ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಇನ್ನು ಮುಂದೆ ‘ಚತುರ’ ಸಾರಿಗೆ

ಬಸ್‌ಗಳ ಸಂಚಾರದ ಸಮಗ್ರ ಮಾಹಿತಿ ಪ್ರಯಾಣಿಕರಿಗೆ ಕ್ಷಣಕ್ಷಣಕ್ಕೂ ಲಭ್ಯ
Last Updated 24 ಮೇ 2016, 19:47 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ಬಸ್‌ ಎಲ್ಲಿದೆ, ಎಷ್ಟು ಹೊತ್ತಿಗೆ ನಿಲ್ದಾಣಕ್ಕೆ ಬರಲಿದೆ, ಸಂಚಾರ ದಟ್ಟಣೆಯಲ್ಲಿ ಸಿಲುಕಿದೆಯಾ, ಬಸ್‌ಗಾಗಿ  ಎಷ್ಟು ಹೊತ್ತು ಕಾಯಬೇಕು ಎಂಬ ಮಾಹಿತಿಗಳು ಬುಧವಾರದಿಂದ ಪ್ರಯಾಣಿಕರಿಗೆ ಲಭ್ಯವಾಗಲಿವೆ.

ಬಿಎಂಟಿಸಿಯಲ್ಲಿ ‘ಚತುರ ಸಾರಿಗೆ ವ್ಯವಸ್ಥೆ’ಗೆ ಬುಧವಾರ ಚಾಲನೆ ಸಿಗಲಿದೆ.

‘ಸಂಸ್ಥೆಯಲ್ಲಿ 6,399 ಬಸ್‌ಗಳು ಇವೆ. ಸಂಚಾರ ದಟ್ಟಣೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ನಿಗದಿತ ಸಮಯಕ್ಕೆ ಬಸ್‌ಗಳು ನಿರ್ದಿಷ್ಟ ತಾಣಕ್ಕೆ ತಲುಪುತ್ತಿಲ್ಲ.  ಎರಡು ಬಸ್ ನಿಲ್ದಾಣಗಳ ನಡುವಿನ ಅಂತರ, ಪ್ರಯಾಣ ಅವಧಿ, ಬಸ್ ನಿಲ್ದಾಣಗಳ ಸಂಖ್ಯೆ ಮತ್ತಿತರ ವಿಷಯಗಳ ಬಗ್ಗೆ 15 ವರ್ಷಗಳ ಹಿಂದೆ ಸಮೀಕ್ಷೆ ನಡೆಸಿ ‘ನಮೂನೆ- 4’ ತಯಾರಿಸಿ ನಿರ್ವಾಹಕರಿಗೆ ನೀಡಲಾ­ಗಿತ್ತು. ನಮೂನೆಯ ಮಾನದಂಡದ ಪ್ರಕಾರವೇ ಬಸ್‌­ಗಳು ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಮುಂದೆ ಇಂತಹ ಸಮಸ್ಯೆಗಳು ಇರುವುದಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಮ್‌ ಜಾರಿಗೆ ಬರಲಿದೆ. ಎಲ್ಲ ಬಸ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. 10 ಸೆಕೆಂಡ್‌ಗೊಮ್ಮೆ ಎಲ್ಲ ಬಸ್‌ಗಳ ಮಾಹಿತಿ ಕೇಂದ್ರ ಕಚೇರಿಗೆ ಲಭ್ಯವಾಗಲಿದೆ. ಬಸ್‌ಗಳಲ್ಲಿ ವಾಯ್ಸ್‌ ಕಿಟ್‌ ಅಳವಡಿಸಲಾಗಿದೆ. ಅವಘಡದ ಸಂದರ್ಭದಲ್ಲಿ ನೆರವು ಪಡೆಯಲು ಇದು ನೆರವಾಗಲಿದೆ’ ಎಂದು ಅವರು ವಿವರಿಸಿದರು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ 35 ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕ ಮಾಹಿತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಬಸ್‌ಗಳು ಎಷ್ಟು ಹೊತ್ತಿಗೆ ಬರಲಿವೆ, ಎಲ್ಲಿಗೆ ಹೋಗಲಿವೆ ಎಂಬ ಸಮಗ್ರ ಮಾಹಿತಿ ಸಿಗಲಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ಬಸ್‌ ಎಷ್ಟು ಹೊತ್ತಿಗೆ ಹೊರಡಲಿದೆ ಎಂಬ ವಿವರ ದೊರಕಲಿದೆ’ ಎಂದು ಅವರು ಹೇಳಿದರು.

ಇದು ಆರಂಭ ಮಾತ್ರ:  ‘ಸಂಸ್ಥೆಯಲ್ಲಿ ಈಗ ಹೊಸ ಯುಗ ಆರಂಭವಾಗಿದೆ. ಇದು ಆರಂಭ ಮಾತ್ರ.    ಐಟಿಎಸ್‌ನಿಂದ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗಲಿದೆ. ಎಲ್ಲ ಪರಿಪೂರ್ಣ ಆಗಲು ಒಂದೆರಡು ತಿಂಗಳ ಕಾಲಾವಕಾಶ ಬೇಕು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್‌ ತಿಳಿಸಿದರು.

ಜುಲೈ ಅಂತ್ಯದಲ್ಲಿ ಸ್ಮಾರ್ಟ್‌ ಕಾರ್ಡ್‌:  ಬಿಎಂಟಿಸಿಯಲ್ಲಿ ಜುಲೈ ಅಂತ್ಯದಲ್ಲಿ ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆ ಜಾರಿಯಾಗಲಿದೆ ಎಂದು ಅವರು ತಿಳಿಸಿದರು.

‘ಈಗ ಸಂಸ್ಥೆಯ ಬಸ್‌ಗಳಲ್ಲಿ ಚಿಲ್ಲರೆಯ ಗಲಾಟೆ ಸಾಕಷ್ಟು ನಡೆಯುತ್ತಿದೆ. ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆ ಜಾರಿಯಿಂದಾಗಿ ಈ ಸಮಸ್ಯೆ ಪರಿಹಾರ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೊಬೈಲ್‌ ಆ್ಯಪ್‌ಗೆ ಹೊಸ ರೂಪ ನೀಡಿದ್ದೇವೆ. ಬಸ್‌ಗಳ ಕಾರ್ಯಾಚರಣೆಯ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಲಿದೆ’ ಎಂದರು.

‘ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಮೊಬೈಲ್‌ ಆ್ಯಪ್‌ ಹೊಂದಿರುವ ಮಹಿಳೆಯರು ಬಸ್‌ ಹತ್ತಿದರೆ ಅವರ ಕುಟುಂಬದ ಮೂವರು ಸದಸ್ಯರಿಗೆ ಎಸ್‌ಎಂಎಸ್‌ ಸಂದೇಶ ಹೋಗಲಿದೆ. ಇಳಿದ ಬಳಿಕವೂ ಸಂದೇಶ ರವಾನೆಯಾಗಲಿದೆ. ಈ ವ್ಯವಸ್ಥೆ ಕೆಲವು ತಿಂಗಳಲ್ಲಿ ಜಾರಿಗೆ ಬರಲಿದೆ’ ಎಂದು ಅವರು ಮಾಹಿತಿ ನೀಡಿದರು.

ಆಮೆಗತಿ ನೋಡಿ ಐಟಿಎಸ್‌ ಬೇಡವೆಂದಿದ್ದೆ: ಜೈನ್‌
‘ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್‌) ಅನುಷ್ಠಾನದ ವಿಳಂಬ ನೋಡಿ ಬೇಸರವಾಗಿತ್ತು. ಕಂಪೆನಿಯ ಟೆಂಡರ್‌ ರದ್ದುಪಡಿಸುವಂತೆ ಸೂಚಿಸಿದ್ದೆ’ ಎಂದು ಬಿಎಂಟಿಸಿ ಅಧ್ಯಕ್ಷ ಎಚ್‌. ನಾಭಿರಾಜ್‌ ಜೈನ್‌ ನೆನಪಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2013ರಲ್ಲಿ ಟ್ರೈಮ್ಯಾಕ್ಸ್‌ ಕಂಪೆನಿಗೆ ಗುತ್ತಿಗೆ ವಹಿಸಲಾಗಿತ್ತು. 241 ದಿನಗಳಲ್ಲಿ ಐಟಿಎಸ್‌ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಕಾಲಮಿತಿಯಲ್ಲಿ ಜಾರಿಯಾಗಿರಲಿಲ್ಲ. 2015ರ ಮೇ 2ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ವಿಷಯ ಚರ್ಚೆಯಾಯಿತು. ಕಂಪೆನಿಯ ಜತೆಗಿನ ಒಪ್ಪಂದವನ್ನು ರದ್ದುಪಡಿಸುವಂತೆ ನಿರ್ದೇಶನ ನೀಡಿದ್ದೆ’ ಎಂದರು.

‘ಆಗ ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ (ಬಿಎಂಟಿಸಿ ನಿರ್ದೇಶಕರೂ ಹೌದು) ಮಧ್ಯಪ್ರವೇಶಿಸಿ  ಮೂರು ತಿಂಗಳ ಕಾಲಾವಕಾಶ ನೀಡೋಣ ಎಂದರು. ಡಿಸೆಂಬರ್‌ ವರೆಗೆ  ಕಾಲಾವಕಾಶ ನೀಡಿದೆವು. ಆಗಲೂ ಪೂರ್ಣಗೊಂಡಿರಲಿಲ್ಲ. ಒಂದು ತಿಂಗಳು ಅವಕಾಶ ಕೊಡಿ ಎಂದು ಬಿಎಂಟಿಸಿ ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ವಿಶ್ವಜಿತ್‌ ಮಿಶ್ರಾ ವಿನಂತಿಸಿದರು. ಅದಕ್ಕೂ ಒಪ್ಪಿದೆವು’ ಎಂದರು.

‘ಈಗಿನ ಪ್ರಗತಿ ನೋಡಿ ಖುಷಿಯಾಗುತ್ತಿದೆ. ಸಂಸ್ಥೆಯಲ್ಲಿ ಬದಲಾವಣೆ ಉಂಟಾಗಲಿದೆ ಎಂಬ ವಿಶ್ವಾಸ ಮೂಡಿದೆ. ಈ ಹಿಂದೆ ತಪ್ಪು ಮಾಡಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಸಮಯ ಆಗುತ್ತಿತ್ತು.  ಕಡತ ಹತ್ತಾರು ಕಡೆ ಸುತ್ತಾಡಬೇಕಿತ್ತು. ಇನ್ನು ಮುಂದೆ ಈ ರೀತಿ ಆಗುವುದಿಲ್ಲ. ಎಲ್ಲ ಸಿಬ್ಬಂದಿಯ ಕೆಲಸದ ಮಾಹಿತಿ ಕೇಂದ್ರ ಕಚೇರಿಯಲ್ಲೇ ಸಿಗಲಿದೆ. ಅದೊಂದೇ ದಾಖಲೆ ಸಾಕು’ ಎಂದು ಅವರು ಹೇಳಿದರು.

‘ನಮ್ಮ ಅವಧಿ ಪೂರ್ಣಗೊಳ್ಳುವ ಮೊದಲು ಐಟಿಎಸ್‌ ಅನುಷ್ಠಾನ ಆಗಲಿಕ್ಕೆ  ಇಲ್ಲ ಎಂದು ಭಾವಿಸಿದ್ದೆವು. ಅವಧಿ ಪೂರ್ಣಗೊಳ್ಳಲು ಎರಡು ದಿನಗಳು ಉಳಿದಿರುವಾಗ ಚಾಲನೆ ದೊರಕಲಿದೆ. ಅದೇ ಹೊತ್ತಿಗೆ ನಮ್ಮ ಅಧಿಕಾರದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂಬ ಆದೇಶ ಸಿಕ್ಕಿದೆ. ಒಟ್ಟಾರೆ ಡಬ್ಬಲ್‌ ಖುಷಿ’ ಎಂದರು.

***
* 6,399 ಬಸ್ ವೆಹಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆ(ಕಾರ್ಯಾಚರಣೆಯ ಮೇಲ್ವಿಚಾರಣೆ,   ಅಪಘಾತ ನಿರ್ವಹಣಾ ವ್ಯವಸ್ಥೆ)

* 10 ಸಾವಿರ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಸಿಸ್ಟಮ್‌ (ಆದಾಯದ ಮೇಲ್ವಿಚಾರಣೆ, ಟಿಕೆಟ್‌ ಹಾಗೂ ಸ್ಮಾರ್ಟ್‌ ಕಾರ್ಡ್‌ಗಳ ಮೇಲ್ವಿಚಾರಣೆ)

* 35 ಪ್ರಯಾಣಿಕರಿಗೆ ಮಾಹಿತಿ ಕೇಂದ್ರ (ಪ್ರಯಾಣಿಕರಿಗೆ ಬಸ್‌ಗಳ ಸಮಗ್ರ ಮಾಹಿತಿ)

* 1 ದತ್ತಾಂಶ ಕೇಂದ್ರ (ಇಡೀ ವ್ಯವಸ್ಥೆಯ ಮೇಲ್ವಿಚಾರಣೆ, ಕಾಲ್‌ ಸೆಂಟರ್‌)
* 1 ಡಿಪೊ ನಿರ್ವಹಣಾ ವ್ಯವಸ್ಥೆ (ಸಿಬ್ಬಂದಿ ಹಾಗೂ ವಾಹನಗಳ ಮೇಲ್ವಿಚಾರಣೆ)

ಅಂಕಿ ಅಂಶಗಳು
* 6399 ಬಸ್‌ಗಳ ಸಂಖ್ಯೆ
* 75,993 ಪ್ರತಿದಿನ ಬಸ್‌ಗಳ ಟ್ರಿಪ್‌
* 52 ಲಕ್ಷ ನಿತ್ಯದ ಪ್ರಯಾಣಿಕರು
* 12.96 ಲಕ್ಷ ಕಿ.ಮೀ ಪ್ರತಿನಿತ್ಯ ಸಂಚಾರ
* 40 ಡಿಪೊಗಳು
* 35,554 ಸಂಸ್ಥೆಯ ಸಿಬ್ಬಂದಿ
* 52 ಲಕ್ಷ ನಿತ್ಯದ ಪ್ರಯಾಣಿಕರು
* 3.80 ಕೋಟಿ ಸಂಸ್ಥೆಯ ನಿತ್ಯದ ಆದಾಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT