ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ-ಸೇನಾ ಮೈತ್ರಿ ಬಿಕ್ಕಟ್ಟು

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸ್ಥಾನ ಹಂಚಿಕೆ ಜಟಾಪಟಿ
Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ­ಯಲ್ಲಿ ಸ್ಥಾನ ಹೊಂದಾಣಿಕೆ  ವಿಷಯ­ವಾಗಿ ಬಿಜೆಪಿ ಹಾಗೂ ಶಿವಸೇನಾ ನಡುವೆ ಸಂಘರ್ಷ ಶುರುವಾಗಿದೆ.

ಈ ಬಾರಿ ೧೩೫ ಸ್ಥಾನಗಳಲ್ಲಿ ಸ್ಪರ್ಧಿ­ಸು­ವುದಾಗಿ ಬಿಜೆಪಿ ಮುಂದಿಟ್ಟ ಬೇಡಿಕೆ­ಯನ್ನು ಶಿವಸೇನಾ ಅಧ್ಯಕ್ಷ ಉದ್ಧವ್‌್ ಠಾಕ್ರೆ ಸೋಮವಾರ ತಳ್ಳಿಹಾಕಿದ್ದಾರೆ.ಎಲ್ಲದಕ್ಕೂ ಪರ್ಯಾಯ ಇದೆ ಎಂದಿ­ರುವ ಅವರು ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವ ಸೂಚನೆಯನ್ನೂ ನೀಡಿದ್ದಾರೆ. ಸ್ಥಾನ ಹೊಂದಾಣಿಕೆ ಸೂತ್ರ  ನಿರ್ಧರಿ­­ಸು­ವುದಕ್ಕೆ ಸಮಾ­ಲೋಚನೆ ನಡೆಯು­ತ್ತಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

‘ಬಿಜೆಪಿ–ಸೇನಾ ಮೈತ್ರಿಕೂಟ ಅಧಿ­ಕಾರಕ್ಕೆ ಬಂದಲ್ಲಿ ನಮ್ಮ ಪಕ್ಷದವರೇ  ಮುಖ್ಯಮಂತ್ರಿಯಾಗುವರು’ ಎಂದು ಉದ್ಧವ್‌್ ಈ ಮೊದಲು ಹೇಳಿದ್ದರು. ಆರ್‌ಪಿಐ (ಅಠಾವಳೆ) ಹಾಗೂ ಸ್ವಾಭಿಮಾನಿ ಶೇತ್ಕರಿ ಸಂಘಟನೆ, ರಾಜು ಶೆಟ್ಟಿ ಬಣದಂಥ ಸಣ್ಣ ಮಿತ್ರಪಕ್ಷಗಳಿಗೆ  ಸ್ಥಾನ ಹಂಚಿಕೆ ಬಳಿಕ ಬಿಜೆಪಿ ಹಾಗೂ ಸೇನಾ ತಲಾ ೧೩೫ ಸ್ಥಾನಗಳಲ್ಲಿ ಸ್ಪರ್ಧಿಸ­ಬೇಕು ಎಂದು ಬಿಜೆಪಿ ಹಿರಿಯ ಮುಖಂಡ ರಾಜೀವ್‌ ಪ್ರತಾಪ್‌ ರೂಡಿ ಭಾನುವಾರ ಹೇಳಿದ್ದರು.

೨೦೦೯ರಲ್ಲಿ ಶಿವಸೇನಾ ೧೬೯ ಹಾಗೂ ಬಿಜೆಪಿ ೧೧೯ ಸ್ಥಾನ­ಗಳಲ್ಲಿ ಸ್ಪರ್ಧಿಸಿದ್ದವು. ‘ಸ್ಥಾನ ಹೊಂದಾಣಿಕೆ ಮಾತುಕತೆ ಮುಂದುವರಿಸಬಾರದು. ಪಕ್ಷವು ಏಕಾಂಗಿ­­ಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದೆ ಎಂದು ಬಿಜೆಪಿ ವಕ್ತಾರ ಮಾಧವ್‌ ಭಂಡಾರಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಬೇಕಾಗಿರುವುದು ಏನೂ ಇಲ್ಲ. ಮಾತುಕತೆಯಲ್ಲಿ ಭಾಗಿ­ಯಾ­­ಗಿ­ಲ್ಲದ­ವರು ಈ ಬಗ್ಗೆ ಹೇಳಿಕೆ ನೀಡಿರು­ವುದು ಅಚ್ಚರಿ ತಂದಿದೆ’ ಎಂದು ಉದ್ಧವ್‌ ಹೇಳಿದ್ದಾರೆ.

ಮೊದಲೇ ನಿರ್ಧಾರವಾಗಿತ್ತು
ಎರಡು ಪಕ್ಷಗಳ ನಡುವಣ ಮೈತ್ರಿ ೨೫ ವರ್ಷಗಳಷ್ಟು ಹಳೆಯದು. ನಾವು ಕಾಂಗ್ರೆಸ್‌–ಎನ್‌ಸಿಪಿ ಸರ್ಕಾರ  ಉರು­ಳಿಸಿ ಮರಾಠಿಗರನ್ನು ಉಳಿಸ­ಬೇಕು. ಎಲ್ಲ ಹಿಂದುತ್ವ ಶಕ್ತಿಗಳು ಒಟ್ಟಾಗಬೇಕು ಎನ್ನು­ವುದು ನಮ್ಮ ಹಂಬಲ. ಈ ಚುನಾವಣೆ­ಯಲ್ಲಿ ಶಿವ­ಸೇನಾ ೧೭೧ ಹಾಗೂ ಬಿಜೆಪಿ ೧೧೭ ಸ್ಥಾನಗಳಲ್ಲಿ ಸ್ಪರ್ಧಿಸು­ವುದು ಈ ಮೊದಲೇ ನಿರ್ಧಾರ­ವಾಗಿತ್ತು ಎನ್ನುವುದನ್ನು ಬಿಜೆಪಿ ಮರೆಯಬಾ­ರದು
– ಉದ್ಧವ್‌ ಠಾಕ್ರೆ, ಶಿವಸೇನಾ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT