ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಸ್ ಯಡಿಯೂರಪ್ಪ ರಿಟ್‌ ಅರ್ಜಿಯಲ್ಲೇನಿತ್ತು?

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಡಿನೋಟಿಫಿಕೇಷನ್‌ ಆರೋಪಗಳಿಗೆ ಸಂಬಂಧಿಸಿ ತಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಂದಿನ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಬಿ.ಎಸ್‌.ಯಡಿಯೂರಪ್ಪ ಅವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

‘ಅಂದು ಮುಖ್ಯಮಂತ್ರಿಯಾಗಿದ್ದ ನನ್ನ ವಿರುದ್ಧ ಸಿರಾಜಿನ್ ಬಾಷಾ ಹಾಗೂ ಬಾಲರಾಜ್ ಎಂಬುವವರಿಗೆ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡುವ ವೇಳೆ ರಾಜ್ಯಪಾಲ ಭಾರದ್ವಾಜ್  ಸೂಕ್ತ ನಿಯಮ ಪಾಲನೆ ಮಾಡಿಲ್ಲ’ ಎಂದು ಯಡಿಯೂರಪ್ಪ ದೂರಿದ್ದರು. ‘ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂದು   ಅಂದಿನ ಸಚಿವ ಸಂಪುಟ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.

ಆದರೆ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಇದಕ್ಕೆ ಸ್ಪಷ್ಟ ಕಾರಣ ನೀಡಿರಲಿಲ್ಲ. ಡಿನೋಟಿಫಿಕೇಷನ್ ಪ್ರಕರಣದ ತನಿಖೆಗೆ ನ್ಯಾಯಮೂರ್ತಿ ಬಿ.ಪದ್ಮರಾಜ ಸಮಿತಿ ಇದೆ ಎಂಬ ಅಂಶವನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದರೂ ಅದನ್ನು ಪರಿಗಣಿಸಿರಲಿಲ್ಲ’ ಎಂದು ವಿವರಿಸಲಾಗಿತ್ತು. ಯಡಿಯೂರಪ್ಪ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್‌ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಎಲ್‌.ನಾಗೇಶ್ವರ ರಾವ್‌ ವಾದ ಮಂಡಿಸಿದ್ದರು.

ಖಾಸಗಿ ದೂರಿನಲ್ಲೇನಿದೆ?
ಮೊದಲ ದೂರು:
ರಾಚೇನಹಳ್ಳಿಯಲ್ಲಿ ಕುಟುಂಬದ ಸದಸ್ಯರಿಗೆ 1.12 ಎಕರೆ ಭೂಮಿಯ ಅಕ್ರಮ ಡಿನೋಟಿಫಿಕೇಷನ್ ಮಾಡಿಕೊಡಲಾಗಿದೆ. ಸರ್ವೇ ನಂ 56 ರಲ್ಲಿ 16 ಗುಂಟೆ ಜಾಗವನ್ನು ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಪ್ರಾಪರ್ಟೀಸ್ ಪ್ರೈವೇಟ್‌ ಲಿಮಿಟೆಡ್‌ಗೆ ವರ್ಗಾವಣೆ ಮಾಡಲಾಗಿದೆ. ವೈಯಾಲಿಕಾವಲ್ ಸೊಸೈಟಿಗೆ ಸೇರಿದ್ದ ಜಾಗವನ್ನು ರಸ್ತೆಗೆ ಎಂದು ನೋಟಿಫೈ ಮಾಡಿ ಅದರಲ್ಲಿ 47,972 ಚದರ ಅಡಿ ಜಾಗ ಡಿನೋಟಿಫಿಕೇಷನ್ ಮಾಡಿ ಧವಳಗಿರಿ ಪ್ರಾಪರ್ಟೀಸ್ ಗೆ ವರ್ಗಾವಣೆ ಮಾಡಲಾಗಿದೆ.

2ನೇ ದೂರು: ಅರಕೆರೆಯಲ್ಲಿ 2.5 ಎಕರೆಗೆ ಭೂಮಿಯನ್ನು ಬೇನಾಮಿ ಹೆಸರಿಗೆ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ. ದೇವರಚಿಕ್ಕನಹಳ್ಳಿಯಲ್ಲಿ ಯಡಿಯೂರಪ್ಪ ಅವರ ಆಪ್ತ ಕೆ ಮಂಜುನಾಥ್ ಅವರಿಗೆ 1.7 ಎಕರೆ ಡಿ ನೋಟಿಫಿಕೇಷನ್ ಮಾಡಿಕೊಡಲಾಗಿದೆ. ಗೆದ್ದಲಹಳ್ಳಿಯಲ್ಲಿ ಆಪ್ತ ಮಂಜುನಾಥ್ ಮತ್ತು ಕೆ ಶಿವಪ್ಪ ಎನ್ನುವವರಿಗೆ 4 ಎಕರೆ ಅಕ್ರಮವಾಗಿ ಡಿ ನೋಟಿಫಿಫೈ ಮಾಡಿಕೊಡಲಾಗಿದೆ. ರಾಚೇನಹಳ್ಳಿಯಲ್ಲಿ ಸರ್ವೇ ನಂ. 55/2 ನಲ್ಲಿ 1 ಎಕರೆಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿ ಅದನ್ನು ಮಾರುಕಟ್ಟೆ ದರಕ್ಕಿಂತ ಜಾಸ್ತಿ ದರದಲ್ಲಿ ಜಿಂದಾಲ್‌ ಕಂಪೆನಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ.

3ನೇ  ದೂರು: ರಾಚೇನಹಳ್ಳಿಯಲ್ಲಿ 9 ಎಕರೆಯನ್ನು ಬೇನಾಮಿ ಹೆಸರಿನಲ್ಲಿ ಅಕ್ರಮವಾಗಿ ಡಿ ನೋಟಿಫೈ ಮಾಡಲಾಗಿದೆ. ಉತ್ತರಹಳ್ಳಿಯಲ್ಲಿ ಹೇಮಚಂದ್ರ ಸಾಗರ್ ಹೆಸರಿಗೆ 10 ಎಕರೆಗೆ ಅಕ್ರಮವಾಗಿ ಡಿ ನೋಟಿಫೈ ಮಾಡಲಾಗಿದೆ.  ಆಪ್ತ ಪ್ರವೀಣ್ ಚಂದ್ರ ಅವರಿಗೆ ಶಿವಮೊಗ್ಗ ಹಾಗೂ ಹೊಸದುರ್ಗದಲ್ಲಿ ಅಕ್ರಮವಾಗಿ ಅರಣ್ಯ ಭೂಮಿ ಮಂಜೂರು ಮಾಡಲಾಗಿದೆ.

4ನೇ ದೂರು: ಧವಳಗಿರಿ ಪ್ರಾಪರ್ಟೀಸ್‌ಗೆ ಹಣ ನೀಡಿದ ಪ್ರಕಾಶ್ ಶೆಟ್ಟಿ ಅವರಿಗೆ ನಗರದ ವಿವಿಧೆಡೆ 3.35 ಎಕರೆ ಭೂಮಿ ಅಕ್ರಮವಾಗಿ ಡಿ ನೋಟಿಫೈ ಮಾಡಲಾಗಿದೆ. ಶ್ರೀರಾಂಪುರದಲ್ಲಿ ಡಾ.ಬಿ.ಆರ್.ಶೆಟ್ಟಿಗೆ 11.25 ಎಕರೆ ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ. ಇದರಲ್ಲಿ 2.20 ಎಕರೆ ಭೂಮಿಯನ್ನು ಯಡಿಯೂರಪ್ಪ ಅವರ ಪುತ್ರರ ಕಂಪೆನಿ ನಿಕಟವರ್ತಿ ಬೆಸ್ಟೊ ಕಂಪೆನಿಗೆ ವರ್ಗಾವಣೆ ಮಾಡಲಾಗಿದೆ.

5ನೇ  ದೂರು: ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿ ನಾಗರಭಾವಿಯಲ್ಲಿ 5.13 ಎಕರೆ ಅಕ್ರಮ ಡಿ ನೋಟಿಫೀಕೇಷನ್ ಮಾಡಲಾಗಿದೆ. ಸಂಸದರಾಗಿದ್ದ ಬಿ.ವೈ.ರಾಘವೇಂದ್ರ ಹಾಗೂ ಶಾಸಕಿಯಾಗಿದ್ದ ಭಾರತಿ ಶೆಟ್ಟಿ ಅವರಿಗೆ ಆರ್.ಎಂ.ವಿ. ಲೇಔಟ್ ನಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ  ಮಾಡಲಾಗಿದೆ. ಟೆಲಿಕಾಂ ನೌಕರರಿಗೆ ಜಮೀನು ಪರಿವರ್ತನೆ ಮಾಡಿಕೊಡುವ ಮೂಲಕ ಅಕ್ರಮ ಡಿನೋಟಿಫಿಕೇಷನ್‌ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ₹ 100 ಕೋಟಿ ನಷ್ಟ ಉಂಟಾಗಿದೆ.

ಈ ದೂರುಗಳಲ್ಲಿ ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ 23 ದಿನ ಜೈಲು ವಾಸ ಅನುಭವಿಸಿದ್ದರು. ಅಂತೆಯೇ ಇದರಿಂದಾಗಿಯೇ ತಮ್ಮ ಮುಖ್ಯಮಂತ್ರಿ ಸ್ಥಾನವನ್ನೂ ಕಳೆದುಕೊಂಡಿದ್ದರು. ಈ ಎಲ್ಲಾ ಪ್ರಕರಣಗಳಲ್ಲಿಯೂ ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದರೆ ಅವರ ಮಕ್ಕಳು, ಅಳಿಯ ಸೇರಿದಂತೆ ಕುಟುಂಬದ ಇತರೆ ಸದಸ್ಯರನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT