ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರುದ್ಧದ ಹೋರಾಟ ದೆಹಲಿಗೆ: ಮಮತಾ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಶಾರದಾ ಚಿಟ್‌ ಫಂಡ್‌ ಹಗರಣದಲ್ಲಿ  ತಮ್ಮ ಪಕ್ಷದ ಹೆಸರು ಎಳೆದಿರುವುದಕ್ಕೆ ಕೆಂಡಾಮಂಡಲ­ವಾ­ಗಿ­ರುವ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ,  ಬಿಜೆಪಿ ವಿರುದ್ಧದ ತಮ್ಮ ಹೋರಾ­ಟವನ್ನು ದೆಹಲಿಗೆ ಕೊಂಡೊಯ್ಯುವುದಾಗಿ ಬೆದ­ರಿಕೆ ಹಾಕಿದ್ದಾರೆ.

‘ಇನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ.  ಅನಿವಾರ್ಯವಾಗಿ ಬೀದಿಗೆ ಬರಬೇಕಾ­ಗಿದೆ. ನಮ್ಮ ವಿರುದ್ಧ ಸುಳ್ಳುಪ್ರಚಾರ ಮಾಡ­ಲಾಗುತ್ತಿದೆ. ಆದರೆ ಬಂಗಾಳದ ಮಣ್ಣಿನ ಗುಣ ಸಾಮಾನ್ಯದ್ದಲ್ಲ. ಇಲ್ಲಿ ಸಸಿ ನೆಟ್ಟರೆ ದೆಹಲಿಯಲ್ಲಿ ಮರ ಬೆಳೆಯು­ತ್ತದೆ’ ಎಂದು ಮಮತಾ ಗುಡುಗಿದ್ದಾರೆ.
ಹಗರಣಕ್ಕೆ ಸಂಬಂಧಿಸಿ ಸಿಬಿಐ ಜನರಿಗೆ ನೀಡುತ್ತಿದೆ ಎನ್ನ­ಲಾದ ಕಿರುಕುಳವನ್ನು ಪ್ರತಿಭಟಿಸಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

ತಂತ್ರ ನಡೆಯದು
‘ಈ ಸರ್ಕಾರ (ಬಿಜೆಪಿ) ಅಧಿಕಾರಕ್ಕೆ ಬಂದ ಬಳಿಕ ಎಲ್ಲೆಡೆ ಗಲಭೆಗಳು ನಡೆಯುತ್ತಿವೆ. ನಮ್ಮ ಮುಂದೆ ಸೆಲ್ಫಿ ದಂಗಾ ಗುರು  (ಮೊಬೈಲ್‌ನಲ್ಲಿ ತಮ್ಮ ಚಿತ್ರ ತಾವೇ ತೆಗೆದು­ಕೊ­ಳ್ಳುವ, ದಂಗೆ ಎಬ್ಬಿಸುವ ಗುರು) ಇದ್ದಾರೆ. ಬಂಗಾಳದಲ್ಲಿ ದಂಗಾ ಗುರು­ವಿನ ತಂತ್ರ ನಡೆಯುವುದಿಲ್ಲ’ ಎಂದು ಮೋದಿ ಅವರನ್ನು ಉದ್ದೇ­ಶಿಸಿ ಮಮತಾ ಟೀಕೆ ಮಾಡಿದ್ದಾರೆ.

‘ನೀವು ಬೇರೆಯವರಿಗೆ ಏನು ಮಾಡಿ­ದ್ದೀರಿ ಎನ್ನುವುದು ನನಗೆ ಗೊತ್ತಿಲ್ಲ.  ಆದರೆ ಬಂಗಾಳದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ. ನಾವು ರಾಜಕೀಯ­ವಾಗಿ ಹಾಗೂ ಪಜಾಸತ್ತಾತ್ಮಕ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತೇವೆ’ ಎಂದು ಗರ್ಜಿಸಿದರು.

ಪಿತೂರಿಗೆ ಬಗ್ಗುವುದಿಲ್ಲ...
ಬಹಿರಂಗ ಸಭೆಗೆ  ಮುನ್ನ ೨೪ ಪರಗಣ ಜಿಲ್ಲೆಯ ಬಾಂಗಾಂವ್‌ನಲ್ಲಿ ಮತಾನಾಡಿದ ಮಮತಾ ಬ್ಯಾನರ್ಜಿ , ‘ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ಆದರೆ  ಯಾವುದೇ ಷಡ್ಯಂತ್ರವೂ ನಮ್ಮ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಲು ಬಿಡುವುದಿಲ್ಲ’ ಎಂದರು.

ಮೋದಿ ಹೆಸರನ್ನು ಪ್ರಸ್ತಾಪಿಸದೆಯೇ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, ‘ಅಧಿಕಾರಕ್ಕೆ ಬಂದು ಆರು ತಿಂಗಳಿನಲ್ಲಿ ಬಹುತೇಕ ದಿನಗಳನ್ನು ವಿದೇಶ­ದಲ್ಲಿಯೇ ಕಳೆದಿದ್ದಾರೆ. ಅವರಿಗೆ ದೇಶ ಮರೆತು ಹೋಗಿದೆಯೇ? ದೇಶವನ್ನು ಮಾರು­ವುದಕ್ಕಾಗಿ ಅವರು ವಿದೇಶಕ್ಕೆ ಹೋಗುತ್ತಾರೆಯೇ’ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಚಿಟ್‌ ಫಂಡ್‌ಗಳನ್ನು ನಿಯಂತ್ರಿಸುವುದಿಲ್ಲ ಎಂದ ಅವರು, ‘ಇದು ಆರ್‌ಬಿಐ, ಸೆಬಿ ಅಧೀನದಲ್ಲಿದೆ. ನೀವೇಕೆ ಕ್ರಮ ತೆಗೆದುಕೊಂಡಿಲ್ಲ’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT