ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ವಿರುದ್ಧದ ಕ್ರಮ ತಡೆದ ಕಾಂಗ್ರೆಸ್‌ ನಾಯಕ

ಮಾಜಿ ರಾಜ್ಯ­ಪಾಲ ಭಾರದ್ವಾಜ್‌ ಹೇಳಿಕೆ
Last Updated 30 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿ­ರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಅವರ ಮೇಲೆ ಕ್ರಮ ಕೈಗೊಳ್ಳದಂತೆ ಹಿರಿಯ ಕಾಂಗ್ರೆಸ್‌ ಮುಖಂಡ­ರೊಬ್ಬರು ತಮ್ಮ ಮೇಲೆ ತೀವ್ರ ಒತ್ತಡ ಹೇರಿದ್ದರು’ ಎಂದು ಮಾಜಿ ರಾಜ್ಯ­ಪಾಲ ಹಂಸರಾಜ ಭಾರದ್ವಾಜ್‌ ಹೇಳಿ­ದರು.

ಭ್ರಷ್ಟಾಚಾರ ಆರೋಪ ಎದುರಿಸು­ತ್ತಿರುವ ಯಡಿಯೂರಪ್ಪ ಮತ್ತು ಜನಾರ್ದನ ­ರೆಡ್ಡಿ ಅವರ ವಿರುದ್ಧ ಕ್ರಮಕೈಗೊಳ್ಳಲು ತಾವು ಮುಂದಾದಾಗ, ಆಗಿನ ಯುಪಿಎ ಸರ್ಕಾರದಲ್ಲಿ ಪ್ರಮುಖ ಖಾತೆ­ಗಳನ್ನು ಹೊಂದಿದ್ದ ದಕ್ಷಿಣ ಭಾರತ ಮೂಲದ ಪ್ರಭಾವಿ ರಾಜಕಾರಣಿಯೊಬ್ಬರು ಕ್ರಮ ಕೈಗೊಳ್ಳಬಾರದೆಂದು ಒತ್ತಡ ಹಾಕಿದ್ದರು ಎಂಬ ಸಂಗತಿಯನ್ನು ಭಾರದ್ವಾಜ್‌ ಬಹಿರಂಗಪಡಿಸಿದರು.

‘ಬಿಜೆಪಿ ಸರ್ಕಾರವನ್ನು ವಜಾ ಮಾಡುವಂತೆ 4 ಸಲ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಆ ವರದಿ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದರ ಹಿಂದೆಯೂ ಅದೇ ರಾಜಕಾರಣಿಯ ಕೈವಾಡವಿತ್ತು’ ಎಂದೂ ಮಾಜಿ ರಾಜ್ಯಪಾಲ ಆರೋಪಿಸಿದರು.

ಭಾರದ್ವಾಜ್‌ ಸೋಮವಾರ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅನೌಪಚಾರಿಕವಾಗಿ ಮಾತನಾಡಿದರು. ಅಡ್ಡ ದಾರಿಗಳನ್ನು ಹಿಡಿಯದಂತೆ ಯಡಿ­ಯೂರಪ್ಪ ಅವರಿಗೆ ಸಲಹೆ ಮಾಡಿದ್ದೆ. ಒಮ್ಮೆ ಅವರಿಗೆ ಆತ್ಮೀಯರಾದ ಮಹಿಳಾ ಸಚಿವ ಸಹೋದ್ಯೋಗಿ ಅವರ ಬಳಿಯೂ ಹೇಳಿ ಕಳುಹಿಸಿದ್ದೆ. ಅವರು ನನ್ನ ಸಲಹೆಯನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಇದರಿಂದಾಗಿ ತೊಂದರೆಗೆ ಸಿಕ್ಕಿಕೊಂಡರು ಎಂದೂ ಮಾಜಿ ರಾಜ್ಯಪಾಲರು ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರ ಸಂಪುಟದಲ್ಲಿ ದಕ್ಷ ಸಚಿವರ ಕೊರತೆ ಇದೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕರ ಕೊರತೆ ಇದ್ದುದ್ದರಿಂದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಈಗಲೂ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೇರೆ ನಾಯಕರು ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಇನ್ನು ಮುಂದೆ ಸಕ್ರಿಯ ರಾಜಕಾರಣ ಮಾಡುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿ ಇರುವವರಿಗೆ ಸಲಹೆ ಕೊಡಲಿದ್ದೇನೆ. ಕರ್ನಾಟಕದಲ್ಲಿ ಕಳೆದ ದಿನಗಳನ್ನು ಕುರಿತು ಪುಸ್ತಕ ಬರೆಯುವೆ ಎಂದರು.

ಭಾರದ್ವಾಜ್‌ ಪ್ರಮುಖ ಇಂಗ್ಲಿಷ್‌ ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲೂ ಯಡಿಯೂರಪ್ಪ, ರೆಡ್ಡಿ ಅವರ ಮೇಲೆ ಕ್ರಮಕ್ಕೆ ಕಾಂಗ್ರೆಸ್‌ ನಾಯಕರು ಅಡ್ಡಿಪಡಿಸಿದ್ದರೆಂಬ ಸಂಗತಿಯನ್ನು ಹೊರ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT