ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಬಲ: ಕಾಂಗ್ರೆಸ್‌ಗೆ ಆಘಾತ

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ತನ್ನ ಬಲ ಹೆಚ್ಚಿಸಿಕೊಂಡಿದೆ. ಯಾವುದೇ ಪ್ರಮುಖ ಪಕ್ಷದೊಂದಿಗೆ ಮೈತ್ರಿ ಇಲ್ಲದೆ ಚುನಾವಣೆ ಎದುರಿ­ಸಿದ್ದು ರಾಜಕೀಯವಾಗಿ ಅದಕ್ಕೆ ಒದಗಿಬಂದಿದೆ. ಸಂಖ್ಯೆ ಹೆಚ್ಚಳ ಮತ್ತು ನೆಲೆ ವಿಸ್ತರಣೆ ಈ ಎರಡೂ ನೆಲೆಯಲ್ಲಿ ಲಾಭವಾಗಿದೆ. ಎರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ ಆಘಾತವಾಗುವ ಮಟ್ಟಿಗೆ ಹಿನ್ನಡೆ ಆಗಿದೆ. ಆಡಳಿತ ವಿರೋಧಿ ಅಲೆಯೊಂದಿಗೆ ಬದಲಾವಣೆಯ ಬಿರುಗಾಳಿಯೂ ಸೇರಿ­ಕೊಂಡು  ಅದನ್ನು ಮೂರನೇ ಸ್ಥಾನಕ್ಕೆ ದೂಡಿದೆ.

ರಾಷ್ಟ್ರೀಯ ಪಕ್ಷವೊಂದಕ್ಕೆ ಇದಕ್ಕಿಂತ ಮುಜುಗರದ ಸ್ಥಿತಿ ಮತ್ತೊಂದು ಇರಲಾರದು. ಲೋಕಸಭೆಯಲ್ಲಿ  ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಪಡೆಯಲು ಬೇಕಾದ ಸಂಖ್ಯಾ­ಬಲ­ವನ್ನೂ ಹೊಂದಿಸಲಾರದಷ್ಟು ಕುಸಿದ ಕಾಂಗ್ರೆಸ್‌ಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಲೇ ಇದೆ. ಆಂಧ್ರಪ್ರದೇಶ ವಿಧಾನಸಭೆಗೆ ಈ ಸಲ ನಡೆದ ಚುನಾವಣೆ­ಯಲ್ಲಿ ಖಾತೆ ತೆರೆಯಲು ಆಗಲಿಲ್ಲ. ಹೊಸ­ದಾಗಿ ಅಸ್ತಿತ್ವಕ್ಕೆ ಬಂದ ತೆಲಂಗಾ­ಣದ ಮತದಾರ ಕಾಂಗ್ರೆಸ್‌ ನಿರೀಕ್ಷೆಗಳನ್ನು ಹುಸಿಗೊಳಿಸಿದ.

ಜನಸಂಖ್ಯೆ, ವಿಸ್ತೀರ್ಣ ಮತ್ತು ಮಹತ್ವದ ದೃಷ್ಟಿಯಿಂದ ಪ್ರಮುಖ ರಾಜ್ಯವಾದ ಮಹಾ­ರಾಷ್ಟ್ರ ಹಾಗೂ ದೆಹಲಿಗೆ ಹೊಂದಿಕೊಂಡೇ ಇರುವ ಹರಿಯಾಣ ಕೂಡ ಈಗ ಕೈಬಿಟ್ಟಿರು­ವುದು ಕಾಂಗ್ರೆಸ್‌ಗೆ ದೊಡ್ಡ ನಷ್ಟ. ಇದರ ಹಿಂದೆ ನಾಯಕತ್ವದ ವೈಫಲ್ಯವೂ ಅಡಗಿದೆ. ಈ ಸೋಲಿನ ಕೊಂಡಿ ಕಳಚಿಕೊಳ್ಳಲು ಕಾಂಗ್ರೆಸ್ ವರಿಷ್ಠರು ಈಗ­ಲಾ­ದರೂ ಗಂಭೀರ ಪ್ರಯತ್ನ ಆರಂಭಿ­ಸಬೇಕು. ಲೋಕಸಭಾ ಚುನಾ­ವಣೆ­ಯಲ್ಲಿ ಕಂಡ ಹೀನಾಯ ಸೋಲಿನ ನಂತರವೇ ಎಚ್ಚೆತ್ತು­ಕೊಂಡಿ­ದ್ದರೆ ಕಾಂಗ್ರೆಸ್‌ಗೆ ಇಂತಹ ದಯನೀಯ ಸೋಲು ಎದುರಾಗುತ್ತಿರ­ಲಿಲ್ಲ­ವೇನೊ? ಆದರೆ ಅಂತಹ ಪ್ರಯತ್ನವನ್ನೇ ಅದರ ಮುಖಂಡರು ಮಾಡಿದಂತೆ ಕಾಣುತ್ತಿಲ್ಲ.

ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಕಾರ್ಯತಂತ್ರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಬಿಜೆಪಿಯ ನೆಲೆ ವಿಸ್ತರಣೆಗೆ ವೇಗ ತಂದು­ಕೊಟ್ಟಿರುವುದು ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ­ಗಳಿಂದ ಸಾಬೀತಾಗಿದೆ. ಶಿವಸೇನಾ ನೆರಳಲ್ಲಿ ಮರಾಠ ನೆಲದಲ್ಲಿ ನೆಲೆ ಕಂಡು­ಕೊಂಡಿದ್ದ ಬಿಜೆಪಿ, ಈ ಸಲ ಆ ಪಕ್ಷದೊಂದಿಗೆ ಮೈತ್ರಿ ಕಡಿದು­ಕೊಂಡರೂ ಸರಳ ಬಹುಮತದ ಸನಿಹಕ್ಕೆ ಬಂದಿರುವುದು ಸಾಮಾನ್ಯ ಸಾಧನೆಯೇನಲ್ಲ. ಸೀಟು ಹಂಚಿಕೆ ಮಾತುಕತೆ ಸಂದರ್ಭದಲ್ಲಿ  ಬಿಜೆಪಿ ಬೇಡಿಕೆ ಇಟ್ಟಿದ್ದೇ 125­ರಿಂದ 130 ಸ್ಥಾನಕ್ಕೆ. ಆದರೆ ಏಕಾಂಗಿಯಾಗಿ ಸ್ಪರ್ಧಿಸಿ 122 ಕ್ಷೇತ್ರಗಳಲ್ಲಿ ಗೆದ್ದು ಶಿವಸೇನಾದ ಬಾಯಿ ಕಟ್ಟುವಂತೆ ಮಾಡಿದೆ.

ಹರಿಯಾಣದಲ್ಲಿ ಸರಳ ಬಹುಮತ ಪಡೆದಿದೆ. ಈ ಎರಡೂ ರಾಜ್ಯಗಳಲ್ಲಿ ಇದೇ ಮೊದಲ ಸಲ ಆಡಳಿತ ಚುಕ್ಕಾಣಿ ಬಿಜೆಪಿ ಕೈಗೆ ಸಿಗಲಿದೆ. ಇಷ್ಟಾಗಿಯೂ ಜಟಿಲ ಸಮಸ್ಯೆ­ಗಳನ್ನು ನಿಭಾಯಿಸುವ ಛಾತಿಯುಳ್ಳ ಅನುಭವಿ ನಾಯಕರ ಕೊರತೆಯನ್ನು ಬಿಜೆಪಿ ಎರಡೂ ರಾಜ್ಯಗಳಲ್ಲಿ ಎದುರಿಸುತ್ತಿದೆ. ಸಣ್ಣ ರಾಜ್ಯಗಳ ಪರ ಒಲವು ಹೊಂದಿರುವ ಬಿಜೆಪಿ, ಪ್ರತ್ಯೇಕ ವಿದರ್ಭ ರಾಜ್ಯದ ಬೇಡಿಕೆಗೆ ಹೇಗೆ ಸ್ಪಂದಿ­ಸಲಿದೆ ಎಂಬುದು ಕುತೂಹಲದ ಪ್ರಶ್ನೆ. ವಿದರ್ಭದಲ್ಲಿ ಬಿಜೆಪಿಗೆ ಹೆಚ್ಚಿನ ಜನ­ಬೆಂಬಲವೂ ದೊರೆತಿದೆ. ಜನರು ತನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಅದು ಈಗ ಕೆಲಸ ಮಾಡಿ ತೋರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT