ಬಳಿಯೇ ಉಳಿಸಿಕೊಂಡಿದೆ.  ಯಶವಂತಪುರದಿಂದ ಹೊಸೂರು ರಸ್ತೆಯ ನಾರಾಯಣ ಹೃದಯಾಲಯಕ್ಕೆ 55 ಕಿ.ಮೀ ಅಂತರವನ್ನು 45 ನಿಮಿಷದಲ್ಲಿ  ಕ್ರಮಿಸಿದರೆ, ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಗೆ 35 ಕಿ.ಮೀ ದೂರವನ್ನು ಕೇವಲ 35 ನಿಮಿಷದಲ್ಲಿ ಕ್ರಮಿಸಿ ಯಶಸ್ವಿಯಾಗಿ ಕೊಂಡೊಯ್ಯಲಾಯಿತು. ನಗರ ಸಂಚಾರ ಪೊಲೀಸರ ನೆರವಿನಿಂದ ಇದು ಸಾಧ್ಯವಾಯಿತು.

‘ಪೋಷಕರ ಒಪ್ಪಿಗೆಯ ಮೇರೆಗೆ ಬಾಲಕನ ಅಂಗಾಂಗಗಳನ್ನು ಅಗತ್ಯವಿದ್ದ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಯಿತು’ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕಾಂಚನ್‌ ಸನ್ಯಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT