ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ ನ್ಯಾಯ ಕಾಯ್ದೆ ಸವಾಲು

ಚರ್ಚೆ
Last Updated 29 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ರಾಜ್ಯಸಭೆ ಮೊನ್ನೆ ಅಂಗೀಕರಿಸಿದ  ಬಾಲ ನ್ಯಾಯ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಬಿದ್ದ ಕೂಡಲೇ, ಈಗ ಜಾರಿಯಲ್ಲಿರುವ 2000ದ ಬಾಲ ನ್ಯಾಯ ಕಾಯ್ದೆ ಅವಸಾನವಾಗಲಿದೆ. ಇದಕ್ಕಾಗಿ ದಿನ ಗಣನೆ ಆರಂಭವಾಗಿದೆ. 2000ದ ಕಾಯ್ದೆಯು ವಿಶ್ವದಲ್ಲೇ ಉತ್ತಮ ಕಾನೂನು ಎಂದು ಪರಿಗಣಿತವಾಗಿತ್ತು. ಇದನ್ನು ಸರಿಯಾಗಿ ಅನುಷ್ಠಾನ ಮಾಡಲು ವಿಫಲವಾದ ಸರ್ಕಾರ, ಹೊಸ ಕಾನೂನು ತರಲು ಕೈಹಾಕಿ ತನ್ನ ಅಂತರರಾಷ್ಟ್ರೀಯ ಬದ್ಧತೆಗಳಿಂದ ಹಿಂದೆ ಸರಿದಿದೆ.

ಮಕ್ಕಳ ವಿಷಯದಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್ ಬಹಳಷ್ಟು ಕೆಲಸ ಮಾಡಿದೆ. ಈ ವಿಷಯದಲ್ಲಾದ ಸಂಶೋಧನೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ ಸರಿ ಯಾವುದು, ತಪ್ಪು ಯಾವುದೆಂದು ತಲೆಕೆಡಿಸಿಕೊಂಡು ಸರ್ಕಾರ, ಸಂಸ್ಥೆಗಳಿಗೆ ಸಲಹೆಗಳನ್ನೂ, ಅತ್ಯುತ್ತಮ ಪರಿಹಾರೋಪಾಯಗಳನ್ನೂ, ಮಾದರಿಗಳನ್ನೂ ತಿಳಿಸುತ್ತಿದೆ. ಇದು, ಕಳೆದ ಆಗಸ್ಟ್‌ನಲ್ಲಿಯೇ ಸಂಸತ್ತಿನ ಮುಂದಿದ್ದ ಹೊಸ ಮಸೂದೆ ಬಗ್ಗೆ ಆಕ್ಷೇಪಗಳನ್ನೆತ್ತಿತ್ತು. ಆದರೆ ದೇಶ ಇವುಗಳನ್ನು ಅಲಕ್ಷಿಸಿ, ದೆಹಲಿ ಅತ್ಯಾಚಾರ ಸಂತ್ರಸ್ತೆಯ ಪ್ರಕರಣವನ್ನು ಮುಂದಿಟ್ಟುಕೊಂಡು ಹೊಸ ಮಸೂದೆಯನ್ನು ಅಂಗೀಕರಿಸಿಬಿಟ್ಟಿದೆ. ಎರಡು ಹೆಜ್ಜೆ ಮುಂದೆ ಹೋಗಿದ್ದ ನಾವು, ಈಗ ಹಿಂದೆ ಬಂದಂತಾಗಿದೆ.

ನಿರ್ಭಯಾ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಬಾಲಕನ ಬಿಡುಗಡೆಗೆ ದೇಶ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಸಂಸತ್ತು ಈ ಮಸೂದೆಗೆ ಅಸ್ತು ಎಂದಿದೆ. ಒತ್ತಡದಲ್ಲೇ ರಾಜ್ಯಸಭೆ ಒಪ್ಪಿಗೆ ನೀಡಿದೆ. ಕಳೆದ ಮೇ ತಿಂಗಳಿನಲ್ಲೇ ಲೋಕಸಭೆ ಇದನ್ನು ಅಂಗೀಕರಿಸಿತ್ತು.

ಯುನಿಸೆಫ್ ಏನು ಹೇಳಿತ್ತು ಎಂಬುದನ್ನು ನೋಡಬೇಕಿದೆ. ಗಂಭೀರ ಪ್ರಕರಣಗಳಲ್ಲಿ (ಏಳು ವರ್ಷಕ್ಕೂ ಹೆಚ್ಚು ಕಾಲ ಶಿಕ್ಷೆಗೆ ಅವಕಾಶ ಇರುವ ಪ್ರಕರಣಗಳು) ಬಾಲ ನ್ಯಾಯ ಮಂಡಳಿ ಒಪ್ಪಿದರೆ, 16ರಿಂದ 18 ವರ್ಷದೊಳಗಿನ ಮಕ್ಕಳನ್ನು ಒಳಗೊಂಡ ಪ್ರಕರಣಗಳನ್ನು ವಯಸ್ಕರಿಗಾಗಿ ಇರುವ ನ್ಯಾಯಾಲಯಗಳಲ್ಲಿ ನಡೆಸುವ ಅವಕಾಶ ಕಲ್ಪಿಸುವ ಮಸೂದೆಯ ಬಗ್ಗೆ ಯುನಿಸೆಫ್‌ ತೀವ್ರ ಕಳವಳ ವ್ಯಕ್ತಪಡಿಸಿತ್ತು.

ದೇಶವು 2000ದಲ್ಲಿ ಬಾಲ ನ್ಯಾಯ ಕಾಯ್ದೆ ಜಾರಿಗೆ ತರುವ ಮೂಲಕ, ಕಾನೂನಿ ನೊಡನೆ ಸಂಘರ್ಷಕ್ಕೊಳಗಾಗುವ ಮಕ್ಕಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿ ಕೊಂಡಿತ್ತು. ವಿಶ್ವ ಮಕ್ಕಳ ಹಕ್ಕುಗಳ ಒಡಂಬಡಿಕೆ ಹೇಳಿದ ತತ್ವಗಳನ್ನು ಅಳವಡಿಸಿಕೊಳ್ಳುವುದು ದೇಶದ ಬಾಧ್ಯ ತೆಯೂ ಆಗಿತ್ತು. ಏಕೆಂದರೆ ದೇಶ ಈ ಅಂತರರಾಷ್ಟ್ರೀಯ ಒಡಂಬಡಿಕೆಯನ್ನು ಒಪ್ಪಿಕೊಂಡು ಪುಷ್ಟೀಕರಿಸಿದೆ.

ಮಕ್ಕಳ ಸ್ವಾತಂತ್ರ್ಯ ನಿಗ್ರಹಿಸುವುದನ್ನು ಕೊನೆಯ ಹಂತದ ಶಸ್ತ್ರವಾಗಿ ಬಳಸುವುದು, ಮನಃಪರಿವರ್ತನೆ, ಪರ್ಯಾಯ ಶಿಕ್ಷೆ, ಪ್ರತ್ಯೇಕ ರಕ್ಷಣಾ ವ್ಯವಸ್ಥೆ, ಅರ್ಹ ಸಿಬ್ಬಂದಿಯ ನೇಮಕದಂತಹ ಆಯಾಮಗಳು ಈ ಒಡಂಬಡಿಕೆಯಲ್ಲಿವೆ. 18 ವರ್ಷದೊಳಗಿನವರನ್ನು ವಯಸ್ಕ ಅಪರಾಧಿಗಳಿಂದ ಬೇರ್ಪಟ್ಟ ವ್ಯವಸ್ಥೆಯಲ್ಲಿ, ಅವರ ಘನತೆ ಮತ್ತು ಆತ್ಮಗೌರವಕ್ಕೆ ಕುಂದುಬಾರದಂತೆ ನಡೆಸಿಕೊಳ್ಳಬೇಕೆನ್ನುವುದು ಅಂತರರಾಷ್ಟ್ರೀಯ ಮಾನದಂಡ.

ಯುನಿಸೆಫ್‌ನ ಭಾರತದ ಪ್ರತಿನಿಧಿ ಹೀಗೆ ಹೇಳಿದ್ದರು: ‘ಜಗತ್ತಿನಾದ್ಯಂತ,  ಬಾಲಾಪರಾಧಿಗಳನ್ನು ವಯಸ್ಕರ ನ್ಯಾಯಾಲಯಗಳಿಗೆ ವರ್ಗಾಯಿಸುವುದರಿಂದ ಅಪರಾಧ ಹಾಗೂ ಮರು ಅಪರಾಧದ ಪ್ರಮಾಣ ಇಳಿಮುಖವಾಗಿಲ್ಲ ಎಂಬುದನ್ನು ಪುರಸ್ಕರಿಸಲು ಸಾಕ್ಷ್ಯಾಧಾರಗಳಿವೆ. ಮಕ್ಕಳು ಮತ್ತೆ ಅಪರಾಧ ಮಾಡುವುದನ್ನು ಕಡಿಮೆ ಮಾಡಲು ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸುವುದೇ ದಾರಿ ಎಂಬುದು ಕಂಡುಬಂದಿದೆ.’

ಇನ್ನೊಂದು ಅಂತರರಾಷ್ಟ್ರೀಯ ಸಂಸ್ಥೆಯಾದ ಪೀನಲ್ ರಿಫಾರ್ಮ್ಸ್ ಇಂಟರ್‌ನ್ಯಾಷನಲ್ (ಪಿಆರ್‌ಇ), ಈ ಹೊಸ ಶಾಸನದಿಂದ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂಬುದನ್ನು ತಪಾಸಿಸಿ, ಯುನಿಸೆಫ್ ಜೊತೆಗೂಡಿ ಹೊರತಂದಿರುವ ವರದಿ ಅಂತರ್ಜಾಲದಲ್ಲಿ ಲಭ್ಯವಿದೆ. 

18 ವರ್ಷ ವಯಸ್ಸಿನೊಳಗಿನವರ ಪ್ರಕರಣವನ್ನು ವಯಸ್ಕರ ನ್ಯಾಯಾಲಯಕ್ಕೆ ವರ್ಗಾಯಿಸುವುದು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ಮತ್ತೆ ಮತ್ತೆ ತೋರಿಸುವ 40 ಪುಟಗಳ ಈ ವರದಿ, ಕಾನೂನಿನೊಡನೆ ಸಂಘರ್ಷಕ್ಕೆ ಸಿಲುಕಿರುವ ಮಕ್ಕಳ ಘನತೆ ಕಾಪಾಡುವುದು ಮತ್ತು ಸ್ವಾಭಿಮಾನವನ್ನು  ಎತ್ತಿ ಹಿಡಿಯುವಂತಹ ವಿಧಾನವು ಮಕ್ಕಳು ಇತರರ ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಕ್ಕೆ ಕೊಡಬೇಕಿರುವ ಗೌರವ ಕೊಡುವಂತೆ ಮಾಡಬಲ್ಲದು ಎನ್ನುತ್ತದೆ.

ಒಬ್ಬ ಬಾಲಕ ಗಂಭೀರ ಪ್ರಕರಣವನ್ನು ಎದುರಿಸುತ್ತಿದ್ದಾನೆ ಎನ್ನುವ ಕಾರಣಕ್ಕೆ ವಯಸ್ಕ ನ್ಯಾಯಾಲಯಕ್ಕೆ ಆತನ ಪ್ರಕರಣವನ್ನು ವರ್ಗಾಯಿಸಬೇಕು ಎಂಬುದೇ ತಾರ್ಕಿಕವಾಗಿ ಸರಿಯಲ್ಲ ಎಂದು ವರದಿ ಹೇಳಿದೆ. 16 ವರ್ಷದ ಬಾಲಕ ಅಥವಾ ಬಾಲಕಿ ಈ ಕಾರಣಕ್ಕಾಗಿ 18 ವರ್ಷಕ್ಕೂ ಹೆಚ್ಚಿನವರ ಪಕ್ವತೆ ಹೊಂದಿರುತ್ತಾರೆ ಎಂದು ಭಾವಿಸುವುದು ಯಾವ ರೀತಿಯಲ್ಲಿ ತರ್ಕಬದ್ಧವಾದುದು?

ವ್ಯಕ್ತಿಯ ಮೆದುಳಿನ ಬೆಳವಣಿಗೆ 20 ವರ್ಷಗಳವರೆಗೆ ಆಗುತ್ತಿರುತ್ತದೆ ಎಂಬುದಕ್ಕೆ ಆಧಾರಗಳಿವೆ ಎಂದಿರುವ ವರದಿ, ಒಂದು ನಿರ್ದಿಷ್ಟ ವಯಸ್ಸನ್ನು ಪಕ್ವತೆಗೆ ಮಾನದಂಡ ಮಾಡುವುದು ಸಮತೆಯನ್ನು ತರುತ್ತದೆ ಎಂಬ ಅಂಶವನ್ನು ತೋರಿಸುತ್ತದೆ. ಒಂದೊಂದು ದೇಶ ಒಂದೊಂದು ಮಾನದಂಡ ಇಟ್ಟುಕೊಳ್ಳುವುದರಿಂದ ಈ ಸಮತೆಯ ನ್ಯಾಯಕ್ಕೆ ಹಿನ್ನಡೆಯಾಗುತ್ತದೆ.

ಮಕ್ಕಳು ತಮ್ಮ ವ್ಯಕ್ತಿತ್ವ, ನಂಬಿಕೆ, ಅಭಿಪ್ರಾಯಗಳನ್ನು ವೃದ್ಧಿಸಿಕೊಳ್ಳುತ್ತಿರುತ್ತಾರೆ, ಬದಲಾಯಿಸುತ್ತಿರುತ್ತಾರೆ. ಹಾಗಾಗಿ ಅವರನ್ನು ತಿದ್ದಬಹುದು. ಅದರ ಬದಲಾಗಿ ಶಿಕ್ಷಿಸುವುದು, ಅವರು ಏಕೆ ಅಪರಾಧಿಗಳಾದರು ಎಂಬ ಮೂಲ ಕಾರಣವನ್ನು ಹುಡುಕಿ ಪರಿಹರಿಸುವುದಿಲ್ಲ.

ನ್ಯೂಯಾರ್ಕ್‌ನಲ್ಲಿ ಮಕ್ಕಳನ್ನು 30 ಗಂಟೆಗಳ ಚಿಕಿತ್ಸಕ ಅವಧಿಗೆ ಒಳಪಡಿಸುವುದು, ಪರಿಣತ ಪೋಷಕರ ಮನೆಗಳಲ್ಲಿ ಕೆಲವು ನಿಯಂತ್ರಣಗಳಿಗೊಳಪಡಿಸಿ ಇರಿಸುವುದು, ಶಾಲೆಗಳಿಗೆ ಸೇರಿಸಿ ಶಾಲೆಗಳೊಡನೆ ಕೆಲಸ ಮಾಡಿ ಅವರನ್ನು ಸರಿಹಾದಿಗೆ ತರುವ ಯತ್ನಗಳು ನಡೆಯುತ್ತಿವೆ. ಇಂತಹ ಅನೇಕ ಪ್ರಯತ್ನಗಳು, ಫಿನ್ಲೆಂಡ್‌, ದಕ್ಷಿಣ ಆಫ್ರಿಕಾ ಇತರೆಡೆ ನಡೆಯುತ್ತಿರುವುದನ್ನು ಗಮನಿಸಿರುವ ವರದಿ, ಮಕ್ಕಳ ಖಾಸಗಿತನದ ಹಕ್ಕು, ಅವರ ಗುರುತು ರಹಸ್ಯವಾಗಿಡುವುದರ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ.

ನನ್ನ ಮನೆಯ ಕೆಲವರೂ ಸೇರಿದಂತೆ ಅನೇಕರು ನಿರ್ಭಯಾ ಪ್ರಕರಣವೊಂದನ್ನು ಆಧಾರವಾಗಿಟ್ಟುಕೊಂಡು, ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳ ತೀವ್ರ ಶಿಕ್ಷೆಗೆ ಹಾತೊರೆಯುತ್ತಿದ್ದಾರೆ. ನಮ್ಮ ಮಕ್ಕಳೂ ಗಂಭೀರ ಪ್ರಕರಣಗಳಲ್ಲಿ ಸಿಲುಕಿದರೆ, ನಾವು ಹೀಗೆಯೇ ಶಿಕ್ಷೆಗೆ ಹಾತೊರೆಯುತ್ತೇವೆಯೇ ಅಥವಾ ಮನಃಪರಿವರ್ತನೆಯ ಹಾದಿ ಬೇಕೆನ್ನುತ್ತೇವೆಯೇ ಎಂದು ಯೋಚಿಸಬೇಕು. ಏಕೆಂದರೆ ನಮ್ಮ ಮಕ್ಕಳು ಅಥವಾ ಮೊಮ್ಮಕ್ಕಳು ಯಾವುದೋ ಪ್ರಭಾವಕ್ಕೆ ಒಳಗಾಗಿ ಎಂದೂ ಅಪರಾಧಿಗಳಾಗುವುದೇ ಇಲ್ಲವೆಂಬ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ತಾನೆ? ಒಂದೇ ಸಮಾಧಾನದ ವಿಷಯವೆಂದರೆ, ಗಂಭೀರ ಪ್ರಕರಣಗಳಲ್ಲಿ ಸಿಲುಕಿರುವ ಮಕ್ಕಳ ಸಂಖ್ಯೆ ವಿಶ್ವದಲ್ಲಿ ಅತಿ ಕಡಿಮೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT