ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲನ್ಯಾಯ ಕಾಯ್ದೆ ತಿದ್ದುಪಡಿಗೆ ಅವಸರವೇಕೆ?

Last Updated 14 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮಕ್ಕಳ ಭವಿಷ್ಯಕ್ಕೆ ಹಲವು ರೀತಿಯ ಪ್ರತ್ಯಾಘಾತಗಳನ್ನುಂಟು ಮಾಡಬಲ್ಲ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಸೂದೆಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವೆ ಮೇನಕಾ ಗಾಂಧಿ ಅವರು  ಲೋಕಸಭೆ­ಯಲ್ಲಿ ಮಂಡಿಸಿದ್ದಾರೆ. ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಅತ್ಯಾಚಾರ  ಪ್ರಕರಣದಲ್ಲಿ ಬಾಲಾರೋಪಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಈ ತುರ್ತು ಹೆಜ್ಜೆ.

ಬಾಲನ್ಯಾಯ ಕಾಯ್ದೆ ಪ್ರಕಾರ ೧೮ ವರ್ಷದೊಳಗಿನವರೆಲ್ಲರೂ ಮಕ್ಕಳು. ಶಿಕ್ಷೆ ಎನ್ನುವ ಪರಿಕಲ್ಪನೆ ಬಾಲನ್ಯಾಯದಲ್ಲಿ ಇಲ್ಲ. ಎಲ್ಲ ಮಕ್ಕಳೂ ಮುಗ್ಧರು. ಆದ್ದರಿಂದ ಅವರನ್ನು ಸೂಕ್ತ ಆಪ್ತಸಮಾಲೋಚನೆ ಮತ್ತು ತರಬೇತಿಗಳ ಮೂಲಕ ಮತ್ತೆ ಸಮಾಜದ ಮುಖ್ಯವಾಹಿನಿಗೆ ಕರೆತರಬಹುದೆಂಬ ಗಂಭೀರ ಚಿಂತನೆ ಇದರ ಹಿಂದೆ ಇದೆ. ಗಂಭೀರ ಅಪರಾಧ ಮಾಡಿದ ಮಕ್ಕಳಿಗೆ ಕಾಯ್ದೆಯಡಿ ಗರಿಷ್ಠ ಶಿಕ್ಷೆ ಮೂರು ವರ್ಷಗಳು ಮಾತ್ರ.

ವಿಶೇಷ ಗೃಹದಲ್ಲಿ ತರಬೇತಿಗಳನ್ನು ಪಡೆಯುತ್ತಾ ಜೀವನೋ­ಪಾಯಕ್ಕೆ ಕೆಲವು ಕೌಶಲಗಳನ್ನು ಅವರು ಕಲಿಯುತ್ತಾರೆ. ಇದರ ಜೊತೆಗೆ ಯೋಗ, ಧ್ಯಾನ, ವ್ಯಕ್ತಿತ್ವ ವಿಕಸನ ತರಬೇತಿ, ಕೃಷಿ, ಆಟ, ಭಾಷಾ ಅಧ್ಯಯನ, ಮೌಲ್ಯಗಳ ಕುರಿತು ಚಿಂತನ-ಮಂಥನ, ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆ ಪರಿಚಯ, ಉತ್ತಮ ನಾಗರಿಕರ ಗುಣಗಳು ಇತ್ಯಾದಿ ಚಟುವಟಿಕೆಗಳಿವೆ. ಈ ಪ್ರಕ್ರಿಯೆಯಲ್ಲಿ ತೊಡಗುವ ವ್ಯಕ್ತಿಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಹೆಚ್ಚು.

ಇದು ಸಾಲದು; ಅವರಿಗೆ ಗಲ್ಲಿನಂತಹ ಉಗ್ರ ಶಿಕ್ಷೆ ಕೊಡಬೇಕು ಎನ್ನುವುದು ಜನಸ್ತೋಮದ ಕೂಗು. ಇದು ಪ್ರತೀಕಾರದಿಂದ ಕೂಡಿದ್ದು. ಜನರ ಈ ಕೂಗನ್ನು ಸಂತೈಸಲು ಹೊಸ ತಿದ್ದು­ಪಡಿಯನ್ನು ತಯಾರು ಮಾಡಲಾಗಿದೆ. ಈ ತಿದ್ದುಪಡಿ ಮಸೂದೆ ಬಹಳ ಆತುರದಿಂದ ಸಿದ್ಧಪಡಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.  ಸಾರ್ವಜನಿಕ ವಲಯದಲ್ಲಿ  ಕೆಲವೇ ದಿನಗಳ ಮಟ್ಟಿಗೆ ಚರ್ಚೆಗೆ ಅವಕಾಶ ನೀಡಲಾಗಿತ್ತು. ಮಸೂದೆಯನ್ನು ಮಂಡಿಸಲು ಇಷ್ಟು ತುರ್ತು ಏನಿತ್ತು?

ಲಕ್ಷಾಂತರ ಮಕ್ಕಳ ಭವಿಷ್ಯ ನಿರ್ಧರಿಸುವ ಮಹತ್ವಪೂರ್ಣ ಕಾಯ್ದೆಯನ್ನು ರೂಪಿಸುವಾಗ ಸಾಕಷ್ಟು ಚರ್ಚೆ ನಡೆಸಬೇಕು. ಇದು ಪ್ರಜಾಪ್ರಭುತ್ವದ ರೀತಿ ನೀತಿ. ಈಗ ಮಂಡಿಸಲಾಗಿರುವ ಮಸೂದೆಯು ಹೊರಗಿನಿಂದ ಹೇರಿದಂತೆ ಇದೆ. ಸಚಿವಾಲಯದ ಕೆಲವು ಮಂದಿ ಕಾನೂನು ತಜ್ಞರ ತಲೆಯೊಳಗೆ ಹುಟ್ಟಿದ ವಿಶೇಷ ತಿದ್ದುಪಡಿ ಮಸೂದೆ ಇದಾಗಿದೆ.

೧೬ರಿಂದ ೧೮ ವರ್ಷದ ಬಾಲಾರೋಪಿಗಳನ್ನು ಈ ಮಸೂದೆಯು ಗುರಿಯಿಟ್ಟಿದೆ. ಈ ವಯೋಮಾನದ ಮಕ್ಕಳು ಗಂಭೀರ ಅಪರಾಧ ಮಾಡಿದರೆ ಅವರನ್ನು ಸಾಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವ ಪ್ರಸ್ತಾಪ ಇದರಲ್ಲಿ ಇದೆ. ಅವರನ್ನು ಬಾಲಕರಾಗಿ ಪರಿಗಣಿಸಬೇಕೇ ವಯಸ್ಕರಂತೆ ಪರಿಗಣಿಸಿ ಸಾಮಾನ್ಯ ನ್ಯಾಯಾಲಯಕ್ಕೆ ಕಳುಹಿಸಬೇಕೇ ಎನ್ನುವ ನಿರ್ಧಾರ ಬಾಲನ್ಯಾಯ ಮಂಡಳಿಗಳಿಗೆ ಸೇರಿದ್ದು ಎಂಬ ಪ್ರಸ್ತಾಪವೂ ಇದೆ. ಗಂಭೀರ ಅಪರಾಧಗಳಾದ ಕೊಲೆ, ಕೊಲೆ ಪ್ರಯತ್ನ, ಅತ್ಯಾಚಾರ, ಇತರೆ ಲೈಂಗಿಕ ಹಲ್ಲೆಗಳು, ಅಪಹರಣ ಮುಂತಾದ ಪ್ರಕರಣಗಳಲ್ಲಿ ಸಿಲುಕಿದ ಮಕ್ಕಳು ಈ ಮಸೂದೆಯ ಪ್ರಕಾರ ಕ್ರಿಮಿನಲ್ ಪ್ರಕರಣದಡಿ ನ್ಯಾಯಾಲಯದ ಮುಂದೆ ಹೋಗಬೇಕಾಗುತ್ತದೆ

೧೯೮೬ರ ಬಾಲನ್ಯಾಯ ಕಾಯ್ದೆಯನ್ನು ರದ್ದುಗೊಳಿಸಿದ ನಂತರ ೨೦೦೦ದಲ್ಲಿ ಹೊಸ ಬಾಲನ್ಯಾಯ ಕಾಯ್ದೆ ಜಾರಿಗೆ ಬಂತು. ೧೯೮೬ರ ಕಾಯ್ದೆಯಲ್ಲಿ ಬಾಲಕನ ವಯಸ್ಸು ೧೬ ಮತ್ತು ಬಾಲಕಿಯ ವಯಸ್ಸು ೧೮ ಎಂದು ನಿಗದಿ­ಪಡಿಸಲಾಗಿತ್ತು. ದೇಶ-ವಿದೇಶಗಳಲ್ಲಿ ನಡೆದ ಅನೇಕ ಚರ್ಚೆಗಳು, ಸಮಾಲೋಚನೆಗಳು ಮತ್ತು ಅಧ್ಯಯನಗಳ ಹಿನ್ನೆಲೆಯಲ್ಲಿ ಮಕ್ಕಳ ಏಕರೂಪ ವಯೋಮಾನ ವೈಜ್ಞಾನಿಕವೆಂಬ ನಿರ್ಧಾರಕ್ಕೆ ಅಂತರರಾಷ್ಟ್ರೀಯ ಸಮೂಹ ಬಂದಿತ್ತು.

ಇದರ ಪರಿಣಾಮವೇ ೧೯೮೯ರ ಮಕ್ಕಳ ಹಕ್ಕುಗಳ ಒಡಂಬಡಿಕೆ. ಇದು ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಇಟ್ಟ ಐತಿಹಾಸಿಕ ಹೆಜ್ಜೆ. ಈ ಒಡಂಬಡಿಕೆಗೆ ಭಾರತ ಸರ್ಕಾರವು ೧೯೯೨ರಲ್ಲಿ ಸಹಿ ಹಾಕಿ ತನ್ನ ಬದ್ಧತೆಯನ್ನು ತೋರಿದೆ. ಈ ಬದ್ಧತೆಯ ಸ್ಫೂರ್ತಿಯಂತೆ ೨೦೦೦ದಲ್ಲಿ ಹೊಸ ಬಾಲನ್ಯಾಯ ಕಾಯ್ದೆ ರಚನೆಯಾಗಿತ್ತು. ಒಡಂಬಡಿಕೆಯ ಬಹುತೇಕ ಅಂಶಗಳನ್ನು ಒಳಗೊಂಡಂತಹ ಪ್ರಗತಿಪರವಾದ ಕಾಯ್ದೆ ಇದಾಗಿದೆ. ಆದರೆ, ಹೊಸ ತಿದ್ದುಪಡಿ ಪ್ರಗತಿಯ ವಿರುದ್ಧ ದಿಕ್ಕಿನಲ್ಲಿ ಸಾಗುವಂತಿದೆ.

ಒಡಂಬಡಿಕೆಯಲ್ಲಿ ಹೇಳಿದಂತಹ ಹಕ್ಕುಗಳನ್ನು ಮಕ್ಕಳಿಗೆ ಒದಗಿಸುವುದರಲ್ಲಿ ಸರ್ಕಾರ ಎಡವಿದೆ. ಒಂದು ಕೋಟಿಗಿಂತ ಹೆಚ್ಚು ಮಕ್ಕಳು ಇನ್ನೂ ಬಾಲಕಾರ್ಮಿಕರಾಗಿಯೇ ದುಡಿಯುವಂತ ಸ್ಥಿತಿ ದೇಶದಲ್ಲಿ ಇದೆ. ವೇಶ್ಯಾವಾಟಿಕೆಯಲ್ಲಿ ಸಿಲುಕಿರುವ ೯ರಂದ ೧೪ ವರ್ಷದ ಮಕ್ಕಳ ಸಂಖ್ಯೆ ಸುಮಾರು ೫ ಲಕ್ಷ. ಅಪೌಷ್ಟಿಕತೆಯಿಂದ ಬಳಲುವ ಲಕ್ಷಾಂತರ ಮಕ್ಕಳು ಬಹುತೇಕ ಎಲ್ಲ ರಾಜ್ಯಗಳ ಬಳುವಳಿ. ಶಿಕ್ಷಣದಿಂದ ಹೊರಗುಳಿದ ಮಕ್ಕಳು, ಬೀದಿಮಕ್ಕಳು, ವಿಕಲಚೇತನರು, ಎಚ್‌ಐವಿ/­ಏಡ್ಸ್ ಪೀಡಿತರು, ಭಿಕ್ಷುಕರು...ಹೀಗೆ ನಮ್ಮ ದೇಶದ ಮಕ್ಕಳು ಸರಿಯಾದ ರಕ್ಷಣೆ ಮತ್ತು ಪೋಷಣೆ ಇಲ್ಲದೆ ದಿಕ್ಕಾಪಾಲಾಗಿ ಬೆಳೆಯುತ್ತಿ­ದ್ದಾರೆ.

ಇದರ ಜೊತೆಗೆ ಹಿಂಸೆ, ಅತ್ಯಾಚಾರದಿಂದ ಕೂಡಿದ ಚಲನಚಿತ್ರಗಳು ಮತ್ತು ಅಂತರ್ಜಾಲ ನಿರಾಯಾಸವಾಗಿ ಎಲ್ಲರಿಗೂ ದೊರಕುವ ಸಾಮಾಜಿಕ ಸ್ಥಿತಿ. ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿ ಈಗ ೨೨ ವರ್ಷಗಳು ಕಳೆದಿವೆ. ನಮ್ಮ ದೇಶದ ಮಕ್ಕಳ ಉತ್ತಮ ಪೋಷಣೆಗೆ ಸರಿಯಾದ ನೀತಿ ರೂಪಿಸಲು ಸರ್ಕಾರ ಏಕೆ ಎಡವಿತು? ೧೯೭೪ರ ಮಕ್ಕಳ ನೀತಿಯನ್ನು ಪುನರ್‌­ಪರಿಶೀಲಿಸಲು ಸರ್ಕಾರ ಏಕೆ ಮುಂದಾಗಲಿಲ್ಲ? ಹಕ್ಕುಗಳಿಂದ ವಂಚಿತರಾದ ಮಕ್ಕಳು ಎಲ್ಲಿಯೂ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆಗಳು, ಹೋರಾಟಗಳು ನಡೆಸಲಿಲ್ಲ ಎನ್ನುವುದು ಇದಕ್ಕೆ ಕಾರಣವಿರಬಹುದೇನೋ!

ಈ ಪ್ರಾಥಮಿಕ ಕರ್ತವ್ಯದಿಂದ ನುಣುಚಿಕೊಂಡ ಸರ್ಕಾರಕ್ಕೆ ಅಡ್ಡದಾರಿಯಾಗಿದೆ ಹೊಸ ತಿದ್ದುಪಡಿ. ೧೬–-೧೮ರ ವಯೋಮಾನದ ಮಕ್ಕಳೇ ಅಪರಾಧ ಮಾಡುವವರಲ್ಲಿ ಹೆಚ್ಚು. ಇದಕ್ಕೆ ಕಾರಣ ಅವರ ಹದಿಹರೆಯ. ಇಂತಹ ಮಕ್ಕಳಿಗೆ ವಿಶೇಷ ಮಾರ್ಗದರ್ಶನ, ತರಬೇತಿ, ಮೌಲ್ಯಗಳ ತಿಳಿವಳಿಕೆ, ಹಕ್ಕುಗಳ ಗೌರವ ಇತ್ಯಾದಿ ನೀಡುವಂತಹ ವ್ಯವಸ್ಥೆ ಎಲ್ಲಿದೆ? ಅಪರಾಧದೆಡೆಗೆ ಸೆಳೆಯುವಂತಹ ಸನ್ನಿವೇಶಗಳನ್ನು ತಡೆಯುವ ಮಾನಿಟರಿಂಗ್ ವ್ಯವಸ್ಥೆ ಬೇಡವೇ?

ಸುಲಲಿತವಾಗಿ ಪರಿಹರಿಸ­ಬಹುದಾದ ಸಮಸ್ಯೆಗಳನ್ನು ಮತ್ತಷ್ಟು ಕಗ್ಗಂಟು ಮಾಡುವ ಅವಶ್ಯಕತೆ ಏನಿದೆ? ಹೊಸ ರಾಷ್ಟ್ರವನ್ನು ಕಟ್ಟಬೇಕಾದ ಯುವಕರನ್ನು ಹೀಗೆ ಜೈಲಿಗೆ ಅಟ್ಟಿದರೆ ಸಮಸ್ಯೆಗೆ ಪರಿಹಾರವಾಗುತ್ತದೆಯೇ? ನಮ್ಮ ಜೈಲುಗಳ ಸ್ಥಿತಿ ಬಲ್ಲವರು ಯಾರೂ ಈ ಬಾಲಕರನ್ನು ಜೈಲಿಗೆ ಕಳುಹಿಸಲು ಬೆಂಬಲಿಸುವುದಿಲ್ಲ.

ಮಕ್ಕಳ ಸಮಸ್ಯೆಗಳು ಪೋಷಕರ ಸಮಸ್ಯೆಗಳೂ ಹೌದು. ೧೬–-೧೮ರ ಹರೆಯ ಬಹಳ ಕ್ಲಿಷ್ಟ­ವಾದದ್ದು. ಈ ವಯೋಮಾನದ ಮಕ್ಕಳಿರುವ ಪೋಷಕರ ದುಗುಡ ವಿವರಿಸಲಾಗದು. ಪೋಷಕರು ಮತ್ತು ಮಕ್ಕಳ ಹಿತದೃಷ್ಟಿಯಿಂದ ಕೂಡಲೇ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವುದು ಮಕ್ಕಳ ಹಕ್ಕುಗಳಿಗೆ ನೀಡುವ ಗೌರವವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT