ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲದುಡಿಮೆಗೆ ಪುಷ್ಟಿ ನೀಡುವ ಮಸೂದೆ

ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚುವ ಅಪಾಯ...
Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

1986ರ ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಸಂಸತ್ತು ಈಗ ಅಂಗೀಕರಿಸಿದೆ. ರಾಷ್ಟ್ರಪತಿಯ ಅಂಕಿತ ಬಿದ್ದರೆ ಅದು ಕಾಯ್ದೆಯಾಗಿ ರೂಪುಗೊಳ್ಳಲಿದೆ.

ಕೆಲವು ಸಂಘ-ಸಂಸ್ಥೆಗಳ ಮುಖಂಡರು ಮತ್ತು ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಕಾರ್ಯಕರ್ತರು ಮಸೂದೆಯ ಮರುಪರಿಶೀಲನೆಗಾಗಿ ರಾಷ್ಟ್ರಪತಿಗೆ ಈಗಾಗಲೇ  ಮನವಿ ಸಲ್ಲಿಸಿದ್ದಾರೆ. ‘ಮಸೂದೆಯಲ್ಲಿ ಅನೇಕ ಲೋಪಗಳಿದ್ದು ಅವು ಕಾಯ್ದೆಯಾಗಿ ಜಾರಿಯಾದರೆ ಮಕ್ಕಳ ದುಡಿಮೆ ಮತ್ತಷ್ಟು ಹೆಚ್ಚಲಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ದಿನನಿತ್ಯದ ಮಾತಾಗಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

ಮಕ್ಕಳ ದುಡಿಮೆಗೆ ಸಂಬಂಧಿಸಿದ ಮೂರು ದಶಕಗಳಷ್ಟು ಹಳೆಯ ಈ ಕಾಯ್ದೆಗೆ ಆಗಲೇ ತಿದ್ದುಪಡಿ ಮಾಡಬೇಕಿತ್ತು. 2000ನೇ ಇಸವಿಯಲ್ಲಿ ಬಾಲನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ ಜಾರಿಯಾದ ಬೆನ್ನಲ್ಲೇ ಅರ್ಥ ಕಳೆದುಕೊಂಡ ಬಾಲಕಾರ್ಮಿಕ ಕಾಯ್ದೆಗೆ ಅಂದೇ ಸೂಕ್ತ ಬದಲಾವಣೆಗಳು ತರಬೇಕಿತ್ತು. ಆದರೆ 15 ವರ್ಷಗಳ ನಂತರ ತಿದ್ದುಪಡಿಗೆ ಒಳಗಾಗಿದೆ.

ಈಗಾಗಲೇ ಜಾರಿಯಲ್ಲಿರುವ ಬಾಲನ್ಯಾಯ ಕಾಯ್ದೆಯತ್ತ ಗಮನಿಸದೆ ಹೊಸ ಮಸೂದೆಯನ್ನು ರಚಿಸಿರುವುದು ಸರ್ಕಾರದ ಬೇಜವಾಬ್ದಾರಿಗೆ ಹಿಡಿದ ಕನ್ನಡಿ. ಬಾಲನ್ಯಾಯ ಕಾಯ್ದೆಯು 18 ವರ್ಷದೊಳಗಿನ ಎಲ್ಲರೂ ಮಕ್ಕಳು ಎಂದರೆ, ಹೊಸ ಮಸೂದೆಯು 14 ವರ್ಷದೊಳಗಿನವರನ್ನು ಮಾತ್ರ ಮಕ್ಕಳೆಂದು ಪರಿಗಣಿಸಿ ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಿದೆ. ಅಲ್ಲದೆ, ಬಾಲದುಡಿಮೆ ನಿಷೇಧವನ್ನು ಸಡಿಲಗೊಳಿಸಲಾಗಿದೆ.

ಮನೆಗೆಲಸ, ಕೌಟುಂಬಿಕ ಉದ್ಯಮಗಳಲ್ಲಿ ಮಗು ದುಡಿಯಬಹುದಾಗಿದೆ. ಕುಟುಂಬ ಎಂದರೆ ತಂದೆ, ತಾಯಿ ಮಾತ್ರವಲ್ಲ; ಮಾವ, ಅತ್ತೆ, ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕಜ್ಜ... ಹೀಗೆ ದೂರದ ಸಂಬಂಧಿಗಳನ್ನೂ ಸೇರಿಸಲಾಗಿದೆ. ಇದಲ್ಲದೆ ದೃಶ್ಯ-ಶ್ರವ್ಯ ವಿನೋದ ಮಾಧ್ಯಮಗಳಲ್ಲಿ ಕಲಾವಿದರಾಗಿ ದುಡಿಯುವುದು ಕೂಡಾ ಈ ಮಸೂದೆ ಪ್ರಕಾರ ಅಪರಾಧವಾಗುವುದಿಲ್ಲ. ಇದಕ್ಕೆ ಯಾವುದೇ ವಯೋಮಿತಿ ಇಲ್ಲ. 

ಬಾಲಕಾರ್ಮಿಕ ನಿಷೇಧಕ್ಕೆ ಗರಿಷ್ಠ ವಯೋಮಾನ ಮಿತಿ 14 ಎಂದಿದ್ದರೂ ಕೌಟುಂಬಿಕ ವ್ಯವಹಾರಗಳು ಮತ್ತು ವಿನೋದ ಉದ್ಯಮಗಳಿಗೆ ಇದು ಅನ್ವಯವಾಗುವುದಿಲ್ಲ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಕನಿಷ್ಠ ವಯೋಮಾನ ಒಡಂಬಡಿಕೆಯ  ಮಾರ್ಗನಿರ್ದೇಶನಗಳಿಗೆ ಇದು ವಿರುದ್ಧವಾಗಿದೆ.

ವಿಶ್ವಸಂಸ್ಥೆ 1989ರಲ್ಲಿ ಘೋಷಿಸಿದ ಮತ್ತು 1992ರಲ್ಲಿ ಭಾರತ ಅಂಗೀಕರಿಸಿದ ಮಕ್ಕಳ ಹಕ್ಕುಗಳ ಒಡಂಬಡಿಕೆಯ 32ನೇ ಪರಿಚ್ಛೇದವನ್ನೂ ಗಾಳಿಗೆ ತೂರಿದಂತಾಗಿದೆ. ಹೊಸ ಕಾಯ್ದೆಯು ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ಸಾಧ್ಯತೆ, ದೀರ್ಘಾವಧಿಯ ದುಡಿಮೆ, ಬಾಲ್ಯದ ನಿರಾಕರಣೆ ಇವುಗಳಿಗೆ ಎಡೆಮಾಡಿಕೊಡಲಿದ್ದು ಮಕ್ಕಳ ಹಕ್ಕುಗಳು ಮತ್ತು ಮಾನವ ಹಕ್ಕುಗಳನ್ನು ನಿರ್ಲಕ್ಷಿಸಿದಂತಾಗಿದೆ.

1986ರ ಕಾಯ್ದೆಯಲ್ಲಿದ್ದ ‘ನಿಷೇಧಿತ ವೃತ್ತಿಗಳು ಮತ್ತು ಪ್ರಕ್ರಿಯೆಗಳು’ ಎಂಬ ಪಟ್ಟಿಯಿಂದ ಅನೇಕ ವೃತ್ತಿಗಳು ಹೊಸ ಮಸೂದೆಯ ಕಲಂ 22ರಲ್ಲಿ ಮಾಯವಾಗಿವೆ.  ಇದರ ಪ್ರಕಾರ ಇನ್ನು ಮುಂದೆ ಯಾವುದೇ ವಯಸ್ಸಿನ ಮಕ್ಕಳು ವಜ್ರಾಭರಣ ತಯಾರಿಕೆ, ಇಟ್ಟಿಗೆಭಟ್ಟಿ, ಮಾಂಸದ ಅಂಗಡಿ, ಎಲೆಕ್ಟ್ರಾನಿಕ್ ಘಟಕ, ವೆಲ್ಡಿಂಗ್, ಬೀಡಿ ತಯಾರಿಕೆ, ಕೃಷಿ, ಆರ್ಕೆಸ್ಟ್ರಾ,  ಹೊಲಿಗೆ, ಬಿತ್ತನೆ, ಅಡುಗೆ ತಯಾರಿ, ಪ್ಯಾಕಿಂಗ್, ಕಸ ವಿಲೇವಾರಿ, ಗೊಂಬೆ ತಯಾರಿಕೆ, ಔಷಧಿಗಳ ಮಿಶ್ರಣ, ಮನೆಗೆಲಸ  ಇತ್ಯಾದಿ ಕ್ಷೇತ್ರಗಳಲ್ಲಿ ದುಡಿಯಲು ಅವಕಾಶ ಕಲ್ಪಿಸಿದಂತಾಗಿದೆ.

ಕಲಂ 18ರಲ್ಲಿ ಪೋಷಕರನ್ನು ಅಪರಾಧಿಗಳನ್ನಾಗಿ ಮಾಡಿ ಶಿಕ್ಷೆ ವಿಧಿಸುವ ಪ್ರಸ್ತಾಪ ಇದೆ. ಈಗಾಗಲೇ ಬಡತನವೆಂಬ ಕೂಪದಲ್ಲಿ ಸಿಲುಕಿರುವ ಪೋಷಕರ ಗೂನಿನ ಮೇಲೆ ಬರೆ ಎಳೆಯುವ ಈ ಪ್ರಸ್ತಾಪ ಅಮಾನವೀಯವಾದದ್ದು. ತಮ್ಮ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡಲು ಯಾವ ಪೋಷಕರೂ ಬಯಸುವುದಿಲ್ಲ. ಆರ್ಥಿಕ ಒತ್ತಡದಿಂದ ಪಾರಾಗಲು ಅವರು ತಾತ್ಕಾಲಿಕವಾಗಿ ಮಕ್ಕಳನ್ನು ತಮ್ಮ ನೆರವಿಗೆ ಕರೆದುಕೊಂಡು ಹೋಗುವ ಪ್ರಕರಣಗಳುಂಟು.

ಭಾರತದ ಜನಗಣತಿ ಪ್ರಕಾರ ದೇಶದಲ್ಲಿ 44 ಲಕ್ಷ ಬಾಲಕಾರ್ಮಿಕರಿದ್ದಾರೆ. ಆದರೆ, ಯುನಿಸೆಫ್ ವರದಿ ಪ್ರಕಾರ ನಮ್ಮ ದೇಶದಲ್ಲಿ ದುಡಿಯುವ ಮಕ್ಕಳ ಸಂಖ್ಯೆ 1.02 ಕೋಟಿ. ಇವರ ಪೈಕಿ ಶೇ 80ರಷ್ಟು ಮಂದಿ ದಲಿತ ಸಮುದಾಯಗಳಿಗೆ ಸೇರಿದ್ದು ಉಳಿದವರು ಹಿಂದುಳಿದ ಸಮುದಾಯಗಳಿಗೆ ಸೇರಿದ್ದವರಾಗಿದ್ದಾರೆ. ಬಹುತೇಕ ಪೋಷಕರು, ಗುತ್ತಿಗೆದಾರ ಅಥವಾ ಲೀಲಾದೇವಿದಾರರಿಂದ ಸಾಲ ಪಡೆದುಕೊಂಡು ಅದನ್ನು ಮರುಪಾವತಿ ಮಾಡಲಾಗದೆ ಜೀತಕ್ಕೆ ಸಮಾನವಾದ ಬದುಕು ಸಾಗಿಸುತ್ತಾರೆ.

ಇವರ ಜೊತೆಗೆ ಮಕ್ಕಳೂ ದುಡಿಯುತ್ತಿರುತ್ತಾರೆ. ಇದನ್ನು ತಪ್ಪಿಸಲು ಸ್ವತಂತ್ರ ಭಾರತದ ಜನಪ್ರತಿನಿಧಿಗಳು ಮತ್ತು ಅಧಿಕಾರಶಾಹಿಗೆ ಇನ್ನೂ ಆಗಿಲ್ಲ.  ತಮ್ಮ ಮಕ್ಕಳನ್ನು ಮನೆಯಲ್ಲೂ ಇಟ್ಟುಕೊಳ್ಳಲಾಗದೆ ಶಾಲೆಗೂ ಕಳುಹಿಸಲಾಗದೆ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಈ ಪೋಷಕರು. ಈ ಪೋಷಕರ ಮೇಲೆ ದಂಡ ವಿಧಿಸುವ ಪ್ರಸ್ತಾಪದಿಂದ ಅವರ ಬದುಕು ಮತ್ತಷ್ಟು ದುಸ್ತರವಾಗಲಿದೆ. 

ಮಕ್ಕಳು ಶಾಲಾ ವೇಳೆ ಹೊರತುಪಡಿಸಿ ಉಳಿದ ಸಮಯದಲ್ಲಿ ಕುಟುಂಬ ಆಧಾರಿತ ದುಡಿಮೆಗಳಲ್ಲಿ ತೊಡಗಿಸಿಕೊಳ್ಳಬಹುದೆಂದು ಹೇಳುವ ಮಸೂದೆಯು ಎಷ್ಟು ಗಂಟೆ ಮತ್ತು ಯಾವ ತರಹದ ಸ್ಥಳದಲ್ಲಿ ದುಡಿಯ ಬಹುದು ಎನ್ನುವುದರ ಬಗ್ಗೆ ಏನೂ ಪ್ರಸ್ತಾಪಿಸಿಲ್ಲ. ಇದರಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಲಿದೆ. ಶಾಲೆ ಮುಗಿಸಿ ತಡರಾತ್ರಿವರೆಗೆ ಕೆಲಸಕ್ಕೆ ಹೋಗುವ ಮಗು ಬೆಳಿಗ್ಗೆ ಎದ್ದು ಶಾಲೆಗೆ ಹೋಗಲು ಸಾಧ್ಯವೇ? ಬಡಮಕ್ಕಳು ಕ್ರಮೇಣ ಸಂಪೂರ್ಣವಾಗಿ ಶಾಲೆ ತೊರೆಯುವ ಅಪಾಯಕ್ಕೆ ಇದು ಎಡೆಮಾಡಿಕೊಡುತ್ತದೆಂದು ಯುನಿಸೆಫ್‌ನ ಶಿಕ್ಷಣ ವಿಭಾಗದ ಮುಖ್ಯಸ್ಥೆ ಯೂಫ್ರಟೀಸ್ ಗೊಬಿನೊ  ಆತಂಕ ವ್ಯಕ್ತಪಡಿಸುತ್ತಾರೆ.

‘ಕುಟುಂಬ ಮತ್ತು ಕುಟುಂಬ ಆಧಾರಿತ ಉದ್ಯಮಗಳು’ ಅಂದರೇನು ಎನ್ನುವುದನ್ನು ಮಸೂದೆಯು ವ್ಯಾಖ್ಯಾನಿಸಿಲ್ಲ. ಇದರಿಂದ ಕಟ್ಟಡ ಕಾಮಗಾರಿಯ ಸ್ಥಳವೂ ಕಾನೂನುಸಮ್ಮತವಾಗುತ್ತದೆ. ಕಸದ ತೊಟ್ಟಿಯ ಬಳಿ ಹಾಸಿದ ಪ್ಲಾಸ್ಟಿಕ್ ಶೀಟ್ ಅಥವಾ ಮನೆ ಆಧಾರಿತ ವೇಶ್ಯಾಲಯವೂ ಮಕ್ಕಳ ಶೋಷಣೆಗೆ ಅನುವು ಮಾಡಿಕೊಡಬಹುದು. ಶೋಷಣೆಯ ಕೂಪದಿಂದ ಹೊರಬರಲಾಗದೆ ಜೀತದಂತೆ ದುಡಿಯುತ್ತಿರುವ ಬಡಸಮುದಾಯಗಳು ಅದೇ ಕಸುಬುಗಳಲ್ಲಿ ಮುಂದುವರೆಯಲು ಹೊಸ ಮಸೂದೆ ಅವಕಾಶ ಕಲ್ಪಿಸಿದೆ. ಪಾರಂಪರಿಕ ಕಲೆ, ಕಸುಬುಗಳ ರಕ್ಷಣೆ ಸರ್ಕಾರದ ಉದ್ದೇಶವಾದರೆ ಅದಕ್ಕೆ ಶಿಕ್ಷಣ ಕ್ಷೇತ್ರದಲ್ಲೇ ಬದಲಾವಣೆ ತರಬೇಕಿತ್ತು. ಬಾಲಕಾರ್ಮಿಕ ನಿಷೇಧ ಕಾಯ್ದೆಯ ಮರೆಯಲ್ಲಿ ಇದನ್ನು ಮಾಡಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.

ಮನೆಯಿಂದ ಕಲಿಯುವುದು ಮತ್ತು ಕುಟುಂಬದ ಉದ್ಯಮದಲ್ಲಿ ದುಡಿಯುವುದು- ಇವೆರಡಕ್ಕೂ ವ್ಯತ್ಯಾಸವಿದ್ದು ಹೊಸ ಮಸೂದೆಯು ಸಮಾಜವನ್ನು ದಾರಿತಪ್ಪಿಸುತ್ತದೆ ಎಂದಿದ್ದಾರೆ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್‌ ಸತ್ಯಾರ್ಥಿ.  ಕೌಟುಂಬಿಕ ಮೌಲ್ಯಗಳ ನೆಪವೊಡ್ಡಿ ಮಕ್ಕಳ ಶೋಷಣೆಯನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಹೊರಟಿದೆ ಎನ್ನುವುದು ಅವರ ದೂರು. ಮಸೂದೆಯನ್ನು ಮರುಪರಿಶೀಲಿಸಿ ಬಾಲನ್ಯಾಯ ಕಾಯ್ದೆ ಮತ್ತು ಶಿಕ್ಷಣ ಹಕ್ಕು ಕಾಯ್ದೆಗಳಿಗೆ ಪೂರಕವಾಗುವಂತೆ  ಅದನ್ನು ರಚಿಸುವುದು ಬಾಲದುಡಿಮೆಗೆ ಕಡಿವಾಣ ಹಾಕಲು ಸೂಕ್ತವಾದ ಹೆಜ್ಜೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT