ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ಪ್ರವಾಸ: ಆರಂಭಿಕ ವಿಘ್ನ...

ಸುದ್ದಿ ಹಿನ್ನೆಲೆ
Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪ್ರವಾಸಿಗರನ್ನು ಬಾಹ್ಯಾಕಾಶಕ್ಕೆ ದುಬಾರಿ ವೆಚ್ಚದ ವಿಹಾರಕ್ಕೆ (ಹಾರಾಟಕ್ಕೆ) ಕರೆದೊಯ್ಯಲು ರೂಪಿಸಿದ್ದ ವಿಶೇಷ ಬಾಹ್ಯಾಕಾಶ ನೌಕೆ  ‘ಸ್ಪೇಸ್‌ಶಿಪ್ ಟು’, ಪರೀಕ್ಷಾರ್ಥ ಹಾರಾಟದ ಸಂದರ್ಭದಲ್ಲಿ ಶುಕ್ರವಾರ ಕ್ಯಾಲಿಫೋರ್ನಿಯಾದ ಮೊಜಾವೆ ಮರು­ಭೂಮಿಯಲ್ಲಿ ಅಪಘಾ­ತ­ಕ್ಕೀಡಾಗಿದೆ.

ಈ ದುರಂತದಿಂದಾಗಿ ಬಾಹ್ಯಾಕಾಶ ಪ್ರವಾ­­ಸೋದ್ಯಮಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ. ಬ್ರಿಟನ್ನಿನ ಉದ್ಯಮಿ ರಿಚರ್ಡ್  ಬ್ರಾನ್ಸನ್ ಅವರಿಂದ ಸ್ಥಾಪನೆ­ಗೊಂಡಿರುವ ವಾಣಿಜ್ಯ ಉದ್ದೇಶದ ಬಾಹ್ಯಾಕಾಶ ಪ್ರವಾಸಿ ಸಂಸ್ಥೆ ವರ್ಜಿನ್ ಗಲಾಕ್ಟಿಕ್  ಸಿದ್ಧಪಡಿಸಿದ್ದ ‘ಸ್ಪೇಸ್‌ಶಿಪ್ ಟು’ ದುರಂತದಲ್ಲಿ ಒಬ್ಬ ಪೈಲಟ್ ಮೃತಪಟ್ಟಿದ್ದರೆ, ಇನ್ನೊಬ್ಬ ಪೈಲಟ್ ಪ್ಯಾರಾಷೂಟ್ ನೆರವಿನಿಂದ ನೌಕೆ­ಯಿಂದ ಹೊರಗೆ ಜಿಗಿದು ಪಾರಾ­ಗಿದ್ದರೂ ಗಂಭೀರವಾಗಿ ಗಾಯ­ಗೊಂಡಿದ್ದಾನೆ.

‘ಸ್ಪೇಸ್‌ಶಿಪ್ ಟು’ ಹೆಸರಿನ  ರಾಕೆಟ್  ವಿನ್ಯಾಸ ಮಾಡಿ ನಿರ್ಮಿಸಿದ್ದ ಸ್ಕೇಲ್ಡ್ ಕಂಪೋಸಿಟಿಸ್ ಈ  ಪರೀಕ್ಷಾರ್ಥ ಹಾರಾಟ ಕೈಗೊಂಡಿತ್ತು.

ವಾರದಲ್ಲಿ 2ನೇ ದುರಂತ
ವಾಣಿಜ್ಯ ಬಾಹ್ಯಾಕಾಶ ಉದ್ದಿ­ಮೆ­ ಒಂದು ವಾರದ ಅವಧಿಯಲ್ಲಿ ಕಂಡ ಎರಡನೆ ದುರಂತ ಇದಾಗಿದೆ. ಅಂತರ­ರಾಷ್ಟ್ರೀಯ ಬಾಹ್ಯಾ­ಕಾಶ ನಿಲ್ದಾ­ಣಕ್ಕೆ ಸರಕು ಸಾಗಿಸುತ್ತಿದ್ದ ಮಾನವರಹಿತ ರಾಕೆಟ್‌ ಉಡಾವಣೆ­ಗೊಂಡ ಕೆಲವೇ ಕ್ಷಣಗಳಲ್ಲಿ ಸ್ಫೋಟ­ಗೊಂಡಿತ್ತು.

ಮಾರ್ಗ ಮಧ್ಯೆ ಸ್ಫೋಟ
‘ವ್ಹೈಟ್‌ನೈಟ್‌ಟು’ ಹೆಸರಿನ ಬೃಹತ್‌ ವಿಮಾನದ ಬೆನ್ನೇರಿ ಈ ‘ಸ್ಪೇಸ್‌ಶಿಪ್‌ ಟು’ ರಾಕೆಟ್‌ ಅಂತರಿಕ್ಷಕ್ಕೆ ಪರೀಕ್ಷಾರ್ಥ ಪ್ರಯಾಣ ಕೈಗೊಂಡಿತ್ತು. 50 ಸಾವಿರ ಅಡಿಗಳಷ್ಟು ಎತ್ತರಕ್ಕೆ ಪ್ರಯಾಣಿಸಿದ  ವಿಮಾನದಿಂದ ಈ ಬಾಹ್ಯಾಕಾಶ ನೌಕೆಯು ಕಳಚಿಕೊಂಡು ಅಲ್ಲಿಂದ ಬಾಹ್ಯಾ­ಕಾಶದ ತುದಿ ಎಂದು ಗುರುತಿ­ಸಿರುವ 62 ಮೈಲಿಗಳ ಎತ್ತರಕ್ಕೆ ಪ್ರಯಾಣಿಸಬೇಕಿತ್ತು. ಈ ಸಂದರ್ಭದಲ್ಲಿ ಎರಡು ಸಣ್ಣ ವಿಮಾನಗಳನ್ನು ಬಿಡುಗಡೆ  ಮಾಡಿದ ನಂತರ ಈ ನೌಕೆಯ ಎಂಜಿನ್‌ ಚಾಲನೆಗೊಳ್ಳಬೇಕಾಗಿತ್ತು. ವಿಮಾನ­ದಿಂದ ಬೇರ್ಪಟ್ಟು ಎಂಜಿನ್‌ ಚಾಲನೆ­ಗೊಂಡು ಬಾಹ್ಯಾಕಾಶದ ಅಂಚಿನತ್ತ ಸಾಗುವ ಮಾರ್ಗಮಧ್ಯೆ 60ರಿಂದ 90 ಸೆಕೆಂಡುಗಳ ಅವಧಿಯಲ್ಲಿ  ರಾಕೆಟ್‌ ಇಬ್ಭಾಗವಾಗಿ ಸ್ಫೋಟಗೊಂಡಿದೆ. ಉಡಾ­ವಣೆಗೊಂಡ ಎರಡು ನಿಮಿಷ­ಗಳಲ್ಲಿ ರಾಕೆಟ್‌ನ ಭಗ್ನಾವಶೇಷಗಳು ಭೂಮಿಗೆ ಬಂದು ಬಿದ್ದಿದ್ದವು.

ಸ್ಫೋಟಕ್ಕೆ ಕಾರಣ
ಸ್ಫೋಟಕ್ಕೆ ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಈ ಬಾಹ್ಯಾಕಾಶ ನೌಕೆಯು ಪ್ಲಾಸ್ಟಿಕ್‌ ಆಧಾರಿತ ರಾಕೆಟ್‌ ಇಂಧನ ಬಳಸಿದ್ದೇ ಕಾರಣವಾಗಿರಬಹುದು ಎಂದು ಶಂಕಿಸ­ಲಾಗಿದೆ. ಇಂತಹ ಇಂಧನವನ್ನು ಈ ಮೊದಲು ಬಳಸಿರಲಿಲ್ಲ.

ಯೋಜನೆ ಕೈಬಿಡಲಾರೆ

‘ವರ್ಜಿನ್ ಗಲಾಕ್ಟಿಕ್ ಪ್ರವಾಸಿ ಬಾಹ್ಯಾಕಾಶ ನೌಕೆ ದುರಂತ­ಕ್ಕೀಡಾ­ಗಿ­ದ್ದರೂ, ನನ್ನ ಕನಸಿನ ವಾಣಿಜ್ಯ ಉದ್ದೇಶದ ಬಾಹ್ಯಾಕಾಶ ಪ್ರವಾಸ ಯೋಜನೆ ಕೈಬಿಡುವುದಿಲ್ಲ’ ಎಂದು ಬ್ರಾನ್ಸನ್ ಹೇಳಿದ್ದಾರೆ.
‘ಬಾಹ್ಯಾಕಾಶಕ್ಕೆ ತೆರಳುವ ಮಾರ್ಗವು ತುಂಬ ಕಠಿಣವಾದದ್ದು ಎಂಬುದು ನಮ­ಗೆಲ್ಲ ಈಗಾಗಲೇ ಗೊತ್ತಿರುವ ಸಂಗತಿ. ಬಾಹ್ಯಾಕಾಶಕ್ಕೆ ತೆರಳುವ ಪ್ರತಿಯೊಂದು ಸಾರಿಗೆ ವ್ಯವಸ್ಥೆಯು ಆರಂಭದಲ್ಲಿ ಕೆಟ್ಟ ದಿನಗಳನ್ನು ಕಂಡಿ­ರುತ್ತದೆ. ಬಾಹ್ಯಾ­ಕಾಶವು ಕಠಿಣ­ವಾದದ್ದು, ಆದರೆ ಮೌಲ್ಯಯುತ­ವಾದದ್ದೂ ಹೌದು’ ಎನ್ನುತ್ತಾರೆ  ರಿಚರ್ಡ್‌ ಬ್ರಾನ್ಸನ್.

ಅನಿರೀಕ್ಷಿತ?
ಸ್ಫೋಟವು ಅನಿರೀಕ್ಷಿತವೇನಲ್ಲ ಎಂದು ವಿಜ್ಞಾನಿಗಳು ಪ್ರತಿಕ್ರಿಯಿಸಿದ್ದಾರೆ. ರಾಕೆಟ್‌ನಲ್ಲಿ ಅಳವಡಿಸಿರುವ ಸುರಕ್ಷತಾ ಕ್ರಮಗಳು ಸಮರ್ಪಕವಾಗಿಲ್ಲ ಎನ್ನುವ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದೇ ಈ ದುರಂತಕ್ಕೆ ಕಾರಣ. ಮಾರ್ಗ  ಮಧ್ಯೆ ಇಂತಹ ಸ್ಫೋಟ ಸಂಭವಿಸುವುದು ನಿರೀಕ್ಷಿತವಾಗಿತ್ತು ಎಂದು ರಾಕೆಟ್‌ ತಂತ್ರಜ್ಞರು  ಮತ್ತು ಬಾಹ್ಯಾಕಾಶ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ದುಬಾರಿ ಯಾನ
ಬಾಹ್ಯಾಕಾಶಕ್ಕೆ ಖಾಸಗಿಯಾಗಿ ಪ್ರವಾ­ಸಿ­ಗರನ್ನು ಕರೆದೊಯ್ಯುವ ಈ ಕನಸಿನ ಯೋಜನೆಗೆ ಈಗಾಗಲೇ 700 ಜನರು ಮುಂಗಡ ಟಿಕೆಟ್‌ ಕಾದಿರಿಸಿದ್ದಾರೆ. ಆರಂಭದಲ್ಲಿ 2 ಲಕ್ಷ ಡಾಲರ್‌ರಷ್ಟಿದ್ದ (₨ 1.20 ಕೋಟಿ) ಟಿಕೆಟ್‌ ಬೆಲೆ ಇತ್ತೀಚೆಗೆ  2.50 ಲಕ್ಷ ಡಾಲರ್‌ಗೆ (₨ 1.50 ಕೋಟಿ) ಏರಿಕೆಯಾಗಿತ್ತು. ದುಬಾರಿ ಬೆಲೆ ತೆತ್ತು ಬಾಹ್ಯಾಕಾಶ ಪ್ರಯಾಣ ಕೈಗೊಳ್ಳಲು ಇಚ್ಛೆಪಟ್ಟವರಲ್ಲಿ ಹಾಲಿ­ವುಡ್‌ ನಟ ಲಿಯೊನಾರ್ಡೊ ಡಿಕ್ಯಾರ್ಪಿಯೊ, ಏಂಜಲೀನಾ ಜೂಲಿ ಮತ್ತಿತರ ಗಣ್ಯರೂ ಇದ್ದಾರೆ. ಕೇವಲ ಎರಡು ಗಂಟೆಗಳ ಈ ವಿಶಿಷ್ಟ ಪ್ರಯಾ­ಣ­ದಲ್ಲಿ ಐದು ನಿಮಿಷಗಳ ತೂಕರಹಿತ ಅನುಭವವೂ ಸೇರಿರುತ್ತದೆ.

ಇಬ್ಬರು ಪೈಲಟ್‌ಗಳು ಮತ್ತು ಆರು ಜನ ಪ್ರಯಾಣಿಕರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲು ಈ ರಾಕೆಟ್‌ ಸಜ್ಜು­ಗೊಳಿಸಲಾಗಿತ್ತು. ಗಗನಯಾನಿಗಳಿಗೆ ಮಾತ್ರ ಸಿಗುವ ಬಾಹ್ಯಾಕಾಶದ ರೋಮಾಂಚಕಾರಿ ಅನುಭವವನ್ನು ಇತರರಿಗೂ  ನೀಡುವುದೇ ಈ ಬಾಹ್ಯಾ­ಕಾಶ ಪ್ರವಾಸದ ಮುಖ್ಯ ಉದ್ದೇಶ­ವಾಗಿದೆ. 60 ಅಡಿ ಉದ್ದದ ಬಾಹ್ಯಾಕಾಶ ನೌಕೆಯಲ್ಲಿ ಪ್ರತಿಯೊಬ್ಬ ಪ್ರಯಾಣಿ­ನಿಗಾಗಿ  ಎರಡು ದೊಡ್ಡ ಕಿಟಕಿಗಳನ್ನು (ಒಂದು ಬದಿಯಲ್ಲಿ, ಇನ್ನೊಂದು ಮೇಲ್ಭಾಗದಲ್ಲಿ) ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT