ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ಟ ಸ್ಥಳ ತುಂಬಿರಿ...

Last Updated 24 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಐ’ ಹಾಗೂ ‘ಯೂ’ ಮಧ್ಯೆ ಇದ್ದ ಖಾಲಿ ಜಾಗ ತುಂಬಿಕೊಳ್ಳಲು ಲೈಕ್, ಲವ್, ಹೇಟ್ ಹಾಗೂ ಮಿಸ್ ಎಂಬ ನಾಲ್ಕು ಆಯ್ಕೆ ನೀಡಿದ್ದಾರೆ ನಿರ್ದೇಶಕ ಕೇಶವ ಚಂದು. ಹೀಗಾಗಿ ಸಿನಿಮಾದ ಶೀರ್ಷಿಕೆಯೂ ಪ್ರೇಕ್ಷಕರ ಕಲ್ಪನಾಶಕ್ತಿಯನ್ನು ಒರೆಗೆ ಹಚ್ಚಬಹುದು. ‘ಐ – ಯೂ’ ಚಿತ್ರದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ‘ಇದೊಂದು ಪ್ರೇಮಕಥೆ. ಅದಕ್ಕಿಂತ ಹೆಚ್ಚೇನೂ ವಿಶೇಷವಿಲ್ಲ’ ಅಂತ ಕೇಶವ ಚಂದು ಹೇಳಿದರು.

ತಲಾ ಇಬ್ಬರು ನಾಯಕ ಹಾಗೂ ನಾಯಕಿಯರು ಇರುವುದರಿಂದ ಹಲವಾರು ಭಾವನೆಗಳ ವಿನಿಮಯ ಇರುತ್ತದೆ. ಒಟ್ಟಿನಲ್ಲಿ ಪ್ರೀತಿಯ ಆದಿ ಹಾಗೂ ಅಂತ್ಯವನ್ನು ತೋರಿಸುವುದಾಗಿ ಅವರು ಹೇಳಿಕೊಂಡರು. ‘ಕಣ್ಸನ್ನೆಯಿಂದ ಕಣ್ಣೀರವರೆಗೆ’ ಎಂಬ ಟ್ಯಾಗ್‌ಲೈನ್‌ ಇರುವುದರಿಂದ ಪ್ರೇಮದ ಜತೆಗೆ ವಿರಹವೂ ಇದರಲ್ಲಿ ಬಂದು ಹೋಗಲಿದೆ.

ಕಾಲೇಜು ದಿನಗಳಲ್ಲಿ ನಾಟಕ ಬರೆದು, ಆಡಿಸಿದ ಅನುಭವ ಕೇಶವ ಚಂದು ಅವರದು. ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಟ್ರೈಲರ್‌ ಮಾಡುವ ಸಮಯದಲ್ಲಿ ಹೆಚ್ಚು ಕಲಿತಿದ್ದಾಗಿ ಅವರು ಹೇಳಿಕೊಂಡರು. ‘ಪ್ರೀತಿ–ಪ್ರೇಮ ಅಷ್ಟೇ ಅಲ್ಲ, ಹೆಣ್ಣು ಏನು ಸಾಧನೆ ಮಾಡಬಹುದು ಎಂಬುದನ್ನು ನಾವು ತೋರಿಸಲಿದ್ದೇವೆ’ ಎಂದರು.

ಸಿವಿಲ್‌ ಎಂಜಿನಿಯರಿಂಗ್‌ ಪದವೀಧರ ಪ್ರಮೋದ್‌, ಸ್ವಂತ ಕಂಪೆನಿ ಮಾಲೀಕ ಕೂಡ. ಕಬಡ್ಡಿ ಪಟುವಾಗಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಆಡಿದ ಅವರು, ಈ ಚಿತ್ರದ ಮೂಲಕ ನಟನೆಯನ್ನು ಸವಾಲಾಗಿ ತೆಗೆದುಕೊಂಡಿದ್ದಾರೆ. ಇನ್ನೊಬ್ಬ ಎಂಜಿನಿಯರ್‌ ರಾಘವ್‌, ಸಿನಿಮಾದಲ್ಲಿ ಸಿಕ್ಕ ಪಾತ್ರಕ್ಕಾಗಿ ವೃತ್ತಿ ಬಿಟ್ಟು ಬಂದಿದ್ದಾರೆ.ನೀನಾಸಂ ಹಾಗೂ ಇತರ ತಂಡಗಳ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ ಅನುಭವ ಅವರದು.

ಇಬ್ಬರು ನಾಯಕಿಯರಾದ ಐಶ್ವರ್ಯ ಹಾಗೂ ಕಲ್ಯಾಣಿ ಅವರಿಗೂ ಇದು ಮೊದಲ ಚಿತ್ರದ ಸಂಭ್ರಮ. ರೊಮ್ಯಾಂಟಿಕ್, ವಿಷಾದ ಸೇರಿದಂತೆ ಚಿತ್ರಕ್ಕಾಗಿ ಒಟ್ಟು ಐದು ಹಾಡುಗಳನ್ನು ಬರೆಯುವ ಹೊಣೆಯನ್ನು ಕೇಶವ ಚಂದು ಅವರೇ ಹೊತ್ತಿದ್ದಾರೆ. ಸಂಗೀತ ಸಂಯೋಜಿಸುವ ಜವಾಬ್ದಾರಿಯನ್ನು ಎಂಜಿನಿಯರಿಂಗ್‌ ವಿದ್ಯಾರ್ಥಿ, ವಿಜಾಪುರದ ಆದಿಲ್ ನದಾಫ್ ಅವರಿಗೆ ವಹಿಸಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕರ ಗರಡಿಯಲ್ಲಿ ಪಳಗಿದ ಅನುಭವ ನದಾಫ್‌ ಅವರದು.ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದ್ದು, ಒಂದೇ ಹಂತದಲ್ಲಿ ಪೂರ್ಣಗೊಳಿಸುವ ಯೋಜನೆಯನ್ನು ನಿರ್ದೇಶಕರು ಹಂಚಿಕೊಂಡರು. ಛಾಯಾಗ್ರಾಹಕ ಮಹದೇವ ಹಾಗೂ ತಂಡದ ಇತರ ತಂತ್ರಜ್ಞರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT