ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಸಲಾಗದ ಸಿಕ್ಕುಗಳ ನಡುವೆ ಉನ್ನತ ಶಿಕ್ಷಣ!!

Last Updated 12 ಫೆಬ್ರುವರಿ 2016, 5:27 IST
ಅಕ್ಷರ ಗಾತ್ರ

ಕರ್ನಾಟಕದ ಉನ್ನತ ಶಿಕ್ಷಣದಲ್ಲಿ ಹಲವಾರು ಸಮಸ್ಯೆಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿರ ದಿನಗಳನ್ನು ಪೂರೈಸಿರುವ ಸಂದರ್ಭದಲ್ಲಿ ಇವುಗಳನ್ನು ನೋಡಬೇಕಾಗಿದೆ. ಅವುಗಳಲ್ಲಿ ಮುಖ್ಯವಾದವು ಈ ಕೆಳಕಂಡಂತಿವೆ.

ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯದ ಮನೋವೃತ್ತಿ, ಭಾಷಾ ಮಾಧ್ಯಮದ ಬಗ್ಗೆ ಇರುವ ತಕರಾರು, ಇಂಗ್ಲಿಷ್ ಭಾಷೆಯ ಅಗತ್ಯ ಹಾಗೂ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಾತಿ ಗೊಂದಲ, ಕಡೆಯದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಮುಕ್ತ ವಾತಾವರಣವನ್ನು ಸೃಷ್ಟಿಸುವುದು.

ಹೊಸ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಲು ಬೇಡಿಕೆ ಬಂದಾಗ ರಾಜ್ಯ ಸರ್ಕಾರ ಒಂದು ಶೀಘ್ರ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಕೂಡಲೇ ಸರ್ಕಾರದ ಒಬ್ಬ ವಕ್ತಾರ ನೂರಾರು ಎಕರೆ ಭೂಮಿಯನ್ನು ಮಂಜೂರು ಮಾಡುತ್ತೇವೆಂದು ಆಶ್ವಾಸನೆ ನೀಡುತ್ತಾರೆ. ಹೀಗಾಗಿ ವಿಶ್ವವಿದ್ಯಾನಿಲಯದ ಬೆಳವಣಿಗೆಯನ್ನು ಕೇವಲ ಭೌತಿಕ ಆಸ್ತಿಗಳ ನಿರ್ಮಾಣಕ್ಕೆ ಸೀಮಿತಗೊಳಿಸಲಾಗುತ್ತದೆ. ವಿಶ್ವವಿದ್ಯಾನಿಲಯಗಳನ್ನು ಬೋಧನೆ ಮತ್ತು ಸಂಶೋಧನಾ ಕೇಂದ್ರಗಳನ್ನಾಗಿಸುವ ನಿಟ್ಟಿನಲ್ಲಿ ಸಾಕಷ್ಟು ಆಲೋಚನೆಗಳು  ನಡೆಯುತ್ತಿಲ್ಲ. ಇಲ್ಲಿ ಬಹುಮುಖ್ಯವಾದ ಅಂಶವೆಂದರೆ ಗುಣಮಟ್ಟದ ಅಧ್ಯಾಪಕರುಗಳನ್ನು ನೇಮಿಸುವುದು. ಕರ್ನಾಟಕದ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಬೋಧನಾ ಕಾರ್ಯವನ್ನು ಅತಿಥಿ ಉಪನ್ಯಾಸಕರಿಂದ ಮಾಡಿಸಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಇದು ಬದಲಾಗಿಲ್ಲ.

ಒಂದು ಶೋಚನೀಯ ಉದಾಹರಣೆಯೆಂದರೆ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯಕ್ಕೆ ಭೂಮಿಯ ಆಶ್ವಾಸನೆ ನೀಡಿದ್ದನ್ನು ಮಾಧ್ಯಮದ ವರದಿಗಳಲ್ಲಿ ನೋಡಿದ್ದೇವೆ. ಆದರೂ ಈಗ ಅದು ಒಂದು ಹಳೆಯ ಶಾಲೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅತ್ಯಂತ ವಿಷಾದಕರ ಸಂಗತಿ ಎಂದರೆ ಕಾಯಂ ಬೋಧಕರ ನೇಮಕಾತಿಯನ್ನು ಅದು ಪ್ರಾರಂಭವಾದಾಗಿನಿಂದಲೂ ಮಾಡಿಲ್ಲ. ಈ ಸರ್ಕಾರವೂ ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆಶ್ವಾಸಿತ ಭೂಮಿ ಇನ್ನೂ ದೊರೆತಿಲ್ಲ. ಅತಿ ಮುಖ್ಯವಾದುದೆಂದರೆ ವಿಶ್ವವಿದ್ಯಾನಿಲಯದ ಕಾಯಿದೆಯು ಸಂಗೀತ ಮತ್ತು ಪ್ರದರ್ಶನ ಕಲೆಗಳ ಸ್ವರೂಪದ ಬಗ್ಗೆ ಗಮನ ಹರಿಸಿಲ್ಲ. ಕೇವಲ ಯಾವುದೇ ವಿಶ್ವವಿದ್ಯಾನಿಲಯಕ್ಕೆ ರಚಿಸುವ ಸಾಮಾನ್ಯ ರೂಪುರೇಷೆಗಳಿಂತಿದ್ದು ಸಂಗೀತ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಅಂಶಗಳಿಲ್ಲ. ಕಾನೂನು ರಚನಾಕಾರರು ಮೊದಲಿಗೆ ಈ ವಿಶ್ವವಿದ್ಯಾನಿಲಯದ ಕಾರ್ಯಗಳೇನೆಂಬುದರ ಬಗ್ಗೆ ತಾವೇ ಪ್ರಶ್ನಿಸಿಕೊಳ್ಳಬೇಕಾಗಿತ್ತು. ಆಗ ಅವರು ಸಂಗೀತವನ್ನು ಇತರೆ ವಿಷಯಗಳಂತೆ ಕಲಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಎದುರಿಸಬಹುದಾಗಿತ್ತು. ತಜ್ಞರಿಗೆ ತಿಳಿದಿರುವಂತೆ ಸಂಗೀತವನ್ನು ಬೋಧಿಸಲು ಹಾಗೂ ತರಬೇತಿ ನೀಡಲು ಬೇರೋಂದು ಮಾರ್ಗವನ್ನೇ ಅನುಸರಿಸಬೇಕು.

ರಾಜ್ಯದಲ್ಲಿ ಮತ್ತೊಂದು ವಿಭಿನ್ನತೆ ಇದೆ. ಇದರಲ್ಲಿ ಏಕವಿಷಯದ ವಿಶ್ವವಿದ್ಯಾನಿಲಯಗಳು ಬಹಳ ಸಂಖ್ಯೆಯಲ್ಲಿವೆ.  ಅವುಗಳು ಕೇವಲ ಒಂದು ವಿಷಯಕ್ಕೆ ಮಾತ್ರ ಸಂಬಂಧಿಸುತ್ತದೆ. ಉದಾಹರಣೆಗೆ : ಕಾನೂನು ವಿಶ್ವವಿದ್ಯಾನಿಲಯ,  ಮಹಿಳಾ ವಿಶ್ವವಿದ್ಯಾನಿಲಯ, ಕನ್ನಡ ವಿಶ್ವವಿದ್ಯಾನಿಲಯ, ಜಾನಪದ ವಿಶ್ವವಿದ್ಯಾನಿಲಯ, ಆರೋಗ್ಯ ವಿಶ್ವವಿದ್ಯಾನಿಲಯ, ತಾಂತ್ರಿಕ ವಿಶ್ವವಿದ್ಯಾನಿಲಯ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ವಿಶ್ವವಿದ್ಯಾನಿಲಯ, ಇತ್ಯಾದಿ. ಜೊತೆಗೆ ಸಾಂಪ್ರಾದಾಯಿಕ ವಿಶ್ವವಿದ್ಯಾನಿಲಯಗಳು ಒಂಭತ್ತು ಇವೆ. ಎಷ್ಟೋ ವಿಶ್ವವಿದ್ಯಾನಿಲಯಗಳಲ್ಲಿ ಬೋಧಕರ ಕೊರತೆ ಇದೆ.

ನೇಮಕಾತಿಗಳನ್ನು ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಸರ್ಕಾರವು ತಡೆ ಹಿಡಿದಿದೆ. ಏಕ ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾಗುವುದಕ್ಕೆ ಮೂಲ ಕಾರಣಗಳನ್ನು ಅರಿಯುವುದು ಸುಲಭವಲ್ಲ. ಮಹಿಳಾ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ರಾಜ್ಯದ ಎಲ್ಲಾ ಮಹಿಳಾ ಕಾಲೇಜುಗಳು ಇರಬೇಕಾದರೂ ಸಹ ಇದು ಈಗ ಕೇವಲ 13 ಜಿಲ್ಲೆಗಳಲ್ಲಿನ ಕಾಲೇಜುಗಳನ್ನು ಹೊಂದಿದೆ. ಈ ವಿಶ್ವವಿದ್ಯಾನಿಲಯವು ಮಹಿಳೆಯರ ಸಮಸ್ಯೆಗಳಿಗೆ ಹಾಗೂ ಲಿಂಗ ಸಂಬಂಧಿತ ವಿಚಾರಗಳಿಗೆ ಸ್ಪಂದಿಸುತ್ತಿಲ್ಲ. ಇದರ ಸ್ನಾತಕೋತ್ತರ ವಿಭಾಗಗಳು ಸಾಂಪ್ರಾದಾಯಿಕ ವಿಶ್ವವಿದ್ಯಾನಿಲಯಗಳಂತೆ ಇವೆ. ಮಹಿಳಾ ವಿಶ್ವವಿದ್ಯಾನಿಲಯವು ಹೆಸರಿಗಷ್ಟೇ ಇದ್ದರೆ, ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳು ಸಂಪನ್ಮೂಲಗಳಿಲ್ಲದೆ ಬಳಲುತ್ತಿವೆ. ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಗಮನ ಕೊಟ್ಟಿದ್ದಕ್ಕೆ ಪುರಾವೆಗಳಿಲ್ಲ.

ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರೆಡೆಯೂ ಇರುವ ಸಮಸ್ಯೆ ಎಂದರೆ ಇಂಗ್ಲಿಷ್ ಭಾಷೆಯ ಉಪಯೋಗ ಮತ್ತು ಇದನ್ನು ಶಿಕ್ಷಣ ಮಾಧ್ಯಮವಾಗಿ ಬಳಸುವುದು. ಇತ್ತೀಚೆಗಷ್ಟೆ ಮುಖ್ಯಮಂತ್ರಿಗಳು ಐ.ಟಿ ಕ್ಷೇತ್ರವನ್ನು ಉದ್ದೇಶಿಸಿ ಮಾತನಾಡುವಾಗ ಭಾರತೀಯ ಭಾಷೆಗಳನ್ನು ನಿಕೃಷ್ಟವಾಗಿ ಕಾಣಬಾರದು ಮತ್ತು ಇವುಗಳನ್ನು ಇಂಗ್ಲಿಷ್ ಜೊತೆಗೆ ಉಪಯೋಗಿಸಬೇಕೆಂದು ಕರೆ ಕೊಟ್ಟಿದ್ದಾರೆ. ಭಾಷೆಯ ಸಮಸ್ಯೆ ಹತ್ತಾರು ವರ್ಷಗಳಿಂದ ಇರುವುದು. ಆದರೂ ಯಾವುದೇ ಪರಿಹಾರ ಗೋಚರಿಸುತ್ತಿಲ್ಲ. ಈ ಸಮಸ್ಯೆಗೆ ಶೀಘ್ರದಲ್ಲಿಯೇ ಪರಿಹಾರವನ್ನು ಕಂಡುಹಿಡಿಯುವುದು ಅತ್ಯವಶ್ಯಕವಾಗಿದೆ. ಇಲ್ಲದಿದ್ದಲ್ಲಿ ಯುವಪೀಳಿಗೆ, ಅದರಲ್ಲೂ ಬಡವರು, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರು (ನಮ್ಮ ಮುಖ್ಯಮಂತ್ರಿಗಳು ಅಹಿಂದ ವರ್ಗದ ಹಿತದೃಷ್ಟಿಗೆ ಬದ್ಧರಾಗಿರುತ್ತಾರೆ) ಮತ್ತು ದಲಿತರು ಕರಾಳವಾದ ಭವಿಷ್ಯವನ್ನು ಎದುರಿಸಬೇಕಾಗುತ್ತದೆ.

ಈಗಾಗಲೇ ಮಾನವಿಕ ಹಾಗೂ ಸಾಮಾಜಿಕ ಶಾಸ್ತ್ರಗಳ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಉತ್ತರಿಸಲು ಇಚ್ಛಿಸುತ್ತಾರೆ. (ಬೆಂಗಳೂರು ವಿಶ್ವವಿದ್ಯಾನಿಲಯ ಇದಕ್ಕೆ ಹೊರತಾಗಿರಬಹುದು). ಇದು ಕೆಟ್ಟ ಬೆಳವಣಿಗೆಯೇನಲ್ಲ, ಆದರೆ ದುರದೃಷ್ಟವಶಾತ್ ನಮಗೆ ಗೋಚರಿಸುವಂತೆ ಈ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಕೌಶಲ್ಯವಿಲ್ಲದೆ ಮಾಹಿತಿ ವಿಜ್ಞಾನ, ಉದ್ಯೋಗ ಅವಕಾಶಗಳು ಮತ್ತು ಜ್ಞಾನ ಸಂಪಾದನೆಯಿಂದ ವಂಚಿತರಾಗುತ್ತಾರೆ. ಉನ್ನತ ಶಿಕ್ಷಣದ ವಿಫಲತೆ ಅಥವಾ ಸಫಲತೆ ಈ ಸಮಸ್ಯೆಯ ಮೇಲೆ ನಿರ್ಣಯವಾಗುತ್ತದೆ.  ರಾಜ್ಯವು ಯಾವುದಾದರೂ ಒಂದು ಸಮಗ್ರ ಹಾಗೂ ದಿಟ್ಟ ಯೋಜನೆಯನ್ನು ರೂಪಿಸಿದರೆ ಈ ವಿದ್ಯಾರ್ಥಿಗಳ ಕೃತಜ್ಞತೆಗೆ ಪಾತ್ರವಾಗುತ್ತದೆ. ಆದರೆ ಸಾವಿರ ದಿನಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಇಂತಹ ಆಲೋಚನೆ ಮಾಡಿಲ್ಲ.

ಈ ಸಮಸ್ಯೆ ತಾನೇತಾನಾಗಿ ಬಗೆಹರಿಯುವುದು ಯಾವಾಗ ಎಂದರೆ ಈ ವಂಚಿತ ಕ್ಷೇತ್ರದವರು ತಮಗೆ ಯಾವ ರೀತಿ ವಂಚನೆಯಾಗುತ್ತಿದೆ ಎಂದು ಗಮನಿಸಿ ಸಕ್ರಿಯವಾಗಿ ತಮ್ಮ ಕುಂದುಕೊರತೆಗಳ ನಿವಾರಣೆಗೆ ಧ್ವನಿ ಎತ್ತಿದಾಗ ಮಾತ್ರ. ನಿಜವಾಗಿ ಹಿಂದುಳಿದ ವರ್ಗಗಳಿಗೆ ಅವಕಾಶಗಳ ಕೊರತೆ ಇದೆ. ಕನ್ನಡ ಮಾಧ್ಯಮದ ಶಿಕ್ಷಣ ಬಯಸುವವರು ಇಂಗ್ಲಿಷ್ ಭಾಷೆಯನ್ನು ಕಲಿಯುವ ಮತ್ತು ಕಲಿಸುವ ಅಗತ್ಯವಿದೆ ಎಂಬುದನ್ನು ಮನಗೊಳ್ಳಬೇಕು. ಇಲ್ಲದಿದ್ದಲ್ಲಿ ಭಾಷಾ ತಾರತಮ್ಯ ಹಾಗೆಯೇ ಉಳಿದು ಅದರ ನೀರಸ ಭಾರವನ್ನು ಸಮಾಜದ ಮೇಲೆ ಹೇರುತ್ತದೆ.

ಉನ್ನತ ಶಿಕ್ಷಣದಲ್ಲಿ ಎದ್ದು ಕಾಣುವ ಮತ್ತೊಂದು ಅಂಶವೆಂದರೆ, ಕುಲಪತಿಗಳ ನೇಮಕ. ಇವುಗಳು ತಿಂಗಳುಗಟ್ಟಲೆ ಪೂರ್ಣಾವಧಿ ನೇಮಕ ಆಗದಿರುವುದು, ಯಾರಾದರೂ ಹಂಗಾಮಿ ಕುಲಪತಿಯಾಗಿರುವುದು. ಈ ವಿಳಂಬಕ್ಕೆ ಕಾರಣ ಇಲ್ಲ. ಕೆಲವು ಅನಿರೀಕ್ಷಿತ ಸಂದರ್ಭಗಳನ್ನು ಹೊರತುಪಡಿಸಿದರೆ ಕುಲಪತಿಗಳ ಅವಧಿ ಎಂದು ಮುಕ್ತಾಯವಾಗುತ್ತದೆ ಎನ್ನುವುದು ತಿಳಿದ ವಿಷಯ. ಇದನ್ನು ಇಲ್ಲಿ ಉಲ್ಲೇಖಿಸುವ ಕಾರಣವೆಂದರೆ ಇದೂ ಸಹ ಉನ್ನತ ಶಿಕ್ಷಣದ  ಬಗ್ಗೆ ಸರ್ಕಾರಕ್ಕೆ ಇರುವ (ಇಲ್ಲದಿರುವ) ಕಾಳಜಿಯನ್ನು ತೋರಿಸುತ್ತದೆ ಮತ್ತು ನೇಮಕಾತಿಯ ಮೇಲೆ ಪ್ರಭಾವ ಬೀರುವ ಶಕ್ತಿಗಳ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ. ಇನ್ನೊಂದು ದುರಂತವೆಂದರೆ ಇತ್ತೀಚಿನ ದಿವಸಗಳಲ್ಲಿ ವಿಶ್ರಾಂತರಾಗಿರುವ ಅನೇಕ ಕುಲಪತಿಗಳ ಕಾರ್ಯಾಚರಣೆಯ ಬಗ್ಗೆ ಅಪಾದನೆಗಳಿದ್ದು ಇವುಗಳು ತನಿಖೆಗೆ ಒಳಗಾಗಿರುವುದು. ಇಂತಹ ಘಟನೆಗಳು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಶೋಭೆಯನ್ನು ತರುವುದಿಲ್ಲ. ಕುಲಪತಿಗಳ ನೇಮಕದ ಬಗ್ಗೆ ಕೂಡ ಅನೇಕ ಅಹಿತಕರವಾದ ಸಂಗತಿಗಳು ಮೇಲಿಂದ ಮೇಲೆ ಪ್ರಸ್ತಾಪವಾಗುತ್ತಿವೆ. ಇದರ ಸತ್ಯಾಂಶವನ್ನು ನಿಖರವಾಗಿ ಹೇಳಲಾಗದು. ಚಾಲನೆಯಲ್ಲಿರುವ ಸಂಶಯಗಳು ಬಹುಪಾಲು ಸತ್ಯಕ್ಕೆ ದೂರವಾಗಿದ್ದರೆ ಒಳ್ಳೆಯದು.

ಈಗ ಮತ್ತೊಂದು ಮೂಲಭೂತ ಸಮಸ್ಯೆಗೆ ಬರೋಣ. ಉನ್ನತ ಶಿಕ್ಷಣದ ಕೇಂದ್ರಗಳು- ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು - ಇವುಗಳಲ್ಲಿರುವ ವಿದ್ಯಾರ್ಥಿ ಸಮೂಹ ನಮ್ಮ ಸಮಾಜವನ್ನು ಮೊದಲಿಗಿಂತ ನೈಜವಾಗಿ ಪ್ರತಿಬಿಂಬಿಸುತ್ತದೆ. ಅಂದರೆ ಮಹಿಳೆಯರು ಮತ್ತು ಶೋಷಿತ ವರ್ಗಗಳ ವಿದ್ಯಾರ್ಥಿಗಳು ಈಗ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಮೊದಲೇ ನಮ್ಮ ಸಮಾಜ ಅಸಮಾನತೆಗಳ ತವರು ಮನೆ. ಆರ್ಥಿಕ, ಜಾತಿ ಆಧಾರಿತ ಅಸಮಾನತೆಗಳು ಎಲ್ಲಾ ಕ್ಷೇತ್ರಗಳಲ್ಲೂ ಎದ್ದುಕಾಣುವ ಅಂಶ. ಆದುದರಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೋಷಿತ ವರ್ಗದ ವಿದ್ಯಾರ್ಥಿಗಳಿಗೆ ತಾರತಮ್ಯದ ಅನುಭವ ಆದರೆ ಆಶ್ಚರ್ಯವಲ್ಲ. ಇತ್ತೀಚಿಗೆ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ದುರ್ಘಟನೆ ಒಂದು ಕ್ರೂರವಾದ ನಿದರ್ಶನ. ಎಲ್ಲಕ್ಕಿಂತ ಹೆಚ್ಚಾಗಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದರಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಉಂಟಾಗುವುದು ಸಹಜ. ಇದನ್ನು ಇಂಗ್ಲಿಷ್‌ನಲ್ಲಿ  Adjustment problems ಎಂದು ಕರೆಯುತ್ತೇವೆ. ಇಂಗ್ಲಿಷ್ ಬಲ್ಲವರು ಮತ್ತು ಬಾರದವರು ಇವರ ನಡುವೆ ಇರುವ ಅಂತರ ಈ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ. ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ತಮ್ಮ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಅವರ ವ್ಯಕ್ತಿತ್ವ ವಿಕಾಸವಾಗುವುದಕ್ಕೆ ಉತ್ತೇಜನ ಕೊಡಬೇಕು ಮಾತ್ರವಲ್ಲ ಇದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಹೊಂದಿರಬೇಕು. ಒಂದು ಉದಾಹರಣೆಯೆಂದರೆ ಮಾರ್ಗದರ್ಶನ ಮತ್ತು ಸಲಹಾ ಕೇಂದ್ರಗಳು (guidance and counselling)   ವಿದ್ಯಾರ್ಥಿಗಳಿಗೆ ಸುಲಭವಾಗಿ ಕೈಗೆಟುಕುವಂತಿರಬೇಕು. ಈ ಬಗ್ಗೆ ಒಂದು ಮುಖ್ಯ ವಿಷಯವೆಂದರೆ ಯಾವ ವಿದ್ಯಾರ್ಥಿಗೂ ಕೀಳರಿಮೆ ಬರಕೂಡದು. ಬೇರೆ ಮಾತಿನಲ್ಲಿ ಹೇಳುವುದಾದರೆ, ಇದು ಸೂಕ್ಷ್ಮವಾಗಿ ನಡೆಯಬೇಕಾದ ಕೆಲಸ. ನಮ್ಮನ್ನು ಪ್ರತ್ಯೇಕವಾಗಿ ವರ್ಗೀಕರಿಸುವ ಒಂದು ಸಾಧನ ಎನ್ನುವ ಅನುಮಾನಕ್ಕೆ ಆಸ್ಪದವಿರಕೂಡದು.

ಇದರಲ್ಲಿನ ಇನ್ನೊಂದು ಸಂಗತಿ ಗಮನಾರ್ಹ. ನಮ್ಮಲ್ಲಿನ ಸಾಧಾರಣ ಕಲ್ಪನೆಯೆಂದರೆ ಶೋಷಿತ ವರ್ಗದವರು, ಹಿಂದುಳಿದ ವರ್ಗದವರು ವ್ಯವಸ್ಥೆಯಿಂದ ಪಡೆಯುವ ಅನುಕೂಲವನ್ನು ನಾವು ಪರಿಗಣಿಸುತ್ತೇವೆ ಹಾಗೂ ಇದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇವೆ.  ಆದರೆ ವ್ಯವಸ್ಥೆಗೆ ಇವರ ಕೊಡುಗೆ ಏನು ಎಂಬುದನ್ನು ನಾವು ಗುರುತಿಸುವುದಿಲ್ಲ. ಮೀಸಲಾತಿ ಇದಕ್ಕೆ ಒಂದು ಒಳ್ಳೆಯ ನಿದರ್ಶನ. ವೈವಿಧ್ಯಮಯ ಪರಿಸರದಿಂದ ಎಲ್ಲಾ ವರ್ಗದವರೂ ಲಾಭವನ್ನು ಪಡೆಯುತ್ತಾರೆ. ಹಿಂದುಳಿದ ವರ್ಗಗಳು ಹಾಗೂ ದಲಿತರ ಸಹಚರ್ಯೆಯಿಂದ ಮೇಲ್ಜಾತಿ ಮತ್ತು ವರ್ಗಗಳಿಗೆ ಸೇರಿದವರಿಗೆ ಸಮಾಜದ ಬಗ್ಗೆ ಅರಿವು ಮತ್ತು ಕಾಳಜಿ ಹರಿತವಾಗುತ್ತದೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಬರೀ ತರಗತಿಯಲ್ಲಿ ನಡೆಯುವ ಪಾಠ ಪ್ರವಚನಗಳಿಗೆ ಸೀಮಿತವಾಗಕೂಡದು. ಸಮಾಜದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಬೇಕು. ಈ ಸಂದರ್ಭದಲ್ಲಿ ಸಂಬಂಧಿಸಿದ ಇನ್ನೊಂದು ವಿಚಾರವೆಂದರೆ ನಾವು ಪರೀಕ್ಷೆಗಳ ಬಗ್ಗೆ ಈಗ ಹರಿಸುತ್ತಿರುವ ಗಮನ ಅತಿರೇಕ. ಇದರ ಒಂದಷ್ಟು ಭಾಗವನ್ನಾದರೂ ಬೇರೆ ದಿಕ್ಕುಗಳಿಗೆ ತಿರುಗಿಸುವ ಅಗತ್ಯವನ್ನು ನಾವು ಗುರುತಿಸಬೇಕು. ಇಲ್ಲದಿದ್ದರೆ ನಮ್ಮ ಶಿಕ್ಷಣ ಅಪೂರ್ಣವಾಗಿಯೇ ಉಳಿಯುತ್ತದೆ. ಬಹುಮುಖ್ಯವಾದ ವಿಷಯವೆಂದರೆ ಉನ್ನತ ಶಿಕ್ಷಣದ ಗುರಿ ವಿದ್ಯಾರ್ಥಿಗಳ ಮನೋವಿಕಾಸ. ಎಲ್ಲಾ ಸಮಸ್ಯೆಗಳನ್ನು ವಿಫುಲವಾಗಿ ನಿರ್ದಾಕ್ಷಿಣ್ಯವಾಗಿ ಚರ್ಚಿಸುವ ವಾತಾವರಣ  ಸೃಷ್ಟಿಯಾಗಬೇಕು. ರಾಜಕೀಯ ಮತ್ತು ಸಾಮಾಜಿಕ ಪ್ರಶ್ನೆಗಳ ವಿಶ್ಲೇಷಣೆ ನಡೆಯಬೇಕು.

ಮೇಲೆ ಚರ್ಚಿಸಿರುವ ಸಲಹೆಗಳನ್ನು ಅನುಷ್ಠಾನಗೊಳಿಸಲು ಹೆಚ್ಚಿನ ಆರ್ಥಿಕ ಹೊರೆ ಇರುವುದಿಲ್ಲ. ಮುಖ್ಯವಾಗಿ ಇದಕ್ಕೆ ಬೇಕಿರುವುದು ಬದಲಾವಣೆಗೆ ಅವಶ್ಯಕವಾದ ಬದ್ಧತೆ. ಈ ಬದ್ಧತೆಯನ್ನು ಸಿದ್ದರಾಮಯ್ಯ ಸರ್ಕಾರ ಇನ್ನು ಮುಂದಾದರೂ ತೋರಲಿ. ಆದರೆ ಈ ಮಾರ್ಪಾಡು ತರಬೇಕಾದರೆ ಹಣಕಾಸಿನ ಹೊರೆ ಇಲ್ಲ ನಿಜ. ಆದರೆ ಅದೇ ಕಾರಣಕ್ಕೆ ಈ ಚೌಕಟ್ಟು ನೀರಸವಾಗಿ ಕಾಣಬಹುದು.
ಲೇಖಕ ನಿವೃತ್ತ ಪ್ರಾಧ್ಯಾಪಕ ಮತ್ತು ಮದ್ರಾಸ್‌ ಅಭಿವೃದ್ಧಿ ಅಧ್ಯಯನ ಸಂಸ್ಥೆ ಮಾಜಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT