ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಂದುಸಾರನ ಭಿನ್ನ ನಿರ್ವಹಣೆ

ರಂಗಭೂಮಿ
Last Updated 29 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಅಬ್ಬರದ ದೃಶ್ಯಮಾಧ್ಯಮಗಳ ಭರಾಟೆಯಲ್ಲಿಯೂ ನಾಟಕಗಳು ತಮ್ಮ ಅಂತಃಸತ್ವವನ್ನು ಉಳಿಸಿಕೊಂಡಿವೆ ಎಂಬುದಕ್ಕೆ ಇತ್ತಿೀಚೆಗೆ ಸ್ವತಂತ್ರ ಉದ್ಯಾನವನದಲ್ಲಿ ಪ್ರದರ್ಶನ ಗೊಂಡ ಎನ್. ಶಿವಲಿಂಗಯ್ಯ ಅವರ ನಿರ್ದೇಶನ ಮತ್ತು ಪರಿಕಲ್ಪನೆಯ  ಡಾ. ಎಂ. ಭೈರೇಗೌಡ ರಚನೆಯ ‘ದೇವನಾಂಪ್ರಿಯ ಅಶೋಕ’ ಸಾಕ್ಷಿಯಾಗಿತ್ತು.

ಮೊದಲಿಗೆ ನಿರೂಪಕರ ತಂಡ ಮೌರ್ಯ ಸಾಮ್ರಾಜ್ಯದ ಹಿನ್ನೆಲೆಯನ್ನು ಸಂಭಾಷಣೆ ಮೂಲಕವೇ ಹೇಳಿದ ನಂತರ ನಾಟಕದ ಮುಖ್ಯ ಸನ್ನಿವೇಶಗಳನ್ನು ಪ್ರದರ್ಶಿಸಲಾಯಿತು. ಮಧ್ಯೆ ನಿರೂಪಕರು ನಡೆಸಿಕೊಟ್ಟ ನಾಟಕದ ಸಾಂದರ್ಭಿಕ ಜೋಡಣೆಗಳು ನಿರ್ದೇಶಕರ ನಾಟಕದ ಯೋಜಿತ ಮಾದರಿಯನ್ನು ಬಿಂಬಿಸುತ್ತಿದ್ದವು. ಎಲ್ಲರಿಗೂ ತಿಳಿದೇ ಇರುವ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಬಿಂದುಸಾರ ತನ್ನ ಮೊದಲ ಮಗನಿಗೇ ರಾಜ್ಯಾಧಿಕಾರ ನೀಡಬೇಕೆನ್ನುವ ಪುತ್ರ ವ್ಯಾಮೋಹ, ದಾಸೀಪುತ್ರ ಅಶೋಕನ ಮೇಲಿದ್ದ ತಾತ್ಸಾರ ಎಲ್ಲವೂ ಕಾರಣವಾಗಿ ಕೊನೆಗೆ ತನ್ನ ಅಣ್ಣತಮ್ಮಂದಿರನೆಲ್ಲಾ ವಧೆ ಮಾಡಿ, ರಾಜ್ಯಾಧಿಕಾರ ಹೊಂದುವ ಕಥೆ ನಾಟಕದ ವಸ್ತುವಾಗಿದೆ.

ಇಲ್ಲಿ ಕಥೆಯನ್ನು ನಾಟಕಕ್ಕೆ ಅಳವಡಿಸಿರುವ ಪ್ರಯೋಗವೇ ವಿಭಿನ್ನವಾಗಿದೆ. ಬಿಂದುಸಾರನು ಮರಣ ಶಯ್ಯೆಯಲ್ಲಿ ಇರುವಾಗ ಸುಶೀಮನೆಂದೇ ಭಾವಿಸಿ ಅಶೋಕನಿಗೆ ರಾಜ್ಯಾಧಿಕಾರವನ್ನು ನೀಡು ತ್ತಾನೆ. ನಂತರ ರಾಜ್ಯದ ಉತ್ತರಾಧಿಕತ್ವದ ಯುದ್ಧ ದಲ್ಲಿ ಸುಸೀಮನು ಅಶೋಕನಿಂದ ಹತನಾಗುತ್ತಾನೆ. ಇಲ್ಲಿ ಸಕಾರಣವಾಗಿ ನಿರ್ದೇಶಕರು ಬಿಂದುಸಾರನ ಪಾತ್ರವನ್ನು ಇಟ್ಟುಕೊಂಡೇ ಅಶೋಕನ ಮೌಲ್ಯ ಗಳನ್ನು ಹೇಳುತ್ತಾರೆ. ಹಾಗಾಗಿ ನಿರ್ದೇಶಕರ ನಾಟಕದ ಕಥಾ ನಿರ್ವಹಣೆ ಭಿನ್ನವಾಗಿದೆ.

ಬಿಂದುಸಾರ ತನ್ನ ನಂತರ ರಾಜ್ಯ ನಿರ್ವಹಣೆಗೆ ತನ್ನ ಮಕ್ಕಳೆಲ್ಲರ ಪರೀಕ್ಷೆ ಮತ್ತು ಕ್ಷಮತೆಯ ನಿರೂಪಣೆಗೆ ಸಭೆಗೆ ಆಹ್ವಾನಿಸಿದ್ದರೂ ಅಶೋಕನನ್ನು ಆಹ್ವಾನಿಸಿರುವುದಿಲ್ಲ. ತಾಯಿಯ ಮಾತನ್ನು ಗೌರವಿಸಿದ ಅಶೋಕ ಸಭೆಗೆ ಬರುತ್ತಾನೆ. ಅಲ್ಲಿಯೂ ಅವನಿಗೆ ಗೌರವವಾಗಲೀ ಮರ್ಯಾದೆಯಾಗಲೀ ಸಿಗುವುದಿಲ್ಲ. ಅಶೋಕ ಆಸನವಿಲ್ಲದ ಕಾರಣ ನೆಲದಲ್ಲಿಯೇ ಕುಳಿತು ಸಭೆಯಲ್ಲಿ ಪಾಲ್ಗೊಳ್ಳುತ್ತಾನೆ.

ಈ ಘಟನೆಗಳು ಅಶೋಕನ ಅಹಂ ಅನ್ನು ಕೆರಳಿಸುತ್ತದೆ. ಮನೋವಿಜ್ಞಾನವು ಹೇಳುವಂತೆ ಅಹಂ ಕೆಲಸ ಮಾಡುವ ಮನಸ್ಸಿನಲ್ಲಿ ಆಲೋಚನೆಗಳೆಲ್ಲವೂ ಗೆಲುವಿನ ಕಡೆ ನೆಡುತ್ತವೆ. ಹೀಗಾದಾಗ ವಿವೇಚನೆ ಮತ್ತು ಪರಿಣಾಮಗಳ ಕಡೆ ಗಮನ ಹರಿಸಲು ಸಾಧ್ಯವಾಗುವುದೇ ಇಲ್ಲ. ಅದರಂತೆ ಅಶೋಕನ ಅದುಮಿಟ್ಟ ಭಾವನೆಗಳು ಮತ್ತು ಆಕಾಂಕ್ಷೆಗಳು ತನ್ನ ಸೋದರ ವಧೆಗೂ ಕಾರಣವಾಗುತ್ತವೆ. ಇಲ್ಲಿ ಅವನನ್ನು ಎಲ್ಲರೂ ನಡೆಸಿಕೊಂಡ ರೀತಿ ಮತ್ತು ಅವನು ಬೆಳೆದ ಪರಿಸರವೂ ಕಾರಣವಾಗಿರುವುದನ್ನು ಮನಗಂಡ ನಿರ್ದೇಶಕರ ಮನೋಜ್ಞ ರೂಪಕಗಳು ಸಶಕ್ತವಾಗಿವೆ.

ಅಶೋಕ ಕಳಿಂಗವನದ ಮೇಲೆ ಯುದ್ಧ ಮಾಡಿ ಗೆದ್ದ ನಂತರ ರಣರಂಗದಲ್ಲಿ ತನ್ನ ಆಪ್ತ ಮಂತ್ರಿ ಮತ್ತು ಸ್ನೇಹಿತ ವಜ್ರನನ್ನು

ಹುಡುಕುತ್ತಿರುವಾಗ ಬೌದ್ಧಬಿಕ್ಕು ನಿಗ್ರೋಧ (ಅಶೋಕನ ಅಣ್ಣ ಸುಶೀಮನ ಮಗ) ಅಲ್ಲಿ ಬಂದು ವಜ್ರನ ಕೊಳಲನ್ನು ತಂದು ಅಶೋಕನಿಗೆ ನೀಡಿ ಅಶೋಕನಲ್ಲಿ ಪರಿವರ್ತನೆಗೆ ಕಾರಣನಾಗುತ್ತಾನೆ.

ಯುದ್ಧ ಮತ್ತು ಹಿಂಸೆಗೆ ಬದಲಾಗಿ ಪ್ರೀತಿ ಮತ್ತು ಮೈತ್ರಿಗಳ ಸಂಕೇತವಾದ ಕೊಳಲನ್ನು ಹಿಡಿದ ಅಶೋಕ ತನ್ನ ಬದಲಾವಣೆಯನ್ನು ಬಯಸುತ್ತಾನೆ. ಈ ಸಂದರ್ಭದಲ್ಲಿ ಕೇಳಿಬಂದ ಕೊಳಲಿನ ಸಂಗೀತಕ್ಕೆ ಪ್ರೇಕ್ಷಕರ ಹರ್ಷೋದ್ಗಾರ ಮತ್ತು ಚಪ್ಪಾಳೆ ಸದ್ದು ಸಂದವು. ಅಂಗುಲಿಮಾಲ ಮತ್ತು ಘಟಿಕಾಸ್ತ್ರೀ ಆಮ್ರಪಾಲಿ ಇವರ ಕಥೆಯಲ್ಲಿ ಬರುವ ಸನ್ನಿವೇಶಗಳು ಪ್ರೇಕ್ಷಕರಲ್ಲಿ ಪರಿವರ್ತನಾ ಆಲೋಚನೆಗಳನ್ನು ಬಿತ್ತುವಂತೆ ಮಾಡಿದ್ದು, ಬುದ್ಧ ಮತ್ತು ಅಂಗೂಲಿಮಾಲನ ಪಾತ್ರಗಳ ನಿರ್ವಹಣೆ ಮತ್ತು ನಾಟಕ ನಡೆದ ಸ್ಥಳ ಅರಳೀಮರದ ಹಿನ್ನೆಲೆಯ ಪರಿಸರ ಎಲ್ಲವೂ ಪ್ರೇಕ್ಷಕರು ಚಳಿಯಲ್ಲೂ ಎದ್ದು ಎಲ್ಲೂ ಹೋಗದ ಹಾಗೆ ಹಿಡಿದಿಟ್ಟಿತ್ತು
ಇಸ್ಮಾಯಿಲ್ ಗೋನಾಳ್ ಅವರ ಸಂಗೀತವು ಪ್ರೇಕ್ಷಕರಿಗೂ ನಟರ ಹಾವ ಭಾವಗಳಿಗೂ ಹೊಂದಾಣಿಕೆಯಾಗುವಂತಿರಲಿಲ್ಲ. ಆದರೂ ಆಯೋಜಕರು ಮತ್ತು ನಿರ್ದೇಶಕರ ಪರಿಶ್ರಮ ನಾಟಕ ಯಶಸ್ವಿಯಾಗಲು ಸಾಧ್ಯವಾಯಿತು. ಬೆಳಕಿನ ವ್ಯವಸ್ಥೆ ಸಮರ್ಪಕವಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT