ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದ ಪಟ್ಟು: ಜನರಿಗೆ ಇಕ್ಕಟ್ಟು

ನೌಕರರ ಒತ್ತಡಕ್ಕೆ ಮಣಿಯದ ಸರ್ಕಾರ * ಮೂರನೆ ದಿನಕ್ಕೆ ಮುಷ್ಕರ *ಸಾರಿಗೆ ಸಚಿವರಿಗೆ ಸಂಧಾನ ಹೊಣೆ
Last Updated 27 ಜುಲೈ 2016, 0:00 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನೌಕರರ ವೇತನವನ್ನು ಶೇ. 10ಕ್ಕಿಂತ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಪಟ್ಟು ಹಿಡಿದಿರುವುದರಿಂದ ಬುಧವಾರವೂ ಮುಷ್ಕರ  ಮುಂದುವರಿದಿದೆ.

ಆದರೆ, ತರಬೇತಿ ಚಾಲಕರನ್ನು ಬಳಸಿಕೊಂಡು ಬಸ್‌ಗಳನ್ನು ಓಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಮಂಗಳವಾರ ಸಂಜೆ 7 ಗಂಟೆ ಹೊತ್ತಿಗೆ ಕೆ.ಎಸ್‌.ಆರ್‌.ಟಿ.ಸಿಯ 45, ವಾಯವ್ಯ ಸಾರಿಗೆ ನಿಗಮ 25, ಈಶಾನ್ಯ ಸಾರಿಗೆ ನಿಗಮ 4 ಹಾಗೂ ಬಿಎಂಟಿಸಿಯ 9 ಬಸ್‌ಗಳು ರಸ್ತೆಗಿಳಿದಿದ್ದವು ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬೆಳಿಗ್ಗೆ  ಬೆಂಗಳೂರು– ಮುಂಬೈ ಐರಾವತ ಬಸ್‌ಗೆ ಹಾಗೂ ಮೈಸೂರು ರಸ್ತೆಯಲ್ಲಿ ಸಂಜೆ  ಎರಡು ಬಸ್‌ಗಳಿಗೆ ದುಷ್ಕರ್ಮಿಗಳು ಕಲ್ಲುಗಳನ್ನು ತೂರಿದರು.  ಯಾದಗಿರಿಯಲ್ಲಿ ತೆಲಂಗಾಣದ ಎರಡು ಬಸ್‌ಗಳಿಗೆ ಕಲ್ಲು ತೂರಲಾಯಿತು. ಈ ಘಟನೆಯಲ್ಲಿ ಯಾರಿಗೂ ತೊಂದರೆ ಆಗಿಲ್ಲ.

ಬೆಂಗಳೂರಿನಲ್ಲಿ ಶಾಲಾ– ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಉಳಿದೆಡೆ ಆಯಾ ಜಿಲ್ಲಾಧಿಕಾರಿಗಳ ಸ್ಥಳೀಯ ಪರಿಸ್ಥಿತಿ ಗಮನಿಸಿ ರಜೆ ಘೋಷಿಸುವ ತೀರ್ಮಾನ  ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್‌ ಸೇಟ್‌ ತಿಳಿಸಿದ್ದಾರೆ.

ಸ್ವಂತ ವಾಹನ ಸೌಲಭ್ಯ ಹೊಂದಿರುವ ಶಾಲೆಗಳು ಬೆಂಗಳೂರಿನಲ್ಲಿ ಬುಧವಾರ ಶಾಲೆಗಳನ್ನು ತೆರೆಯಲು ನಿರ್ಧರಿಸಿವೆ ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವರು ಹಾಗೂ ಅಧಿಕಾರಿಗಳ ಜತೆ ಮಧ್ಯಾಹ್ನ ಸಮಾಲೋಚನೆ ನಡೆಸಿದರು.

ಯಾವುದೇ ಪರಿಸ್ಥಿತಿಯಲ್ಲಿ ಸಾರಿಗೆ ಸಿಬ್ಬಂದಿ ವೇತನವನ್ನು ಶೇ. 10ಕ್ಕಿಂತ ಏರಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು. ಪ್ರಯಾಣಿಕರಿಗೆ ತೊಂದರೆ ಆಗದಂತೆ ಬದಲಿ ವ್ಯವಸ್ಥೆ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದರೆ, ವೇತನ ಹೆಚ್ಚಿಸದೆ ಕೆಲಸಕ್ಕೆ ಮರಳುವುದಿಲ್ಲ ಎಂದು ಸಾರಿಗೆ ನೌಕರರು ಹಠಕ್ಕೆ ಬಿದ್ದಿರುವುದರಿಂದ ಸಾರ್ವಜನಿಕರ ಪಡಿಪಾಟಲು ಮುಂದುವರಿಯಿತು.

ಆನಂತರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ಚರ್ಚೆ ನಡೆಯಿತು. ಮುಷ್ಕರನಿರತ ಸಂಘಟನೆಗಳು ಹಾಗೂ ಜಂಟಿ ಕ್ರಿಯಾ ಸಮಿತಿಯ ಜೊತೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೆಗಲಿಗೆ ಹೊರಿಸಲು ಸಭೆ ನಿರ್ಧರಿಸಿತು ಎಂದು ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ  ಸುದ್ದಿಗಾರರಿಗೆ ತಿಳಿಸಿದರು.

ಮುಖ್ಯಮಂತ್ರಿ ಬುಧವಾರ ದೆಹಲಿಗೆ ಹೋಗುವ ಕಾರ್ಯಕ್ರಮವಿತ್ತು. ಸಾರಿಗೆ ಮುಷ್ಕರದಿಂದಾಗಿ ಕಾರ್ಯಕ್ರಮ ರದ್ದಾಯಿತು. ಸಿದ್ದರಾಮಯ್ಯ ನಾಳೆ ಸಾರಿಗೆ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮತ್ತೊಂದು ಸುತ್ತು ಮಾತುಕತೆ ನಡೆಸಲಿದ್ದಾರೆ.

ಮುಷ್ಕರ ಮುರಿಯುವ ಯತ್ನ: ಕಾಯಂ ನೌಕರರು ಮುಷ್ಕರ ನಿರತರಾಗಿರುವ ಮಧ್ಯೆಯೆ, ತರಬೇತಿಯಲ್ಲಿರುವ ಚಾಲಕರು, ಬಸ್‌ ಡಿಪೋ ಕಾರ್ಯಾಗಾರ (ವರ್ಕ್‌ಶಾಪ್‌)ಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರನ್ನು ಬಳಸಿಕೊಂಡು ಬೆಂಗಳೂರು, ಹುಬ್ಬಳ್ಳಿ, ಮಂಡ್ಯ, ಚಾಮರಾಜನಗರ  ಸೇರಿ ವಿವಿಧ ಜಿಲ್ಲೆಗಳಲ್ಲಿ ಬಸ್‌ ಸಂಚಾರ ಆರಂಭಿಸುವ ಯತ್ನವನ್ನು ನಿಗಮದ ಅಧಿಕಾರಿಗಳು ಮಾಡಿದರು.

‘ಮುಷ್ಕರ ಮುರಿಯಲು ರಾಜ್ಯ ಸರ್ಕಾರ ನಡೆಸುತ್ತಿರುವ ಹುನ್ನಾರ ಇದು’ ಎಂದ ಜರಿದ ಕಾರ್ಮಿಕ ಸಂಘಟನೆಗಳ ಮುಖಂಡರು ಬಸ್‌ ಓಡಿಸದಂತೆ ಚಾಲಕರ ಮನವೊಲಿಸುವಲ್ಲಿ ಕೆಲವು ಕಡೆ ಯಶಸ್ವಿಯಾದರು. ಇದರ ನಡುವೆಯೇ ಮುಷ್ಕರ ನಿರತರನ್ನು ಓಲೈಸುವ, ನೋಟಿಸ್‌  ನೀಡಿ ಬೆದರಿಸುವ ಯತ್ನವನ್ನು ಸರ್ಕಾರ ಮಂಗಳವಾರ ಮಾಡಿತು. ಮಡಿಕೇರಿಯಲ್ಲಿ 10 ಸಿಬ್ಬಂದಿಗಳಿಗೆ ನೀಡಿದ ನೋಟಿಸ್‌ನಲ್ಲಿ ಕರ್ತವ್ಯಕ್ಕೆ ಹಾಜರಾಗದೇ ಇದ್ದರೆ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಯಿತು.

ಬಾದಾಮಿ ತಾಲ್ಲೂಕು ಗುಳೇದ ಗುಡ್ಡದಲ್ಲಿ ಮುಷ್ಕರ ನಿರತ ನಿರ್ವಾಹಕರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದರಿಂದ ಬಾಗಲಕೋಟೆ ಯಲ್ಲಿ ನೌಕರರ ಮನವೊಲಿಕೆಗೆ ಮುಂದಾಗಿದ್ದ ಅಧಿಕಾರಿಗಳು  ಸುಮ್ಮನಾದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ತರಬೇತಿ ನಿರತ ಚಾಲಕರು ಕರ್ತವ್ಯಕ್ಕೆ ಹಾಜರಾಗಲಿಲ್ಲ ಎಂಬ ಕಾರಣಕ್ಕೆ ಐವರನ್ನು ತರಬೇತಿಯಿಂದ ವಜಾಗೊಳಿಸಿದ ಪ್ರಕರಣ ವರದಿಯಾಗಿದೆ.

‘ಸಿಎಂ ನಡವಳಿಕೆ ಕಾರಣ’
ಬೆಂಗಳೂರು:
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾವಭಾವ ಸರಿ ಇಲ್ಲದಿರುವುದೇ, ಸಾರಿಗೆ ಮುಷ್ಕರ ತೀವ್ರವಾಗಲು ಕಾರಣ’.
ಈ ರೀತಿ ವ್ಯಾಖ್ಯಾನ ಮಾಡಿದವರು ವಿಧಾನಪರಿಷತ್‌ ವಿರೋಧ ಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರಿಗೆ ನೌಕರರು ಕೇಳಿದಷ್ಟು ವೇತನ ಹೆಚ್ಚಿಸಲು ಸಾಧ್ಯವಿಲ್ಲ ನಿಜ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು ಎಂದರು.

ಎಸ್ಮಾ ಜಾರಿ ಕೊನೆಯ ಅಸ್ತ್ರ. ನೌಕರರು ನಮ್ಮವರೇ ಆಗಿರುವುದರಿಂದ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಸರ್ಕಾರ ಬಯಸಿದೆ.
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT