ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಸುಮತಿ ಅಕ್ಕಿ ಖರೀದಿಗೆ ಮುಗಿಬಿದ್ದ ಗ್ರಾಹಕರು

ರಸ್ತೆಬದಿಯಲ್ಲಿ ಕಡಿಮೆ ದರಕ್ಕೆ ಮಾರಾಟ
Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕಾರವಾರ: ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟಕ್ಕಿಟ್ಟಿದ್ದ ಬಾಸುಮತಿ ಅಕ್ಕಿಯು ಶನಿವಾರ ಬೆಳಿಗ್ಗೆ ಇಲ್ಲಿ ಬಿಸಿದೋಸೆಯಂತೆ ಖರ್ಚಾಯಿತು. ಈ ನಡುವೆ ಅಕ್ಕಿಯ ಗುಣಮಟ್ಟದ ಬಗ್ಗೆ ವದಂತಿ ಹರಡಿದ್ದರಿಂದ ಗ್ರಾಹಕರು ಗೊಂದಲಕ್ಕೆ ಸಿಲುಕಿದರು.

ಬೆಳಗಾವಿ ಜಿಲ್ಲೆಯಿಂದ ಬಂದಿದ್ದ ನಾಲ್ಕೈದು ವ್ಯಾಪಾರಸ್ಥರ ತಂಡ ಕೆ.ಜಿ.ಗೆ ₹ 55– 60ರಂತೆ ಅಕ್ಕಿ ಮಾರಾಟ ಆರಂಭಿಸಿತು. ವಿಷಯ ತಿಳಿದ ನೂರಾರು ಮಂದಿ ಅಕ್ಕಿ ಕೊಳ್ಳಲು ಮುಗಿಬಿದ್ದರು. ಗುಣಮಟ್ಟದ ಬಗ್ಗೆ ಸಂಶಯಪಟ್ಟ ಕೆಲವರು ಮೊದಲಿಗೆ ಒಂದೆರಡು ಕೆ.ಜಿ. ಯಷ್ಟೇ ಕೊಂಡು ಮನೆಯಲ್ಲಿ ಬೇಯಿಸಿ, ಪರೀಕ್ಷಿಸಿದರು. ಅದರ ಪರಿಮಳ ಬಾಸುಮತಿ ಅಕ್ಕಿಯದ್ದೇ ಎಂದು ಖಾತ್ರಿ ಪಡಿಸಿಕೊಂಡ ಮೇಲೆ ಚೀಲಗಟ್ಟಲೇ ಖರೀದಿಸಲು ಮುಂದಾದರು.

ಅಧಿಕಾರಿಗಳ ಭೇಟಿ: ರಸ್ತೆ ಬದಿಯಲ್ಲಿ ಕಡಿಮೆ ದರದಲ್ಲಿ ಮಾರಾಟವಾಗುತ್ತಿರು ವುದು ಪ್ಲಾಸ್ಟಿಕ್‌  ಅಥವಾ ಕಲಬೆರಕೆ ಅಕ್ಕಿ ಆಗಿರಬಹುದು ಎಂಬ ವದಂತಿ ಹಬ್ಬಿದ್ದರಿಂದ ಉಪವಿಭಾಗಾಧಿಕಾರಿ ಎಸ್‌.ಬಿ.ಪ್ರಶಾಂತಕುಮಾರ್‌ ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಅರುಣ್‌ ವಿ.ಕಾಶೀಭಟ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವ್ಯಾಪಾರಿಗಳಿಂದ ಮಾಹಿತಿ ಪಡೆದ ಅಧಿಕಾರಿಗಳು ಅಕ್ಕಿಯ ಗುಣಮಟ್ಟದ ಬಗ್ಗೆ ಖಾತ್ರಿ ಆಗುವವರೆಗೆ ಮಾರಾಟ ಮಾಡದಂತೆ ಸೂಚಿಸಿದರು.

‘ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಿಗಳಿಂದ ಒಂದು ಕೆ.ಜಿ.ಗೆ ₹ 35 ದರದಲ್ಲಿ ಅಕ್ಕಿ ಖರೀದಿಸಿ ಇಲ್ಲಿಗೆ ತಂದಿದ್ದೇವೆ.

ಬೆಳಿಗ್ಗೆಯಿಂದ ಸುಮಾರು 60 (20 ಕೆ.ಜಿಯ) ಚೀಲಗಳನ್ನು ಮಾರಾಟ ಮಾಡಿದ್ದೇವೆ. ಅಧಿಕಾರಿಗಳು ಸದ್ಯ ಅಕ್ಕಿ ಮಾರಾಟ ಮಾಡದಂತೆ ಸೂಚಿಸಿದ್ದಾರೆ’ ಎಂದು ವ್ಯಾಪಾರಿ ಯಲ್ಲಪ್ಪ ಭಜಂತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜನರ ಅಸಮಾಧಾನ: ಬೆಳಗಾವಿ ಎಪಿಎಂ ಸಿಯಲ್ಲಿ ಅಕ್ಕಿ ಖರೀದಿಸಿರುವುದಕ್ಕೆ ಈ ವ್ಯಾಪಾರಿಗಳ ಬಳಿ ರಸೀದಿ  ಇದೆ. ಅಕ್ಕಿಯ ಗುಣಮಟ್ಟವೂ ಚೆನ್ನಾಗಿದೆ. ಹೀಗಿರು ವಾಗ ಸುಳ್ಳು ವದಂತಿಯಿಂದ ಅವರ ವ್ಯಾಪಾರಕ್ಕೆ ನಿರ್ಬಂಧ ಹೇರುವುದು ಸರಿ ಯಾದ ಕ್ರಮ ಅಲ್ಲ ಎಂದು ಸಾರ್ವ ಜನಿ ಕರು ಅಸಮಾಧಾನ ವ್ಯಕ್ತಪಡಿಸಿದರು. ಮಾರಾಟ ಸ್ಥಗಿತಗೊಂಡ  ತುಸು ಹೊತ್ತಿನ ನಂತರ ಹತ್ತಾರು ಚೀಲಗಳು ಮತ್ತೆ ಬಿಕರಿಯಾದವು.

28 ಚೀಲ ಅಕ್ಕಿ ವಶ: ವ್ಯಾಪಾರಿಗಳಿಂದ 28 ಚೀಲ ಅಕ್ಕಿ ವಶಪಡಿಸಿಕೊಂಡಿದ್ದೇವೆ. ಯಾವ ಚೀಲದಲ್ಲೂ ಬ್ಯಾಚ್‌ ನಂಬರ್‌ ಹಾಗೂ ಗುಣಮಟ್ಟದ ಬಗ್ಗೆ ತಿಳಿಸುವ ಎಫ್‌ಎಸ್‌ಎಸ್‌ಎಐ ಲೈಸೆನ್ಸ್‌ ಸಂಖ್ಯೆ ಮುದ್ರಣವಾಗಿಲ್ಲ. ಹಾಗಾಗಿ ಈ ಅಕ್ಕಿಯನ್ನು ಎಲ್ಲಿ ಖರೀದಿಸಲಾಗಿದೆ ಎನ್ನುವುದನ್ನು ದಾಖಲೆ ಸಮೇತ ತಿಳಿಸುವಂತೆ ವ್ಯಾಪಾರಿ ಯಲ್ಲಪ್ಪ ಹಾಗೂ ಬೆಳಗಾವಿಯ ಸಗಟು ವ್ಯಾಪಾರಿ ಚಂದ್ರಕಾಂತ ಭಾವಿ ಅವರಿಗೆ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಆಹಾರ ಸುರಕ್ಷತಾ ಅಧಿಕಾರಿ ಅರುಣ್‌ ವಿ.ಕಾಶೀಭಟ್‌ ಹೇಳಿದರು.

ಅಕ್ಕಿ ಮಾದರಿಯನ್ನು ಬೆಳಗಾವಿಯ ವಿಭಾಗೀಯ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಸಿಕ್ಕ ನಂತರ ಗುಣಮಟ್ಟದ ಬಗ್ಗೆ ತಿಳಿಯಲಿದೆ.- ಅರುಣ್‌ ವಿ.ಕಾಶೀಭಟ್‌, ಆಹಾರ ಸುರಕ್ಷತಾ ಅಧಿಕಾರಿ, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT