ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ

ಪ್ರಧಾನಿ ಮೋದಿ ‘ಮನ್‌ ಕೀ ಬಾತ್‌’ ನಲ್ಲಿ ಸತ್ವವೇ ಇಲ್ಲ– ಅಚ್ಚೇ ದಿನ್‌ ಅಲ್ಲ ಕಚ್ಚಾ ದಿನ್‌: ಮುಖ್ಯಮಂತ್ರಿ
Last Updated 11 ಫೆಬ್ರುವರಿ 2016, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ಜೆಡಿಎಸ್‌ಗೆ ಸಿದ್ಧಾಂತವೇ ಇಲ್ಲ. ರಾಜ್ಯದಲ್ಲಿ ಆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿಯವರೂ ಮುಂದಿನ ಅವಧಿಯಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಅಪ್ಪನ ಆಣೆಗೂ ಅವರು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು.

ಹೆಬ್ಬಾಳ ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಪರ ಆರ್‌.ಟಿ.ನಗರದಲ್ಲಿ ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ಪರ್ಧೆ ಇರುವುದು ನಮ್ಮ ಹಾಗೂ ಬಿಜೆಪಿ ನಡುವೆ. ಜೆಡಿಎಸ್‌ ಹೋರಾಟದ ಕಣದಲ್ಲೇ ಇಲ್ಲ.  ಮನೆಮುರುಕ ಕೆಲಸ ಮಾಡುವುದೇ ಆ ಪಕ್ಷದ ಜಾಯಮಾನ. ಕಳೆದ ಬಾರಿ ಅಲ್ಪಸಂಖ್ಯಾತರ ಮತ ವಿಭಜನೆ ಆಗಿದ್ದರಿಂದಲೇ ರೆಹಮಾನ್‌ ಷರೀಫ್‌ ಸೋತಿದ್ದರು. ಜೆಡಿಎಸ್‌ಗೆ ಮತ ನೀಡಿದರೆ ಅದು ಕೋಮುವಾದಿ ಪಕ್ಷ ಬಿಜೆಪಿ ಬೆಂಬಲಿಸಿದಂತೆ’ ಎಂದರು.

‘ಬಿಜೆಪಿಯವರು ಮಹಾತ್ಮ ಗಾಂಧೀಜಿ ಕೊಂದ ನಾಥೂರಾಮ್‌ ಗೋಡ್ಸೆಯನ್ನು ಪೂಜಿಸುವವರು. ಉತ್ತರ ಪ್ರದೇಶದಲ್ಲಿ ಗೋಡ್ಸೆಗೂ ದೇವಾಲಯ ಕಟ್ಟಲಾಗುತ್ತಿದೆ. ಇದೆಲ್ಲ ಬಿಜೆಪಿಯ ಹುನ್ನಾರ. ಅವರು ಅಧಿಕಾರಕ್ಕೆ ಬಂದರೆ ಜನ ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ’ ಎಂದರು.
ಅಚ್ಚೇ ದಿನ್‌ ಅಲ್ಲ ಕಚ್ಚಾ ದಿನ್‌: ‘ಅಚ್ಛೇ ದಿನ್‌ ಆಯೇಗಾ ಎಂದು  ತಮಟೆ ಬಾರಿಸಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರು. ಈಗ ಒಳ್ಳೆಯ ದಿನಗಳು ಬಂದಿವೆಯೇ? ಬಂದಿದ್ದು ಕಚ್ಚಾ ದಿನ್‌’ ಎಂದು ಲೇವಡಿ ಮಾಡಿದರು.

ಮೋದಿ ಅವರ ‘ಮನ್‌ ಕೀ ಬಾತ್‌’ ನಲ್ಲಿ ಸತ್ವವೇ ಇಲ್ಲ ಎಂದು ಟೀಕಿಸಿದರು.

‘ಲೋಕಸಭೆ ಚುನಾವಣೆ ಸಂದರ್ಭದಲ್ಲಿದ್ದ ಗಾಳಿ ಈಗಿಲ್ಲ. ದೆಹಲಿ, ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಪಂಚಾಯತ್‌ ರಾಜ್‌ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿಗೆ ಹಿನ್ನಡೆ ಆಗಿದೆ. ಮೋದಿ ಅವರು ಪ್ರತಿನಿಧಿಸುವ ವಾರಾಣಸಿಯಲ್ಲೂ ಅವರಿಗೆ ಸೋಲಾಗಿದೆ. ಬಿಜೆಪಿಯ ಪೊಳ್ಳುತನ ಜನರಿಗೆ ಅರ್ಥ ಆಗಿದೆ’  ಎಂದರು.

‘ಸಿದ್ದರಾಮಯ್ಯ ಹಳ್ಳಿಜನರ ಪರ, ಪಟ್ಟಣದವರ ವಿರುದ್ಧ ಎಂದು ವಿರೋಧ ಪಕ್ಷದವರು,  ಅಪಪ್ರಚಾರ ಮಾಡುತ್ತಿದ್ದರು. ನಾನೂ ಕೈಗಾರಿಕಾ  ಅಭಿವೃದ್ಧಿ ಪರ ಇದ್ದೇನೆ. ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ ಉದ್ಯಮಿಗಳಿಗೂ ಇದು ಮನವರಿಕೆ ಆಗಿದೆ. ಹೂಡಿಕೆಗೆ ಕರ್ನಾಟಕದಷ್ಟು ಉತ್ತಮ ವಾತಾವರಣ ಬೇರಾವ ರಾಜ್ಯದಲ್ಲೂ ಇಲ್ಲ ಎಂದು ಅವರು ಹೊಗಳಿದ್ದಾರೆ’ ಎಂದರು. 

‘ಹೆಬ್ಬಾಳ ಕ್ಷೇತ್ರದಲ್ಲಿ ನಮ್ಮ ಅವಧಿಯಲ್ಲಿ ₹ 428 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ. ನಮ್ಮ  ಅಭ್ಯರ್ಥಿಯನ್ನು ಗೆಲ್ಲಿಸಿದರೆ ಇನ್ನಷ್ಟು ಕೆಲಸಗಳು ಆಗಲಿವೆ’ ಎಂದರು.

ಹಿರಿಯ ಕಾಂಗ್ರೆಸ್‌ ಮುಖಂಡ ಜಾಫರ್‌ಷರೀಫ್‌ ಮಾತನಾಡಿ, ‘ನನಗೆ ಆಶೀರ್ವಾದ ಮಾಡಿದ ನೀವು ಈ ಮಗುವಿಗೂ (ಮೊಮ್ಮಗ) ಆಶೀರ್ವಾದ ಮಾಡಿ’ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್‌, ಸಚಿವರಾದ ಡಿ.ಕೆ.ಶಿವಕುಮಾರ್‌,  ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್‌, ರೋಷನ್‌ ಬೇಗ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಶಾಸಕ ಬೈರತಿ ಬಸವರಾಜು, ಮೇಯರ್‌ ಮಂಜುನಾಥ ರೆಡ್ಡಿ  ಭಾಗವಹಿಸಿದರು.

ರಾಜೀವ್‌ ಗಾಂಧಿಗೆ ಶಕ್ತಿ!: ‘ಕಾಂಗ್ರೆಸ್‌ ಅಭ್ಯರ್ಥಿ ಗೆದ್ದರೆ ಸೋನಿಯಾ ಗಾಂಧಿಗೆ, ರಾಜೀವ್‌ ಗಾಂಧಿಗೆ ಶಕ್ತಿ ಬರಲಿದೆ’ ಎಂದು ಸಿದ್ದರಾಮಯ್ಯ ಹೇಳಿದರು. ಬಳಿಕ  ತಪ್ಪಿನ ಅರಿವಾಗಿ, ‘ರಾಹುಲ್‌ ಗಾಂಧಿಗೆ, ನನಗೂ ಶಕ್ತಿ ಬರಲಿದೆ’ ಎಂದರು.

ರೋಡ್‌ ಶೋ: ಹೆಬ್ಬಾಳ ಮೇಲ್ಸೇತುವೆಯಿಂದ ಗುಡ್ಡದಹಳ್ಳಿ– ಚೋಳನಾಯಕನಹಳ್ಳಿ ಮಾರ್ಗವಾಗಿ ಚಾಮುಂಡಿ ನಗರದವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಡ್‌ ಶೋ ನಡೆಸಿ ಮತಯಾಚಿಸಿದರು.

‘ನಾವೆಲ್ಲ ಒಗ್ಗಟ್ಟಿನಿಂದಿದ್ದೇವೆ. ಬಿಜೆಪಿಯಲ್ಲಿ ಅನಂತಕುಮಾರ್‌, ಅಶೋಕ್‌, ಈಶ್ವರಪ್ಪ  ಹಾಗೂ ಯಡಿಯೂರಪ್ಪ ಬಣಗಳಿವೆ. ಯಡಿಯೂರಪ್ಪ ಅವರು ಪಕ್ಷದ ಚುನಾವಣಾ ಪ್ರಣಾಳಿಕೆ ಸಭೆಯಲ್ಲಿ ಭಾಗವಹಿಸಿರಲಿಲ್ಲ ಏಕೆ?’ ಎಂದು ಪ್ರಶ್ನಿಸಿದರು.

ಬೈರತಿ ಸುರೇಶ್‌ಗೆ ಮತ್ತೆ ಜೈಕಾರ
ಬೈರತಿ ಸುರೇಶ್‌ ಮಾತನಾಡಿ, ‘ನನ್ನ ಮೇಲೆ ತೋರಿಸಿಷ್ಟೇ ಪ್ರೀತಿಯನ್ನು ರೆಹಮಾನ್‌ ಷರೀಫ್‌ ಮೇಲೂ ತೋರಿಸಿ’ ಎಂದರು.

ಅವರು ಭಾಷಣ ಮಾಡಲು ಮೈಕ್‌ ಬಳಿ ಬರುತ್ತಿದ್ದಂತೆ ಬೆಂಬಲಿಗರು ಜೈಕಾರ ಕೂಗಿದರು. ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದಾಗ ಅವರ ಕಾರಿಗೂ ಮುಗಿಬಿದ್ದು ಜೈಕಾರ ಕೂಗಿದರು.

* ಬಿಜೆಪಿಯವರು ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆಮಾತನಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಕಸದ ಸಮಸ್ಯೆ ಹೇಗಿತ್ತು ಎಂದು ಜನರಿಗೆ ಗೊತ್ತಿದೆ
-ಸಿದ್ದರಾಮಯ್ಯ,
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT