ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾರೋಪಿಗಳ ಪುನರ್ವಸತಿಯಲ್ಲಿ ಅನಾಸಕ್ತಿ ಏಕೆ?

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಗುಲ್ಬರ್ಗ ಸರ್ಕಾರಿ ವೀಕ್ಷಣಾಲಯದಿಂದ ಆರು ಬಾಲಕರು ಭಾನುವಾರ ಪರಾರಿ­ಯಾ­ಗಿರುವ ವರದಿಯಲ್ಲಿ ಅಚ್ಚರಿಯೇನಿಲ್ಲ. ವೀಕ್ಷ­ಣಾಲಯದ ಕಾವಲುಗಾರನ ಮೇಲೆ ಖಾರದ ಪುಡಿ ಎರಚಿ ಬಾಗಿಲು ಮುರಿದು ಓಡಿ ಹೋಗಿ­ರುವುದು ಗುಲ್ಬರ್ಗದಲ್ಲಿ ಈ ಹಿಂದೆಯೂ ನಡೆ­ದಿದೆ. ಬಾಲಕರ ಹೆಚ್ಚುತ್ತಿ­ರುವ ಅಪರಾಧಗಳ ಕುರಿತು ತೀವ್ರ ಕಳವಳ­ವಿದ್ದರೂ ಅವರ ಪುನರ್ವಸತಿ ಬಗೆಗೆ ಎಲ್ಲಿಯೂ ಕಿಂಚಿತ್ತೂ ಕಾಳಜಿ ಇಲ್ಲ.

ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಬಾಲಕರು ಭಾಗಿಯಾಗುತ್ತಿದ್ದಾರೆನ್ನುವ ಬಗ್ಗೆ ಎಲ್ಲೆಡೆ ಕೂಗಾಟವಿದೆ. ಆದರೆ ಆರೋಪಿಗಳನ್ನು ಮತ್ತೆ ಸರಿದಾರಿಗೆ ತರುವಂತಹ ವ್ಯವಸ್ಥೆ ದುರ್ಬಲ­ವಿರುವುದನ್ನು ಏಕೆ ಯಾರೂ ಗಮನಿಸು­ವುದಿಲ್ಲ? ಅಪರಾಧ ಮಾಡಿ ವೀಕ್ಷಣಾಲಯಕ್ಕೆ ದಾಖಲಾ­ಗುವ ಮಕ್ಕಳನ್ನು ಸಮಾಜದ ಮುಖ್ಯ­ವಾಹಿನಿಗೆ ತರಬೇಕಾದ ವ್ಯವಸ್ಥೆಯು ನಿರ್ಲಕ್ಷ್ಯ­ಕ್ಕೊಳಗಾಗಿದೆ. ಅಧಿಕಾರಿಗಳು ಮತ್ತು ರಾಜಕಾರ­ಣಿ­ಗಳಿಗೆ ಈ ಕ್ಷೇತ್ರದಲ್ಲಿ ಯಾವುದೇ ಆಸಕ್ತಿ ಇಲ್ಲ.

ಬಾಲಾರೋಪಿಗಳ ಪುನರ್ವಸ­ತಿ­­ಗಾಗಿ ವೀಕ್ಷಣಾ­ಲಯಗಳು ಪ್ರತಿ ಜಿಲ್ಲೆಯಲ್ಲೂ ಇರ­ಬೇಕೆಂ­ದಿದೆ. ಕರ್ನಾಟಕದಲ್ಲಿ ಪ್ರಸ್ತುತ ೧೬ ಜಿಲ್ಲೆಗಳಲ್ಲಿ ವೀಕ್ಷಣಾಲಯಗಳು ಇವೆ. ಉಳಿದೆಡೆ­ಯಿಂದ ಬಾಲಾರೋಪಿಗಳನ್ನು ವೀಕ್ಷಣಾಲಯ ಇರು­ವಂತಹ ಜಿಲ್ಲೆಗೆ ವರ್ಗಾಯಿಸಲಾಗುತ್ತದೆ. ಸ್ವಂತ ಕಟ್ಟಡಗಳು ಹೊಂದಿರುವ ವೀಕ್ಷಣಾಲಯ­ಗಳು ಕೇವಲ ೧೧ ಇವೆ. ಉಳಿದವು ಬಾಡಿಗೆ ಕಟ್ಟಡ­ಗಳಲ್ಲಿ ಕನಿಷ್ಠ ಸೌಕರ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಬಹುತೇಕ ಎಲ್ಲ ವೀಕ್ಷ­ಣಾಲ­ಯಗಳೂ ಸಿಬ್ಬಂದಿ ಕೊರತೆಯಿಂದ ನರಳು­ತ್ತಿವೆ. ಹೊರಗುತ್ತಿಗೆ ಆಧಾರದ ಮೇಲೆ ಕಾವಲು­ಗಾರ­ರನ್ನು ನೇಮಿಸಲಾಗುತ್ತಿದೆ. ಸೆಕ್ಯೂರಿಟಿ ಏಜೆ­ನ್ಸಿ­­ಗಳಿಂದ ಬರುವ ಇವರಿಗೆ ಮಕ್ಕಳ ಮನಶಾಸ್ತ್ರದ ಬಗ್ಗೆ ಯಾವುದೇ ತಿಳಿವಳಿಕೆಯೂ ಇರುವುದಿಲ್ಲ. ಬಹುತೇಕ ಸಂಸ್ಥೆಗಳಿಗೆ ಏಜೆನ್ಸಿಗಳು ವೃದ್ಧಾಪ್ಯ­ದಲ್ಲಿರುವವರನ್ನೇ ಕಳುಹಿಸುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗಿನ ಒಪ್ಪಂದದ ಮೇರೆಗೆ ಕಾವಲುಗಾರರನ್ನು ನಿಯೋಜಿಸಲಾಗುತ್ತದೆ.

ಪ್ರತಿಯೊಂದು ವೀಕ್ಷಣಾಲಯದಲ್ಲಿ ಅಧೀಕ್ಷ­ಕರು, ಹೌಸ್ ಫಾದರ್, ಆಪ್ತಸಮಾಲೋಚ­ಕರು, ಕಾವಲುಗಾರರು, ಅಡುಗೆಯವರು ಸಿಬ್ಬಂದಿ ಕಡ್ಡಾಯ. ಪ್ರತಿ ಜಿಲ್ಲೆಯಲ್ಲಿ ವೀಕ್ಷಣಾ­ಲಯದ ಕಾರ್ಯಚಟುವಟಿಕೆಗಳನ್ನು ಮೇಲುಸ್ತು­ವಾರಿ ಮಾಡಲು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಬಾಲನ್ಯಾಯ ಮಂಡಳಿಗಳು ಇವೆ. ಇದಲ್ಲದೆ, ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ಮೇಲುಸ್ತು­ವಾ­ರಿ­­ಗಾಗಿ ಉಚ್ಚನ್ಯಾಯಾಲಯದಿಂದ ನಿಯೋ­ಜಿಸ­ಬೇಕು. ಅವರು ವೀಕ್ಷಣಾ­ಲ­ಯಕ್ಕೆ ನಿಯ­ಮಿತ­ವಾಗಿ ಭೇಟಿ ಕೊಟ್ಟು ವರದಿ ಸಲ್ಲಿಸ­ಬೇಕೆಂ­ದಿದೆ. ಬಾಲನ್ಯಾಯ ಕಾಯ್ದೆಯ ಸಮರ್ಪಕ ಜಾರಿಗೆ ನ್ಯಾಯಮೂರ್ತಿ ಹುಲುವಾಡಿ ರಮೇಶ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮಿತಿ ಕೂಡಾ ರಚನೆಯಾಗಿದೆ.

ಬಾಲನ್ಯಾಯ ಕಾಯ್ದೆಯ ಸಮರ್ಪಕ ಜಾರಿ­ಗಾಗಿ ಹಣದ ಕೊರತೆ ಇಲ್ಲ. ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐಸಿಪಿಎಸ್) ಅಡಿಯಲ್ಲಿ ಕೋಟ್ಯಂತರ ಹಣ ರಾಜ್ಯ ಸರ್ಕಾರಕ್ಕೆ ಕೇಂದ್ರ­ದಿಂದ ಬಿಡುಗಡೆಯಾಗಿದೆ. ೨೦೧೦ರಲ್ಲಿ ಪ್ರಾರಂಭ­ವಾದ ಈ ಯೋಜನೆ ಬಹಳ ಮಹತ್ವಾ­ಕಾಂಕ್ಷೆಯನ್ನು ಹೊಂದಿದ್ದು, ಪ್ರತಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಘಟಕಗಳು ರಚನೆಯಾಗಿವೆ. ಈ ಘಟಕದ ಸಿಬ್ಬಂದಿಗಳು ವೀಕ್ಷಣಾಲಯಕ್ಕೆ ಭೇಟಿ ಮಾಡಿ ಮಕ್ಕಳ ಸ್ಥಿತಿಗತಿ ಕುರಿತು ಅಧ್ಯಯನ ಮಾಡಬೇಕು; ಅವರಿಗೆ ಆಪ್ತಸಮಾಲೋಚನೆ ಮಾಡಿ, ಅಗತ್ಯ­ವಾದ ಮಾರ್ಗದರ್ಶನ ನೀಡ­ಬೇಕು. ಬಾಲಕರ ಬಿಡುಗಡೆಯ ನಂತರ ಮನೆಗೆ ಭೇಟಿ ನೀಡಿ ಅನುಸರಣೆ ಮಾಡಬೇಕೆಂದಿದೆ. ಆದರೆ, ಇಷ್ಟೆಲ್ಲಾ ವ್ಯವಸ್ಥೆಗಳು ಇದ್ದರೂ ಸಮ­ರ್ಪಕ ಜಾರಿಯ ಬಗ್ಗೆ ಅನೇಕ ಅನುಮಾನಗಳಿವೆ .

ಮಕ್ಕಳು ಓಡಿಹೋಗುವುದು ಸಹಜ. ಪಂಜರ­ದೊಳಗೆ ಅದೆಷ್ಟು ಕಾಲ ಮಕ್ಕಳನ್ನು ಹಿಡಿದಿಟ್ಟು­ಕೊಳ್ಳಲು ಸಾಧ್ಯ? ಆರು ತಿಂಗಳೊಳಗೆ ಬಾಲಕರ ಮೇಲಿನ ಪ್ರಕರಣಗಳು ಇತ್ಯರ್ಥಗೊಳಿಸ­ಬೇಕೆಂ­ಬುದು ಬಾಲನ್ಯಾಯ ಕಾಯ್ದೆಯ ನಿಯಮ. ನಾಲ್ಕು ತಿಂಗಳುಗಳಿಗಿಂತ ಹೆಚ್ಚು ಕಾಲ ವೀಕ್ಷಣಾಲ­ಯದಲ್ಲಿ ಅವರನ್ನು ಇಟ್ಟುಕೊಳ್ಳಬಾರದು. ಆದರೆ, ಗುಲ್ಬರ್ಗದ ಬಾಲಕರು ಕಳೆದ ೬ ತಿಂಗಳು­ಗಳಿಂದ ಅಲ್ಲೇ ಇದ್ದರು. ಅವರಿಗೆ ಜಾಮೀನು ನೀಡುವುದಾಗಲಿ ಸೂಕ್ತ ಪುನರ್ವಸತಿ ಕಲ್ಪಿಸುವು­ದಾಗಲಿ ಮಾಡಲಿಲ್ಲವೇಕೆ? ಕನಿಷ್ಠ ಸೌಕರ್ಯ­ಗಳಿಲ್ಲದೆ ಪ್ರೀತಿಯಿಂದ ಮಾತನಾಡು­ವವರೇ ಇಲ್ಲದೆ ಅದೆಷ್ಟು ಕಾಲ ವೀಕ್ಷಣಾಲಯದ ಕೋಣೆಯಲ್ಲಿ ಉಳಿಯಲು ಸಾಧ್ಯ? ಮಕ್ಕಳು ಚಟುವಟಿಕೆ ಇಲ್ಲದೆ ಇರಲಾರರು; ಅದರಲ್ಲೂ ೧೫ರಿಂದ ೧೮ರ ಹರೆಯದವರನ್ನು ಹಿಡಿದಿಟ್ಟು­ಕೊಳ್ಳಲು ಇನ್ನೂ ಕಷ್ಟ. ಅವರ ‘ಎಸ್ಕೇಪ್’ ನಲ್ಲಿ ಅಚ್ಚರಿಯೇನಿದೆ?

ವೀಕ್ಷಣಾಲಯಗಳಲ್ಲಿ ದಾಖಲಾಗುವ ಮಕ್ಕ­ಳನ್ನು ಅವರ ವಯೋಮಾನ ಮತ್ತು ಅಪರಾಧಕ್ಕೆ ತಕ್ಕಂತೆ ವರ್ಗೀಕರಿಸಿ ಪ್ರತ್ಯೇಕವಾಗಿ ಇರಿಸಬೇಕೆ­ನ್ನುವ ಮಾರ್ಗಸೂಚಿ ಇದೆ. ಆದರೆ, ಸೌಕರ್ಯ­ಗಳ ಕೊರತೆಯಿಂದ ಎಲ್ಲ ಮಕ್ಕಳನ್ನೂ ಒಟ್ಟಿಗೆ ಒಂದೆಡೆ ಕೂಡಿಹಾಕುವ ವ್ಯವಸ್ಥೆಯನ್ನೇ ಅನುಸರಿ­ಸ­ಲಾ­ಗುತ್ತಿದೆ. ಇದರಿಂದ, ಗಂಭೀರೇತರ ಅಪ­ರಾಧ ಮಾಡಿದವರು ಗಂಭೀರ ಅಪರಾಧ ಮಾಡಿದವರ ಸಂಪರ್ಕಕ್ಕೆ ಒಳಗಾಗುತ್ತಾರೆ. ಹಿರಿಯ ಬಾಲಕರ ಮಾತುಗಳು ಮತ್ತು ಚಟು­ವಟಿಕೆಗಳಿಗೆ ಉಳಿದವರು ಪ್ರಭಾವ­ಕ್ಕೊಳ­ಗಾಗುವ ಸಾಧ್ಯ­ತೆಯೂ ಹೆಚ್ಚು. ಇದಲ್ಲದೆ, ಕಿರಿಯ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳು­ವಂತಹ ಪ್ರಸಂಗಗಳೂ ಇವೆ.

ರಾಜ್ಯದ ಬಹುತೇಕ ವೀಕ್ಷಣಾಲಯಗಳಲ್ಲಿ ಕಾಯಂ ಅಧೀಕ್ಷಕರೇ ಇಲ್ಲದಿರುವುದರಿಂದ ವೀಕ್ಷ­ಣಾ­­ಲಯದ ಕಾರ್ಯಚಟುವಟಿಕೆಗಳು ಕುಂಠಿ­ತ­ಗೊಂ­ಡಿವೆ. ಇರುವ ಸಿಬ್ಬಂದಿ ವರ್ಗಕ್ಕೆ ಬಾಲ­ನ್ಯಾಯ ಕಾಯ್ದೆ ಮತ್ತು ಮಕ್ಕಳ ಮನ­ಶಾಸ್ತ್ರದ ಬಗ್ಗೆ ಸರಿಯಾದ ತರಬೇತಿ ಇಲ್ಲ. ಆಟದ ಮೈದಾನ­ವಿ­ರುವ ವೀಕ್ಷಣಾಲಯಗಳೇ ಅಪ­ರೂಪ. ದಾಖ­ಲಾ­ಗುವ ಮಕ್ಕಳನ್ನು ನಿರಂತರ ಚಟುವಟಿಕೆ­ಗಳಲ್ಲಿ ತೊಡಗಿಸಿಕೊಳ್ಳಲು ಪ್ರತಿ ವೀಕ್ಷಣಾಲಯ­ದಲ್ಲೂ ಜಾಗವಿರಬೇಕು.
ಆದರೆ, ಬಾಲಾರೋಪಿಗಳ ಕ್ಷೇತ್ರದಲ್ಲಿ ಕಾರ್ಯ ನಿರ್ವ­ಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ­ಖೆಯ ಕಾಯಂ ಸಿಬ್ಬಂದಿಗೆ ಆಸಕ್ತಿ ವಿರಳ.

ವೀಕ್ಷಣಾಲಯಕ್ಕೆ ದಾಖಲಾಗುವ ಮಕ್ಕಳೆಂ­ದರೆ ಹದಿಹರೆಯದವರು. ಬಹುತೇಕರು ಶಾಲೆ ಬಿಟ್ಟವರು. ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ, ಪಂಗಡದವರೇ ಹೆಚ್ಚಿನ­ವರು. ಅನೇಕ ಮಕ್ಕಳಿಗೆ ಪಾಲಕರಾಗಿ ತಾಯಿ ಮಾತ್ರ ಇರುತ್ತಾರೆ. ಹದಿಹರೆ­ಯದ ಇಂತಹ ಮಕ್ಕಳನ್ನು ಹಿಡಿದಿಟ್ಟುಕೊಳ್ಳಲು ತಾಯಿ­ಯಿಂದ ಸಾಧ್ಯವಿಲ್ಲ. ಸೂಕ್ತ ಪುನರ್ವಸತಿ ಮತ್ತು ಶಿಕ್ಷಣ ಕೊಟ್ಟು ಅವರನ್ನು ಮುಖ್ಯವಾಹಿನಿಗೆ ತಲುಪಿಸ­ಬೇಕಾದ ಪ್ರಜಾಪ್ರಭುತ್ವ ಸರ್ಕಾರವು ಕಣ್ಮುಚಿ ಕುಳಿತಿದೆ. ಇವರಿಂದ ಸಹಿಸಲಾರದ ಅಪರಾಧವಾದಾಗ ಎಚ್ಚೆತ್ತುಕೊಂಡು ಗೂಂಡಾ ಕಾಯ್ದೆಯಂತಹ ಕರಾಳ ಕಾಯ್ದೆ ಘೋಷಿಸಿ ತೃಪ್ತಿಪಡುತ್ತದೆ.

ಅಪರಾಧದೆಡೆಗೆ ಹದಿಹರೆಯದವರನ್ನು ದೂಡುವ ವಾತಾವರಣ ನಮ್ಮ ಮನೆಯೊಳಗೆ, ಸುತ್ತಮುತ್ತ ಇನ್ನೂ ಜೀವಂತವಾಗಿದೆ. ಪ್ರಜ್ಞಾವಂ­ತರು ಮತ್ತು ಜನಪರ ಸರ್ಕಾರ ಇದನ್ನು ಗಮನಿಸಿ ತುರ್ತು ಕಾರ್ಯಕ್ರಮಗಳನ್ನು ಜಾರಿಮಾಡ­ಬೇಕಿದೆ. ಅಪರಾಧ ತಡೆಗೆ ನೆರವಾಗುವ ವೀಕ್ಷ­ಣಾಲಯದಂತಹ ಸಂಸ್ಥೆಗಳನ್ನು ಮೂಲ­ಭೂತ ಸೌಕರ್ಯಗಳೊಂದಿಗೆ ಬಲಿಷ್ಠಗೊಳಿಸಿದರೆ ನಮ್ಮ ನವಯುವಕರ ಭವಿಷ್ಯ ಉತ್ತಮವಾದೀತು!

(ಲೇಖಕರು ವಕೀಲರು ಮತ್ತು ಮೈಸೂರು ಬಾಲನ್ಯಾಯ ಮಂಡಳಿ ಸದಸ್ಯರಾಗಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT